
ಸಾಂದರ್ಭಿಕ ಚಿತ್ರ
ಕೊಪ್ಪಳ: ಹೋಂಗಾರ್ಡ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರು ಅರೆಸ್ಟ್
ಪರಿಚಯದವರಿಂದ ಹಣ ಪಡೆಯಲು ಹೊಸಪೇಟೆಯಿಂದ ಕುಷ್ಟಗಿ ಪಟ್ಟಣಕ್ಕೆ ಬಂದಿದ್ದ 39 ವರ್ಷದ ಮಹಿಳೆಯನ್ನು ಭಾನುವಾರ(ನ.16) ಸಂಜೆ ಬೈಕ್ ಮೇಲೆ ಕರೆದೊಯ್ದರು ಎಂದು ಸಂತ್ರಸ್ಥೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಹಣಕಾಸಿನ ವ್ಯವಹಾರಕ್ಕೆಂದು ಬಂದಿದ್ದ ಹೋಂಗಾರ್ಡ್ ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ, ನಾಲ್ವರ ಜತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ತಾಲೂಕಿನ ಮದ್ಲೂರ ಗ್ರಾಮದ ಬಳಿ ಭಾನುವಾರ ರಾತ್ರಿ ಬೆಳಕಿಗೆ ಬಂದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಪ್ರವೃತ್ತರಾದ ಯಲಬುರ್ಗಾ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹೊಸಪೇಟೆ ಮೂಲದ 39 ವರ್ಷದ ಸಂತ್ರಸ್ತ ಮಹಿಳೆ, ಹೋಂಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಚಯಸ್ಥನೊಬ್ಬನಿಂದ ಬರಬೇಕಿದ್ದ ಹಣವನ್ನು ಪಡೆಯಲು ಅವರು ಭಾನುವಾರ ಕುಷ್ಟಗಿ ಪಟ್ಟಣಕ್ಕೆ ಬಂದಿದ್ದರು. ಅಲ್ಲಿಗೆ ಬಂದ ಆರೋಪಿ ಲಕ್ಷ್ಮಣ, ಹಣ ಕೊಡುವ ನೆಪದಲ್ಲಿ ಮಹಿಳೆಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ಅಲ್ಲಿ ಈಗಾಗಲೇ ಕಾಯುತ್ತಿದ್ದ ಇತರ ಮೂವರು ಆರೋಪಿಗಳೊಂದಿಗೆ ಸೇರಿ, ಪಾಳು ಬಿದ್ದ ಮನೆಯೊಂದರಲ್ಲಿ ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ, ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತ್ವರಿತ ಕಾರ್ಯಾಚರಣೆ, ನಾಲ್ವರ ಬಂಧನ
ಕೃತ್ಯದ ಬಳಿಕ ಅಸ್ವಸ್ಥಗೊಂಡಿದ್ದ ಮಹಿಳೆ, ಯಲಬುರ್ಗಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಕ್ಷಣವೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದರು.
ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರೋಣ ತಾಲೂಕಿನ ಅಸೂಟಿ ಗ್ರಾಮದ ಲಕ್ಷ್ಮಣ ಕೆಂಚಪ್ಪ ಕರಗುಳಿ, ಬಸವರಾಜ ಸಕ್ರೆಪ್ಪ ಹಾಗೂ ಯಲಬುರ್ಗಾ ತಾಲೂಕಿನ ಹನುಮಾಪುರ ಗ್ರಾಮದ ಭೀಮಪ್ಪ ಮಸ್ಕಿ ಮತ್ತು ಶಶಿಕುಮಾರ ಮಸ್ಕಿ ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಸಾಮೂಹಿಕ ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ
ಸಂತ್ರಸ್ತ ಮಹಿಳೆಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿದ ಪತಿ, ತನಗೆ "ಅಪಘಾತವಾಗಿದೆ" ಎಂದು ಕರೆಸಿದ್ದಾಗಿ ತಿಳಿಸಿದ್ದಾರೆ. ಘಟನೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

