ರಾಹುಲ್‌ ಗಾಂಧಿ ಆಶಯಗಳಿಗೆ ವ್ಯತಿರಿಕ್ತ ವರ್ತನೆ:  ಡಿಕೆಶಿ ರಾಜಕೀಯ ಹಿನ್ನಡೆಗೆ ಕಾರಣವಾಗಲಿದೆಯೆ?
x

ಸಾಂದರ್ಭಿಕ ಚಿತ್ರ

ರಾಹುಲ್‌ ಗಾಂಧಿ ಆಶಯಗಳಿಗೆ ವ್ಯತಿರಿಕ್ತ ವರ್ತನೆ: ಡಿಕೆಶಿ ರಾಜಕೀಯ ಹಿನ್ನಡೆಗೆ ಕಾರಣವಾಗಲಿದೆಯೆ?

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಿಎಂ ಹುದ್ದೆಗೇರುವ ಸಾಧ್ಯತೆಗಳಿದ್ದರೂ ಸ್ವಯಂಕೃತ ಹೇಳಿಕೆಗಳಿಂದಲೇ ಪಕ್ಷದಲ್ಲಿಯೇ ನಿಷ್ಠುರ ಕಟ್ಟಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತಂದುಕೊಳ್ಳುವಂತಾಗಿದೆ.


ರಾಜ್ಯದಲ್ಲಿಅತಿ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್‌ ಪಕ್ಷವನ್ನು ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬದಲಿಗೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ದಕ್ಕಿತ್ತು. ಆದರೂ ಆಧಿಕಾರ ಹಂಚಿಕೆಯ ದಾಳ ಉರುಳಿಸಿದ ಡಿ.ಕೆ.ಶಿವಕುಮಾರ್‌ ಸಿಎಂ ಹುದ್ದೆಗೇರುವ ಅವಕಾಶಗಳಿದ್ದರೂ ತಮ್ಮ ಸ್ವಯಂಕೃತ ತಪ್ಪುಗಳು ಪಕ್ಷದಲ್ಲಿಯೇ ನಿಷ್ಠುರ ಕಂಡುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತಂದುಕೊಳ್ಳುವಂತಾಗಿದೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಗೀತೆಯ ಒಂದು ಚರಣವನ್ನು ಹಾಡಿ ವಿವಾದಕ್ಕೆ ಕಾರಣರಾಗಿದ್ದರು. ಕಾಂಗ್ರೆಸ್‌ನಲ್ಲಿಯೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಪಕ್ಷದ ಮುಖಂಡರ ವಿರೋಧಕ್ಕೆ ಮಣಿದ ಡಿ.ಕೆ.ಶಿವಕುಮಾರ್‌ ಕ್ಷಮೆಯಾಚಿಸಿ, ಈ ವಿಚಾರವನ್ನು ಅಲ್ಲಿಗೆ ಬಿಡುವಂತೆ ಮನವಿ ಮಾಡಿದರು. ಪಕ್ಷಕ್ಕೆ ಒಂದು ರೀತಿಯಲ್ಲಿ ಮುಜುಗರವನ್ನುಂಟು ಮಾಡುತ್ತಿರುವಂತಹ ಘಟನೆಗಳು ಡಿ.ಕೆ.ಶಿವಕುಮಾರ್‌ ಅವರಿಂದ ಇದೇ ಮೊದಲು ನಡೆದಿಲ್ಲ. ಈ ಹಿಂದೆಯೂ ಅವರ ನಡೆಯು ಪಕ್ಷಕ್ಕೆ ಇರುಸುಮುರುಸುವನ್ನುಂಟು ಮಾಡಿದ್ದವು ಎಂಬ ಮಾತುಗಳು ಪಕ್ಷದಲ್ಲಿಯೇ ಕೇಳಿಬಂದಿವೆ.

ಡಿ.ಕೆ.ಶಿವಕುಮಾರ್ ಎಂಬ ಹೆಸರು ಕೇಳಿದರೆ ಕರ್ನಾಟಕ ಮಾತ್ರವಲ್ಲ, ಇಡೀ ಭಾರತದ ಸಾಕಷ್ಟು ರಾಜಕೀಯದ ಆಗು ಹೋಗುಗಳ ಬಗ್ಗೆ ಅರಿವು ಹಾಗೂ ಆಸಕ್ತಿಯನ್ನು ಹೊಂದಿದ ಪತ್ರಕರ್ತರ, ಶಿವಕುಮಾರ್ ವಿರೋಧಿಗಳ, ಶಿವಕುಮಾರ್ ಅಭಿಮಾನಿಗಳ ಕಿವಿ ನಿಮಿರುತ್ತದೆ. ಯಾವ ಸಮಸ್ಯೆಯೇ ಇರಲಿ ಸೆಡ್ಡು ಹೊಡೆದು ನಿಲ್ಲುವುದು ಅವರ ಜಾಯಮಾನ ಎನ್ನುವುದು, ಸಾಮಾನ್ಯವಾಗಿ ಅವರ ಬಗೆಗೆ ಜನರು ಹೊಂದಿದ ಅಭಿಪ್ರಾಯ. ಜತೆಗೆ ಕನಕಪುರದ ಬಂಡೆ ಎಂಬ ವಿಶೇಷಣವೂ ಕೂಡಾ ಅವರ ಪಾಲಿಗೆ ಸಿಕ್ಕಿದೆ. ಎಲ್ಲಾ ಸಂದರ್ಭಗಳಲ್ಲಿಯೂ ಹೈಕಮಾಂಡ್ ಹೊರಿಸಿದ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸುವ ವಿಚಾರದಲ್ಲಿ ಶಿವಕುಮಾರ್ ಬಸವಳಿಯಲಾರರು ಎಂಬುದು ಪಕ್ಷದ ನಂಬಿಕೆ. ಹೀಗಾಗಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಗಳಾಗಬೇಕು ಎಂಬುದು ಅವರ ಹಿತೈಶಿಗಳ ಆಶಯ. ಆದರೆ, ಇತ್ತೀಚೆಗಿನ ಅವರ ನಡೆ, ನುಡಿಯಿಂದಾಗಿ ಪಕ್ಷದಲ್ಲಿಯೇ ಅವರ ವಿರುದ್ಧದ ಮಾತುಗಳು ಕೇಳಿಬರಲಾರಂಭಿಸಿವೆ. ಈ ಕಾರಣದಿಂದಾಗಿ ಮುಖ್ಯಮಂತ್ರಿ ಗಾದಿಯ ಆಸೆಗೆ ಪಕ್ಷದಲ್ಲಿಯೇ ತಣ್ಣೀರೆರಚುವಂತಹ ಹೇಳಿಕೆಗಳು ಕೇಳಿಬರುತ್ತಿವೆ.

ಪಕ್ಷದಲ್ಲಿಯೇ ವ್ಯಕ್ತವಾದ ವಿರೋಧ

ಆರ್‌ಎಸ್‌ಎಸ್‌ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಯನ್ನು ಪ್ರತ್ಯಕ್ಷ, ಪರೋಕ್ಷವಾಗಿ ಟೀಕೆಗಳು ವ್ಯಕ್ತವಾಗಿವೆ. ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರು ನೇರವಾಗಿಯೇ ಖಂಡಿಸಿದರೆ, ಸಚಿವ ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ ರಾಜಣ್ಣ ಅವರು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್‌ ಸಂಘದ ಗೀತೆ ಹಾಡಿದ್ದು ತಪ್ಪು ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಇದೇ ವಿಷಯವಾಗಿ ಮಾತನಾಡಿದ ಮಾಜಿ ಸಚಿವ ಕೆಎನ್ ರಾಜಣ್ಣ, ಅವರು ಆರ್‌ಎಸ್‌ಎಸ್‌ ಗೀತೆ ಹಾಡಬಹುದು, ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಅಮಿತ್‌ ಶಾ ಜತೆಗೆ ವೇದಿಕೆ ಹಂಚಿಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು. ನಾವು ಏನೂ ಮಾತಾಡುವಂತಿಲ್ಲ ಎಂದು ಕಿಡಿಕಾರಿದರು.

ಪ್ರಯಾಗ್‌ರಾಜ್‌ನ ಗಂಗೆಯಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ಬಡತನ ನಿವಾರಣೆಯಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇದರ ನಂತರವೂ ಡಿ.ಕೆ.ಶಿವಕುಮಾರ್‌ ಹೋಗಿ ಪುಣ್ಯ ಸ್ನಾನ ಮಾಡಿದರು. ಆರೆಸ್ಸೆಸ್‌ ಕಾಂಗ್ರೆಸ್ ಸಿದ್ದಾಂತಕ್ಕೆ ತದ್ವಿರುದ್ದ ಎಂದು ಗೊತ್ತಿದ್ದರೂ ಸದನದಲ್ಲಿ ಆರೆಸ್ಸೆಸ್‌ ಗೀತೆ ಹಾಡುತ್ತಾರೆ. ಈ ಎಲ್ಲಾ ವೈರುಧ್ಯಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದೇನೆ ಎಂದು ಅಸಮಾಧಾನ ಹೊರಹಾಕಿದರು.

ಸಚಿವ ಪ್ರಿಯಾಂಕ್‌ ಖರ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ ಭಾರತದ ಪ್ರತಿ ಪ್ರಜೆಯೂ ಆರ್‌ಎಸ್‌ಎಸ್‌ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂಬ ಪ್ರತಿಜ್ಞೆ ಕೈಗೊಳ್ಳಬೇಕು. ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ನರ ನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ ಆರ್‌ಎಸ್‌ಎಸ್‌ ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ ಎಂದು ಪರೋಕ್ಷವಾಗಿಯೇ ತಿಳಿಸಿದರು.

ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್‌, ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದಲ್ಲಿ ನಡೆಯುವ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭಾಗವಹಿಸುವುದು ಸರಿಯಲ್ಲ. ನಾಯಕ ರಾಹುಲ್ ಗಾಂಧೀಜಿ ಅವರನ್ನು ಅಪಹಾಸ್ಯ ಮಾಡುವ, ಯಾವಾಗಲೂ ಆರ್‌ಎಸ್‌ಎಸ್‌ನ ನಿರೂಪಣೆಗಳೊಂದಿಗೆ ಹೊಂದಿಕೆಯಾಗುವ ವ್ಯಕ್ತಿಗೆ ಜಾತ್ಯತೀತ ಪಕ್ಷದ ಅಧ್ಯಕ್ಷನಾಗಿ ಮತ್ತು ಜಾತ್ಯತೀತ ಸರ್ಕಾರದ ಡಿಸಿಎಂ ಆಗಿ ಸಾರ್ವಜನಿಕವಾಗಿ ಧನ್ಯವಾದ ಹೇಳುವುದು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ನಮ್ಮ ಪಕ್ಷದ ಅಧ್ಯಕ್ಷರು ವೇದಿಕೆಯನ್ನು ಹಂಚಿಕೊಂಡು ಅಮಿತ್ ಶಾ ಅವರೊಂದಿಗೆ ಇಡೀ ರಾತ್ರಿ ಕಳೆಯುತ್ತಿದ್ದಾರೆ ಎನ್ನುವುನ್ನು ಗ್ರಹಿಸಲು ಕಷ್ಟವಾಗುತ್ತಿದೆ. ಪಕ್ಷದ ಪ್ರಗತಿ ಮತ್ತು ಬೆಳವಣಿಗೆಗೆ ರಾಜಿಯಾಗಬಾರದು. ದೃಢನಿಶ್ಚಯಕ್ಕೆ ಬದ್ಧತೆ ಬಹಳ ಮುಖ್ಯ, ಇದನ್ನು ನಿರ್ಲಕ್ಷಿಸಿದರೆ ಪಕ್ಷದ ಸೈದ್ಧಾಂತಿಕ ನೆಲೆ ದುರ್ಬಲಗೊಳ್ಳಬಹುದು ಎಂದಿದ್ದರು.

ಸಂವಿಧಾನ ಬದಲಾವಣೆ ಹೇಳಿಕೆ

ದೆಹಲಿಯಲ್ಲಿ ನಡೆದ ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಸರ್ಕಾರಿ ಗುತ್ತಿಗೆಗಳಲ್ಲಿ ಮುಸಲ್ಮಾನರಿಗೆ ಶೇ. 4ರಷ್ಟು ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ "ಅಲ್ಪಸಂಖ್ಯಾತರಿಗೆ ಕೋಟಾ ನೀಡಲು ಸಂವಿಧಾನದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುವುದು," ಎಂಬರ್ಥಬರುವಂತೆ ಹೇಳಿಕೆ ನೀಡಿದ್ದರು. ಇದು ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಯಾಗುವಂತೆ ಮಾಡಿತ್ತು. ಜತೆಗೆ ದೆಹಲಿಯ ಕಾಂಗ್ರೆಸ್‌ ನಾಯಕರಿಗೆ ಮುಜುಗರ ವಾತಾವರಣ ಸೃಷ್ಟಿಸಿತ್ತು.

ಅಮಿತ್‌ ಶಾ ಅವರ ಜೊತೆ ವೇದಿಕೆ ಹಂಚಿಕೆ

ತಮಿಳುನಾಡಿನ ಕೊಯಮತ್ತೂರಿನ ಇಶಾ ಫೌಂಡೇಷನ್‌ ನಡೆಸಿದ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಜತೆ ವೇದಿಕೆ ಹಂಚಿಕೊಂಡ ಡಿ.ಕೆ. ಶಿವಕುಮಾರ್‌ ಬಗ್ಗೆ ಸ್ವಪಕ್ಷೀಯರೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷ ಮುಖಂಡ ರಾಹುಲ್‌ ಗಾಂಧಿ ಅವರನ್ನೇ ವ್ಯಂಗ್ಯ ಮಾಡಿದ್ದ ಬಿಜೆಪಿ ಮುಖಂಡ ಶಾ ಜತೆ ವೇದಿಕೆ ಹಂಚಿಕೊಂಡ ಬಗ್ಗೆ ಎಐಸಿಸಿ ಮುಖಂಡರೊಬ್ಬರು ಬಹಿರಂಗ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಇದು ಡಿಕೆಶಿ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂಬ ಸಂದೇಶವೂ ಆ ಮೂಲಕ ರವಾನೆಯಾಗಿದ್ದು, ಅವರ ಪಾಲಿಗೆ ಪಕ್ಷದೊಳಗಿನ ಹಿಡಿತ ಕಡಿಮೆಯಾಗುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಜ್ವಲ್‌ ರೇವಣ್ಣ ಮೇಲೆ ಆರೋಪ

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಆರೋಪದಡಿ ಜೈಲುಪಾಲಾಗಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಬಹಿರಂಗಗೊಂಡವು. ಇದು ರಾಜಕೀಯವಾಗಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಕುಟುಂಬಕ್ಕೆ ಕಪ್ಪುಚುಕ್ಕೆಯಾಗಿ ಪರಿಣಾಮ ಬೀರಿದವು. ಅಲ್ಲದೇ, ಪ್ರಜ್ವಲ್‌ ರೇವಣ್ಣ ರಾಜಕೀಯ ಜೀವನ ಹೆಚ್ಚು ಕಡಿಮೆ ಮುಕ್ತಾಯಗೊಂಡಂತಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿದ್ದು ಡಿ.ಕೆ.ಶಿವಕುಮಾರ್‌ ಎಂಬುದಾಗಿ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಕೀಲ ದೇವರಾಜು ಮತ್ತು ಕಾಂಗ್ರೆಸ್‌ ಮುಖಂಡ ಎಲ್.ಆರ್‌. ಶಿವರಾಮೇಗೌಡ ಅವರೊಂದಿಗೆ ಶಿವಕುಮಾರ ಮಾತನಾಡಿದರೆನ್ನಲಾದ ಪ್ರಜ್ವಲ್‌ ಪ್ರಕರಣದ ಸಂಬಂಧ ಮಾಡಿದ ಮಾತುಕತೆಯ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದೂ, ಅವರ ವಿರುದ್ಧ ಆರೋಪಗಳಿಗೆ ಕಾರಣವಾಯಿತು.

ಸಂಘಟನಾ ಚತುರ: ಬದಲಾದ ವರಸೆ

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, 2023ರ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷವನ್ನು ಸಂಘಟಿತಗೊಳಿಸಿದರು. ಪಕ್ಷವನ್ನು, ನಾಯಕರನ್ನು ಒಗ್ಗೂಡಿಸುವುದರ ಜೊತೆಗೆ ರಾಜಕೀಯ ರಣತಂತ್ರ ರೂಪಿಸಿದರು. ಚುನಾವಣಾ ಪ್ರಚಾರ ಕಾರ್ಯದಲ್ಲಿಯೂ ತಂತ್ರ ಹೆಣೆದಿದ್ದರು. ಕಾಂಗ್ರೆಸ್‌ ಪಕ್ಷವು ಹೆಚ್ಚು ಸ್ಥಾನಗಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸು, ಶ್ರಮದ ಜತೆಗೆ ಡಿ.ಕೆ.ಶಿವಕುಮಾರ್‌ ಅವರ ತಂತ್ರಗಾರಿಕೆಯೂ ಸಹಾಯ ಮಾಡಿತ್ತು. ಡಿ.ಕೆ.ಶಿವಕುಮಾರ್‌ ಮಾಡಿದ ಪಕ್ಷದ ಸಂಘಟನೆಗೆ ಹೈಕಮಾಂಡ್‌ ಸಹ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಆದರೆ, ರಾಜ್ಯದಲ್ಲಿ ಸರ್ಕಾರ ರಚನೆಯಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್‌ ವರಸೆಯೇ ಬದಲಾಗುತ್ತಾ ಬಂತು. ಮುಖ್ಯಮಂತ್ರಿ ಆಕಾಂಕ್ಷೆಯಾಗಿದ್ದರೂ, ಅವರನ್ನು ಹೈಕಮಾಂಡ್‌ ಮನವೊಲಿಕೆ ಮಾಡಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಸಿತು. ಅಲ್ಲದೇ, ಸರ್ಕಾರದ ರಚನೆಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿಯನ್ನು ಹರಿಬಿಟ್ಟು ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ಇರಾದೆಗೆ ಉಪಮುಖ್ಯಮಂತ್ರಿಯಾಗಿ ಮುಂದುವರಿದರು. ಕಾಂಗ್ರೆಸ್‌ನಲ್ಲಿ ಕೆಲವು ರಾಜಕೀಯ ಬೆಳವಣಿಗೆ ನಡೆದ ಬಳಿಕ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಲಿದ್ದಾರೆ ಎಂಬುದಾಗಿ ಅವರ ಬೆಂಬಲಿಗರು ಹೇಳಿಕೆ ನೀಡುತ್ತಿದ್ದಂತೆ ಡಿ.ಕೆ. ಶಿವಕುಮಾರ್‌ ಬಣದಲ್ಲಿ ಸಂಚಲನ ಮೂಡಿಸಿತು. ಬಳಿಕ ಅವರ ಅಸ್ತಿತ್ವ ಸಾಬೀತುಪಡಿಸಲು ಇನ್ನಿಲ್ಲದ ಕಸರತ್ತು ನಡೆಯಿತು. ಸರ್ಕಾರದ ವಿರುದ್ಧ ಕೆಲವೊಂದು ವಿವಾದಗಳು ಸೃಷ್ಟಿಯಾಗಲು ಸಹ ಇವರ ಪಾತ್ರ ಇದೆ ಎಂಬುದಾಗಿ ಪ್ರತಿಪಕ್ಷಗಳೇ ಆರೋಪ ಮಾಡಿದವು.

ಕುತೂಹಲ ಮೂಡಿಸಿದ್ದ ಗುರೂಜಿ ಹೇಳಿಕೆ

ವಿನಯ್ ಗುರೂಜಿ ಹೇಳಿಕೆ ಕೂಡ ಚರ್ಚೆಗೆ ಕಾರಣವಾಗಿತ್ತು. ಗುರೂಜಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್‌ ಅವರು, ಸ್ವಾಮೀಜಿಗಳು ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮನವಿ ಮಾಡಿದ್ದರು. ನನಗೆ ಗುರೂಜಿಯ ಮೇಲೆ ವಿಶೇಷ ನಂಬಿಕೆ, ಭಕ್ತಿ ಇದೆ. ಗೌರಿಗದ್ದೆ ಮಠವು ಬೆಂಗಳೂರಿನಲ್ಲಿ ಮಕ್ಕಳಿಗೆ ಜ್ಞಾನದ ದೀಪ ಬೆಳಗುವ ಪ್ರಯತ್ನ ಮಾಡುತ್ತಿದೆ. ರಾಜಕೀಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವುದು ಬೇಡ ಎಂದು ಹೇಳಿದ್ದರು.

ರಾಮನಗರ ಜಿಲ್ಲೆ ರಾಜಕೀಯ

ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿರುವುದು ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ನಲ್ಲಿ ಮಾತ್ರವಲ್ಲ, ಕಾಂಗ್ರೆಸ್‌ನಲ್ಲಿಯೇ ಅಸಮಾಧಾನ ವ್ಯಕ್ತವಾಗಿದೆ. ವೈಯಕ್ತಿಕ ರಾಜಕೀಯ ಜಿದ್ದಿಗಾಗಿ ಇದನ್ನು ಮಾಡಿರುವುದಕ್ಕೆ ಕಾಂಗ್ರೆಸ್ಸಿಗರೇ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಬಾರಿಯೂ ಡಿ.ಕೆ.ಶಿವಕುಮಾರ್‌ ವೈಯಕ್ತಿಕವಾಗಿ ಬಿಂಬಿಸಿಕೊಳ್ಳಲು ಸರ್ಕಾರದ ಅಸ್ತ್ರವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಬೆಂಗಳೂರು ಕಾಲ್ತುಳಿತ

ಈ ಎಲ್ಲದರ ನಡುವೆ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ಕ್ರೆಡಿಟ್‌ ತೆಗೆದುಕೊಳ್ಳಲು ಏಕಾಏಕಿ ತೀರ್ಮಾನ ಕೈಗೊಂಡು ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ 11 ಮಂದಿ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡರು. ಪೊಲೀಸ್‌ ಭದ್ರತೆ ವೈಫಲ್ಯತೆ ಎಂಬುದು ಮೇಲ್ನೋಟಕ್ಕೆ ಹೇಳುತ್ತಿದ್ದರೂ, ಇದಕ್ಕೆ ಮೂಲ ಕಾರಣ ಡಿ.ಕೆ.ಶಿವಕುಮಾರ್‌ ತೀರ್ಮಾನ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಕಾಂಗ್ರೆಸ್‌ ಪಕ್ಷದಲ್ಲಿಯೇ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಅವರ ಆಪ್ತರು ಸಭೆ ನಡೆಸಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಡಿ.ಕೆ.ಶಿವಕುಮಾರ್‌ ವಿರುದ್ದ ಟೀಕಾಪ್ರಹಾರ ನಡೆಸಿತು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಂತೂ ಘಟನೆಗೆ ಡಿ.ಕೆ.ಶಿವಕುಮಾರ್‌ ಅವರೇ ನೇರ ಹೊಣೆ ಎಂಬುದಾಗಿ ವಾಗ್ದಾಳಿ ನಡೆಸಿದರು. ಕಾಲ್ತುಳಿತ ದುರಂತವು ಡಿ.ಕೆ.ಶಿವಕುಮಾರ್‌ ಅವರಿಗೆ ಮುಖಭಂಗವನ್ನುಂಟು ಮಾಡಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಗೃಹ ಸಚಿವರ ಅಭಿಪ್ರಾಯವನ್ನೂ ಸಹ ಪಡೆದುಕೊಳ್ಳದೆ ಏಕಾಏಕಿ ತೀರ್ಮಾನ ಕೈಗೊಂಡರು. ಕಾಲ್ತುಳಿತ ದುರಂತದಿಂದ ಡಿ.ಕೆ.ಶಿವಕುಮಾರ್‌ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ ಎಂಬ ಅಭಿಪ್ರಾಯಗಳು ರಾಜಕೀಯವಲಯದಲ್ಲಿ ಕೇಳಿಬಂದಿದೆ.

Read More
Next Story