
ಆನ್‌ಲೈನ್ ಗೇಮಿಂಗ್ ನಿಯಂತ್ರಣ: ಕೇಂದ್ರದ ಹೊಸ ಮಸೂದೆ, ರಾಜ್ಯದ ಕಾನೂನಿನ ಕಥೆಯೇನು?
ಕೇಂದ್ರದ ಆನ್‌ಲೈನ್ ಮಸೂದೆ ಜಾರಿಗೊಂಡರೆ ರಾಜ್ಯ ಸರ್ಕಾರ ಮಂಡಿಸಲು ಮುಂದಾಗಿರುವ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ ಮಂಡನೆಯಾಗಲಿದೆಯೇ? ಎಂಬುದು ಇದೀಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಹೈಟೆಕ್ ಯುಗದಲ್ಲಿ ಆನ್‌ಲೈನ್ ಬೆಟ್ಟಿಂಗ್ ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದ್ದು, ಚಿಕ್ಕ ವಯಸ್ಸಿನವರಿಂದ ಹಿಡಿದು, ವಯೋವೃದ್ಧರವರೆಗೂ ಬೆಟ್ಟಿಂಗ್ ಭೂತ ಆವರಿಸಿಕೊಂಡಿದೆ. ಅದೃಷ್ಟದಾಟ ನಂಬಿ ಲಕ್ಷಾಂತರ ಮಂದಿ ಹಣ ಕಳೆದು ಬೀದಿಗೆ ಬೀಳುತ್ತಿದ್ಧಾರೆ. ಅಲ್ಲದೆ, ಇದನ್ನೇ ದಂಧೆ ಮಾಡಿಕೊಂಡು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಪ್ರಮಾಣ ಹೆಚ್ಚಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಇದಕ್ಕೆ ಅಂಕುಶ ಹಾಕಲು ನಿರ್ಧರಿಸಿದೆ. ಆದರೆ, ಕೇಂದ್ರದ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ ಜಾರಿಗೊಂಡರೆ ರಾಜ್ಯ ಸರ್ಕಾರ ಮಂಡಿಸಲು ಮುಂದಾಗಿರುವ ರಾಜ್ಯ ಸರ್ಕಾರ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ ಮಂಡನೆಯಾಗಲಿದೆಯೇ? ಎಂಬುದು ಇದೀಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯ ಸರ್ಕಾರವು ಅನ್‌ಲೈನ್ ಬಿಟ್ಟಿಂಗ್ ನಿಯಂತ್ರಣಕ್ಕೆ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ ಜಾರಿಗೆ ಮುಂದಾಗಿದೆ. ಕೇಂದ್ರ ಸರ್ಕಾರವು ವಿಧೇಯಕದಲ್ಲಿ ಬಳಸುವ ಅಂಶಗಳ ಮೇಲೆ ರಾಜ್ಯ ಸರ್ಕಾರದ ಮುಂದಿನ ನಡೆ ಇರಲಿದೆ. ಆಯಾ ರಾಜ್ಯಗಳಿಗೆ ಅನುಕೂಲಕ್ಕೆ ತಕ್ಕಂತೆಯೂ ವಿಧೇಯಕವನ್ನು ಜಾರಿಗೊಳಿಸಬಹುದು ಎಂದಾದರೆ ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್ (ತಿದ್ದಿಪಡಿ) ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಜಾರಿಗೊಳಿಸಲು ಮುಂದಾಗಿದೆ. ಇದಕ್ಕೂ ಮುನ್ನ ಕಾನೂನು ತಜ್ಞರ ಅಭಿಪ್ರಾಯದ ಮೇರೆಗೆ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಲಿದೆ ಎಂದು ಮೂಲಗಳು ಹೇಳಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿರುವ ಕೇಂದ್ರ ಸರ್ಕಾರವು ಅನ್‌ಲೈನ್ ಮನಿ ಗೇಮಿಂಗ್ ಮತ್ತು ಬೆಟ್ಟಿಂಗ್ ಅಪ್ಲಿಕೇಷನ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರುವ ಮೂಲಕ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಆನ್ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮೂಲಕ ಜಾರಿಗೆ ಬರುವ ಈ ಕ್ರಮವು, ಹಣವನ್ನು ಪಣವಾಗಿಡುವ ಎಲ್ಲಾ ರೀತಿಯ ಆನ್‌ಲೈನ್ ಆಟಗಳನ್ನು ನಿಷೇಧಿಸುತ್ತದೆ. ಈ ನಿರ್ಣಯವು ಗೇಮಿಂಗ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದರೂ, ಯುವಜನತೆಯನ್ನು ರಕ್ಷಿಸುವುದು ಮತ್ತು ಅಕ್ರಮ ಹಣದ ಹರಿವನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.
