ಬೆಂಕಿಯನ್ನು ದೇವರು ಅಂತೀರಲ್ಲ? ಅದರ ಜೊತೆ ಸ್ವಲ್ಪ ಹೊತ್ತು ಮಲಗುತ್ತೀರಾ?: ನಿಜಗುಣಾನಂದ ಸ್ವಾಮೀಜಿ ಪ್ರಶ್ನೆ
ʼಬೆಂಕಿಗೆ ತುಪ್ಪ ಹಾಕುವುದು ನಿಮ್ಮ ಸಂಸ್ಕೃತಿಯಾ? ಜನರನ್ನು ಯಾವ ಜಾತಿ ಎಂದು ಕೇಳುವುದು ಸಂಸ್ಕೃತಿಯಾ? ಎಂಬುದು ಬಸವಣ್ಣ ಹೇಳಿದ ಮಾತು. ಇದನ್ನು ಬಸವಣ್ಣ ಕೇಳಿದ್ದಾರೆ. ನಾ ಹೇಳಿದೆ ಅಂತಾ ನನ್ನ ಮೇಲೆ ಸಿಟ್ಟಾಗಬೇಡಿʼ ಎಂದಿದ್ದಾರೆ ಜಗುಣಾನಂದ ಸ್ವಾಮೀಜಿ!
ʻʻಬೆಂಕಿಯನ್ನು ದೇವರು ಅಂತೀರಲ್ಲ? ದೇವರು ಎಂದು ಅದರ ಜೊತೆ ಸ್ವಲ್ಪ ಹೊತ್ತು ಮಲಗುತ್ತೀರಾ?ʼʼ ಎಂದು ತೋಂಟದ ಶ್ರೀ ನಿಜಗುಣಾನಂದ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೋಮವಾರ (ಮೇ 13) ನಡೆದ 'ಬಸವಣ್ಣ-ಸಾಂಸ್ಕೃತಿಕ ನಾಯಕ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ, ʻʻಬಸವಣ್ಣನವರಿಗೆ ಎಲ್ಲಿಯೂ ಕೆಟ್ಟವರು ಕಾಣಲಿಲ್ಲ. ಅವರ ಸಂಸ್ಕೃತಿ, ಸಂಸ್ಕಾರ ಯಾರಿಗೂ ಕೊಡಲು ಆಗುವುದಿಲ್ಲ. ಕಣ್ಣಿಗೆ ಕಾಣುವ ಮನುಷ್ಯರನ್ನು ಪ್ರೀತಿ ಮಾಡಲಾರದವರು, ಕಾಣದೇ ಇರುವ ದೇವರನ್ನು ಪ್ರೀತಿ ಮಾಡಲು ಸಾಧ್ಯವೇ?ʼʼ ಎಂದು ಹೇಳಿದ್ದಾರೆ.
ʻʻಪ್ರಾಣಿ ದಯವಾದ ಸಂಸ್ಕೃತಿ ಬಸವಣ್ಣನವರದ್ದು. ಹಬ್ಬ-ಹರಿದಿನಗಳಲ್ಲಿ ಕುರಿ, ಕೋಣ ತಂದಿಟ್ಟು ಕಡಿಯುತ್ತಿದ್ದರು. ಆಗ ಬಸವಣ್ಣ ಯಾವ ಸಂಸ್ಕೃತಿ ನಿಮ್ಮದು? ಎಂದು ಕೇಳಿದ್ದರು. ದೇವರ ಹೆಸರಿನಲ್ಲಿ ಪ್ರಾಣಿ ವಧೆ ಮಾಡುವುದು ನಿಮ್ಮ ಸಂಸ್ಕೃತಿಯೇ? ದೇವರ ಹೆಸರಲ್ಲಿ ಹೋಮ ಮಾಡಿ ತಿನ್ನುವ ಪದಾರ್ಥ ಹಾಕುತ್ತೀರಲ್ಲ? ಏನಿದು ನಿಮ್ಮ ಸಂಸ್ಕೃತಿ? ಎಂದು ಬಸವಣ್ಣ ಪ್ರಶ್ನಿಸುತ್ತಿದ್ದರು. ಬೆಂಕಿಯನ್ನು ದೇವರು ಅಂತೀರಲ್ಲ. ಬೆಂಕಿಯನ್ನು ದೇವರು ಅಂತಾ ಓಡ್ತಿರಲ್ವಾ? ಸ್ವಲ್ಪ ಹೊತ್ತು ಅದರ ಮೇಲೆ ಮಲಗಿ ನೋಡೋಣಾ? ಬೆಂಕಿಗೆ ತುಪ್ಪ ಹಾಕುವುದು ನಿಮ್ಮ ಸಂಸ್ಕೃತಿಯಾ? ಜನರನ್ನು ಯಾವ ಜಾತಿ ಎಂದು ಕೇಳುವುದು ಸಂಸ್ಕೃತಿಯಾ? ಎಂಬುದು ಬಸವಣ್ಣ ಹೇಳಿದ ಮಾತು. ಇದನ್ನು ಬಸವಣ್ಣ ಕೇಳಿದ್ದಾರೆ. ನಾ ಹೇಳಿದೆ ಅಂತಾ ನನ್ನ ಮೇಲೆ ಸಿಟ್ಟಾಗಬೇಡಿʼʼ ಎಂದಿದ್ದಾರೆ.
