Work Hours Issue | 70 ಗಂಟೆ ಕೆಲಸದ ಹೇಳಿಕೆ ಪುನರುಚ್ಚರಿಸಿದ ಇನ್ಫೋಸಿಸ್ ಮೂರ್ತಿ
ದೇಶ ಕಟ್ಟಲು ಯುವಕರು ವಾರಕ್ಕೆ 70 ಗಂಟೆ ದುಡಿಯಬೇಕು ಎಂಬ ತಮ್ಮ ಹೇಳಿಕೆಯನ್ನು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತೆ ಪುನರುಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಸಿಎನ್ಬಿಸಿ ಗ್ಲೋಬಲ್ ಲೀಡರ್ಶಿಪ್ ಸಮ್ಮಿಟ್ನಲ್ಲಿ ಮಾತನಾಡಿರುವ ಅವರು, ದಯವಿಟ್ಟು ಕ್ಷಮಿಸಿ, ಕೆಲಸದ ಅವಧಿಯ ಬಗ್ಗೆ ನಾನು ಸತ್ತರೂ ನನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ತಮ್ಮ ಈ ಹಿಂದಿನ ಹೇಳಿಕೆಯನ್ನು ಪುನರ್ ಪ್ರತಿಪಾದಿಸಿದ್ದಾರೆ.
ಕಠಿಣ ಪರಿಶ್ರಮವೇ ದೇಶದ ಅಭಿವೃದ್ಧಿಗೆ ಮೂಲಾಧಾರ. ಪ್ರಧಾನಿ ಮೋದಿಯವರೇ ವಾರಕ್ಕೆ ನೂರು ಗಂಟೆ ಕೆಲಸ ಮಾಡುತ್ತಾರೆ. ಅವರಿಗೆ ಮೆಚ್ಚುಗೆ ಸೂಚಿಸಬೇಕಾದರೆ, ಗೌರವ ಕೊಡಬೇಕಾದರೆ ಈ ದೇಶದ ಯುವಕರು ವಾರಕ್ಕೆ ಕನಿಷ್ಟ 70 ಗಂಟೆಯಾದರೂ ಕೆಲಸ ಮಾಡಬೇಕು ಎಂದು ನಾರಾಯಣಮೂರ್ತಿ ಬಲವಾಗಿ ಪ್ರತಿಪಾದಿಸಿದ್ದಾರೆ.
ನಾನು ನನ್ನ ವೃತ್ತಿ ಜೀವನದ ಆರಂಭದಲ್ಲಿ ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಿದ್ದೆ. ಪ್ರತಿ ದಿನ ಬೆಳಿಗ್ಗೆ 6.30ಕ್ಕೆ ಕಚೇರಿಯಲ್ಲಿ ಇರುತ್ತಿದ್ದೆ. ರಾತ್ರಿ 8.30ಕ್ಕೆ ಮನೆಗೆ ಹೊರಡುತ್ತಿದ್ದೆ. ಕಚೇರಿಯಲ್ಲಿ ಇರುವಷ್ಟು ಹೊತ್ತೂ ಪೂರ್ಣ ಸಮರ್ಪಣೆಯಿಂದ ಕೆಲಸ ಮಾಡುತ್ತಿದ್ದೆ. ಕಠಿಣ ಪರಿಶ್ರಮ ಎಂಬುದು ನಮ್ಮ ಸನಾತನ ಸಂಸ್ಕೃತಿಯಲ್ಲೇ ಇದೆ ಎಂದು ತಮ್ಮ ವಾದವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಜಪಾನ್, ಜರ್ಮನಿಯಂತಹ ದೇಶಗಳ ಜನ ಕಠಿಣ ಪರಿಶ್ರಮದಿಂದಲೇ ತಮ್ಮ ತಮ್ಮ ದೇಶವನ್ನು ಬಲಿಷ್ಠವಾಗಿ ಕಟ್ಟಿದ್ದಾರೆ. ಕಠಿಣ ಪರಿಶ್ರಮಕ್ಕೆ ಪರ್ಯಾಯ, ಅಥವಾ ಅಡ್ಡದಾರಿಗಳು ಇಲ್ಲ. ಪ್ರತಿಭಾವಂತರು ದಿನಕ್ಕೆ ಕನಿಷ್ಟ ಹತ್ತು ತಾಸು ಕೆಲಸ ಮಾಡಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿರುವ ನಾರಾಯಣಮೂರ್ತಿ, ದೇಶದ ಐಟಿ ಮತ್ತು ಬಿಟಿ ವಲಯದಲ್ಲಿ ವಾರದಲ್ಲಿ ಐದು ದಿನ ಕೆಲಸದ ಪದ್ಧತಿಯನ್ನು ಕೂಡ ಅಲ್ಲಗಳೆದಿದ್ದಾರೆ.