ಕೇಂದ್ರದ ಕಾಯ್ದೆಯಿಂದ ರಾಜ್ಯ ಕಾಯ್ದೆಗೆ ಪೆಟ್ಟು?
ಕೇಂದ್ರದ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆಯಿಂದ ರಾಜ್ಯ ಸರ್ಕಾರದ ಕರ್ನಾಟಕ ಪೊಲೀಸ್ (ತಿದ್ದಿಪಡಿ) ಕಾಯ್ದೆಗೆ ಹಿನ್ನೆಡೆಯಾಗಲಿದೆಯೇ? ಎಂಬ ಪ್ರಶ್ನೆಗಳು ಮೂಡಿವೆ. ರಾಜ್ಯ ಸರ್ಕಾರವು ತನ್ನ ವ್ಯಾಪ್ತಿಗನುಗುಣವಾಗಿ ಕಾಯ್ದೆ ಜಾರಿಗೊಳಿಸಬಹುದು. ಆದರೆ, ಕೇಂದ್ರದಲ್ಲಿನ ಅಂಶಗಳು ಯಾವ ರೀತಿಯಲ್ಲಿರಲಿವೆ ಎಂಬುದನ್ನು ಗಮನಿಸಬೇಕಾಗಿದೆ. ಬೆಟ್ಟಿಂಗ್ ಅನ್ನು ನಿಷೇಧಿಸಬಹುದೇ ಹೊರತು, ಸಂಪೂರ್ಣವಾಗಿ ಆನ್‌ಲೈನ್ ಗೇಮಿಂಗ್ ರದ್ದು ಮಾಡಲು ಬರುವುದಿಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಹೈಕೋರ್ಟ್ ವಕೀಲೆ ಸ್ವಾಮಿನಿ ಗಣೇಶ್, ಆನ್‌ಲೈನ್ ಗೇಮಿಂಗ್‌ಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ವಿಧೇಯಕವನ್ನು ಜಾರಿ ಮಾಡಿದೆ. ಆದರೆ, ರಾಜ್ಯ ಸರ್ಕಾರಕ್ಕೂ ತನ್ನದೇ ಆದ ಮಿತಿ ಇರುತ್ತದೆ. ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ಮಾಡಿದ್ದರೆ ಒಂದೇ ವಿಷಯಕ್ಕೆ ಎರಡು ಕಾಯ್ದೆಗಳು ಬರುವುದಿಲ್ಲ. ಆದರೆ, ಕೇಂದ್ರದ ವಿಧೇಯಕವನ್ನು ಸರ್ಕಾರವು ಅಳವಡಿಸಿಕೊಳ್ಳಬಹುದು. ಒಂದು ವೇಳೆ ಕೆಲವೊಂದು ಅಂಶಗಳನ್ನು ಸೇರಿಸಿ ರಾಜ್ಯಕ್ಕೆ ಸಿಮೀತವಾಗಿ ವಿಧೇಯಕವನ್ನು ಅನುಷ್ಠಾನಗೊಳಿಸಬಹುದು ಎಂದರು.
ರಾಷ್ಟ್ರೀಯ ಕಾನೂನು ಶಾಲೆಯ ಅಸೋಸಿಯೇಟ್ ಪ್ರೊ. ಡಾ.ಎ.ನಾಗರತ್ನ ಮಾತನಾಡಿ, ಯಾವುದೇ ವಿಧೇಯಕಗಳು ಜನರ ಹಿತಕ್ಕಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಇರುತ್ತದೆ. ದೇಶದ ಕೆಲವು ರಾಜ್ಯಗಳಲ್ಲಿ ಆನ್‌ಲೈನ್ ಗೇಮಿಂಗ್ ಸ್ವರೂಪಗಳು ಬೇರೆ ಇರುವ ಸಾಧ್ಯತೆ ಇರುತ್ತದೆ. ಆಗ ಇಡೀ ರಾಷ್ಟ್ರಕ್ಕೆ ವಿಧೇಯಕ ಅನ್ವಯವಾಗುವುದು ಕಷ್ಟ. ಅಂತಹ ಸಮಯದಲ್ಲಿ ಆಯಾ ರಾಜ್ಯಗಳು ರಾಜ್ಯಗಳ ಹಿತದೃಷ್ಟಿಯಿಂದ ಕೇಂದ್ರದ ವಿಧೇಯಕದ ಜತೆಗೆ ರಾಜ್ಯಗಳು ಸಹ ತನ್ನದೇ ಸ್ವರೂಪದಿಂದ ಕೂಡಲೇ ವಿಧೇಯಕಗಳನ್ನು ಅನುಷ್ಠಾನಗೊಳಿಸಲು ಅವಕಾಶ ಇರಲಿದೆ ಎಂದು ತಿಳಿಸಿದರು.
