Namma Metro: ಮೆಟ್ರೋ ರೈಲಿನಲ್ಲಿ ಊಟ ಮಾಡಿದ ಮಹಿಳೆಗೆ 500 ರೂಪಾಯಿ ದಂಡ
x

ನಮ್ಮ ಮಟ್ರೋ ರೈಲು (ಎಕ್ಸ್‌ ಖಾತೆಯಿಂದ)

Namma Metro: ಮೆಟ್ರೋ ರೈಲಿನಲ್ಲಿ ಊಟ ಮಾಡಿದ ಮಹಿಳೆಗೆ 500 ರೂಪಾಯಿ ದಂಡ

Namma Metro: ಇತ್ತೀಚೆಗಷ್ಟೇ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕನೊಬ್ಬ ಗುಟ್ಕಾ ಜಗಿಯುತ್ತಿದ್ದ ವಿಡಿಯೋ ವೈರಲ್‌ ಆಗಿದ್ದು, ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದೆ.


ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಆಹಾರ ಸೇವಿಸಿದ ಕಾರಣಕ್ಕಾಗಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) 500 ರೂಪಾಯಿ ದಂಡ ವಿಧಿಸಿದೆ.

ಏಪ್ರಿಲ್ 26ರಂದು ಮಾದವಾರ ಮೆಟ್ರೋ ಸ್ಟೇಷನ್‌ನಿಂದ ಮಾಗಡಿ ರಸ್ತೆ ಮೆಟ್ರೋ ಸ್ಟೇಷನ್‌ಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಚಲಿಸುತ್ತಿದ್ದ ಮೆಟ್ರೋ ರೈಲಿನೊಳಗೆ ಆಹಾರ ಸೇವಿಸುತ್ತಿರುವುದನ್ನು ಸಹಪ್ರಯಾಣಿಕರೊಬ್ಬರು ವಿಡಿಯೋದಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಎಂಆರ್​ಸಿಎಲ್​ ಗಮನಕ್ಕೆ ಬಂದಿತ್ತು. ಮೆಟ್ರೋ ರೈಲಿನೊಳಗೆ ಆಹಾರ ಅಥವಾ ಪಾನೀಯ ಸೇವನೆ ನಿಷೇಧಿಸುವ ನಿಯಮ ಈ ಮಹಿಳೆ ಉಲ್ಲಂಘಿಸಿದ್ದರು.

ಏಪ್ರಿಲ್ 28ರಂದು ಬೆಳಗ್ಗೆ ಮಾಚಾವರ ಮೆಟ್ರೋ ಸ್ಟೇಷನ್‌ನಲ್ಲಿ ಭದ್ರತಾ ಸಿಬ್ಬಂದಿಯು ಈ ಮಹಿಳೆಯನ್ನು ತಡೆದು, 500 ರೂಪಾಯಿ ದಂಡ ವಿಧಿಸಿದ್ದಾರೆ.

ಬಿಎಂಆರ್​ಸಿಎಲ್​ ನಿಯಮಗಳ ಪ್ರಕಾರ, ಮೆಟ್ರೋ ರೈಲುಗಳ ಒಳಗೆ ಅಥವಾ ಪ್ಲಾಟ್‌ಫಾರ್ಮ್‌ಗಳಲ್ಲಿ ಆಹಾರ ಅಥವಾ ಪಾನೀಯ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮವು ಮೆಟ್ರೋದ ಒಳಗಿನ ಶುಚಿತ್ವ ಕಾಪಾಡಲು ಮತ್ತು ಕಸ, ಕೊಳಕು ತಡೆಯಲು ರೂಪಿಸಲಾಗಿದೆ. ಜೊತೆಗೆ, ಮೆಟ್ರೊದೊಳಗೆ ಜೋರಾಗಿ ಸಂಗೀತ ಕೇಳುವುದನ್ನು ತಪ್ಪಿಸಲು ಹೆಡ್‌ಫೋನ್‌ಗಳನ್ನು ಬಳಸುವಂತೆಯೂ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ಬಿಎಂಆರ್​ಸಿಎಸಲ್​ ಹೇಳಿಕೆಯೇನು?

ಬಿಎಂಆರ್​ಸಿಎಲ್​ ಈ ಕುರಿತು ಪ್ರಕಟಣೆ ಹೊರಡಿಸಿದ್ದು, "ಈ ಮಹಿಳೆ ಏಪ್ರಿಲ್ 26ರಂದು ಮೆಟ್ರೋದಲ್ಲಿ ಆಹಾರ ಸೇವಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದರು. ಈ ಘಟನೆಯನ್ನು ಸಹಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಶುಚಿತ್ವ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಖಾತ್ರಿಪಡಿಸಲು ಎಲ್ಲ ಪ್ರಯಾಣಿಕರೂ ಈ ನಿಯಮಗಳನ್ನು ಪಾಲಿಸಬೇಕೆಂದು ನಾವು ಮನವಿ ಮಾಡುತ್ತೇವೆ," ಎಂದು ಹೇಳಿದೆ.

"ಮೆಟ್ರೋ ಸಾರ್ವಜನಿಕ ಸ್ಥಳವಾಗಿದ್ದು, ಎಲ್ಲ ಪ್ರಯಾಣಿಕರಿಗೂ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಒದಗಿಸಲು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶುಚಿತ್ವ ಕಾಪಾಡುವಲ್ಲಿ ಪ್ರಯಾಣಿಕರ ಸಹಕಾರ ಅತ್ಯಗತ್ಯ," ಎಂದು ಒತ್ತಿ ಹೇಳಲಾಗಿದೆ.

ಹಿಂದೆಯೂ ದಂಡ ಬಿದ್ದಿತ್ತು.

2023ರಲ್ಲಿ ಸುನಿಲ್ ಕುಮಾರ್ ಎಂಬ ವ್ಯಕ್ತಿಯು ಮೆಟ್ರೋದಲ್ಲಿ ಆಹಾರ ಸೇವಿಸುತ್ತಿರುವ ವಿಡಿಯೋ ಮಾಡಿ ತಾವೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಬಳಿಕ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ 500 ರೂಪಾಯಿ ದಂಡ ವಿಧಿಸಲಾಗಿತ್ತು. .

2023ರಲ್ಲಿ, ಪ್ರಜ್ವಲ್ ಎಂಬ ಯುವಕನೊಬ್ಬ ಮೆಟ್ರೋ ರೈಲಿನೊಳಗೆ ಮತ್ತು ಎಸ್ಕಲೇಟರ್‌ನಲ್ಲಿ ವಿಡಿಯೋಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಸಿಕ್ಕಿಬಿದ್ದಿದ್ದರು. ಅವರಿಗೂ 500 ರೂಪಾಯಿ ದಂಡ ಹಾಕಲಾಗಿತ್ತು.

Read More
Next Story