
ರಾಜ್ಯ ಬಿಜೆಪಿಗೆ ನೂತನ ಸಾರಥಿ? ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆಯೇ ಬಿ.ವೈ.ವಿಜಯೇಂದ್ರ?
ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದು, ಅದನ್ನು ಮುಗಿಸಿ ಹಿಂತಿರುಗಿದ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆಯೇ ಬಿ.ವೈ.ವಿಜಯೇಂದ್ರ?
ಕಳೆದ ಕೆಲ ತಿಂಗಳುಗಳಿಂದ ರಾಜ್ಯ ಬಿಜೆಪಿಯಲ್ಲಿದ್ದ ಅಸಮಾಧಾನ ಸ್ವಲ್ಪಮಟ್ಟಿಗೆ ತಣ್ಣಗಾಗಿರುವ ಲಕ್ಷಣಗಳು ಗೋಚರವಾಗಿದ್ದು, ಹೊಸ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿದೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರಿಸಲು ಹೈಕಮಾಂಡ್ ತೀರ್ಮಾನಿಸುವ ಲಕ್ಷಣಗಳು ಕಂಡುಬಂದಿದೆ. ಮುಂದಿನ ವಾರದಲ್ಲಿ ಈ ಬಗ್ಗೆ ಅಧಿಕೃತವಾಗಿ ಪಕ್ಷದ ವರಿಷ್ಠರು ಘೋಷಣೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.
ಕಳೆದ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿರುವುದರ ಜತೆಗೆ ಕೆಲ ನಾಯಕರನ್ನು ಹೊರತುಪಡಿಸಿದರೆ ಇನ್ನುಳಿದವರೊಂದಿಗೆ ಉತ್ತಮ ಬಾಂಧವ್ಯವನ್ನು ವಿಜಯೇಂದ್ರ ಕಾಪಾಡಿಕೊಂಡಿದ್ದಾರೆ. "ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೇ, ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳ ನಾಯಕರ ಅಭಿಪ್ರಾಯಗಳಿಗೂ ಮನ್ನಣೆ ನೀಡುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಬಿ.ವೈ.ವಿಜಯೇಂದ್ರಗೆ ಮುಂದೆಯೂ ಸಾರಥ್ಯ ಇರಲಿ," ಎಂಬುದು ಜಿಲ್ಲಾ ಘಟಕಗಳ ಅಧ್ಯಕ್ಷ ಮತ್ತು ಇತರೆ ನಾಯಕರ ಅಭಿಪ್ರಾಯವಾಗಿದೆ.
ಬಿ.ವೈ.ವಿಜಯೇಂದ್ರ ವಿರುದ್ಧ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ತೊಡೆತಟ್ಟಿ ಹೈಕಮಾಂಡ್‌ಗೆ ದೂರು ನೀಡಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರನನ್ನೇ ಪಕ್ಷದ ರಾಜ್ಯಾಧ್ಯಕ್ಷನನ್ನಾಗಿ ಮಾಡಿರುವುದು ಕುಟುಂಬ ರಾಜಕಾರಣ ಮಾಡಿದಂತಾಗುತ್ತದೆ. ಅಲ್ಲದೇ, ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ ಎಂದು ದೂರುಗಳು ನೀಡಲಾಗಿತ್ತು. ಆದರೂ ಸಹ ಅವುಗಳಿಗೆ ಸೊಪ್ಪು ಹಾಕದ ಹೈಕಮಾಂಡ್ ವಿಜಯೇಂದ್ರ ಅವರನ್ನೇ ಮುಂದುವರಿಸಲು ಮಣೆ ಹಾಕಿದೆ ಎಂದು ಮೂಲಗಳು ಹೇಳಿವೆ.
ನರೇಂದ್ರ ಮೋದಿ ಪ್ರವಾಸ ಮುಕ್ತಾಯ ಬಳಿಕ ಘೋಷಣೆ ಸಾಧ್ಯತೆ?
ಕರ್ನಾಟಕದ ರಾಜ್ಯಾಧ್ಯಕ್ಷರ ಚುನಾವಣೆ ಅಷ್ಟು ಸಲೀಸಾಗಿಲ್ಲ ಎನ್ನುವುದು ಬಿಜೆಪಿಯ ಕೇಂದ್ರದ ನಾಯಕರಿಗೂ ಗೊತ್ತಿದೆ. ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದು, ಅದನ್ನು ಮುಗಿಸಿ ಹಿಂತಿರುಗಿದ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಅಲ್ಲದೇ, ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಯ ಹೊಣೆ ಹೊತ್ತಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಸಹ ದೇಶದ ವಿವಿಧ ರಾಜ್ಯಗಳ ಪ್ರವಾಸದಲ್ಲಿದ್ದಾರೆ. ಅವರು ಸಹ ಪ್ರವಾಸವನ್ನು ಅಂತಿಮಗೊಳಿಸಿದ ಬಳಿಕವೇ ಮುಂದಿನ ನಿರ್ಣಯದ ಪ್ರಕಟ ಮಾಡುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯಾಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಮುಂದಿನ ವಾರ ತೆರೆಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಹಲವರು ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಯ ರೇಸ್‌ನಲ್ಲಿ
ಬಿಜೆಪಿ ಅಚ್ಚರಿಯ ಆಯ್ಕೆಗೆ ಹೆಸರಾಗಿದೆ. ಈ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ವಿಜಯೇಂದ್ರ ಬದಲಿಗೆ ಇತರರನ್ನು ಆಯ್ಕೆ ಮಾಡಿದರೂ ಅಚ್ಚರಿ ಇಲ್ಲ. ಬಹುತೇಕ ವಿಜಯೇಂದ್ರ ಅವರೇ ಮುಂದುವರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿ ವರಿಷ್ಠರ ತೀರ್ಮಾನ ಏನೆಂಬುದು ಹೇಳಲು ಸಾಧ್ಯವಿಲ್ಲ. ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗಿದೆ.
