Naxals Surrender| ಚಿಕ್ಕಮಗಳೂರ್‌ ಟು ಬೆಂಗಳೂರ್‌: ನಕ್ಸಲ್‌ ಶರಣಾಗತಿ ಸ್ಥಳ ಶಿಫ್ಟ್‌ ಯಾಕೆ?
x
ಶರಣಾಗಲಿರುವ ನಕ್ಸಲರು

Naxals Surrender| ಚಿಕ್ಕಮಗಳೂರ್‌ ಟು ಬೆಂಗಳೂರ್‌: ನಕ್ಸಲ್‌ ಶರಣಾಗತಿ ಸ್ಥಳ ಶಿಫ್ಟ್‌ ಯಾಕೆ?

ಟುಕರ್ನಾಟಕವನ್ನು ನಕ್ಸಲ್‌ ಮುಕ್ತ ಮಾಡುವ ಮತ್ತು ದೇಶ ಮಟ್ಟದಲ್ಲಿ ಇದೊಂದು ಪ್ರಮುಖ ಬೆಳವಣಿಗೆಯಾಗಿರುವ ಕಾರಣ ಮೈಲೇಜ್‌ಗಾಗಿಯೇ ಈ ಕಾರ್ಯಕ್ರಮವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ.


ಚಿಕ್ಕಮಗಳೂರಿನಲ್ಲಿ ಬುಧವಾರ ಬೆಳಗ್ಗೆ 10.30 ಕ್ಕೆ ನಿಗದಿಯಾಗಿದ್ದ ನಕ್ಸಲರ ಶರಣಾಗತಿ ಕಾರ್ಯಕ್ರಮ ದಿಢೀರ್‌ ಬೆಂಗಳೂರಿಗೆ ಶಿಫ್ಟ್‌ ಆಗಿದೆ. ನಕ್ಸಲ್‌ ಮುಕ್ತ ರಾಜ್ಯಕ್ಕೆ ಪಣತೊಟ್ಟ ನಕ್ಸಲ್‌ ಶರಣಾಗತಿ ಮತ್ತು ಪುನರ್ಸವತಿ ಸಮಿತಿ, ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರು ಮತ್ತು ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಕ್ಸಲರನ್ನು ಮುಖ್ಯವಾಹಿನಿಗೆ ತರಲು ವೇದಿಕೆ ಸಿದ್ದವಾಗಿತ್ತು. ಈ ಸಂಬಂಧ ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು. ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ಈ ಸನ್ನಿವೇಶಕ್ಕೆ ಸಾಕ್ಷಿಯಾಗಲು ಮಾಧ್ಯಮಗಳ ದಂಡೇ ನೆರೆದಿತ್ತು. ಆದರೆ ಬೆಳಗ್ಗೆ ಆದ ದಿಢೀರ್‌ ಬೆಳವಣಿಗೆಯಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ರಂಗಪ್ರವೇಶ ಮಾಡಿ ಕಾರ್ಯಕ್ರಮವನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಿಸಿದ್ದಾರೆ.

