KSRTC-BMTC STRIKE | ಡಿ.31ರ ಸಾರಿಗೆ ಮುಷ್ಕರ ಗೊಂದಲ: ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ಹೇಳುವುದೇನು?
x
ಡಿಸೆಂಬರ್ 31ರಂದು ಸಾರಿಗೆ ನೌಕರರ ಮುಷ್ಕರ ನಡೆಯುವ ಅನುಮಾನ ಸೃಷ್ಟಿಯಾಗಿದೆ.

KSRTC-BMTC STRIKE | ಡಿ.31ರ ಸಾರಿಗೆ ಮುಷ್ಕರ ಗೊಂದಲ: ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ಹೇಳುವುದೇನು?

ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟದ ಮುಖಂಡ ಆರ್. ಚಂದ್ರಶೇಖರ್ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಬಂದ್​ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ʼದ ಫೆಡರಲ್‌ ಕರ್ನಾಟಕʼ ಕಾರ್ಮಿಕ ಮುಖಂಡ ಎಚ್‌ ವಿ ಅನಂತ ಸುಬ್ಬರಾವ್‌ ಅವರನ್ನು ಮಾತನಾಡಿಸಿದೆ


Click the Play button to hear this message in audio format

ಬಾಕಿ ವೇತನ ಮತ್ತು ಗ್ಯಾಚ್ಯುಟಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೇರಿದಂತೆ ಆರು ಸಾರಿಗೆ ಸಂಘಟನೆಗಳು ಡಿ.31 ರಂದು ಮುಷ್ಕರಕ್ಕೆ ಕರೆ ನೀಡಿದೆ. ಆದರೆ, ಇದೀಗ ಈ ಮುಷ್ಕರದ ವಿಷಯದಲ್ಲಿ ಕಾರ್ಮಿಕ ಸಂಘಟನೆಗಳ ನಡುವೆಯೇ ಭಿನ್ನಾಭಿಪ್ರಾಯ ತಲೆದೋರಿದ್ದು, ಕೆಎಸ್‌ಆರ್‌ಟಿಸಿ ನೌಕರರ ಕೂಟ ಮುಷ್ಕರಕ್ಕೆ ಬೆಂಬಲವಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಕೂಟದ ಮುಖಂಡ ಆರ್. ಚಂದ್ರಶೇಖರ್ ಅವರು ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಬಂದ್​ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಆರ್. ಚಂದ್ರಶೇಖರ್, ಡಿ.31ರಂದು ಸಾರಿಗೆ ನೌಕರರ ಮುಷ್ಕರಕ್ಕೆ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಬೆಂಬಲವಿಲ್ಲ. ಡಿ.31ರಂದು ಎಂದಿನಂತೆ ಸಾರಿಗೆ ಬಸ್ ಸಂಚಾರವಿರುತ್ತದೆ. ಜಂಟಿ ಕ್ರಿಯಾ ಸಮಿತಿ ಕರೆದಿರುವ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ.

ಚೌಕಾಸಿ ಸೆಟ್ಲ್​ಮೆಂಟ್​ಗಾಗಿ ಮುಷ್ಕರಕ್ಕೆ ಕರೆನೀಡಿದ್ದು ಸರಿಯಲ್ಲ. ಸಾರಿಗೆ ಸಿಬ್ಬಂದಿಗೆ ಸರ್ಕಾರಿ ನೌಕರರಷ್ಟು ವೇತನ ಕೊಡಿಸಲಾಗಿಲ್ಲ. ಸಮಾನ ವೇತನ ಕೊಡಿಸಲು ಜಂಟಿ ಕ್ರಿಯಾ ಸಮಿತಿಗೆ ಆಗುತ್ತಿಲ್ಲ. ಜಂಟಿ ಕ್ರಿಯಾ ಸಮಿತಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ. ಚುನಾವಣೆಗೂ ಮೊದಲು ಸಾರಿಗೆ ಸಿಬ್ಬಂದಿಗೆ ಭರವಸೆ ನೀಡಿತ್ತು. ಭರವಸೆ ಈಡೇರಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷ ಕ್ರಮಕೈಗೊಂಡಿದೆ. ಡಿ.31ರಂದು ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಆ ಹಿನ್ನೆಲೆಯಲ್ಲಿ ಸಾರಿಗೆ ಮುಷ್ಕರದ ಕುರಿತು ಗೊಂದಲ ಉಂಟಾಗಿದೆ. ಡಿ.31ರಿಂದ ರಾಜ್ಯ ಸಾರಿಗೆ ನಿಗಮಗಳು ಮತ್ತು ಬಿಎಂಟಿಸಿ ಬಸ್ಸುಗಳು ರಸ್ತೆಗೆ ಇಳಿಯಲಿವೆಯೇ? ಅಥವಾ ಇಲ್ಲವೇ? ಎಂಬ ಅನುಮಾನಗಳು ಎದ್ದಿವೆ.

