ಮತದಾರರ ಪಟ್ಟಿ ಪರಿಷ್ಕರಣೆ: ಕೇಂದ್ರ -ರಾಜ್ಯ ಚುನಾವಣಾ ಆಯೋಗಗಳ ನಡುವೆ ಸಂಘರ್ಷ ಜೋರು?
x

ಮತದಾರರ ಪಟ್ಟಿ ಪರಿಷ್ಕರಣೆ: ಕೇಂದ್ರ -ರಾಜ್ಯ ಚುನಾವಣಾ ಆಯೋಗಗಳ ನಡುವೆ ಸಂಘರ್ಷ ಜೋರು?

ತನ್ನದೇ ಒಂದು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ರಾಜ್ಯ ಚುನಾವಣಾ ಆಯೋಗವು ತೀರ್ಮಾನ ಕೈಗೊಂಡಿದೆ. ಈ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿದೆ.


Click the Play button to hear this message in audio format

ಹಲವು ಅಕ್ರಮಗಳ ಹಿನ್ನೆಲೆಯಲ್ಲಿ ಬಿಹಾರದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಂಡ ನಂತರ, ಕೇಂದ್ರ ಚುನಾವಣಾ ಆಯೋಗವು ಇಡೀ ದೇಶದಲ್ಲಿಯೇ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಅಂತೆಯೇ, ಕರ್ನಾಟಕ ರಾಜ್ಯದಲ್ಲಿಯೂ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಕಲ ಸಿದ್ಧತೆ ಕೈಗೊಂಡಿದೆ. ಈ ನಡುವೆ, ತನ್ನದೇ ಆದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ರಾಜ್ಯ ಚುನಾವಣಾ ಆಯೋಗವು ತೀರ್ಮಾನ ಕೈಗೊಂಡಿದ್ದು, ಈ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿದೆ.

ನವೆಂಬರ್‌ ತಿಂಗಳಿನಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ ರಾಜ್ಯ ಚುನಾವಣಾ ಆಯೋಗವು ಸಿದ್ಧತೆ ಕೈಗೊಂಡಿದ್ದು, ಶೀಘ್ರದಲ್ಲಿಯೇ ಈ ಸಂಬಂಧ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಮತದಾರರ ಪಟ್ಟಿಯ ಕುರಿತು ಮಾಹಿತಿ ಪಡೆದುಕೊಳ್ಳುವ ಕಾರ್ಯವನ್ನು ಈ ತಿಂಗಳಲ್ಲಿ ನಡೆಸಲಿದೆ. ನಂತರ, ಮುಂದಿನ ತಿಂಗಳಿನಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಆರಂಭಿಸಲಿದೆ. ಮತಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಏಕಕಾಲಕ್ಕೆ ಮುಗಿಸುವುದು ಕಷ್ಟಕರವಾಗಿರುವುದರಿಂದ, ಹಂತ-ಹಂತವಾಗಿ ನಡೆಸಲು ರಾಜ್ಯ ಚುನಾವಣಾ ಆಯೋಗವು ಮುಂದಾಗಿದೆ. ಮತಪಟ್ಟಿಯ ಕುರಿತು ಮಾಹಿತಿ ಪಡೆಯುವ ಕಾರ್ಯ ಮುಗಿದ ನಂತರ, ಪರಿಷ್ಕರಣೆಯ ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲು ಮುಂದಾಗಿದೆ. ವೇಳಾಪಟ್ಟಿಯಂತೆ ಪರಿಷ್ಕರಣೆ ಕಾರ್ಯ ಜರುಗಲಿದೆ ಎಂದು ಮೂಲಗಳು ಹೇಳಿವೆ.

ಮತಪಟ್ಟಿ ಸಿದ್ಧತೆಗೆ ಅನುಮತಿ

ರಾಜ್ಯ ಸರ್ಕಾರದ ಅನುಮತಿಯೊಂದಿಗೆ, ರಾಜ್ಯ ಚುನಾವಣಾ ಆಯೋಗಕ್ಕೆ ಈಗ ಮತಪಟ್ಟಿ ಸಿದ್ಧಪಡಿಸಲು ಅವಕಾಶ ದೊರೆತಿದೆ. ಈ ಮೂಲಕ, ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಬಾಕಿಯಾಗಿದ್ದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳ ತಯಾರಿ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಚುನಾವಣಾ ಆಯೋಗವು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮತದಾರರ ಪಟ್ಟಿ ನವೀಕರಣ, ದತ್ತಾಂಶ ಸಂಗ್ರಹಣೆ ಮತ್ತು ಪ್ರಾದೇಶಿಕ ಸಿಬ್ಬಂದಿ ನಿಯೋಜನೆ ಕುರಿತ ಕಾರ್ಯ ಯೋಜನೆಯನ್ನು ರೂಪಿಸಿದೆ.

ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ಮತಪಟ್ಟಿ ಸಿದ್ಧಪಡಿಸುವ ಕಾರ್ಯ ಪೂರ್ಣಗೊಂಡ ಬಳಿಕ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲು ಸಾಧ್ಯವಾಗಲಿದೆ. ಈ ಕ್ರಮವು ಪ್ರಜಾಪ್ರಭುತ್ವದ ಮೂಲ ಹಂತವಾದ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳತ್ತ ಹೊಸ ಚೈತನ್ಯವನ್ನು ತರಲಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಮತಪಟ್ಟಿ ಅಗತ್ಯವಿದೆ. ಸರ್ಕಾರವು ರಾಜ್ಯ ಚುನಾವಣಾ ಆಯೋಗಕ್ಕೆ ಅನುಮತಿ ನೀಡುವ ಮುನ್ನ, ಆಯೋಗವು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮತಪಟ್ಟಿಯ ಮೇಲೆ ಅವಲಂಬಿತವಾಗಿತ್ತು. ಇದೀಗ ಸರ್ಕಾರವೇ ಮತಪಟ್ಟಿ ಸಿದ್ಧಪಡಿಸಲು ತಿಳಿಸಿರುವುದರಿಂದ, ಆಯೋಗವು ತನ್ನದೇ ಆದ ಮತಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ಮುಂದಾಗಿದೆ. ಡಿಸೆಂಬರ್‌ ತಿಂಗಳಿಗೆ ಗ್ರಾಮ ಪಂಚಾಯಿತಿಗಳ ಅವಧಿಯು ಸಹ ಮುಕ್ತಾಯಗೊಳ್ಳಲಿದ್ದು, ಅವುಗಳಿಗೂ ಚುನಾವಣೆ ನಡೆಸಬೇಕಾಗಿದೆ. ಹೀಗಾಗಿ, ರಾಜ್ಯ ಚುನಾವಣಾ ಆಯೋಗಕ್ಕೆ ಸಾಲು-ಸಾಲು ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಇದೆ.

ಕೇಂದ್ರ ಚುನಾವಣಾ ಆಯೋಗದಿಂದ ಬಾರದ ಪ್ರತಿಕ್ರಿಯೆ

ಬಿಹಾರದ ಬಳಿಕ, ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಸಮಗ್ರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ತೀರ್ಮಾನಿಸಿದೆ. ಈ ಸಂಬಂಧ, ಕರ್ನಾಟಕದಲ್ಲೂ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ಕೇಂದ್ರ ಚುನಾವಣಾ ಆಯೋಗ ತಯಾರಿ ನಡೆಸಿದೆ. ಈ ಸಂದರ್ಭದಲ್ಲಿಯೇ, ರಾಜ್ಯ ಚುನಾವಣಾ ಆಯೋಗವು ತನ್ನ ಆಕ್ಷೇಪಣೆಯನ್ನು ದಾಖಲಿಸಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಜಿ.ಎಸ್. ಸಂಗ್ರೇಶಿ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ, ಕೇಂದ್ರ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

"ತനിക്ക് ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಇದೆ. ತಾನೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕಾಗಿದೆ. ಸಮಗ್ರ ಪರಿಷ್ಕರಣೆ ಆರಂಭಿಸಿದರೆ, ತನ್ನ ಕಾರ್ಯಕ್ಕೆ ಅಡ್ಡಿಯಾಗಲಿದೆ ಮತ್ತು ಸಿಬ್ಬಂದಿ ಕೊರತೆಯಾಗಲಿದೆ. ಹೀಗಾಗಿ, ವಿಶೇಷ ಸಮಗ್ರ ಪರಿಷ್ಕರಣೆಯನ್ನು ಮುಂದೂಡಿ" ಎಂದು ರಾಜ್ಯ ಚುನಾವಣಾ ಆಯೋಗವು ತನ್ನ ಪತ್ರದಲ್ಲಿ ಬೇಡಿಕೆ ಇಟ್ಟಿತ್ತು. ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳಿಂದ ಈ ಹಂತದಲ್ಲಿ ಪರಿಷ್ಕರಣೆ ಕಾರ್ಯಾಚರಣೆ ನಡೆಸುವುದು ಅಸಾಧ್ಯವಾಗಿದೆ. ಪ್ರಸ್ತುತ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶಾಲಾ ಪರೀಕ್ಷೆಗಳು, ಸ್ಥಳೀಯ ಚುನಾವಣೆಗಳ ಸಿದ್ಧತೆಗಳು ಮತ್ತು ಸರ್ಕಾರಿ ಇಲಾಖೆಗಳ ದಿನನಿತ್ಯದ ಕಾರ್ಯಭಾರಗಳು ನಡೆಯುತ್ತಿರುವುದರಿಂದ, ಸಿಬ್ಬಂದಿಯ ಲಭ್ಯತೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಅಗತ್ಯವಾದ ಜನಬಲ ಮತ್ತು ಸಂಪನ್ಮೂಲಗಳನ್ನು ಸರಿಯಾಗಿ ಹಂಚುವುದು ಕಷ್ಟಕರವಾಗಿದೆ. "ಶುದ್ಧ ಮತಪಟ್ಟಿಯು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ" ಎಂಬ ನಿಲುವನ್ನು ರಾಜ್ಯ ಚುನಾವಣಾ ಆಯೋಗವು ಕೇಂದ್ರ ಆಯೋಗಕ್ಕೆ ತಿಳಿಸಿದೆ. ಆದರೆ, ಇದಕ್ಕೆ ಕೇಂದ್ರ ಆಯೋಗದಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲ.

