ಉಬರ್ ಆಟೊ ಚಾಲಕನಿಂದ ಮಹಿಳೆಗೆ ಕಿರುಕುಳ| ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
x

ಆಟೋ ಚಾಲಕ 

ಉಬರ್ ಆಟೊ ಚಾಲಕನಿಂದ ಮಹಿಳೆಗೆ ಕಿರುಕುಳ| ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಮಹಿಳೆಯೊಂದಿಗೆ ಆರೋಪಿಯು ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳನ್ನು ಬಳಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯ ಒಪ್ಪಿಗೆಯಿಲ್ಲದೆ ಅವರ ಮಾತನ್ನು ರೆಕಾರ್ಡ್ ಮಾಡುತ್ತಿರುವುದು ವಿಡಿಯೋದಲ್ಲಿ ಇದೆ.


Click the Play button to hear this message in audio format

ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸುವ ಘಟನೆಯೊಂದು ನಡೆದಿದೆ. ಅ.2 ರಂದು ಸಂಜೆ 7 ಗಂಟೆ ಸುಮಾರಿಗೆ ಉಬರ್ ಆಟೊ ಚಾಲಕನೊಬ್ಬ ತನ್ನ ಮೇಲೆ ದೌರ್ಜನ್ಯ, ಬೆದರಿಕೆ ಮತ್ತು ಹಲ್ಲೆಗೆ ಯತ್ನಿಸಿದ್ದಾನೆ ಎಂಬ ವಿಷಯವನ್ನು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಘಟನೆ ನಂತರ ಮಹಿಳೆಯು ಚಾಲಕನೊಂದಿಗೆ ವಾಗ್ವಾದ ನಡೆಸಿರುವ ವಿಡಿಯೊವನ್ನು ಬೆಂಗಳೂರು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಸೂಕ್ತ ಕ್ರಮ ಜರುಗಿಸುವಂತೆಯೂ ಒತ್ತಾಯಿಸಿದ್ದಾರೆ. ಆಟೊ ಚಾಲಕನ ದರ್ಪದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹೆಸರು ಹೇಳಲು ಬಯಸದ ಮಹಿಳೆ ತಮ್ಮ ಪೋಸ್ಟ್‌ನಲ್ಲಿ ಘಟನೆಯ ವಿವರಗಳನ್ನು ನೀಡಿದ್ದಾರೆ. ಉಬರ್ ಆಟೊ ಚಾಲಕನನ್ನು ಪವನ್ ಎಚ್.ಎಸ್ ಎಂದು ಗುರುತಿಸಲಾಗಿದೆ. KA05 AE 4606 ನೋಂದಣಿಯ ಬಜಾಜ್ ಆಟೊವನ್ನು ಚಲಾಯಿಸುತ್ತಿದ್ದ ಎಂದು ತಿಳಿಸಿದ್ದಾರೆ.

"ಇದನ್ನು ಪದಗಳಲ್ಲಿ ಹೇಗೆ ವಿವರಿಸಬೇಕೆಂದು ನನಗೆ ತಿಳಿದಿಲ್ಲ. ಈ ಘಟನೆ ಅ.2ರಂದು ಸಂಜೆ 7 ರ ಸುಮಾರಿಗೆ ನಡೆದಿದೆ. ಉಬರ್ ಚಾಲಕನೊಬ್ಬ ನನ್ನನ್ನು ನಿಂದಿಸಿ, ಕಿರುಕುಳ ನೀಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆತ ವಿಡಿಯೊ ರೆಕಾರ್ಡ್ ಮಾಡಿಕೊಳ್ಳುವ ಮೊದಲು ನನ್ನನ್ನು ಹಲವು ಬಾರಿ ಹೊಡೆಯಲು ಪ್ರಯತ್ನಿಸಿದ" ಎಂದು ಆರೋಪಿಸಿದ್ದಾರೆ.

ಘಟನೆ ನಡೆದಿದ್ದು ಹೀಗೆ..