ಈ ಗೊಂದಲಗಳಿಗೆ ತೆರೆ ಎಳೆಯಬೇಕಾದ ಮತ್ತು ಮುಷ್ಕರಕ್ಕೆ ಕರೆ ಕೊಟ್ಟಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಚ್ ವಿ ಅನಂತ ಸುಬ್ಬರಾವ್ ಅವರು ಈ ಬಗ್ಗೆ ಏನು ಹೇಳುತ್ತಾರೆ? ಅವರ ನಿಲುವು ಏನು? ಎಂಬ ಕುತೂಹಲದೊಂದಿಗೆ ʼದ ಫೆಡರಲ್‌ ಕರ್ನಾಟಕʼ ಅನಂತ ಸುಬ್ಬರಾವ್‌ ಅವರನ್ನು ಸಂಪರ್ಕಿಸಿತು.

ಬಂದ್‌ಗೆ ಬೆಂಬಲವಿಲ್ಲ; ಡಿ.31ರಂದು ಎಂದಿನಂತೆ ಬಸ್‌ ರಸ್ತೆಗೆ ಇಳಿಯುತ್ತವೆ ಎಂಬ ಹೇಳಿಕೆ ನೀಡಿರುವ ಆರ್ ಚಂದ್ರಶೇಖರ್‌ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಎಚ್ ವಿ ಅನಂತ ಸುಬ್ಬರಾವ್‌, ʻʻಮುಷ್ಕರ ತಡೆಯಲು ಕೆಎಸ್‌ಆರ್‌ಟಿಸಿ ನೌಕರರ ಕೂಟ ಸಿದ್ದತೆ ನಡೆಸುತ್ತಿದೆ. ಆದರೆ, ಸಾರಿಗೆ ಇಲಾಖೆ ನೌಕರರಲ್ಲಿ ಯಾವುದೇ ಗೊಂದಲಗಳಿಲ್ಲ. ಅವರು ಮುಷ್ಕರಕ್ಕೆ ಬೆಂಬಲ ನೀಡಲು ಮಾನಸಿಕವಾಗಿ ತಯಾರಿದ್ದಾರೆ. ಗೊಂದಲ ಸೃಷ್ಟಿಸಲು ಕೂಟ ಪ್ರಯತ್ನಿಸುತ್ತಿದೆಯಾದವರೂ ಸಾರಿಗೆ ಇಲಾಖೆ ನೌಕರರು ಯಾರೂ ದಡ್ಡರಿಲ್ಲ. ಅವರ ಸಂಪೂರ್ಣ ಬೆಂಬಲ ನಮ್ಮ ಮುಷ್ಕರಕ್ಕೆ ಇದೆʼʼ ಎಂದು ಹೇಳಿದ್ದಾರೆ.