ಬಿ.ವೈ.ವಿಜಯೇಂದ್ರ ಅವರ ಜತೆಗೆ ಮುರುಗೇಶ್ ನಿರಾಣಿ, ಕೇಂದ್ರ ಸಚಿವ ವಿ.ಸೋಮಣ್ಣ ಹೆಸರು ಸಹ ಕೇಳಿ ಬಂದಿದೆ. ಈ ನಡುವೆ, ಶಾಸಕ ಸುನಿಲ್ ಕುಮಾರ್ ಹೆಸರು ಸಹ ಮುನ್ನಲೆಗೆ ಬಂದಿದೆ. ರಾಜ್ಯ ಬಿಜೆಪಿ ಶಾಸಕರುಗಳ ಪೈಕಿ ಒಂದಷ್ಟು ಜನ ಬಿ.ವೈ. ವಿಜಯೇಂದ್ರ ಕ್ಯಾಂಪ್‌ನಲ್ಲಿ, ಇನ್ನೊಂದಷ್ಟು ಶಾಸಕರು ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿದ್ದಾರೆ. ಪ್ರತಿಯೊಬ್ಬರಿಗೂ ಯಾರ ಹೆಸರು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಕೂತುಹಲ ಮೂಡಿಸಿದೆ.
ವಿಜಯೇಂದ್ರ ವಿರುದ್ಧ ಕೇಳಿಬಂದ ಆರೋಪಗಳು
ಬಿ.ವೈ. ವಿಜಯೇಂದ್ರ ವಿರುದ್ಧದ ಪ್ರಮುಖ ಆರೋಪ ಕುಟುಂಬ ರಾಜಕಾರಣವಾಗಿದೆ. ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ನಾಯಕತ್ವವನ್ನು ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಕುಟುಂಬ ರಾಜಕಾರಣ ವಿಜಯೇಂದ್ರ ಅವರಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಬಿಜೆಪಿ ಕುಟುಂಬ ರಾಜಕೀಯದ ವಿರುದ್ಧ ನಿಲುವು ಹೊಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಮಾಡುತ್ತಿದೆ. ಹೀಗಿರುವಾಗ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದು ಸರಿಯಲ್ಲ ಎಂಬ ಅಭಿಪ್ರಾಯ ಇದೆ.
ಬಿ.ವೈ .ವಿಜಯೇಂದ್ರ ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಇದೆ. ಪಕ್ಷದಲ್ಲಿ ಸಂಘಟನೆ ಮತ್ತು ಹೋರಾಟ ರೂಪಿಸುವ ಸಂದರ್ಭದಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹಿರಿಯರ ಸಲಹೆ ಸೂಚನೆಗೆ ಕಿವಿಯಾಗುವುದಿಲ್ಲ. ಹಿರಿಯರನ್ನು ಕಡೆಗಣಿಸಿ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬ ಆರೋಪ ಮಾಡಲಾಗುತ್ತಿದೆ. ಕೆಲವು ಹಿರಿಯ ನಾಯಕರು ಈ ಬಗ್ಗೆ ಹೈಕಮಾಂಡ್ ಗಮನಕ್ಕೂ ತಂದಿದ್ದಾರೆ. ಇದು ವಿಜಯೇಂದ್ರ ಅವರಿಗೆ ಹಿನ್ನಡೆ ಉಂಟು ಮಾಡಿದೆ.
ವಿಜಯೇಂದ್ರ ಅವರಿಗೆ ಅನುಭವದ ಕೊರತೆ ಇದೆ. ಅಲ್ಲದೆ ಹಿರಿತನ ಇಲ್ಲ ಎಂಬ ಆರೋಪ ಇದೆ. ಬಿಜೆಪಿಯಲ್ಲಿ ರಾಜಕೀಯ ಹಿನ್ನಲೆ ಹೊಂದಿದ್ದರೂ ವಿಜಯೇಂದ್ರ ಅವರು ಕೇವಲ ಒಂದು ಬಾರಿ ಶಾಸಕರಾಗಿದ್ದಾರೆ. ಹೀಗಾಗಿ ಅವರಿಗೆ ಪಕ್ಷ ಸಂಘಟನೆಯ ಅನುಭವ ಇಲ್ಲ. ಪಕ್ಷದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿರಿಯರಿದ್ದು, ಅವರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಇದೆ. ಹಿರಿಯತನ ಮತ್ತು ಅನುಭವನ ಕೊರತೆಯು ವಿಜಯೇಂದ್ರಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.