ಕರ್ನಾಟಕವನ್ನು ನಕ್ಸಲ್‌ ಮುಕ್ತ ಮಾಡುವ ಮತ್ತು ದೇಶ ಮಟ್ಟದಲ್ಲಿ ಇದೊಂದು ಪ್ರಮುಖ ಬೆಳವಣಿಗೆಯಾಗಿರುವ ಕಾರಣ ಮೈಲೇಜ್‌ಗಾಗಿಯೇ ಈ ಕಾರ್ಯಕ್ರಮವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ. ಪೂರ್ವನಿರ್ಧಾರದಂತೆ ಚಿಕ್ಕಮಗಳೂರಿಗೆ ಶರಣಾಗುವ ನಕ್ಸಲರ ಕುಟುಂಬ ವರ್ಗದವರು ಪ್ರವಾಸಿ ಮಂದಿರದ ಬಳಿ ನೆರೆದಿದ್ದರು. ಶರಣಾಗತಿ ಮತ್ತು ಪುನರ್‌ ವಸತಿ ಸಮಿತಿಯ ಸದಸ್ಯರು ಹಾಗೂ ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರು ನಕ್ಸಲರೊಂದಿಗೆ ಹಲವು ದಿನಗಳಿಂದ ಸಂಪರ್ಕ ಸಾಧಿಸಿ ಕಾರ್ಯಕ್ರಮ ರೂಪರೇಷೆ ಸಿದ್ಧಪಡಿಸಿದ್ದರು. ಆದರೆ ಕೊನೇ ಹಂತದಲ್ಲಿ ಇಡೀ ಕಾರ್ಯಕ್ರಮವನ್ನು ರಾಜಧಾನಿಗೆ ಶಿಫ್ಟ್‌ ಮಾಡಿರುವುದರ ಹಿಂದೆ ದೊಡ್ಡ ಮಟ್ಟದ ಪ್ರಚಾರ ಪಡೆಯುವ ಕಾರ್ಯತಂತ್ರವೇ ಅಡಗಿದೆ ಎಂಬ ಚರ್ಚೆ ಆರಂಭವಾಗಿದೆ.

ಸರ್ಕಾರದಿಂದ ನೇಮಕಗೊಂಡ ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ಸಮಿತಿ ನಡುವೆ ಸಣ್ಣ ಮಟ್ಟದ ಭಿನ್ನಾಭಿಪ್ರಾಯ ಮೂಡಿತ್ತು. ಇದು ಕ್ರೆಡಿಟ್‌ಗಾಗಿ ನಡೆದ ಬೆಳವಣಿಗೆ ಎಂದೇ ಹೇಳಲಾಗಿತ್ತು. ಆದರೆ ಅದು ಕೊನೇ ಹಂತದಲ್ಲಿ ತಣ್ಣಗಾಯಿತು. ಶರಣಾಗುವ ನಕ್ಸಲರಲ್ಲಿ ಆಂದ್ರ, ತಮಿಳುನಾಡು ಮತ್ತು ಕೇರಳದವರೂ ಇದ್ದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೊಂದು ರಾಷ್ಟ್ರ ಮಟ್ಟದ ವಿಷಯವಾಗಿದೆ. ಬರೀ ಅಧಿಕಾರಿಗಳ ಸಮ್ಮುಖದಲ್ಲಿ ಬೇಡ ನನ್ನ ಸಮ್ಮುಖದಲ್ಲಿಯೇ ಶರಣಾಗತಿ ಆಗಲಿ ಎಂಬ ಸೂಚನೆ ನೀಡಿದ್ದರಿಂದ ಕಾರ್ಯಕ್ರಮ ಸ್ಥಳಾಂತರಕ್ಕೆ ಪ್ಲಾನ್‌ ಮಾಡಲಾಯಿತು.

ಕೇರಳದ ಟಿ.ಎನ್.ಜೀಶ ಪೋಷಕರನ್ನು ಹೊರತುಪಡಿಸಿ ಉಳಿದ ಎಲ್ಲರ ಕುಟುಂಬ ವರ್ಗವೂ ಚಿಕ್ಕಮಗಳೂರಿಗೆ ಬಂದಿತ್ತು. ಮುಖ್ಯಮಂತ್ರಿ ಸೂಚನೆ ಬರುತ್ತಿದ್ದಂತೆ ಎಲ್ಲರನ್ನೂ ಸರಕಾರಿ ವಾಹನದಲ್ಲಿಯೇ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಕೃಷ್ಣಾದಲ್ಲಿ ಶರಣಾಗತಿ?