ಇದು ರಾಜ್ಯ ಆಯೋಗದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಯಾವುದೇ ಉತ್ತರ ಬಾರದಿದ್ದರೂ, ರಾಜ್ಯ ಚುನಾವಣಾ ಆಯೋಗವು ತನ್ನ ಕಾರ್ಯವನ್ನು ಮುಂದುವರಿಸಲು ತೀರ್ಮಾನಿಸಿದೆ. ಮುಂದಿನ ತಿಂಗಳಿನಿಂದ ಮತಪಟ್ಟಿ ಪರಿಷ್ಕರಣೆಗೆ ಮುಂದಾಗಿದ್ದು, ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ. ಪರಿಷ್ಕರಣೆಗೆ ಅಗತ್ಯವಿರುವ ಸಿಬ್ಬಂದಿಯ ನಿಯೋಜನೆ, ತರಬೇತಿ ಸೇರಿದಂತೆ ಇತರೆ ಕಾರ್ಯಗಳನ್ನು ಈ ತಿಂಗಳಿನಲ್ಲೇ ಪ್ರಾರಂಭಿಸಲಾಗುವುದು ಎಂದು ಆಯೋಗದ ಮೂಲಗಳು ಹೇಳಿವೆ.

ನವೆಂಬರ್‌ ವೇಳೆಗೆ ಮೀಸಲಾತಿ ಪ್ರಕಟಿಸಲು ಸುಪ್ರೀಂ ಆದೇಶ

ಚುನಾವಣೆ ನಡೆಯದ ಮಹಾನಗರ ಪಾಲಿಕೆಗಳ ಸೀಮಾ ನಿರ್ಣಯ ಪ್ರಕ್ರಿಯೆಯನ್ನು 2025ರ ನವೆಂಬರ್ 1ರೊಳಗೆ ಪೂರ್ಣಗೊಳಿಸಲು ಮತ್ತು ಮೀಸಲಾತಿ ಪಟ್ಟಿಯನ್ನು ನವೆಂಬರ್ 30ರೊಳಗೆ ಸಲ್ಲಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮತಪಟ್ಟಿಯನ್ನು ಸಿದ್ಧಪಡಿಸಬೇಕಿದೆ. ಅಲ್ಲದೇ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೂ ಸಿದ್ಧತೆ ಕೈಗೊಳ್ಳಬೇಕಿದೆ. ಈ ಎಲ್ಲಾ ಕಾರಣಗಳಿಂದಾಗಿ, ರಾಜ್ಯ ಚುನಾವಣಾ ಆಯೋಗವು ನವೆಂಬರ್‌ ತಿಂಗಳಲ್ಲಿ ಮತದಾರರ ಪಟ್ಟಿ ತಯಾರಿಕೆ ಕೆಲಸವನ್ನು ಆರಂಭಿಸಬೇಕಿದೆ. ಹೀಗಾಗಿ, ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಈಗ ಆರಂಭಿಸದೆ, ಕೆಲಕಾಲ ಮುಂದೂಡಿ ಎಂದು ರಾಜ್ಯ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗವನ್ನು ಸ್ಪಷ್ಟವಾಗಿ ಆಗ್ರಹಿಸಿದೆ.

ರಾಜ್ಯ ಚುನಾವಣಾ ಆಯೋಗವು ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಿ, ಅದರ ಮಾಹಿತಿಯನ್ನು ಸುಪ್ರೀಂಕೋರ್ಟ್‌ಗೆ ನೀಡಿ, ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಲಿದೆ. ತಕ್ಷಣಕ್ಕೆ ಇಡೀ ರಾಜ್ಯದ ಮತದಾರರ ಪಟ್ಟಿಯನ್ನು ಸಿದ್ಧಪಡಿಸದಿದ್ದರೂ, ಮೊದಲ ಹಂತದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಸೀಮಿತಗೊಳಿಸಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ನಂತರ, ಉಳಿದ ಕಡೆಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಆಯೋಗದ ಮೂಲಗಳು ಹೇಳಿವೆ.