ಹೊಸ ಗೇಮಿಂಗ್ ಕಾನೂನಿನ 6 ಕಠಿಣ ಸೂತ್ರಗಳು
ಕೇಂದ್ರ ಸರ್ಕಾರವು ತಂದಿರುವ ಹೊಸ ಕಾನೂನು, ಹಣದ ಪಣದೊಂದಿಗೆ ಆಡುವ ಆಟಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣವನ್ನು ಸಾಧಿಸಲಿದೆ. ಈ ಮಸೂದೆಯು ಆರು ಪ್ರಮುಖ ಅಂಶಗಳನ್ನು ಹೊಂದಿವೆ.
ಸಂಪೂರ್ಣ ನಿಷೇಧ: ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಹಣದ ಬಹುಮಾನದೊಂದಿಗೆ ಆನ್‌ಲೈನ್ ಗೇಮ್‌ಗಳನ್ನು ನೀಡುವುದು, ಪ್ರಚಾರ ಮಾಡುವುದು ಅಥವಾ ಸಹಕರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಡ್ರೀಮ್ 11, ರಮ್ಮಿ ಸರ್ಕಲ್, ವಿಂಜೋ, ಎಂಪಿಎಲ್ ನಂತಹ ಎಲ್ಲಾ ಪ್ರಮುಖ ಆಟಗಳ ಪ್ಲಾಟ್‌ಫಾರ್ಮ್‌ಗಳು ಇದರ ವ್ಯಾಪ್ತಿಗೆ ಬರುತ್ತವೆ.
ಕೌಶಲ್ಯ ಮತ್ತು ಅದೃಷ್ಟದ ಆಟದ ಭೇದ ರದ್ದು: ಇದುವರೆಗೆ ‘ಕೌಶಲ್ಯದ ಆಟ’ ಮತ್ತು ‘ಅದೃಷ್ಟದ ಆಟ’ ಎಂಬ ವಿಂಗಡಣೆಯನ್ನು ಬಳಸಿಕೊಂಡು ಅನೇಕ ವೇದಿಕೆಗಳು ಕಾರ್ಯನಿರ್ವಹಿಸುತ್ತಿದ್ದವು. ಹೊಸ ಕಾನೂನು ಈ ವಿಂಗಡಣೆಯನ್ನು ಸಂಪೂರ್ಣವಾಗಿ ರದ್ದುಪಡಿಸಿದೆ. ಯಾವುದೇ ಗೇಮ್‌ಗೆ ಪ್ರವೇಶ ಶುಲ್ಕ ಅದಾಗಲಿ ಅಥವಾ ಹಣವನ್ನು ಪಣವಾಗಿಡುವುದಾಗಲಿ ಇದ್ದರೆ, ಅದನ್ನು ಆನ್‌ಲೈನ್ ರಿಯಲ್ ಮನಿಗೇಮ್ ಎಂದು ಪರಿಗಣಿಸಿ ನಿಷೇಧಿಸಲಾಗುವುದು.
ಜಾಹೀರಾತುಗಳ ಮೇಲೆ ಬಂಧನ: ಇಂತಹ ಆಟಗಳ ಎಲ್ಲಾ ರೀತಿಯ ಜಾಹೀರಾತುಗಳು, ಟಿವಿ, ಡಿಜಿಟಲ್ ಮಾಧ್ಯಮ ಅಥವಾ ಪತ್ರಿಕೆಗಳಲ್ಲಿ ಕಾಣಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು.
