
ಡಾ. ಜಿ ಪರಮೇಶ್ವರ್
ಎಲ್ಲಾ ರೀತಿಯ ಸಹಕಾರ ಇಡಿಯವರಿಗೆ ಕೊಡುತ್ತೇನೆ: ಸಚಿವ ಪರಮೇಶ್ವರ್ ಮೊದಲ ಪ್ರತಿಕ್ರಿಯೆ
ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ, ಅವರಿಗೆ ಸಹಕಾರ ಕೊಟ್ಟಿದ್ದೇವೆ. ನಾನು ಕಾನೂನಿಗೆ ಬೆಲೆ ಕೊಟ್ಟು ಬಂದವನು ನಾನು. ಕಾನೂನು ಎಲ್ಲರಿಗೂ ಒಂದೇ, ಕಾನೂನಿಗೆ ಗೌರವ ಕೊಡುತ್ತೇನೆ ಎಂದು ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತಮ್ಮ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿರುವ ಬಗ್ಗೆ ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಯಾವ ವಿಚಾರಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಾ. ಪರಮೇಶ್ವರ್, "ಇಡಿ ಅಧಿಕಾರಿಗಳು ನಮ್ಮ ಸಂಸ್ಥೆಯ ಅಕೌಂಟ್ಸ್ ಕೇಳಿದ್ದಾರೆ. ಯಾವ ವರ್ಷದ ಲೆಕ್ಕ ಕೇಳುತ್ತಾರೆಯೋ ಅದನ್ನೆಲ್ಲ ಕೊಡಲು ಸೂಚಿಸಿದ್ದೇನೆ. ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ, ಅವರಿಗೆ ಸಹಕಾರ ಕೊಟ್ಟಿದ್ದೇವೆ. ನಾನು ಕಾನೂನಿಗೆ ಬೆಲೆ ಕೊಟ್ಟು ಬಂದವನು. ಕಾನೂನು ಎಲ್ಲರಿಗೂ ಒಂದೇ, ಕಾನೂನಿಗೆ ಗೌರವ ಕೊಡುತ್ತೇನೆ. ಇಡಿ ಅಧಿಕಾರಿಗಳು ಏನು ಬೇಕಾದರೂ ಪರಿಶೀಲನೆ ಮಾಡಲಿ. ನಾವು ಕೂಡ ಸಹಕಾರ ನೀಡುತ್ತೇವೆ," ಎಂದು ಹೇಳಿದ್ದಾರೆ.
ಜಾತಿ ಆರೋಪಕ್ಕೆ ಪರಮೇಶ್ವರ್ ಪ್ರತಿಕ್ರಿಯೆ
ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು "ದಲಿತ ಎಂಬ ಕಾರಣಕ್ಕೆ ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ" ಎಂಬ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, "ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಇಂತಹ ವಿಚಾರಗಳಲ್ಲಿ ಯಾರೂ ಜಾತಿ ನೋಡಿ ಬರುವುದಿಲ್ಲ. ಆ ಬಗ್ಗೆ ಈಗ ನಾನು ಏನೂ ಹೇಳುವುದಿಲ್ಲ," ಎಂದರು.
ಸಿದ್ಧಾರ್ಥ ಸಂಸ್ಥೆಯ ಹಿರಿಮೆ ಮತ್ತು ಪ್ರಸ್ತುತ ವಿಚಾರಣೆ
ತಮ್ಮ ಶಿಕ್ಷಣ ಸಂಸ್ಥೆಯ ಬಗ್ಗೆ ಮಾತನಾಡಿದ ಪರಮೇಶ್ವರ್, "ನಮ್ಮ ಶಿಕ್ಷಣ ಸಂಸ್ಥೆಯು ಸ್ಥಾಪನೆಯಾಗಿ 68 ವರ್ಷಗಳೇ ಆಗಿವೆ. ನಮ್ಮ ತಂದೆ ಕಾಲದಿಂದಲೂ ಸಂಸ್ಥೆ ನಡೆಯುತ್ತಿದೆ. ಸಿದ್ಧಾರ್ಥ ಸಂಸ್ಥೆಯಲ್ಲಿ ಕಲಿತು 40,000 ಮಂದಿ ಎಂಜಿನಿಯರ್ ಆಗಿದ್ದಾರೆ. ನಮ್ಮ ಸಂಸ್ಥೆಯ ಮೂಲಕ 10,000 ಮಂದಿ ವೈದ್ಯರಾಗಿದ್ದಾರೆ," ಎಂದು ಹೆಮ್ಮೆಯಿಂದ ತಿಳಿಸಿದರು.
ಇಡಿ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ವಿಚಾರವನ್ನು ಹೇಳಿಲ್ಲ ಎಂದು ಅವರು ಪುನರುಚ್ಚರಿಸಿದರು. "ಶಫಿ ಅಹ್ಮದ್ ಅವರ ಶಿಕ್ಷಣ ಸಂಸ್ಥೆಯನ್ನೂ ಖರೀದಿ ಮಾಡಿದ್ದೇವೆ. ಸದ್ಯ ಇಡಿ ವಿಚಾರಣೆ ನಡೆಯುತ್ತಿದೆ, ಈಗ ಹೆಚ್ಚಿನದ್ದೇನನ್ನೂ ವಿವರಿಸಲು ಆಗುವುದಿಲ್ಲ," ಎಂದು ಪರಮೇಶ್ವರ್ ಹೇಳಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಅಧೀನದಲ್ಲಿರುವ ವಿವಿಧ ಕಾಲೇಜುಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ಆರಂಭಿಸಿದ್ದು, ಅದು ಗುರುವಾರವೂ ಮುಂದುವರಿದಿದೆ.