ಕೇಂದ್ರ ಚುನಾವಣಾ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕುರಿತು ಪ್ರತಿಕ್ರಿಯೆ ನೀಡಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ, "ನಮ್ಮ ಪತ್ರಕ್ಕೆ ಕೇಂದ್ರ ಚುನಾವಣಾ ಆಯೋಗ ಯಾವುದೇ ಉತ್ತರ ಕೊಟ್ಟಿಲ್ಲ. ಈ ಕಾರಣಕ್ಕೆ, ಶೀಘ್ರವೇ ವೇಳಾಪಟ್ಟಿ ಪ್ರಕಟಿಸಿ, ನವೆಂಬರ್‌ನಿಂದ ಮತದಾರರ ಪಟ್ಟಿ ಸಿದ್ಧಪಡಿಸುವ ಕೆಲಸ ಆರಂಭಿಸುತ್ತೇವೆ. ಸುಪ್ರೀಂಕೋರ್ಟ್ ಆದೇಶ ಪಾಲಿಸುವುದು ನಮ್ಮ ಕೆಲಸವಾಗಿದೆ. ತುಂಬಾ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚುನಾವಣೆಗಳು ಈಗ ನಡೆಯುವ ಆಶಾಭಾವನೆ ಮೂಡಿದೆ. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಆರಂಭಿಸುವುದರಿಂದ ಮತ್ತೆ ಸಮಸ್ಯೆ ಎದುರಾಗಲಿದೆ ಎಂಬ ಭಾವನೆಯಿಂದ ಪತ್ರ ಬರೆಯಲಾಗಿದೆ. ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ, ನಮ್ಮ ಕೆಲಸವನ್ನು ನಾವು ಮುಂದುವರಿಸುತ್ತೇವೆ," ಎಂದಿದ್ದಾರೆ.

ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕಿರುವ ವ್ಯತ್ಯಾಸ

ಕೇಂದ್ರ ಚುನಾವಣಾ ಆಯೋಗದ ಅಧೀನದಲ್ಲಿ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿ ಕಾರ್ಯನಿರ್ವಹಿಸುತ್ತದೆ. ಮುಖ್ಯ ಚುನಾವಣಾಧಿಕಾರಿ ಕಚೇರಿಯು ವಿಧಾನಸಭೆ, ವಿಧಾನಪರಿಷತ್‌, ಮತ್ತು ಲೋಕಸಭೆ ಚುನಾವಣೆಗಳನ್ನು ನಡೆಸುತ್ತದೆ. ಮತಪಟ್ಟಿಯನ್ನು ಸಹ ಈ ಸಂಸ್ಥೆಯೇ ಸಿದ್ಧಪಡಿಸುತ್ತದೆ. ರಾಜ್ಯ ಚುನಾವಣಾ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವಿದ್ದು, ರಾಜ್ಯಕ್ಕೆ ಸೀಮಿತವಾಗಿ ಸ್ಥಳೀಯ ಸಂಸ್ಥೆಗಳ (ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ) ಚುನಾವಣೆಗಳನ್ನು ನಡೆಸುತ್ತದೆ.

ರಾಜ್ಯ ಸರ್ಕಾರವು ಇದೀಗ ರಾಜ್ಯ ಚುನಾವಣಾ ಆಯೋಗಕ್ಕೆ ಮತಪಟ್ಟಿ ಸಿದ್ಧಪಡಿಸುವ ಅವಕಾಶ ನೀಡಿರುವುದರಿಂದ, ಆಯೋಗವು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮತಪಟ್ಟಿಯ ಮೇಲೆ ಅವಲಂಬಿತವಾಗಿರಬೇಕಿಲ್ಲ. ತನ್ನದೇ ಆದ ಮತಪಟ್ಟಿಯನ್ನು ತಯಾರಿಸಬಹುದು. ಆದರೆ, ಕೇಂದ್ರ ಚುನಾವಣಾ ಆಯೋಗಕ್ಕೆ ಕಾರ್ಯನಿರ್ವಹಿಸುವ ಸಿಬ್ಬಂದಿಯೇ ರಾಜ್ಯ ಚುನಾವಣಾ ಆಯೋಗಕ್ಕೂ ಕೆಲಸ ಮಾಡಬೇಕಿರುವುದರಿಂದ, ಸಿಬ್ಬಂದಿಯ ಕೊರತೆ ಉಂಟಾಗುವ ಕಾರಣ, ಸದ್ಯಕ್ಕೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಮುಂದೂಡುವಂತೆ ರಾಜ್ಯ ಆಯೋಗವು ಪತ್ರ ಬರೆದಿದೆ.

Read More
Next Story