Woman brutally murdered in Koratagere, killer throws body parts in various places
x
ಸಾಂದರ್ಭಿಕ ಚಿತ್ರ

ಗೃಹ ಸಚಿವರ ಸ್ವಕ್ಷೇತ್ರದಲ್ಲೇ ಘೋರ ಕೃತ್ಯ: ಮಹಿಳೆಯನ್ನು ಕೊಂದು, ದೇಹವನ್ನು ತುಂಡರಿಸಿ ಎಸೆದ ದುಷ್ಕರ್ಮಿಗಳು

ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಸಮೀಪದ ಮುತ್ಯಾಲಮ್ಮ ದೇವಾಲಯ ಮತ್ತು ಸಿದ್ದರಬೆಟ್ಟದ ಬಳಿ ದೇಹದ ತುಂಡುಗಳು ಪತ್ತೆಯಾಗಿವೆ.


ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಸ್ವಕ್ಷೇತ್ರವಾದ ಕೊರಟಗೆರೆಯಲ್ಲೇ ನಾಡನ್ನು ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹಲವೆಡೆ ಎಸೆದಿರುವ ಭೀಕರ ಪ್ರಕರಣ ಬೆಳಕಿಗೆ ಬಂದಿದೆ.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಂಪುಗಾನಹಳ್ಳಿ ಗ್ರಾಮದ ಬಳಿಯಿರುವ ಮುತ್ಯಾಲಮ್ಮ ದೇವಾಲಯ ಮತ್ತು ಸಿದ್ದರಬೆಟ್ಟದ ಸುತ್ತಮುತ್ತ ದೇಹದ ಭಾಗಗಳು ಪತ್ತೆಯಾಗಿವೆ. ಹಂತಕರು ಕೊಲೆಯ ಗುರುತು ಸಿಗಬಾರದೆಂಬ ಉದ್ದೇಶದಿಂದ ರುಂಡ ಮತ್ತು ಮುಂಡವನ್ನು ಬೇರ್ಪಡಿಸಿ, ದೇಹದ ಪ್ರತಿಯೊಂದು ಭಾಗವನ್ನು ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಚಿಂಪುಗಾನಹಳ್ಳಿ ಸೇತುವೆ ಬಳಿ ಬಲಗೈ ಮತ್ತು ದೇಹದ ಕೆಲವು ಭಾಗಗಳು, ಮುತ್ಯಾಲಮ್ಮ ದೇಗುಲದ ಮುಂದೆ ಎಡಗೈ, ಲಿಂಗಾಪುರ ರಸ್ತೆಯ ಸೇತುವೆ ಬಳಿ ಕರುಳಿನ ಭಾಗ, ಬೆಂಡೋಣಿ ನರ್ಸರಿ ಸಮೀಪ ಹೊಟ್ಟೆ ಮತ್ತು ಯಕೃತ್ತಿನ ಭಾಗ ಹಾಗೂ ಜೋನಿಗರಹಳ್ಳಿ ಬಳಿ ರಕ್ತಸಿಕ್ತ ಖಾಲಿ ಚೀಲ ಪತ್ತೆಯಾಗಿದೆ. ದುಷ್ಕರ್ಮಿಗಳು ತನಿಖೆಯ ದಾರಿ ತಪ್ಪಿಸಲು ಕೊರಟಗೆರೆ, ಕೋಳಾಲ ಮತ್ತು ಗೌರಿಬಿದನೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದೇಹದ ಭಾಗಗಳನ್ನು ಎಸೆದು ಹೋಗಿದ್ದಾರೆ.

ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ದೇಹದ ಭಾಗಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯಕ್ಕೆ ದೇಹದ ಕೆಲವು ಭಾಗಗಳು ಮಾತ್ರ ಲಭ್ಯವಾಗಿದ್ದು, ಉಳಿದ ಭಾಗಗಳಿಗಾಗಿ ಹಾಗೂ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Read More
Next Story