1986ರಲ್ಲಿ ದೇಶದ ಐಟಿ ಮತ್ತು ಇತರೆ ವಲಯಗಳಲ್ಲಿ ವಾರದಲ್ಲಿ ಆರು ದಿನಕ್ಕೆ ಬದಲಾಗಿ ಐದು ದಿನ ಕೆಲಸ ಮಾಡುವ ನೀತಿ ಜಾರಿಯಾದಾಗ ನನಗೆ ಶಾಕ್ ಆಗಿತ್ತು. ಅಂತಹ ನೀತಿಯಿಂದ ನಾನು ವಿಚಲಿತನಾಗಿದ್ದೆ ಎಂದೂ ಅವರು ಹೇಳಿದ್ದಾರೆ.
ಚರ್ಚೆಗೆ ಗ್ರಾಸವಾಗಿದ್ದ ಹೇಳಿಕೆ
ಕಳೆದ ವರ್ಷ ಮೊದಲ ಬಾರಿಗೆ ನಾರಾಯಣಮೂರ್ತಿ ಅವರು 70 ಗಂಟೆಗಳ ಕುರಿತ ಹೇಳಿಕೆ ನೀಡಿದ್ದರು. ಆ ವೇಳೆ ಅವರ ಆ ಹೇಳಿಕೆ ದೇಶದ ಉದ್ಯಮ ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಯುವ ಸಮುದಾಯ ಅವರ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಇದೊಂದು ಪುರೋಹಿತಶಾಹಿ, ಸನಾತನವಾದಿ ಮನಸ್ಥಿತಿಯ ಹೇಳಿಕೆ, ಜನರನ್ನು ಜೀತಕ್ಕೆ ಹಚ್ಚುವ ಪ್ರತಿಗಾಮಿ ಧೋರಣೆ. ದೇಶದ ಕಾರ್ಪೊರೇಟ್ ವಲಯದ ಅಸಲೀ ಮನಸ್ಥಿತಿ ನಾರಾಯಣಮೂರ್ತಿ ಅವರ ಹೇಳಿಕೆಯ ಮೂಲಕ ಹೊರಬಿದ್ದಿದೆ ಎಂಬ ಟೀಕೆಗಳೂ ಕೇಳಿಬಂದಿದ್ದವು.
ಅದೇ ಹೊತ್ತಿಗೆ ಉದ್ಯಮ ವಲಯ ಹಾಗೂ ಕೆಲವು ರಾಜಕಾರಣಿಗಳು 70 ಗಂಟೆ ದುಡಿಮೆಯ ಹೇಳಿಕೆಯನ್ನು ಸ್ವಾಗತಿಸಿದ್ದರು. ಹಾಗೇ ಹಲವರು ಈ ಹೇಳಿಕೆ ಕಾನೂನುಬಾಹಿರ ಮತ್ತು ದುಡಿಯುವ ಜನರ ಮೇಲೆ ಸವಾರಿ ಮಾಡುವ ಬಂಡವಾಳಶಾಹಿಯ ದಾಹ ಎಂಬ ತೀವ್ರ ಟೀಕೆಗಳೂ ಕೇಳಿಬಂದಿದ್ದವು.
ಇದೀಗ ಮತ್ತೊಮ್ಮೆ ಇನ್ಫೋಸಿಸ್ ಸಂಸ್ಥಾಪಕರು, ವರ್ಷದ ಹಿಂದಿನ ತಮ್ಮ ಹೇಳಿಕೆಯನ್ನು ಪುನರುಚ್ಚರಿಸುವ ಮೂಲಕ ದೇಶದಲ್ಲಿಯ ಕೆಲಸದ ಅವಧಿಯ ಕುರಿತು ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದ್ದಾರೆ.