
ಸುರಿವ ಮಳೆಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡಿದರು.
ರಾಜ್ಯಾದ್ಯಂತ ಮುಂದಿನ ಒಂದು ವಾರ ಗಾಳಿ, ಮಳೆ ಸಾಧ್ಯತೆ
ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ಚಿತ್ರದುರ್ಗ,ಹಾಸನ ಸೇರಿದಂತೆ ಚಿಕ್ಕಮಗಳೂರಿನ ಕೆಲೆವೆಡೆ 30-40 ಕಿ.ಮೀ ವೇಗದಲ್ಲಿ ಗಾಳಿಬೀಸಲಿದ್ದು ಮಳೆಯಾಗುವ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮುಂದಿನ ಒಂದು ವಾರದಲ್ಲಿ ಗಾಳಿ, ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಸೋಮವಾರದಿಂದ (ಮೇ 5) ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಉತ್ತರ ಒಳನಾಡಿನ ರಾಯಚೂರು, ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು ಕರಾವಳಿಯ ದಕ್ಷಿಣ ಕನ್ನಡದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ಚಿತ್ರದುರ್ಗ,ಹಾಸನ ಸೇರಿದಂತೆ ಚಿಕ್ಕಮಗಳೂರಿನ ಕೆಲೆವೆಡೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು ಮಳೆಯಾಗುವ ಮುನ್ಸೂಚನೆ ನೀಡಿದೆ.
ಬೆಳಗಾವಿ, ಬಾಗಲಕೋಟೆ, ಹಾವೇರಿ, ಧಾರವಾಡ, ಗದಗ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಚಿತ್ರದುರ್ಗ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ಹತ್ತೊಂಬತ್ತು ಜಿಲ್ಲೆಗಳಿಗೆ, ಮಂಗಳವಾರ 26 ಜಿಲ್ಲೆಗಳಿಗೆ, ಬುಧವಾರ ಹಾಗೂ ಗುರುವಾರ 25 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಿದೆ.
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ
ಭಾನುವಾರ ಕಲಬುರಗಿಯಲ್ಲಿ ಗರಿಷ್ಠ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಉಷ್ಣಾಂಶದಲ್ಲಿ 1ರಿಂದ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದ್ದು ಸಾರ್ವಜನಿಕರು ಅನಗತ್ಯ ಸಂಚಾರ ಕೈಗೊಳ್ಳದೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಣಗಿದ ಮರಗಳ ತೆರವಿಗೆ ಆಗ್ರಹ
ನಗರದ ರಸ್ತೆಪಕ್ಕದಲ್ಲಿ ಒಣಗಿದ ಮರಗಳು ಹೆಚ್ಚಾಗಿದ್ದು ಜೋರಾಗಿ ಬೀಸುವ ಗಾಳಿ ಮಳೆಗೆ ವಾಹನ ಸವಾರರ ಮೇಲೆ ಬೀಳಲಿವೆ. ಅವಘಡ ಸಂಭವಿಸುವ ಮೊದಲು ಅವುಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಬಿಬಿಎಂಪಿಗೆ ಆಗ್ರಹಿಸಿದ್ದಾರೆ. ರಾಜಧಾನಿಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿತ್ತು. ಕತ್ರಿಗುಪ್ಪೆಯ ಬಳಿ ಆಟೋ ಮೇಲೆ ಮರವೊಂದು ಬಿದ್ದು ಆಟೋಚಾಲಕರೊಬ್ಬರು ಮೃತಪಟ್ಟಿದ್ದರು.