ವಿಧವೆಗೆ ಸಹಾಯದ ನೆಪದಲ್ಲಿ ಲೈಂಗಿಕ ದೌರ್ಜನ್ಯ, ಬ್ಲ್ಯಾಕ್ ಮೇಲ್; ಮೂವರ ವಿರುದ್ಧ ದೂರು
x

ಸಾಂದರ್ಭಿಕ ಚಿತ್ರ 

ವಿಧವೆಗೆ ಸಹಾಯದ ನೆಪದಲ್ಲಿ ಲೈಂಗಿಕ ದೌರ್ಜನ್ಯ, ಬ್ಲ್ಯಾಕ್ ಮೇಲ್; ಮೂವರ ವಿರುದ್ಧ ದೂರು

ಸಂತ್ರಸ್ತೆಯ ಪತಿ 2021ರಲ್ಲಿ ನಿಧನರಾಗಿದ್ದು, ಅವರು ತಮ್ಮ 4 ವರ್ಷದ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದರು. ಪತಿಯ ಗಾರ್ಮೆಂಟ್ಸ್ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುತ್ತಿದ್ದರು.


Click the Play button to hear this message in audio format

ಗಂಡನನ್ನು ಕಳೆದುಕೊಂಡು ಮಗುವಿನೊಂದಿಗೆ ಜೀವನ ನಡೆಸುತ್ತಿದ್ದ ಮಹಿಳೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿ, ಅಶ್ಲೀಲವಾಗಿ ನಿಂದಿಸಿ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್​ಮೇಲ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಆರೋಪಿ ಚಂದ್ರಶೇಖರ್, ಕವಿತಾ ಮತ್ತು ಸಾಕಮ್ಮ ಎಂಬ ಮೂವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂತ್ರಸ್ತೆಯ ಪತಿ 2021ರಲ್ಲಿ ನಿಧನರಾಗಿದ್ದು, ಅವರು ತಮ್ಮ 4 ವರ್ಷದ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದರು. ಪತಿಯ ಗಾರ್ಮೆಂಟ್ಸ್ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುತ್ತಿದ್ದರು. 2025ರ ಫೆಬ್ರವರಿಯಲ್ಲಿ ಚಂದ್ರಶೇಖರ್ ಎಂಬಾತ ಮಹಿಳೆಯನ್ನು ಹಿಂಬಾಲಿಸಿ, ಸಹಾಯ ಮಾಡುವ ನೆಪದಲ್ಲಿ ಸ್ನೇಹ ಸಂಪಾದಿಸಿದ್ದಾನೆ. ಎಷ್ಟೇ ನಿರಾಕರಿಸಿದರೂ ಬಿಡದೆ, ಪ್ರತಿದಿನ ಮಾತನಾಡಿ ಆಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾನೆ. ನಂತರ ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಚಿಕ್ಕ ಮಗು ಇರುವುದಾಗಿ ಹೇಳಿದ್ದರೂ, ಜೊತೆಯಲ್ಲೇ ಕೆಲಸ ಮಾಡಿಕೊಂಡು ಹೋಗೋಣ ಎಂದು ಫುಸಲಾಯಿಸಿ, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಹಲವಾರು ಬಾರಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗರ್ಭಪಾತಕ್ಕೆ ಮಾತ್ರೆ

ಈ ನಡುವೆ, ಚಂದ್ರಶೇಖರ್‌ನ ಹೆಂಡತಿ ಎಂದು ಹೇಳಿಕೊಂಡು ಕವಿತಾ ಎಂಬ ಮಹಿಳೆ ಕರೆ ಮಾಡಿ ಪ್ರಶ್ನಿಸಿದ್ದಾಳೆ. ಈ ವಿಷಯ ತಿಳಿದ ಚಂದ್ರಶೇಖರ್, ಎಲ್ಲವನ್ನೂ ಸರಿಪಡಿಸುವುದಾಗಿ ಹೇಳಿ ಮತ್ತೆ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದರಿಂದ ಮಹಿಳೆ ಗರ್ಭಿಣಿಯಾಗಿದ್ದಾರೆ. ಆದರೆ, ಈಗಲೇ ಮಗು ಬೇಡ ಎಂದು ಹೇಳಿದ ಚಂದ್ರಶೇಖರ್, ಮಹಿಳೆಗೆ ಮಾತ್ರೆ ತಂದುಕೊಟ್ಟಿದ್ದಾನೆ. ಮಾತ್ರೆ ತೆಗೆದುಕೊಂಡ ನಂತರ ಮಹಿಳೆಗೆ ತೀವ್ರ ಹೊಟ್ಟೆ ನೋವು ಮತ್ತು ರಕ್ತಸ್ರಾವವಾಗಿತ್ತು. ಈ ವಿಷಯ ತಿಳಿಸಿದಾಗ ಚಂದ್ರಶೇಖರ್, ಕವಿತಾ ಮತ್ತು ಸಾಕಮ್ಮ ಎಂಬ ಮೂವರು ಸೇರಿ ಸಂತ್ರಸ್ತೆಯೊಂದಿಗೆ ಜಗಳವಾಡಿದ್ದಾರೆ.

ಖಾಸಗಿ ಫೋಟೋ ವೈರಲ್, ಕೊಲೆ ಬೆದರಿಕೆ

ಮರುದಿನ ಈ ಮೂವರು ಗಾರ್ಮೆಂಟ್ಸ್ ಬಳಿ ಬಂದು, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ನಂತರ ಚಂದ್ರಶೇಖರ್ ಮತ್ತೊಮ್ಮೆ ಬಂದು, ಆಕೆಯ ಅಶ್ಲೀಲ ಫೋಟೋಗಳು ತನ್ನ ಬಳಿ ಇರುವುದಾಗಿ ಹೇಳಿ, ದೂರು ನೀಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ಜಾತಿ ನಿಂದನೆ ಮಾಡಿ, ಗಾರ್ಮೆಂಟ್ಸ್ ಗೋಡೆಗಳಿಗೆ ಆಕೆಯ ಅಶ್ಲೀಲ ಫೋಟೋಗಳನ್ನು ಅಂಟಿಸುವುದಾಗಿಯೂ ಮತ್ತು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿದ್ದಾರೆ.

ಈ ಎಲ್ಲ ಘಟನೆಗಳಿಂದ ಮಾನಸಿಕವಾಗಿ ಕುಗ್ಗಿದ ಮಹಿಳೆ, ಆರೋಪಿಗಳಾದ ಚಂದ್ರಶೇಖರ್, ಕವಿತಾ ಮತ್ತು ಸಾಕಮ್ಮ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More
Next Story