BJP Infighting | ಬದಲಾಗುತ್ತಾರಾ ವಿಜಯೇಂದ್ರ? ಯತ್ನಾಳ್ ಟೀಮ್​ಗೆ ಹೈಕಮಾಂಡ್ ಭರವಸೆ ಏನು?
x
ರಾಜ್ಯ ಬಿಜೆಪಿ ಅಧ್ಯಕ್ಷ, ಪುತ್ರ ಬಿ.ವೈ. ವಿಜಯೇಂದ್ರ ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ

BJP Infighting | ಬದಲಾಗುತ್ತಾರಾ ವಿಜಯೇಂದ್ರ? ಯತ್ನಾಳ್ ಟೀಮ್​ಗೆ ಹೈಕಮಾಂಡ್ ಭರವಸೆ ಏನು?

ಬಿಜೆಪಿ ರೆಬೆಲ್ ನಾಯಕರ ತಂಡಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿಕೊಂಡಿದ್ದಾರೆ. ಹೀಗಾಗಿ ಯತ್ನಾಳ್ ಟೀಮ್ ಬಲ ಹೆಚ್ಚಿದಂತಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಖಚಿತ?


ರಾಜ್ಯ ಬಜೆಪಿ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಬದಲಾವಣೆ ಪಕ್ಕಾ ಆಗಿದೆಯಾ? ಹೌದು, ಇಂಥದ್ದೊಂದು ಬೆಳವಣಿಗೆ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದೆ. ದೆಹಲಿಯಲ್ಲಿ ಬೀಡು ಬಿಟ್ಟಿದ್ದ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಾಯಕರು ಹೈಕಮಾಂಡ್ ನಾಯಕರನ್ನು ಒಬ್ಬೊಬ್ಬರಾಗಿ ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಜೊತೆಗೆ ಈಗ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸೇರಿಕೊಂಡಿರುವುದು ರೆಬೆಲ್ ನಾಯಕರಿಗೆ ಬಲ ಬಂದಂತಾಗಿದೆ. ಫೆ. 5 ರಂದು ನಡೆದ ಸಭೆಯಲ್ಲಿ ವಿ. ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ಭಾಗಿಯಾಗಿದ್ದರು.

ವಿಜಯೇಂದ್ರ ವಿರೋಧಿ ಬಣದ ನಾಯಕರ ಭೇಟಿಗೆ ಹೈಕಮಾಂಡ್ ನಾಯಕರು ಕೂಡ ಸಮಯಾವಕಾಶ ಕೊಟ್ಟಿರುವುದು ಇತ್ತ, ಬೆಂಗಳೂರಿನಲ್ಲಿ ವಿಜಯೇಂದ್ರ ಬಣದ ಟೆನ್ಶನ್ ಹೆಚ್ಚಿಸಿದೆ. ಅಷ್ಟಕ್ಕೂ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಏನು? ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಆಗುವುದು ನಿಜವಾ? ಹೈಕಮಾಂಡ್ ಮಾಡಿರುವ ತೀರ್ಮಾನ ಏನು? ಮುಂದಿದೆ ಮಾಹಿತಿ.

ವಿಜಯೇಂದ್ರ ಮೇಲೆ ಹೊಸ ಅಸ್ತ್ರ ಪ್ರಯೋಗ

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ಯತ್ನಾಳ್ ಬಣದ ಬಿಜೆಪಿ ನಾಯಕರು ದೆಹಲಿಯಲ್ಲಿದ್ದಾರೆ. ಫೆ. 3 ರಿಂದಲೇ ಒಬ್ಬೊಬ್ಬರಾಗಿ ತಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ಯತ್ನಾಳ್ ಟೀಮ್ ಭೇಟಿಗೆ ಸಮಯಾವಕಾಶ ಕೊಟ್ಟಿರುವುದು ಇತ್ತ ವಿಜಯೇಂದ್ರ ಬಣದಲ್ಲಿ ಆತಂಕ ಸೃಷ್ಟಿಸಿದೆ. ಫೆ.3 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದ ಬಿಜೆಪಿ ಹಿರಿಯ ಶಾಸಕ ರಮೇಶ್ ಜಾರಕಿಹೊಳಿ, ವಿಜಯೇಂದ್ರ ಬದಲಾವಣೆ ಮಾಡಲೇ ಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಬಿಜೆಪಿ ಹಿರಿಯ ಶಾಸಕ ಯತ್ನಾಳ್ ಕೂಡ ದೆಹಲಿಯಲ್ಲಿದ್ದು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಈ ಸಲ ಬಿಜೆಪಿ ರೆಬೆಲ್ ನಾಯಕರು ಬಿ.ವೈ. ವಿಜಯೇಂದ್ರ ಮೇಲೆ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

