ಬಾಣಂತಿಯರ ಸರಣಿ ಸಾವು | ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ ಮಹಿಳಾ ಆಯೋಗ
ಕರ್ನಾಟಕದಲ್ಲಿ ಸಿಜೇರಿಯನ್ ಹೆರಿಗೆಯ ಬಳಿಕ ಹೆಚ್ಚು ಬಾಣಂತಿಯರ ಸಾವು ಸಂಭವಿಸುತ್ತಿವೆ. ಇಂತಹ ದುರ್ಘಟನೆಗಳನ್ನು ತಡೆಯಲು ಹೆರಿಗೆ ಪೂರ್ವ ಮತ್ತು ಹೆರಿಗೆಯ ನಂತರ ಪರಿಣಾಮಕಾರಿ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಎಂದು ಮಹಿಳಾ ಆಯೋಗದ ವರದಿ ಹೇಳಿದೆ.
ಬಾಣಂತಿಯರ ಸರಣಿ ಸಾವಿನ ಕುರಿತು ಪರಿಶೀಲನೆ ನಡೆಸಿರುವ ರಾಜ್ಯ ಮಹಿಳಾ ಆಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಶನಿವಾರ ವರದಿ ಸಲ್ಲಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವು, ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿ ಸಿಜೇರಿಯನ್ ಹೆರಿಗೆಯ ಬಳಿಕ ಹೆಚ್ಚು ಬಾಣಂತಿಯರ ಸಾವು ಸಂಭವಿಸುತ್ತಿವೆ. ಇಂತಹ ದುರ್ಘಟನೆಗಳನ್ನು ತಡೆಯಲು ಹೆರಿಗೆ ಪೂರ್ವ ಮತ್ತು ಹೆರಿಗೆಯ ನಂತರ ಸೂಕ್ತ ಸಮಯದಲ್ಲಿ ಪರಿಣಾಮಕಾರಿ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ. ಇದರಿಂದ ಬಾಣಂತಿಯರ ಸಾವಿಗೆ ನಿಯಂತ್ರಣ ಹೇರಬಹುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ನೀಡಿರುವ ವರದಿಯಲ್ಲಿ ಹೇಳಲಾಗಿದೆ.
ಡಾ ನಾಗಲಕ್ಷ್ಮಿ ಚೌಧರಿ ಅವರು ಬಾಣಂತಿಯರ ಸರಣಿ ಸಾವು ಸಂಭವಿಸಿದ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿ ಕಂಡ ಸಮಸ್ಯೆಗಳು ಹಾಗೂ ಅವುಗಳಿಗೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ವರದಿ ಸಲ್ಲಿಸಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆ(ಬಿಮ್ಸ್)ಯಿಂದ ಆರಂಭವಾದ ಬಾಣಂತಿಯರ ಸರಣಿ ಸಾವಿನ ಪ್ರಕರಣಗಳು ಬೆಳಗಾವಿ, ರಾಯಚೂರು, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲೂ ವರದಿಯಾಗಿದ್ದವು. ಆರೋಗ್ಯ ಇಲಾಖೆ ನಿರ್ಲಕ್ಷ್ಯದ ವಿರುದ್ಧ ಪ್ರತಿಪಕ್ಷಗಳು ದೊಡ್ಡ ಮಟ್ಟದ ಹೋರಾಟ ನಡೆಸಿದ್ದವು. ಬಾಣಂತಿಯರ ಸರಣಿ ಸಾವು ಕುರಿತಂತೆ ಪರಿಶೀಲಿಸಲು ಬಿಜೆಪಿ ಕೂಡ ಸತ್ಯಶೋಧನಾ ಸಮಿತಿ ರಚಿಸಿದ್ದು, ಪಕ್ಷದಲ್ಲಿರುವ ತಜ್ಞ ವೈದ್ಯರನ್ನು ನೇಮಿಸಿದೆ.
ಮಹಿಳಾ ಆಯೋಗದ ವರದಿಯಲ್ಲೇನಿದೆ?
- ಗರ್ಭಿಣಿಯರಿಗೆ ಪ್ರತಿ ಎರಡು ತಿಂಗಳಿಗೊಮ್ಮೆ ನಿಯಮಿತ ಮೂತ್ರ ಪರೀಕ್ಷೆ ಕಡ್ಡಾಯಗೊಳಿಸಬೇಕು.