ಶಕ್ತಿ ಯೋಜನೆಯಿಂದಾಗಿ ಹೆಚ್ಚು ಕೆಲಸ

ಸಾರಿಗೆ ಕೂಟ ಈಗಾಗಲೇ ಛಿಧ್ರವಾಗಿದ್ದು, ಅನೇಕ ಜನರು ಈ ಕೂಟದಿಂದ ಹೊರಗೆ ಬಂದಿದ್ದಾರೆ. ಅವರು ಸರ್ಕಾರದ ಪರ ಇರುವುದರಿಂದ ಸರ್ಕಾರ ಅವರನ್ನು ಕರೆದು ಪ್ರೋತ್ಸಾಹಿಸುತ್ತದೆ. ಮುಷ್ಕರ ನಡೆಸದಂತೆ ಸರ್ಕಾರ ನೋಟಿಸ್‌ ಕೂಡ ನೀಡಿದೆ. ಆದರೆ ನೌಕರರಿಗೆ ಇದುವರೆಗೆ ವೇತನ ಹೆಚ್ಚಳ ಮಾಡಿಲ್ಲ. ಸರ್ಕಾರ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಶಕ್ತಿ ಯೋಜನೆಯಿಂದಾಗಿ ಸಾರಿಗೆ ನೌಕರರಿಗೆ ಹೆಚ್ಚಿನ ಕೆಲಸದ ಒತ್ತಡವಿದೆ. ಕಡಿಮೆ ಬಸ್ಸು, ಹೆಚ್ಚಿನ ಪ್ರಯಾಣಿಕರಿಂದಾಗಿ ನೌಕರರು ಹೈರಾಣಾಗಿದ್ದಾರೆ. ಈ ಸಮಯದಲ್ಲಿ ಇಂಥಹ ಹೇಳಿಕೆಗಳು ಗಾಯಕ್ಕೆ ಉಪ್ಪೆರೆಚಿದಂತೆ. ಹಾಗಾಗಿ ಸಾರಿಗೆ ನೌಕರರು ಹೋರಾಟಕ್ಕೆ ನಮ್ಮೊಂದಿಗೆ ಕೈಜೋಡಿಸಿಯೇ ಜೋಡಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯಾವುದೇ ಬಸ್ಸುಗಳು ಬೀದಿಗಿಳಿಯುವುದಿಲ್ಲ

ಮುಷ್ಕರಕ್ಕೆ ಎಲ್ಲಾ ರೀತಿಯ ತಯಾರಿ ನಡೆದಿದೆ. ಎಲ್ಲಾ ಒಕ್ಕೂಟದವರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಸರ್ಕಾರ ಒಪ್ಪಂದ ಮಾಡಿಕೊಳ್ಳದಿದ್ದರೆ ಡಿ.31 ರಿಂದ ಯಾವುದೇ ಸರ್ಕಾರಿ ಬಸ್ಸುಗಳು ರಸ್ತೆಗಿಳಿಯುವುದಿಲ್ಲ. ನಾವು ಸರ್ಕಾರಕ್ಕೆ ಈಗಾಗಲೇ ನೋಟಿಸ್‌ ನೀಡಿದ್ದೇವೆ. ಆದರೆ ಸರ್ಕಾರ ಈವರೆಗೆ ಯಾವುದೇ ‌ರೀತಿಯಲ್ಲಿ ಸ್ಪಂದಿಸಿಲ್ಲ. ಸರ್ಕಾರಕ್ಕೆ ಇನ್ನೂ ಸಮಯವಿದೆ. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಸಭೆ ಕರೆದು ಚರ್ಚಿಸಿ ಒಂದು ಒಪ್ಪಂದ ಮಾಡಿಕೊಳ್ಳಲಿ. ಡಿ.31 ವರೆಗೆ ಸರ್ಕಾರಕ್ಕೆ ಸಮಯವಿದೆ. ನಮ್ಮ ಬೇಡಿಕೆ ಈಡೇರಿಸದಿದದ್ದರೆ ಮುಷ್ಕರ ಖಂಡಿತ ನಡೆಯಲಿದೆ ಎಂದು ಅನಂತ ಸುಬ್ಬರಾವ್ ತಿಳಿಸಿದರು.

‌ನೌಕರರ ಕ್ರಿಯಾ ಸಮಿತಿ ಬೇಡಿಕೆಗಳೇನು?

ರಾಜ್ಯ ಸರ್ಕಾರ 2024 ಜನವರಿಯಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡಬೇಕಾಗಿತ್ತು. ಅದಲ್ಲದೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಸೇರಿದಂತೆ ನಾಲ್ಕು ನಿಗಮದ ನೌಕರರಿಗೆ 38 ತಿಂಗಳ ಅರಿಯರ್ಸ್ ಬಾಕಿ ಹಣವನ್ನು ಬಿಡುಗಡೆ ಕೂಡ ಮಾಡಿಲ್ಲ. ನಿವೃತ್ತಿ ಹೊಂದಿದ ನೌಕರರಿಗೆ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿಲ್ಲ. ಅರಿಯರ್ಸ್ ಹಣವೇ 1750 ಕೋಟಿ ರುಪಾಯಿ ನೀಡಬೇಕಿದೆ. ಗ್ರಾಚ್ಯುಟಿ ಹಣ ಸುಮಾರು 399.29 ಕೋಟಿ ರುಪಾಯಿ ನೀಡಬೇಕಿದೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಿವೃತ್ತರಾದ ನೌಕರರಿಗೆ 2024ರ ಜೂನ್ 27ರ ಸುತ್ತೋಲೆಯಂತೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎನ್ನುವುದು ಈ ಮುಷ್ಕರ ಬೇಡಿಕೆಗಳಾಗಿದೆ.