ಒಬ್ಬೊಬ್ಬರಾಗಿ ಪಕ್ಷದ ವರಿಷ್ಠರ ಭೇಟಿ

ವಿಜಯೇಂದ್ರ ಬದಲಾವಣೆಗೆ ಹೊಸ ತಂತ್ರ ಹೆಣೆದಿರುವ ಯತ್ನಾಳ್ ಟೀಮ್ ಒಬ್ಬೊಬ್ಬರೇ ವರಿಷ್ಠ ನಾಯಕರನ್ನು ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ದೂರು ಕೊಡುತ್ತಿದ್ದಾರೆ. ಈ ಹಿಂದೆ ಒಂದು ತಂಡವಾಗಿ ತೆರಳಿ ಹೈಕಮಾಂಡ್ ಭೇಟಿ ಮಾಡಿ ದೂರು ಕೊಟ್ಟಿದ್ದರು. ಆದರೆ ಈಗ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಅರವಿಂದ್ ಲಿಂಬಾವಳಿ ಹೀಗೆ ಒಬ್ಬೊಬ್ಬ ನಾಯಕರೂ ಪ್ರತ್ಯೇಕವಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಒಬ್ಬೊಬ್ಬರಾಗಿ ಭೇಟಿ ಮಾಡಿದರೆ ಬಣ ಕಟ್ಟಿಕೊಂಡಂತಾಗುವುದಿಲ್ಲ. ಜೊತೆಗೆ ಹೈಕಮಾಂಡ್ ಮೇಲೆ ಒತ್ತಡವೂ ಹೆಚ್ಚಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದೆ ಯತ್ನಾಳ್ ಟೀಮ್

ನಾವು ಹತಾಶರಾಗಿಲ್ಲ

ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಎಲ್ಲವನ್ನು ಮನವರಿಕೆ ಮಾಡಿ ಕೊಟ್ಟಿದ್ದೇವೆ. ನಾವು ಹತಾಶರಾಗಿಲ್ಲ. ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಆಗಲೇಬೇಕು. ನಮ್ಮ ಪಟ್ಟನ್ನು ಬಿಡುವುದಿಲ್ಲ. ಕುಮಾರ ಬಂಗಾರಪ್ಪ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದಾರೆ. ಆ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಮತ್ತಷ್ಟು ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

ಯತ್ನಾಳ್ ಬಣಕ್ಕೆ ಬಲ ತಂದ ಹೊಸ ಸೇರ್ಪಡೆ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಯತ್ನಾಳ್ ಬಣದ ಜೊತೆಗೆ ಗುರುತಿಸಿಕೊಂಡಿದ್ದಾರೆ. ಇದು ಸಹಜವಾಗಿಯೇ ವಿಜಯೇಂದ್ರ ಬಣದಲ್ಲಿ ಆತಂಕ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲದಿಂದಲೇ ಸಿಎಂ ಆಗಿದ್ದ ಬೊಮ್ಮಾಯಿ ಇದೀಗ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವುದು ಮಾಜಿ ಶಾಸಕ ರೇಣುಕಾಚಾರ್ಯ ಸೇರಿದಂತೆ ವಿಜಯೇಂದ್ರ ಬಣದಲ್ಲಿರುವವರು ಕಂಗೆಡುವಂತೆ ಮಾಡಿದೆ.

ಫೆ. 10 ರಂದು ಮತ್ತೆ ರೆಬೆಲ್ ನಾಯಕರ ಸಭೆ

ಪಕ್ಷದ ವರಿಷ್ಠರು ಒಳ್ಳೆಯ ಸುದ್ದಿಯನ್ನು ಕೊಡಲಿದ್ದಾರೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ. ಫೆ. 10ರ ನಂತರ ನಾವು ಒಳ್ಳೆಯ ಸುದ್ದಿಯನ್ನು ಕೊಡಲಿದ್ದೇವೆ ಎಂದು ಸಭೆಯ ಬಳಿಕ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದ್ದಾರೆ. ಫೆ. 10 ರಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಸರ್ಕಾರದಿಂದ ಕೊಟ್ಟಿರುವ ನಿವಾಸದಲ್ಲಿ ವಿಶೇಷ ಪೂಜೆ ಮಾಡುತ್ತಿದ್ದಾರೆ. ಹೀಗಾಗಿ ಫೆ. 9 ರಂದು ರೆಬೆಲ್ ನಾಯಕರು ದೆಹಲಿಗೆ ತೆರಳಲಿದ್ದಾರೆ. ವಿ. ಸೋಮಣ್ಣ ಸರ್ಕಾರಿ ನಿವಾಸದಲ್ಲಿ ಲಿಂಗಾಯತ ನಾಯಕರೂ ಸೇರಿದಂತೆ ರೆಬೆಲ್ ನಾಯಕರು ಮತ್ತೆ ಮಾತುಕತೆ ಮಾಡಲಿದ್ದಾರೆ. ಹೈಕಮಾಂಡಿಗೆ ತಮ್ಮ ಅಂತಿಮ ನಿರ್ಧಾರವನ್ನು ರೆಬೆಲ್ ನಾಯಕರು ತಿಳಿಸಲಿದ್ದಾರೆ ಎಂಬ ಮಾಹಿತಿಯಿದೆ.