ಹಣಕಾಸು ವಹಿವಾಟುಗಳನ್ನು ಸ್ಥಗಿತಗೊಳಿಸಲು: ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಈ ಗೇಮಿಂಗ್ ವೇದಿಕೆಗಳೊಂದಿಗೆ ಯಾವುದೇ ರೀತಿಯ ಹಣಕಾಸು ವಹಿವಾಟು ನಡೆಸುವುದನ್ನು ನಿಷೇಧಿಸಲಾಗುವುದು.
ಕಠಿಣ ದಂಡ ಮತ್ತು ಶಿಕ್ಷೆ: ಈ ಕಾನೂನನ್ನು ಉಲ್ಲಂಘಿಸಿ ಆನ್‌ಲೈನ್ ರಿಯಲ್ ಮನಿ ಗೇಮ್‌ಗಳನ್ನು ನಡೆಸುವವರ ಮೇಲೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂ. ವರೆಗೆ ದಂಡ ವಿಧಿಸಬಹುದು. ಇದೇ ರೀತಿ ಈ ಆಟಗಳನ್ನು ಪ್ರಚಾರ ಮಾಡುವ ಜಾಹೀರಾತುದಾರರ ಮೇಲೆ 2 ವರ್ಷಗಳ ಜೈಲು ಮತ್ತು 50 ಲಕ್ಷ ರೂಪಾಯಿ ದಂಡವನ್ನು ವಿಧಿಸಲು ವಿಧೇಯಕದಲ್ಲಿ ಪ್ರಸ್ತಾವಿಸಲಾಗಿದೆ.
ಹೊಸ ನಿಯಂತ್ರಣ ಸಂಸ್ಥೆ: ಈ ಕಾನೂನನ್ನು ಪಾಲಿಸುವುದನ್ನು ಮೇಲ್ವಿಚಾರಣೆ ಮಾಡಲು ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಹೊಸ ಕೇಂದ್ರೀಯ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಲಾಗುವುದು.
ರಾಜ್ಯದಿಂದ ವಿಧೇಯಕ ಕರಡು ಸಿದ್ಧ
ಬೆಟ್ಟಿಂಗ್‌ನಿಂದ ಹಣ ಕಳೆದುಕೊಂಡವರು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ಧಾರೆ. ಆನ್‌ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್‌ಗೆ ಅಂಕುಶ ಹಾಕಲು ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ ಕರಡು ಸಿದ್ದಪಡಿಸಿದೆ. ಕೇಂದ್ರದಿಂದ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮುಂಗಾರು ಅಧಿವೇಶನದಲ್ಲಿ ಮಂಡನೆಗೆ ಮುಂದಾಗಿದ್ದ ಕಾಯ್ದೆಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಡಳಿತಾತ್ಮಕ ಕಾರಣಗಳಿಂದ ಮಂಡಿಸಲು ಸಾಧ್ಯವಾಗಿಲ್ಲ ಎಂದು ಮುಂಬರುವ ಚಳಿಗಾಲ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಲು ಸಿದ್ಧತೆ ನಡೆಸಿದೆ.
ಅನ್‌ಲೈನ್ ಬೆಟ್ಟಿಂಗ್ ವ್ಯಾಮೋಹ ಅನಕ್ಷರಸ್ಥರಿಗೆ ಸೀಮಿತವಾಗಿಲ್ಲ. ಅಕ್ಷರಸ್ಥರಲ್ಲೂ ಈ ಗೀಳು ಹೆಚ್ಚಾಗಿದೆ. ಕೋಟ್ಯಂತರ ರೂ. ಹಣ ಗಳಿಸಬಹುದು ಎಂಬ ಬಣ್ಣ-ಬಣ್ಣದ ಆಕರ್ಷಿತ ಜಾಹೀರಾತುಗಳಿಗೆ ಮಾರುಹೋಗುವವರ ಸಂಖ್ಯೆ ಕಡಿಮೆಯೇನಿಲ್ಲ. ಆರಂಭದಲ್ಲಿ ಟೈಮ್ ಪಾಸ್‌ಗೆ ಆಡುವ ಅಭ್ಯಾಸವಾಗಿ ಕಾಲಕ್ರಮೇಣ ಬೆಟ್ಟಿಂಗ್ ಕೂಪದಿಂದ ಹೊರಬರಲಾಗದಷ್ಟು ಆಳಕ್ಕೆ ಸಿಲುಕುತ್ತಿದ್ಧಾರೆ. ಇದರ ಪರಿಣಾಮ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಆತ್ಮಹತ್ಯೆ ದಾರಿ ಕಡೆಗೆ ಹೊರಳುತ್ತಿರುವುದು ಆತಂಕಕಾರಿಯಾಗಿದೆ.