ನೌಕರರ ಕೂಟದ ಬೇಡಿಕೆಗಳೇನು?

ಚುನಾವಣಾ ಪೂರ್ವ ಸರ್ಕಾರ ನೀಡಿರುವ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರ ಸರಿ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ನೀಡಬೇಕು. ಜನವರಿ 2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಈ ಪರಿಷ್ಕರಣೆಯಂತೆ 38 ತಿಂಗಳ ಹಿಂಬಾಕಿಯನ್ನು ನೀಡಬೇಕು. ಸಾರಿಗೆ ಸಂಸ್ಥೆಗಳಲ್ಲಿ ಮಾನ್ಯತೆಗಾಗಿ ತುರ್ತಾಗಿ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು. ಕೆಎಸ್​ಆರ್​ಟಿಸಿಯಲ್ಲಿ ಜಾರಿಗೆ ತರುತ್ತಿರುವ ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆಯನ್ನು ಏಕಕಾಲದಲ್ಲಿ 4 ನಿಗಮಗಳಲ್ಲಿ ಜಾರಿಗೆ ತರಬೇಕು. ಸಂಸ್ಥೆಯಲ್ಲಿ ವಿದ್ಯುತ್‌ ಚಾಲಿತ ಬಸ್ಸುಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿಯನ್ನು ಕೈಬಿಟ್ಟು, ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿ ಮೂಲಕವೇ ನಿರ್ವಹಣೆ ಮಾಡಬೇಕು. ಹೊರ ಗುತ್ತಿಗೆ ಆಧಾರದ ಮೇಲೆ ಚಾಲಕ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿ ನೇಮಕಾತಿಯನ್ನು ಕೈಬಿಡಬೇಕು ಎನ್ನುವುದು ಕೆಎಸ್‌ಆರ್‌ಟಿಸಿ ನೌಕರರ ಕೂಟದ ಬೇಡಿಕೆಗಳಾಗಿದೆ.

ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಪ್ರಮುಖ ಸಾರಿಗೆ ನಿಗಮಗಳ ನೌಕರರ ಸಂಬಳ ಹೆಚ್ಚಳ, ಬಾಕಿ ಪಾವತಿಗಳ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯವು ಒಟ್ಟು 1750 ಕೋಟಿ ರೂಪಾಯಿಗಳ ಬಾಕಿ ಮತ್ತು ಹೆಚ್ಚುವರಿ 399.29 ಕೋಟಿ ಗ್ರಾಚ್ಯುಟಿ ಪಾವತಿಗಳನ್ನು ನಿವೃತ್ತ ಕಾರ್ಮಿಕರಿಗೆ ನೀಡಬೇಕಿದೆ. ಈ ಬಗ್ಗೆ ಈಗಾಗಲೇ ಡಿಸೆಂಬರ್ 9ರಂದು ಬೆಳಗಾವಿಯ ಚಳಿಗಾಲದ ಅಧಿವೇಶನದ ಮೊದಲ ದಿನವೇ 'ಬೆಳಗಾವಿ ಚಲೋʼ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿ. 31 ರಿಂದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂಬ ಕುರಿತು ನಿಯಮದಂತೆ ನೋಟೀಸ್ ಕೊಡಲಾಗಿದೆ.

ಆದರೆ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಪಣ ತೊಟ್ಟು ನಿಂತಿದ್ದರೆ ಇತ್ತ ಯಾವುದೇ ಕಾರಣಕ್ಕೂ ಬಂದ್​ಗೆ ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಕೂಟ ಹೇಳಿದೆ.

Read More
Next Story