ಸ್ವಾಮೀಜಿಗಳ ಮಾತಿಗೂ ನೀತಿಸಂಹಿತೆ
ʻʻಸ್ವಾಮೀಜಿಗಳ ಮಾತಿಗೂ ಇದೆಯಂತೆ ನೀತಿ ಸಂಹಿತೆ ಅಡ್ಡಿ. ನಮ್ಮ ಮಾತು ಸ್ವಲ್ಪ ಕಹಿ. ನೀತಿ ಸಂಹಿತೆ ಇರೋದಿಂದ್ರ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ಮಾತಿಗೆ ಬರುವ ಪೂರ್ವದಲ್ಲಿಯೇ ಕವಿವಿ ಕುಲಪತಿ ಚೀಟಿ ತೋರಿಸಿದ್ದಾರೆ. ನೀತಿ ಸಂಹಿತೆ ಇದೆ ಎಂದು ಚೀಟಿ ತೋರಿಸಿದ್ದಾರೆ. ನಾವು ನೀತಿ ಸಂಹಿತೆಯೊಳಗೆ ಬದುಕಬೇಕಾಗಿದೆ. ಆದರೆ ಪ್ರಭು ಪರಂಪರೆಯಲ್ಲಿ ನೀತಿ ಸಂಹಿತೆ ಮೀರಿ ಸಮಾಜ ಕಟ್ಟಿದವರು ಬಸವಣ್ಣ. ಅದನ್ನು ಇವತ್ತು ಹೇಳ ಬೇಕಾಗಿದೆ. ಸಮಸಮಾಜದಲ್ಲಿ ನಾವು ಬದುಕಬೇಕಿದೆʼʼ ಎಂದು ತಿಳಿಸಿದರು.
ʻʻಮೂಢನಂಬಿಕೆ, ಅಂಧಾನುಶ್ರದ್ಧೆ ಬಿಟ್ಟು ನಡೆಯೋಣ. ನಾನು ಹೆಚ್ಚು ಮಾತನಾಡುವುದಿಲ್ಲ. ಏಕೆಂದರೆ ನೀತಿ ಸಂಹಿತೆ ಇದೆ. ಇವತ್ತಿನ ರಾಜಕಾರಣಿಗಳನ್ನು ನೋಡಿದರೆ ಏನೂ ಮಾತನಾಡಬಾರದು ಅನ್ಸುತ್ತೆ. ಆದರೆ ಬಸವಣ್ಣ ಅಂದ್ರೆ ರಾಜಕಾರಣದ ಬಗ್ಗೆ ಮಾತನಾಡಬೇಕಿದೆ. ಬಸವಣ್ಣ ಅಂದ್ರೆ ದಲಿತೋದ್ಧಾರಕ ಹೇಗೆ ಎಂದು ಮಾತನಾಡಬೇಕಿದೆ. ಈ ಜಗತ್ತಿಗೆ ಸಂಸ್ಕೃತಿ ಕಲಿಸಿದವರು ದೀನರು, ದಲಿತರು, ದುಃಖಿತರುʼʼ ಎಂದು ಹೇಳಿದ್ದಾರೆ.