
ಮಗುವಿನೊಂದಿಗೆ ತಾಯಿ ನದಿಗೆ ಹಾರಿ ಆತ್ಮಹತ್ಯೆ
"ನನ್ನ ಸಾವಿಗೆ ಗಂಡ, ಅತ್ತೆಯೇ ಕಾರಣ"; ಮಗುವಿನೊಂದಿಗೆ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ
ಮೂರು ವರ್ಷಗಳ ಹಿಂದೆ, ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮದ ಮಹಾದೇವಿ ಅವರು, ಅರಕಲಗೂಡು ತಾಲೂಕಿನ ಸೀಬಿಹಳ್ಳಿ ಗ್ರಾಮದ ಕುಮಾರ್‌ನನ್ನು ಎರಡನೇ ವಿವಾಹವಾಗಿದ್ದರು. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ 100 ಗ್ರಾಂ ಚಿನ್ನವನ್ನು ನೀಡಲಾಗಿತ್ತು. ಆದರೆ, ಇತ್ತೀಚೆಗೆ ಪತಿ ಕುಮಾರ್, ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಪತಿ ಮತ್ತು ಅತ್ತೆಯ ನಿರಂತರ ಕಿರುಕುಳಕ್ಕೆ ಮನನೊಂದು, ಗೃಹಿಣಿಯೊಬ್ಬರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಬಳಿ ನಡೆದಿದೆ. ಮಹಾದೇವಿ (29) ಮೃತಪಟ್ಟ ಗೃಹಿಣಿ. ಆತ್ಮಹತ್ಯೆಗೂ ಮುನ್ನ ಅವರು ಮಾಡಿರುವ ವಿಡಿಯೋ ಇದೀಗ ಪೊಲೀಸರ ಕೈ ಸೇರಿದೆ.
"ನನ್ನ ಸಾವಿಗೆ ನನ್ನ ಗಂಡ ಮತ್ತು ಅತ್ತೆಯೇ ಕಾರಣ. ಮೂರು ವರ್ಷದಿಂದ ನರಕ ಕೊಟ್ಟಿದ್ದಾನೆ. ಬಾಯಿಗೆ ಬಂದಂತೆ ಬೈಯುತ್ತಾನೆ. ನನ್ನ ಮಗು ನನಗೆ ಹುಟ್ಟಿಲ್ಲ ಅಂತಾನೆ. ಇದನ್ನೆಲ್ಲಾ ಕೇಳಿಕೊಂಡು ಬದುಕಲು ಆಗಲ್ಲ. ನಾನು ಬದುಕಿದ್ದರೆ ನನ್ನ ತಂದೆ-ತಾಯಿ, ತಮ್ಮನಿಗೂ ತೊಂದರೆ," ಎಂದು ಮಹಾದೇವಿ ವಿಡಿಯೋದಲ್ಲಿ ಕಣ್ಣೀರು ಹಾಕಿದ್ದಾರೆ. ಪೊಲೀಸರು ಬುದ್ಧಿ ಹೇಳಿದರೂ ಪತಿ ಕೇಳುತ್ತಿಲ್ಲ, ಹೋರಾಟ ಮಾಡಲು ಶಕ್ತಿಯಿಲ್ಲ. ನನ್ನಿಂದ ನನ್ನ ಕುಟುಂಬಕ್ಕೆ ತೊಂದರೆಯಾಗಬಾರದು ಎಂದು ಹೇಳಿ, ಅವರು ಈ ದುರಂತ ನಿರ್ಧಾರ ಕೈಗೊಂಡಿದ್ದಾರೆ.
ಕಿರುಕುಳದ ಹಿನ್ನೆಲೆ
ಮೂರು ವರ್ಷಗಳ ಹಿಂದೆ, ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮದ ಮಹಾದೇವಿ ಅವರು, ಅರಕಲಗೂಡು ತಾಲೂಕಿನ ಸೀಬಿಹಳ್ಳಿ ಗ್ರಾಮದ ಕುಮಾರ್‌ನನ್ನು ಎರಡನೇ ವಿವಾಹವಾಗಿದ್ದರು. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ 100 ಗ್ರಾಂ ಚಿನ್ನವನ್ನು ನೀಡಲಾಗಿತ್ತು. ಆದರೆ, ಇತ್ತೀಚೆಗೆ ಪತಿ ಕುಮಾರ್, ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕಿರುಕುಳ ತಾಳಲಾರದೆ ಹದಿನೈದು ದಿನಗಳ ಹಿಂದೆ ತವರು ಮನೆಗೆ ಬಂದಿದ್ದ ಮಹಾದೇವಿಗೆ, ಪತಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ಮುಂದುವರಿಸಿದ್ದ. ಹಾಸನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ನಿಂದಿಸಿದ್ದರಿಂದ ಮನನೊಂದ ಅವರು, ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮೃತದೇಹ ಪತ್ತೆ, ಮಗುವಿಗಾಗಿ ಶೋಧ
ಶುಕ್ರವಾರ ಮಗುವಿನೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದ ಮಹಾದೇವಿ, ರಾಮನಾಥಪುರದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ, ಅರಕಲಗೂಡು ತಾಲೂಕಿನ ಬೆಟ್ಟಸೋಗೆ ಬಳಿ ಮಹಾದೇವಿ ಅವರ ಮೃತದೇಹ ಪತ್ತೆಯಾಗಿದೆ. ಆದರೆ, ಒಂದೂವರೆ ವರ್ಷದ ಮಗುವಿನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