ಗೇಮ್ ಆಫ್ ಸ್ಕಿಲ್ ಆನ್‌ಲೈನ್ ವೇದಿಕೆಗಳಿಗೆ ವಿನಾಯಿತಿ
ಈ ಮಸೂದೆಯಲ್ಲಿ ಗೇಮ್ ಆಫ್ ಸ್ಕಿಲ್ ಹೊಂದಿರುವ ಆನ್‌ಲೈನ್ ಗೇಮಿಂಗ್‌ಗೆ ವಿನಾಯಿತಿ ನೀಡಲಾಗಿದೆ. ಗೇಮ್ ಆಫ್ ಸ್ಕಿಲ್ ಅಂದರೆ ಯಾವುದೇ ಆಟ, ಸ್ಪರ್ಧೆ ಅಥವಾ ಚಟುವಟಿಕೆಗಳ ಫಲಿತಾಂಶ ಬಹುವಾಗಿ ಸ್ಪರ್ಧಿಸುವವನ ಕೌಶಲ, ತಿಳಿವಳಿಕೆ, ತರಬೇತಿ ಅಥವಾ ಪರಿಣತಿಯಿಂದ ಅವಲಂಬಿತವಾಗಿದ್ದರೆ ಅದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಗೇಮ್ ಆಫ್ ಸ್ಕಿಲ್ ಗೇಮಿಂಗ್ ವೇದಿಕೆಗಳು ಸೂಕ್ತ ಪರವಾನಗಿಗಳನ್ನು ಹೊಂದಿರಬೇಕು. ರಾಜ್ಯ ಸರ್ಕಾರ, ನಿಯಂತ್ರಣ ಪ್ರಾಧಿಕಾರ ನಿಗದಿ ಪಡಿಸುವ ಕೌಶಲ್ಯಗಳು, ತರಬೇತಿ, ಪರಿಣತಿಗಳಿಗೆ ಮಾತ್ರ ಅವಕಾಶ ಇರಲಿದೆ. ಇಲ್ಲದಿದ್ದಲ್ಲಿ ಅವುಗಳಿಗೆ ನಿಷೇಧ ಹೇರಲಾಗುತ್ತದೆ.
ನಿಯಂತ್ರಣ ಪ್ರಾಧಿಕಾರ ರಚನೆ: ಹೊಸ ಪ್ರಸ್ತಾಪಿತ ಮಸೂದೆ ಪ್ರಕಾರ ರಾಜ್ಯ ಸರ್ಕಾರ ಕರ್ನಾಟಕ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣ ಪ್ರಾಧಿಕಾರವನ್ನು ರಚನೆ ಮಾಡಲಿದೆ. ಈ ಪ್ರಾಧಿಕಾರ ಹೊಸ ಕಾನೂನಿನಂತೆ ನಿಯಮಗಳ ಜಾರಿ, ಆನ್‌ಲೈನ್ ಗೇಮಿಂಗ್ ಮತ್ತು ಗ್ಯಾಂಬ್ಲಿಂಗ್‌ಗೆ ನಿಗಾವಹಿಸಲಿದೆ. ಈ ಪ್ರಾಧಿಕಾರಕ್ಕೆ ಕಾನೂನು, ಸಾರ್ವಜನಿಕ ಆಡಳಿತ, ತಂತ್ರಜ್ಞಾನದ ಅನುಭವ ಹೊಂದಿರುವವರನ್ನು ರಾಜ್ಯ ಸರ್ಕಾರ ಅಧ್ಯಕ್ಷರಾಗಿ ನೇಮಿಸಲಿದೆ. ಜೊತೆಗೆ ಮೂವರು ಸದಸ್ಯರನ್ನು ನೇಮಕ ಮಾಡಲಿದೆ. ಓರ್ವ ಸದಸ್ಯ ಮಾಹಿತಿ ತಂತ್ರಜ್ಞಾನ, ಇನ್ನೊಬ್ಬ ಸದಸ್ಯ ಹಣಕಾಸು ಮತ್ತು ಮತ್ತೊಬ್ಬ ಸದಸ್ಯ ಸಮಾಜ ಕಲ್ಯಾಣದಲ್ಲಿ ಅನುಭವ ಹೊಂದಿರುವವರಾಗಿರಲಿದ್ದಾರೆ.