- ಗರ್ಭಿಣಿ ಸ್ತ್ರೀಯರಿಗೆ ಸರ್ಕಾರದಿಂದ ನೀಡುತ್ತಿರುವ ಮೊಟ್ಟೆ, ಇನ್ನಿತರೆ ಪೌಷ್ಠಿಕ ಆಹಾರಗಳು ಸರಿಯಾಗಿ ತಲುಪುವಂತೆ ನೋಡಿಕೊಳ್ಳಬೇಕು.
- ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೆರಿಗೆ ಕೊಠಡಿಗಳು, ಐಸಿಯು ಹಾಗೂ ವೆಂಟಿಲೇಟರ್ ವ್ಯವಸ್ಥೆ ಇರುವಂತೆ ನಿಗಾ ವಹಿಸಬೇಕು. ಜೊತೆಗೆ ಅವುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. Eclampsia Kitಗಳು ಇರುವಂತೆ ನೋಡಿಕೊಳ್ಳಬೇಕು.
- ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ಸ್ಕ್ಯಾನಿಂಗ್ ತಜ್ಞರು, ಸ್ತ್ರೀರೋಗ ತಜ್ಞರು, ರೇಡಿಯಾಲಜಿಸ್ಟ್ ಹಾಗೂ ಇತರೆ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದ್ದು, ರೋಗಿಗಳಿಗೆ ಅನುಸಾರವಾಗಿ ಎಲ್ಲಾ ಆಸ್ಪತ್ರೆಗಳಿಗೆ ಶೀಘ್ರ ಸಿಬ್ಬಂದಿ ನೇಮಕ ಮಾಡಬೇಕು.
- ಸರ್ಕಾರಿ ಆಸ್ಪತ್ರೆಗಳಲ್ಲಿರುವ ನೀರಿನ ಟ್ಯಾಂಕ್‌ಗಳಲ್ಲಿ ಪಾಚಿ ಕಟ್ಟಿದ್ದು ನೀರು ಕಲುಷಿತಗೊಂಡಿದೆ. ಅದೇ ನೀರು ಹೆರಿಗೆ ಕೊಠಡಿಗೆ ಸರಬರಾಜು ಆಗುತ್ತಿದ್ದು, ಅಪಾಯಕಾರಿ ಬ್ಯಾಕ್ಟಿರಿಯಾ ಇರುವ ಸಾಧ್ಯತೆ ಇರುವುದರಿಂದ ಪ್ರಾಣಾಪಾಯಕ್ಕೆ ಕುತ್ತು ತರಲಿದೆ. ಹಾಗಾಗಿ ನೀರಿನ ಟ್ಯಾಂಕುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಸೂಚಿಸಬೇಕು. ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿ ಅಪಾಯಕಾರಿ ಬ್ಯಾಕ್ಟಿರಿಯಾ ಇಲ್ಲದೇ ಇರುವ ಬಗ್ಗೆ ಖಚಿತಪಡಿಸುವಂತೆ ಸೂಚಿಸಬೇಕು.
- ಸರ್ಕಾರಿ ಆಸ್ಪತ್ರೆಗಳಲ್ಲಿ ಅಪರೇಷನ್ ಥಿಯೇಟರ್, ಐಸಿಯು, ವಾರ್ಡ್ ಮುಂತಾದವುಗಳ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಬೇಕು.
- ಶಸ್ತ್ರ ಚಿಕಿತ್ಸೆ, ರಕ್ತ ಪರೀಕ್ಷೆ ಮಾಡುವಾಗ ಉಪಕರಣಗಳನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ದ್ರಾವಣ ಬಳಸಲು ಸೂಚಿಸಬೇಕು. ಇದಕ್ಕಾಗಿ ಆಟೋ ಕ್ಷೇವ್ ವಿಧಾನದ ಮೂಲಕ ಸ್ಪೆರಲೈಸೇಶನ್ ಮಾಡಬೇಕು.
- ರಾಜ್ಯದಲ್ಲಿ ಸದ್ಯ ಮೃತಪಟ್ಟಿರುವ ಬಾಣಂತಿಯರ ಮಕ್ಕಳಿಗೆ ಅವರ ಉನ್ನತ ವಿದ್ಯಾಭ್ಯಾಸದವರೆಗೆ ಉಚಿತ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕು.