Caste Census | ಜಾತಿಗಣತಿಯ ಗೂಡಿನಿಂದ ಜೇನು ಸವಿಯುವರೇ ಸಿಎಂ ಸಿದ್ದರಾಮಯ್ಯ?
x

Caste Census | ಜಾತಿಗಣತಿಯ ಗೂಡಿನಿಂದ ಜೇನು ಸವಿಯುವರೇ ಸಿಎಂ ಸಿದ್ದರಾಮಯ್ಯ?

ಜಾತಿಗಣತಿ ವರದಿಯ ಅಂಕಿ ಅಂಶಗಳಿಗೆ ಪ್ರಬಲ ಜಾತಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಸಣ್ಣ ಪುಟ್ಟ ಜಾತಿಗಳು ಕೂಡ ತಕರಾರು ಎತ್ತುತ್ತಿವೆ. ಹೀಗಿರುವಾಗ ಎಲ್ಲರ ವಿರೋಧ ಕಟ್ಟಿಕೊಂಡು ವರದಿ ಜಾರಿ ಮಾಡುವುದು ಸಿಎಂ ಅವರಿಗೆ ಅಸಾಧ್ಯವಾಗಿದ್ದು, ವರದಿಗೆ ಒಮ್ಮತದ ಅಭಿಪ್ರಾಯ ಕ್ರೂಢೀಕರಿಸಲು ಯಾವ ದಾಳ ಉರುಳಿಸಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.


ಜಾತಿ ಜನಗಣತಿಯ ಜೇನುಗೂಡಿಗೆ ಕೈ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಅನುಷ್ಠಾನ ಅಗ್ನಿ ಪರೀಕ್ಷೆಯಾಗಿದೆ. ವರದಿ ಜಾರಿ ಮೂಲಕ ಹಿಂದುಳಿದ, ದಲಿತರಿಗೆ ರಾಜಕೀಯ ಶಕ್ತಿ ತುಂಬುವ ಸಿದ್ದರಾಮಯ್ಯ ಅವರ ಇಚ್ಛೆಗೆ ಪ್ರಬಲ ಜಾತಿಗಳು ಅಡ್ಡಗಾಲು ಹಾಕುತ್ತಿವೆ. ಜಾತಿಗಣತಿ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಸರ್ಕಾರದ ಅಸ್ತಿತ್ವಕ್ಕೇ ಸವಾಲು ಹಾಕಿವೆ. ಹೀಗಿರುವಾಗ ಎಲ್ಲ ಸಮುದಾಯಗಳಲ್ಲಿ ಜಾತಿಗಣತಿ ವರದಿಗೆ ಒಮ್ಮತ ಮೂಡಿಸಿ ಅನುಷ್ಠಾನಗೊಳಿಸುವುದು ಸಿದ್ದರಾಮಯ್ಯ ಅವರ ರಾಜಕೀಯ ಮುತ್ಸದ್ದಿತನಕ್ಕೆ ಸತ್ವ ಪರೀಕ್ಷೆಯಾಗಿದೆ.

ಏ.11 ರಂದು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆ ಬಳಿಕ ಪ್ರಬಲ ಜಾತಿಗಳು ಮತ್ತೆ ಸಿಡಿದೆದ್ದಿವೆ. ಅವರನ್ನು ಅನುಸರಿಸಿ ಸಣ್ಣ ಪುಟ್ಟ ಮೇಲ್ವರ್ಗಗಳು ಕೂಡ ತಮ್ಮ ಸಮುದಾಯದ ಜನಂಖ್ಯೆಯ ಅಂಕಿ ಅಂಶಗಳಿಗೆ ತಕರಾರು ತೆಗೆದಿವೆ. ವರದಿ ಜಾರಿ ಕುರಿತಂತೆ ಸರ್ಕಾರದ ಮುಂದೆ ಮೂರು ಅವಕಾಶಗಳಿವೆ. ಒಂದು ಎಲ್ಲರ ವಿರೋಧ ಕಟ್ಟಿಕೊಂಡು ವರದಿ ಜಾರಿ ಮಾಡುವುದು, ಮುಂದಿನ ಪರಿಣಾಮಗಳನ್ನು ಎದುರಿಸುವುದು. ಎರಡನೆಯದು ಹತ್ತು ವರ್ಷಗಳ ಹಳೆಯ ವರದಿ ಎಂಬ ಕಾರಣ ನೀಡಿ ವರದಿ ತಿರಸ್ಕರಿಸಿ, ಹೊಸ ಸಮೀಕ್ಷೆಗೆ ಸೂಚಿಸುವುದು. ಮೂರನೆಯದು ಈಗಿರುವ ವರದಿಯನ್ನು ಪರಿಷ್ಕರಿಸಿ, ಜಾರಿಗೊಳಿಸುವುದು. ಯಾವುದೇ ಆಯ್ಕೆಗೂ ಮುನ್ನ ವರದಿ ಕುರಿತು ವಿಸ್ತೃತ ಚರ್ಚೆ ನಡೆಸಿ, ಒಮ್ಮತ ಮೂಡಿಸುವತ್ತ ಸಿಎಂ ಸಿದ್ದರಾಮಯ್ಯ ಅವರು ಹೆಚ್ಚು ಆಸ್ಥೆ ವಹಿಸಿದ್ದಾರೆ.

ಒಂದು ವರದಿ, ಮೂರು ಗುರಿ

ಅಹಿಂದ ಸಮುದಾಯಗಳ ದೊಡ್ಡ ನಾಯಕ ಸಿದ್ದರಾಮಯ್ಯ. ಜಾತಿಗಣತಿ ವರದಿ ಜಾರಿ ಮಾಡುವುದರ ಹಿಂದೆ ಸಿದ್ದರಾಮಯ್ಯ ಅವರ ರಾಜಕೀಯ ಲಾಭವೂ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ವರದಿ ಜಾರಿ ಮಾಡುವುದರಿಂದ ಹಿಂದುಳಿದ ಹಾಗೂ ದಲಿತರು ಮತಬ್ಯಾಂಕ್‌ ಸುಲಭವಾಗಿ ಸಿಗಲಿದೆ. ರಾಹುಲ್‌ ಗಾಂಧಿ ಅವರ ಇಚ್ಛೆಯಂತೆ ಜಾತಿಗಣತಿ ವರದಿ ಜಾರಿಯಾದರೆ ಹೈಕಮಾಂಡ್‌ ಬಳಿ ಪ್ರಭಾವಿ ನಾಯಕರಾಗಿ ಸಿದ್ದರಾಮಯ್ಯ ಗುರುತಿಸಿಕೊಳ್ಳಲಿದ್ದಾರೆ. ಪ್ರಸ್ತುತ ಸಿಎಂ ಸ್ಥಾನ ಬದಲಾವಣೆ ಕುರಿತು ಎದ್ದಿರುವ ವಿವಾದಗಳಿಗೆ ತೆರೆ ಬೀಳಲಿದೆ. ಮತ್ತೊಂದು ಅವಧಿಗೂ ಸಿಎಂ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇದೇ ಕಾರಣಕ್ಕಾಗಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಜಾತಿಗಣತಿ ಅರ್ಥಾತ್ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಕರಾರುವಕ್ಕಾಗಿ ನಿರ್ವಹಿಸಿಕೊಂಡು ಜಾರಿಗೆ ಪ್ರಯತ್ನಿಸುತ್ತಿದ್ದಾರೆ.

ನಾಡಿಮಿಡಿತ ಅರಿಯುವ ಪ್ರಯತ್ನ

2015ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿ ಆಧರಿಸಿ ಜಯಪ್ರಕಾಶ್ ಹೆಗ್ಡೆ ಸಲ್ಲಿಸಿದ ಅಂತಿಮ ವರದಿ ಅತ್ಯಂತ ಸೂಕ್ಷ್ಮವಾಗಿದ್ದರೂ ವರದಿ ಬಗೆಗಿನ ಸಮುದಾಯಗಳ ನಾಡಿಮಿಡಿತ ಅರಿಯುವ ಪ್ರಯತ್ನಗಳನ್ನೂ ಸಿದ್ದರಾಮಯ್ಯ ಮಾಡಿದ್ದರು ಎನ್ನಲಾಗಿದೆ.

2024 ರಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ವರದಿ ಸಲ್ಲಿಸಿದಾಗ ಆದ ಜಾತಿವಾರು ಜನಸಂಖ್ಯೆ ಮಾಹಿತಿ ಸೋರಿಕೆ ಕೂಡ ಈ ಪ್ರಯತ್ನದ ಭಾಗವೇ ಆಗಿದೆ ಎಂದು ಮೂಲಗಳು ತಿಳಿಸಿವೆ. 2023 ರ ಚುನಾವಣೆ ಅವಧಿಯಲ್ಲಿ ಜಾತಿಗಣತಿ ವರದಿಯನ್ನೇ ರಾಜಕೀಯ ದಾಳವಾಗಿ ಬಳಸಿಕೊಂಡರು. ಅಧಿಕಾರಕ್ಕೆ ಬರುತ್ತಿದ್ದಂತೆ ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಆಯೋಗದಿಂದ ವರದಿ ಸ್ವೀಕರಿಸಿದರು. ಈಗ 2028 ರ ಚುನಾವಣೆ ಮೇಲೆ ಕಣ್ಣಿಟ್ಟು ಈಗಿನಿಂದಲೇ ವರದಿ ಜಾರಿಯ ಕಸರತ್ತು ಆರಂಭಿಸಿದ್ದಾರೆ. ಕಳೆದ ಏಪ್ರಿಲ್ 11 ರಂದು ಜಾತಿಗಣತಿ ವರದಿ ಸಂಪುಟದ ಮುಂದೆ ತರುವುದಕ್ಕಾಗಿ ಸಿಎಂ ಹೆಣೆದ ತಂತ್ರ ಅವರ ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿಯಾಗಿತ್ತು.

ಗುಜರಾತ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದಂತೆ ಜಾತಿಗಣತಿ ಮಂಡನೆಗೆ ಮುಹೂರ್ತ ನಿಗದಿಪಡಿಸಿದರು. ಈ ಹಿಂದೆ ಅಂಕಿ ಅಂಶಗಳಿಗೆ ವಿರೋಧ ವ್ಯಕ್ತಪಡಿಸಿದ್ದ ಪ್ರಬಲ ಜಾತಿಗಳು ಯಾವುದೇ ಕಾರಣಕ್ಕೂ ವರದಿ ಮಂಡನೆಗೆ ಅವಕಾಶ ನೀಡದಿರಲು ಪ್ರಯತ್ನಿಸಿದರೂ ಸಿದ್ದರಾಮಯ್ಯ ಅವರ ಚಾಣಾಕ್ಷತನದ ಮುಂದೆ ಅವರ ಪ್ರಯತ್ನಗಳು ಫಲಿಸಲಿಲ್ಲ. ಸಂಪುಟ ಸಭೆಯಲ್ಲಿ ವರದಿ ಮಂಡನೆಗೂ ಮುನ್ನ ʼರಾಹುಲ್ ಗಾಂಧಿ ಸೂಚನೆ ಮೇರೆಗೆʼ ಎಂಬ ದಾಳ ಉರುಳಿಸುವ ಮೂಲಕ ಯಶಸ್ವಿಯಾಗಿ ಮಂಡನೆಯಾಗುವಂತೆ ನೋಡಿಕೊಂಡರು.

ಅಂದಿನ ಸಂಪುಟ ಸಭೆಯಲ್ಲಿ ವರದಿ ಬಹಿರಂಗಪಡಿಸದೇ ಹೋದರೂ ಮಾಹಿತಿ ಸೋರಿಕೆಯಾಗಿತ್ತು. ಪ್ರಬಲ ಜಾತಿಗಳು ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಅಸಲಿ ಮಾಹಿತಿ ಬಹಿರಂಗಪಡಿಸಲಾಯಿತು. ಜೊತೆಗೆ ವಿಶೇಷ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸುವುದಾಗಿ ಎಲ್ಲರನ್ನೂ ಸಮಾಧಾನ ಮಾಡಿದರು. ಆದರೆ, ಏ.17 ರಂದು ನಡೆದ ವಿಶೇಷ ಸಂಪುಟ ಸಭೆಯಲ್ಲೂ ಯಾವುದೇ ತೀರ್ಮಾನಕ್ಕೆ ಬರದೇ ಮೇ 2 ಕ್ಕೆ ಮುಂದೂಡಲಾಗಿದೆ.

ಅಭಿಪ್ರಾಯ ಸಂಗ್ರಹಣೆಯ ಕಸರತ್ತು

ಜಾತಿಗಣತಿ ವರದಿ ಕುರಿತು ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಸಂಗ್ರಹಿಸಲು ವರದಿಯ ಸಾರಾಂಶವನ್ನು ಸಚಿವರಿಗೆ ನೀಡಲಾಯಿತು. ಏ.17 ರಂದು ನಡೆದ ವಿಶೇಷ ಸಚಿವ ಸಂಪುಟದಲ್ಲಿ ಪ್ರಬಲ ಸಚಿವರ ಏರುದನಿಯ ಮಾತುಗಳಿಗೆ ಬ್ರೇಕ್ ಹಾಕಲು ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ಸಿಎಂ ಸೂಚಿಸಿದ್ದರು. ಇಲ್ಲಿ ವೈಯಕ್ತಿಕ ಅಭಿಪ್ರಾಯ, ಆಕ್ಷೇಪಣೆ ಕೇಳಿದ ಹಿಂದಿನ ಮರ್ಮ ಕೂಡ ನಿಗೂಢವಾಗಿತ್ತು. ಏಕೆಂದರೆ ವರದಿ ಮಂಡನೆಗೆ ರಾಹುಲ್‌ ಗಾಂಧಿ ಅವರೇ ಸೂಚಿಸಿದ್ದರೂ ಕೆಲವರು ಆಕ್ಷೇಪ ಎತ್ತುತ್ತಿದ್ದಾರೆ. ಅಂತವರ ಹೆಸರನ್ನು ಹೈಕಮಾಂಡ್‌ಗೆ ನೀಡಿ, ಅವರ ಕಡೆಯಿಂದ ಬಾಯಿ ಮುಚ್ಚಿಸುವುದು ಸಿಎಂ ಅವರ ತಂತ್ರವಾಗಿದೆ ಎನ್ನಲಾಗಿದೆ.

ಇನ್ನು ಸಿಎಂ ಸಿದ್ದರಾಮಯ್ಯ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ವರದಿ ಜಾರಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವರಿಂದ ಸಿಂಪಥಿ ಪಡೆಯುವುದು ಕೂಡ ಇದರ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ. ಹೈಕಮಾಂಡ್‌ಗೆ ನಿಷ್ಠರಾಗಿ, ಹಿಂದುಳಿದ, ದಲಿತ ಜಾತಿಗಳಿಗೆ ಅಧಿನಾಯಕರಾಗಿ, ಸಿಎಂ ಸ್ಥಾನ ಭದ್ರಪಡಿಸಿಕೊಳ್ಳಲು ಪರಿಸ್ಥಿತಿಯನ್ನು ಅತ್ಯಂತ ಕರಾರುವಕ್ಕಾಗಿ ನಿಭಾಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಹಿಂದ ವೋಟ್‌ ಬ್ಯಾಂಕ್ ಗುರಿ

ಸಿದ್ದರಾಮಯ್ಯ ಅವರು ಅಹಿಂದ ಸಮುದಾಯಗಳ ಒಗ್ಗಟ್ಟು ಬಲಪಡಿಸುವ ಮೂಲಕ ವೋಟ್‌ ಬ್ಯಾಂಕ್‌ ಆಗಿ ಪರಿವರ್ತಿಸಲು ಜಾತಿಗಣತಿ ಜಾರಿಗೆ ವಿಶೇಷ ಒತ್ತು ನೀಡುವುದು ಅವರ ರಾಜಕೀಯ ಲೆಕ್ಕಾಚಾರ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.

ವರದಿಯ ಕುರಿತ ತರ್ಕ, ಆಕ್ಷೇಪಣೆಗಳನ್ನು ಹೈಕಮಾಂಡ್ ಗೆ ರವಾನಿಸಿರುವುದು ಸಿದ್ದರಾಮಯ್ಯ ಅವರ ರಾಜಕೀಯ ಯುಕ್ತಿಗೆ ಸಾಕ್ಷಿಯಾಗಿದೆ. ವರದಿ ಜಾರಿಗೆ ಸಂಬಂಧಿಸಿದ ಚರ್ಚೆಗಳು ಮತ್ತು ಪ್ರತಿಕ್ರಿಯೆಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ ಎನ್ನಲಾಗುತ್ತಿದೆ.

2028 ರ ಚುನಾವಣೆ ಮೇಲೆ ಕಣ್ಣು

2028ರ ವಿಧಾನಸಭಾ ಚುನಾವಣೆ ಗೆಲ್ಲುವ ಗುರಿಯೊಂದಿಗೆ ಜಾತಿಗಣತಿ ವರದಿ ಜಾರಿ ಮಾಡಿ, ಜಾತಿ ಆಧಾರದ ಮತಬ್ಯಾಂಕ್ ಕಟ್ಟಿಕೊಳ್ಳುವ ದೃಷ್ಟಿಕೋನವನ್ನೂ ಹೊಂದಿದ್ದಾರೆ. ಅಹಿಂದ ಮತದಾರರ ಮನ್ನಣೆ ದೊರೆತರೆ ವಿರೋಧ ಪಕ್ಷಗಳಳ ಯಾವುದೇ ಪ್ರತಿರೋಧಕ್ಕೆ ಮಣೆ ಹಾಕುವ ಪ್ರಮೇಯ ಇಲ್ಲ ಎಂಬುದು ವರದಿ ಜಾರಿಯ ಒಳಗುಟ್ಟು ಎಂದು ಹೇಳಲಾಗಿದೆ.

ಜಾತಿ ಜನಗಣತಿಯ ಸೂಕ್ಷ್ಮ ವಿಷಯವನ್ನು ಸಾಮೂಹಿಕ ನೆಲೆಗಟ್ಟಿನಲ್ಲಿ ನಿರ್ಧರಿಸುವಂತಾಗಲು ಸಿದ್ದರಾಮಯ್ಯ ಒತ್ತು ನೀಡಿದ್ದಾರೆ. ಜಾತಿ ಗಣತಿ ವರದಿ ಜಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆದ್ಯತೆ ನೀಡಿರುವುದರಿಂದ ಹೈಕಮಾಂಡ್ ನಿರ್ದೇಶನವನ್ನೇ ಇದಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ವಿವಿಧ ಸಮುದಾಯಗಳ ನಡುವೆ ಶಾಂತಿಯುತ ಚರ್ಚೆಯನ್ನೂ ಪ್ರೋತ್ಸಾಹಿಸುತ್ತಿದ್ದಾರೆ. ವರದಿ ಕುರಿತಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದು, ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗದಂತೆ ಚಾಕಚಕ್ಯತೆಯಿಂದ ಪರಿಸ್ಥಿತಿ ನಿರ್ವಹಿಸುತ್ತಿದ್ದಾರೆ. ಇದೇ ವೇಳೆ ಅಹಿಂದ ಸಮುದಾಯಗಳ ಬೆಂಬಲವನ್ನು ಕ್ರೋಢೀಕರಿಸುತ್ತಿದ್ದಾರೆ. ಆ ಮೂಲಕ ಮೊದಲಿಗಿಂತ ಅಹಿಂದ ನಾಯಕರಾಗಿ ಮುಂದುವರಿಯುವತ್ತ ಸಿದ್ದರಾಮಯ್ಯ ಚಿತ್ರ ಹರಿಸಿದ್ದಾರೆ.

ವರದಿ ಕುರಿತಂತೆ ಸಕಾರಾತ್ಮಕ ಚರ್ಚೆಗೆ ಸಾಕಷ್ಟು ಕಾಲವಕಾಶ ನೀಡುವ ಮೂಲಕ ಸಮತೋಲಿತ ವರದಿಯನ್ನಾಗಿ ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇದು ಮುಂಬರುವ ಚುನಾವಣೆ ವರೆಗೂ ಊಳಿಯಲಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.

Read More
Next Story