ಪ್ರಾಧಿಕಾರದ ಜವಾಬ್ದಾರಿಗಳೇನು?
ಕೌಶಲ್ಯ ಆಧಾರಿತ ಗೇಮಿಂಗ್ ವೇದಿಕೆಗಳಿಗೆ ಪರವಾನಗಿ ನೀಡುವುದು, ಕಾನೂನು ಬಾಹಿರ ಬೆಟ್ಟಿಂಗ್ ಚಟುವಟಿಕೆ, ನೋಂದಾಯಿತವಲ್ಲದ ಆನ್‌ಲೈನ್ ವೇದಿಕೆಗಳ ಮೇಲೆ ನಿಗಾ ಮತ್ತು ತನಿಖೆ ನಡೆಸುವುದು, ಆನ್‌ಲೈನ್ ಬೆಟ್ಟಿಂಗ್‌ನ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡ ಸಂತ್ರಸ್ತನಿಗೆ ಸಹಾಯವಾಣಿ ಮತ್ತು ಬೆಂಬಲ ನೀಡುವ ವ್ಯವಸ್ಥೆಯನ್ನು ರೂಪಿಸುವುದು ಪ್ರಾಧಿಕಾರದ ಜವಾಬ್ದಾರಿಯಾಗಿದೆ.
ಕೆವೈಸಿ (KYC) ಪರಿಶೀಲನೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳಂತಹ ಅರ್ಹತಾ ಮಾನದಂಡಗಳನ್ನು ಪಾಲಿಸುವ ವ್ಯಕ್ತಿ ಅಥವಾ ನಿರ್ವಾಹಕರಿಗೆ ಮಾತ್ರ ಗೇಮಿಂಗ್ ಸಂಸ್ಥೆ ಆರಂಭಕ್ಕೆ ಪರವಾನಗಿ ನೀಡುವುದು ಪ್ರಾಧಿಕಾರದ ಕೆಲಸ. ಈ ಗೇಮಿಂಗ್ ವೇದಿಕೆಗಳಲ್ಲಿ ಸ್ಪರ್ಧಿಸುವವರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಅತಿಶಯೋಕ್ತಿಯ ಬಹುಮಾನಗಳ ಮೂಲಕ ಜನರಿಗೆ ಆಮಿಷ ಒಡ್ಡುವುದನ್ನು ಮತ್ತು ಅತಿರೇಕದ ಜಾಹೀರಾತುಗಳನ್ನು ನೀಡುವುದನ್ನು ನಿಯಂತ್ರಿಸಬೇಕು. ಪ್ರಾಧಿಕಾರವು ಮೂರು ವರ್ಷಗಳ ಅವಧಿಗೆ ಪರವಾನಗಿಯನ್ನು ನೀಡಲಿದ್ದು, ಕಾನೂನು ಪಾಲನೆಯನ್ನು ಆಧರಿಸಿ ಅದನ್ನು ನವೀಕರಿಸಲು ಅವಕಾಶ ನೀಡಲಾಗಿದೆ.
ಕಠಿಣ ಶಿಕ್ಷೆಯೂ ಇದೆ
ರಾಜ್ಯದ ಈ ಹೊಸ ಮಸೂದೆಯು ಕಾನೂನುಬಾಹಿರ ಆನ್‌ಲೈನ್ ಬೆಟ್ಟಿಂಗ್‌ಗೆ ಕಡಿವಾಣ ಹಾಕಲು ಕಠಿಣ ಶಿಕ್ಷೆಗಳನ್ನು ಪ್ರಸ್ತಾಪಿಸಿದೆ. ಇದರ ಅನ್ವಯ, ನೋಂದಣಿಯಾಗದ ವೇದಿಕೆಗಳ ಮೂಲಕ ಆನ್‌ಲೈನ್ ಬೆಟ್ಟಿಂಗ್ ಚಟುವಟಿಕೆಗಳನ್ನು ನಡೆಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು. ಇದೇ ತಪ್ಪನ್ನು ಪುನರಾವರ್ತಿಸಿದರೆ, ದಂಡದ ಮೊತ್ತವನ್ನು ಐದು ಲಕ್ಷ ರೂಪಾಯಿವರೆಗೆ ಹೆಚ್ಚಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.