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿಯೇ ಎಲ್ಲಾ ಆರು ನಕ್ಸಲರನ್ನು ಮುಖ್ಯವಾಹಿನಿಗೆ ಬರಮಾಡಿಕೊಳ್ಳಲಾಗುವುದು. ಸಂಜೆ ವೇಳೆಗೆ ಈ ಕಾರ್ಯಕ್ರಮ ನಡೆಯಲಿದೆ. ಕೊನೇ ಕ್ಷಣದಲ್ಲಿ ಸ್ಥಳ ಬದಲಾವಣೆ ಮಾಡಿದ್ದರಿಂದ ಪುನವರ್ಸತಿ ಸಮಿತಿ ಮತ್ತು ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರು ತಮ್ಮ ಅಸಮಾಧಾನ ಹೊರ ಹಾಕಿದರು. ಆದರೆ ಹಿರಿಯ ಅಧಿಕಾರಿಗಳು ಮನವೊಲಿಸಿದ ಬಳಿಕ ಕಾರ್ಯಕ್ರಮ ಸ್ಥಳಾಂತರವಾಯಿತು.

ದೇಶಮಟ್ಟದ ಪ್ರಕರಣವಾಗಿರುವುದರಿಂದ ಸಿಎಂ ಸಮ್ಮುಖದಲ್ಲಿಯೇ ಶರಣಾಗತಿ ನಡೆಯಲಿ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದರಿಂದ ಕಾರ್ಯಕ್ರಮವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಎಲ್ಲವೂ ಕಾನೂನು ಬದ್ಧವಾಗಿ ನಡೆಯಲಿವೆ. ಶರಣಾಗತರಿಗೆ ಸಂಧಾನ ವೇಳೆಯಲ್ಲಿ ನೀಡಿದ್ದ ಭರವಸೆಯಂತೆಯೇ ಎಲ್ಲವೂ ನಡೆಯಲಿದೆ ಎಂದು ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯ ಕೆ.ಪಿ.ಶ್ರೀಪಾಲ್‌ ದ ಫೆಡರಲ್‌ ಕರ್ನಾಟಕಕ್ಕೆ ಮಾಹಿತಿ ನೀಡಿದರು.

ಖುದ್ದು ಸಿಎಂ ಅವರೇ ಕರೆ ಮಾಡಿ ನಮ್ಮ ವೇದಿಕೆಯ ಹಿರಿಯರೊಂದಿಗೆ ಮಾತನಾಡಿದ್ದರಿಂದ ಕಾರ್ಯಕ್ರಮ ಶಿಫ್ಟ್‌ ಆಗಿದೆ ಎಂದು ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯ ಕೆ.ಎಲ್.ಅಶೋಕ್‌ ಹೇಳಿದರು. ಈ ನಡುವೆ ವಿಡಿಯೊ ಒಂದನ್ನು ಬಿಡುಗಡೆ ಮಾಡಿರುವ ನಕ್ಸಲ್‌ ನಾಯಕಿ ಮುಂಡಗಾರು ಲತಾ, ಸರ್ಕಾರದ ನೀಡಿರುವ ಭರವಸೆಯಂತೆ ಎಲ್ಲಾ ಆರು ಮಂದಿ ಶರಣಾಗುತ್ತಿದ್ದೇವೆ. ನಮ್ಮ ಜನಪರ ಹೋರಾಟ ಯಾವತ್ತೂ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ಪ್ರವಾಸಿ ಮಂದಿರದ ಸಮೀಪ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್‌, ಶರಣಾಗತಿ ಸಮಿತಿಯ ಸಾಹಿತಿ ಜೆಪಿ, .ಪಿ.ಶ್ರೀಪಾಲ್‌, ಪಾರ್ವತೀಶ್‌ ಬಿಳಿದಾಳೆ, ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ಶಾಂತಿಗಾಗಿ ನಾಗರೀಕ ವೇದಿಕೆಯ ಸಿರಿಮನೆ ನಾಗರಾಜ್‌, ನೂರ್‌ ಶ್ರೀಧರ್‌, ಕೆ.ಎಲ್.ಅಶೋಕ್‌, ರೈತ ಸಂಘ, ದಲಿತ ಸಂಘಟನೆ, ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

Read More
Next Story