
ಮಾಜಿ ಸ್ಪೀಕರ್ ಒತ್ತುವರಿ ತೆರವಿಗೆ ಯಾಕೆ ಜಾಣ ನಿದ್ದೆ: ಅರಣ್ಯ ಸಚಿವರ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ಕುದುರೆಮುಖ ಗಣಿ ಯೋಜನೆ ಹಾಗೂ ಎಚ್ ಎಂಟಿ ಕಾರ್ಖಾನೆ ಜಾಗದ ವಿಷಯದಲ್ಲಿ ಇನ್ನಿಲ್ಲದ ತಗಾದೆ ತೆಗೆಯುತ್ತಿರುವ ಅರಣ್ಯ ಸಚಿವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಭೂ ಒತ್ತುವರಿ ಬಗ್ಗೆ ಜಾಣ ನಿದ್ದೆ ಮಾಡುತ್ತಿರುವುದು ಏಕೆ? ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅರಣ್ಯ ಒತ್ತುವರಿ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರ ಒತ್ತುವರಿ ಕುರಿತ ಸರ್ವೇ ಸ್ಥಗಿತವಾಗಿದೆ. ಕೋಲಾರ ಜಿಲ್ಲೆಯಲ್ಲಿ ಅಮಾಯಕ ರೈತರ ಭೂಮಿಯನ್ನು ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ವೀರಾವೇಶದಲ್ಲಿ ತೆರವು ಮಾಡಿದ್ದಾರೆ. ಶ್ರೀನಿವಾಸಪುರದಲ್ಲಿಯೂ ರೈತರನ್ನು ಒಕ್ಕಲೆಬ್ಬಿಸಿ ಖಾಲಿ ಮಾಡಿಸಿದ್ದಾರೆ. ಆದರೆ, ಮಾಜಿ ಸ್ಪೀಕರ್ ಬಗ್ಗೆ ಅರಣ್ಯ ಇಲಾಖೆ ಸುಮ್ಮನಿದೆ! ಯಾಕೆ ಅವರನ್ನು ಕಂಡರೆ ಸರ್ಕಾರಕ್ಕೆ, ಅರಣ್ಯ ಇಲಾಖೆಗೆ ಭಯವೇ? ಎಂದು ಕೇಳಿದರು.
126 ಎಕರೆ ಅರಣ್ಯ ಭೂಮಿ ಒತ್ತುವರಿ ಸರ್ವೇ ಬಗ್ಗೆ ಕೋರ್ಟ್ ಸೂಚನೆ ನೀಡಿದೆ. ಕೇಂದ್ರ ಅರಣ್ಯ ಸಚಿವಾಲಯದ ಆದೇಶವೂ ಇದೆ. ಆದರೂ ಸರ್ವೇಯನ್ನೇ ನಿಲ್ಲಿಸಲಾಗಿದೆ. ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಅದರಲ್ಲಿಯೂ ಕಾಂಗ್ರೆಸ್ ನಾಯಕರಿಗೆ ಒಂದು ಕಾನೂನು ಇದೆಯೇ? ಲೂಟಿ ಮಾಡುವವರಿಗೆ ಒಂದು ನ್ಯಾಯ, ಬಡವರಿಗೆ ಇನ್ನೊಂದು ನ್ಯಾಯವಾ? ಎಂದು ಸರ್ಕಾರ ಮತ್ತು ಅರಣ್ಯ ಇಲಾಖೆಯ ಧೋರಣೆಯ ವಿರುದ್ಧ ಕಿಡಿಕಾರಿದರು.
ಇದೇ ತಿಂಗಳ 6ನೇ ತಾರೀಖು ಸರ್ವೇ ಮಾಡಲು ದಿನ ನಿಗದಿ ಆಗಿತ್ತು. ಯಾಕೆ ಸರ್ವೇ ಆಗಿಲ್ಲ? ಯಾಕೆ ಎಂಬುದಕ್ಕೆ ಸರ್ಕಾರ, ಅರಣ್ಯ ಸಚಿವರು ಉತ್ತರ ಕೊಡಬೇಕು. ಇದನ್ನು ಬಿಟ್ಟು ಅರಣ್ಯ ಸಚಿವರು ಎಚ್ಎಂಟಿ ಕಂಪನಿಯ ಹಿಂದೆ ಬಿದ್ದಿದ್ದಾರೆ. ಇಷ್ಟಕ್ಕೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಏನು ಮಾಡುತ್ತಿದ್ದಾರೆ? ಇಡೀ ದೇಶಕ್ಕೆ ಬುದ್ಧಿ ಹೇಳುವ ಅವರು, ಯಾಕೆ ಮಾಜಿ ಸ್ಪೀಕರ್ ಗೆ ಬುದ್ಧಿ ಹೇಳುತ್ತಿಲ್ಲ, ಅವರ ಒತ್ತುವರಿಯನ್ನು ತೆರವು ಮಾಡಿಸುತ್ತಿಲ್ಲ ಯಾಕೆ? ಎಂದು ಸವಾಲು ಹಾಕಿದರು.