ಆಟೊ ಬುಕ್‌ ಮಾಡಿ ಐದರಿಂದ ಏಳು ನಿಮಿಷ ಕಾದರೂ ಚಾಲಕ ಸ್ಥಳಕ್ಕೆ ಬಾರದ ಕಾರಣ ತಾನು ಸವಾರಿಯನ್ನು ರದ್ದುಗೊಳಿಸಿದೆ. ಆ್ಯಪ್‌ನಲ್ಲಿ ಚಾಲಕ ಬಂದಿದ್ದಾರೆ ಎಂದು ತೋರಿಸಿದರೂ ಆತ ಬಂದಿರಲಿಲ್ಲ. ನನಗೆ ತಡವಾಗುತ್ತಿದ್ದರಿಂದ ಸವಾರಿಯನ್ನು ರದ್ದುಗೊಳಿಸಿ ಮತ್ತೊಂದು ಆಟೊ ಬುಕ್ ಮಾಡಿದೆ. ಆದರೆ, ನಾನು ಕೆಲ ಮೀಟರ್ ಮುಂದೆ ಹೋಗುತ್ತಿದ್ದಂತೆ ಅದೇ ಚಾಲಕ ಎಲ್ಲಿಂದಲೋ ಬಂದು, ನನ್ನನ್ನು ತಡೆದರು. ಬುಕ್ಕಿಂಗ್‌ ಕ್ಯಾನ್ಸಲ್‌ ಮಾಡಿದ್ದಕ್ಕೆ ಹಣ ಕೊಡಿ ಎಂದು ಬೇಡಿಕೆ ಇಡಲಾರಂಭಿಸಿದ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾಳೆ.

ಈ ವೇಳೆ ಆರೋಪಿ ಆಟೊ ಚಾಲಕ ಹಾಗೂ ಮಹಿಳಾ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದೆ. ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡುತ್ತಿರುವುದು ಮತ್ತು ಮಹಿಳೆಯ ಒಪ್ಪಿಗೆಯಿಲ್ಲದೆ ಅವರ ಮಾತನ್ನು ರೆಕಾರ್ಡ್ ಮಾಡುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತದೆ. ಪದೇ ಪದೇ ವಿನಂತಿಸಿದರೂ ಚಾಲಕ ಹಿಂದಿಯಲ್ಲಿ ಸಂವಹನ ನಡೆಸಲು ನಿರಾಕರಿಸಿದ. ಬದಲಿಗೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವಂತೆ ಒತ್ತಾಯಿಸಿದ ಎಂದು ಮಹಿಳೆ ಆರೋಪಿಸಿದ್ದಾರೆ.

ಚಾಲಕನು ಸೌಜನ್ಯದಿಂದ ಮತ್ತು ನನಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದ್ದರೆ, ನಾನು ಸವಾರಿ ಮಾಡದಿದ್ದರೂ ಆತನಿಗೆ ಹಣ ಪಾವತಿಸಲು ನನಗೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ, ಅವನು ನನಗೆ ಕಿರುಕುಳ ನೀಡಿ ನಿಂದಿಸಿದ. ಅವನು ಸ್ಥಳೀಯನಾಗಿರುವುದರಿಂದ, ನಮ್ಮನ್ನು ಕೀಳಾಗಿ ಕಾಣುವ ಹಕ್ಕನ್ನು ಆತನಿಗೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಪೊಲೀಸ್ ಮತ್ತು ಉಬರ್ ಪ್ರತಿಕ್ರಿಯೆ

ಸಾರ್ವಜನಿಕ ವಲಯದಲ್ಲಿ ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಟ್ವೀಟ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ತನಿಖೆಗಾಗಿ ಹೆಚ್ಚಿನ ವಿವರಗಳು ಮತ್ತು ಸಂಪರ್ಕ ಸಂಖ್ಯೆಯನ್ನು ಕೋರಿದ್ದಾರೆ. ಅದೇ ರೀತಿ, ಉಬರ್ ಸಂಸ್ಥೆಯೂ ಮಹಿಳೆಯ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಈ ವಿಷಯದ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ ಮತ್ತು ತನಿಖೆ ನಡೆಸಲು ಬಯಸುತ್ತೇವೆ. ಹೆಚ್ಚಿನ ವಿವರಗಳಿಗಾಗಿ ನಾವು ನಿಮಗೆ ಸಂದೇಶ ಕಳುಹಿಸಿದ್ದೇವೆ, ದಯವಿಟ್ಟು ಪರಿಶೀಲಿಸಿ ಎಂದು ತಿಳಿಸಿದ್ದಾರೆ.

Read More
Next Story