ಯಡಿಯೂರಪ್ಪಾಜೀ ಆಪ್ ಚುಪ್ ಬೈಟೋ

ದೆಹಲಿಯಲ್ಲಿ ಮಾತನಾಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಹರಿಹಾಯಯ್ದಿದ್ದಾರೆ. 'ರಾಜ್ಯದಲ್ಲಿ ಎಲ್ಲ ಲಿಂಗಾಯತರು ಯಡಿಯೂರಪ್ಪ ಪರವಾಗಿಲ್ಲ. ಯಡಿಯೂರಪ್ಪ ಆ ಗೌರವ ಉಳಿಸಿಕೊಂಡಿಲ್ಲ. ವಿಜಯೇಂದ್ರನನ್ನು ಅಧ್ಯಕ್ಷ ಮಾಡುವುದಕ್ಕೆ ನಮ್ಮ ವಿರೋಧ ಇದೆ. ಇಬ್ಬರು ಮೂವರು ಪೇಮೆಂಟ್ ಸ್ವಾಮಿಗಳು ಅವರ ಜೊತೆಗಿದ್ದಾರೆ ಅಷ್ಟೇ. ವಿಜಯೇಂದ್ರ ಕರ್ಮಕಾಂಡ ಬಹಳ ಇದೆ, ಹಲ್ಕಾ ಕೆಲಸ ಬಹಳ ಇದೆ. ಯಡಿಯೂರಪ್ಪ ಬಹಳಷ್ಟು ಲಿಂಗಾಯತ ನಾಯಕರನ್ನು ಮುಗಿಸಿದ್ದಾರೆ. ಬಸವರಾಜ್ ಪಾಟೀಲ್ ಸೇಡಂ, ಬಿ.ಬಿ. ಶಿವಪ್ಪ, ಜಿ.ಎಂ. ಸಿದ್ದೇಶ್ವರ್, ಮಲ್ಲಿಕಾರ್ಜುನಯ್ಯ ಹೀಗೆ ಇವರೆಲ್ಲರನ್ನೂ ಮುಗಿಸಿದರು. ನನ್ನನ್ನು ಮುಗಿಸಲು ಸತತ ಪ್ರಯತ್ನ ಮಾಡಿದ್ದಾರೆ ' ಎಂದು ಯಡಿಯೂರಪ್ಪ ಮೇಲೆ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಹೊಸ ನಾಟಕ ಕಂಪನಿ ತೆಗೆದಿದ್ದಾರೆ. ಹುಷಾರಿಲ್ಲ ಎಂದು ನಾಟಕ ಮಾಡುತ್ತಿದ್ದಾರೆ. ಹುಷಾರಿಲ್ಲದವರು ನಿನ್ನೆ ಸಿದ್ದರಾಮಯ್ಯರನ್ನು ಹೇಗೆ ಭೇಟಿ ಮಾಡಿದರು?. ಎಲ್ಲರನ್ನು ಕರೆಸಿಕೊಂಡು ಸಿಂಪಥಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೇ. ಅವರಿಗೆ ಹೆಚ್ಚು ಮೊಮ್ಮಕ್ಕಳಿದ್ದಾರೆ, ಆಟ ಆಡ್ತಾ ಕುಳಿತುಕೊಂಡರೆ ನೂರು ವರ್ಷ ಬದುಕಬಹುದು. ಯಡಿಯೂರಪ್ಪ ಜೀ ಆಪ್ ಚುಪ್ ಬೈಟೊ. ಆಪ್ ಕೀ ಪೊತಾ, ಪೊತಾಕೀ ಪೊತಾ ಕೊ ಸಂಬಾಲೊ..! ಎಂದು ಯಡಿಯೂರಪ್ಪ ಮೇಲೆ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಿಜಯೇಂದ್ರ ಆಪ್ತರು ಆ್ಯಕ್ಟಿವ್ ಆಗಿದ್ದಾರೆ.

ರೇಣುಕಾಚಾರ್ಯ ನೇತೃತ್ವದಲ್ಲಿ ದಿಢೀರ್ ಮೀಟಿಂಗ್

ದೆಹಲಿಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಜಯೇಂದ್ರ‌ ಆಪ್ತ ಮಾಜಿ ಶಾಸಕರ ಸಭೆ ನಡೆದಿದೆ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ವೈ. ಸಂಪಂಗಿ, ಬಾಲರಾಜು, ಪಿಳ್ಳ ಮುನಿಶಾಮಪ್ಪ, ಎಂ.ಡಿ. ಲಕ್ಷ್ಮೀನಾರಾಯಣ, ರಮೇಶ್ ಭಾಗಿಯಾಗಿದ್ದರು.

Read More
Next Story