Yatnal Expulsion | ಕುಟುಂಬ ರಾಜಕಾರಣ ತೊಲಗದ ಹೊರತು ಬಿಜೆಪಿಗೆ ಬರಲ್ಲ; ಯತ್ನಾಳ್‌ ಶಪಥ
x

ಬಸನಗೌಡ ಪಾಟೀಲ್‌ ಯತ್ನಾಳ್‌, ಬಿ ವೈ ವಿಜಯೇಂದ್ರ, ಬಿ ಎಸ್‌ ಯಡಿಯೂರಪ್ಪ

Yatnal Expulsion | ಕುಟುಂಬ ರಾಜಕಾರಣ ತೊಲಗದ ಹೊರತು ಬಿಜೆಪಿಗೆ ಬರಲ್ಲ; ಯತ್ನಾಳ್‌ ಶಪಥ

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಉಚ್ಚಾಟನೆ ಆದೇಶ ಹಿಂಪಡೆಯುವಂತೆ ರಾಜ್ಯ ಬಿಜೆಪಿಯ ಹಲವು ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದರೆ, ಇತ್ತ ಯತ್ನಾಳ್‌ ಮಾತ್ರ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ತೊಗುವವರೆಗೂ ಪಕ್ಷಕ್ಕೆ ಮರಳುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.


ಬಿಜೆಪಿಯ ಉಚ್ಚಾಟಿತ ಶಾಸಕ ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಕರೆತರಲು ಪಕ್ಷದ ಹಲವು ನಾಯಕರು ತೀವ್ರ ಪ್ರಯತ್ನ ಆರಂಭಿಸಿರುವ ಬೆನ್ನಲ್ಲೇ ʼಕುಟುಂಬ ರಾಜಕಾರಣ ತೊಲಗುವವರೆಗೂ ಬಿಜೆಪಿ ಬರುವುದಿಲ್ಲʼ ಎಂದು ಬಸನಗೌಡ ಪಾಟೀಲ ಯತ್ನಾಳ್ ಶಪಥ ಮಾಡಿದ್ದಾರೆ.

ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕುಟುಂಬ ರಾಜಕಾರಣದ ವಿರುದ್ಧ ಸಮರ ಸಾರಿದ್ದ ಯತ್ನಾಳ್ ಅವರನ್ನು ಪಕ್ಷದ ವರಿಷ್ಠರು ಈಚೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿದ್ದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆಗೆ ಭಿನ್ನಮತಿಯರು ಹಾಗೂ ಪಕ್ಷದ ಹಲವು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಡಾ.ಕೆ. ಸುಧಾಕರ್, ಯತ್ನಾಳ್ ಬಣದ ನಾಯಕರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಯತ್ನಾಳ್ ಉಚ್ಚಾಟನೆ ಆದೇಶ ಹಿಂಪಡೆಯುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.

ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ ನನ್ನ ಸಮರ ಮುಂದುವರಿಯಲಿದೆ. ಅಧಿಕಾರದೊಂದಿಗೆ ಮತ್ತೆ ಬಿಜೆಪಿಗೆ ಬರುತ್ತೇನೆ ಎಂದು ಹೇಳಿದ್ದ ಎರಡನೇ ದಿನದಲ್ಲಿ ನವರಾತ್ರಿ ವೇಳೆಗೆ ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ್ದರು.

ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್ ಅವರು, ಮತ್ತೆ ಬಿಜೆಪಿಗೆ ಯಾಕೆ ಬರಬೇಕು, ವಿಜಯೇಂದ್ರನನ್ನು ಗೆಲ್ಲಿಸಲು ಬರಬೇಕಾ ಎಂದು ಕಿಡಿಕಾರಿದ್ದು, ಕುಟುಂಬ ರಾಜಕಾರಣ ತೊಲಗುವವರೆಗೂ ಬಿಜೆಪಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ.

Read More
Next Story