Heavy rains in Bengaluru for five more days, public condemns BBMPs chaos
x

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಲ್ಲಿಯೇ ವಾಹನಗಳು ಸಂಚರಿಸಿದವು.

Bengaluru Rain: ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರಿಸುತ್ತಿರುವುದು ಯಾಕೆ? ಎಷ್ಟು ದಿನ ಇದೆ ಮಳೆ? ಇಲ್ಲಿದೆ ಎಲ್ಲ ವಿವರ

ಪ್ರಸ್ತುತ, ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತ ಅಥವಾ ಅದಕ್ಕೆ ಸಂಬಂಧಿಸಿದ ಮೇಲ್ಮೈ ಸುಳಿಗಾಳಿಯು ದಕ್ಷಿಣ ಭಾರತದ ಮೇಲೆ ಪ್ರಭಾವ ಬೀರುತ್ತಿದೆ. ಇದರ ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ. ಸಿಡಿಲು ಮತ್ತು ಬಿರುಗಾಳಿ ಕಂಡುಬರುತ್ತಿದೆ.


ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಪೂರ್ವ ಮಳೆ ಬಿರುಸಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದಾಗಿ ಈ ಅಕಾಲಿಕ ಮಳೆ ಬರುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಏಕಾಏಕಿ ಸುರಿಯುತ್ತಿರುವ ಮಳೆಯಿಂದಾಗ ಬೆಂಗಳೂರು ನಗರ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಟ್ರಾಫಿಕ್​ ಜಾಮ್​, ಜಲಾವೃತ ರಸ್ತೆಗಳು, ಮನೆಗಳಿಗೆ ನುಗ್ಗಿದ ನೀರು ಸೇರಿದಂತೆ ನಾನಾ ಸಮಸ್ಯೆಗಳಿಗೆ ಒಳಗಾಗಿದ್ದಾರೆ.

ಈ ಮಳೆಗೆ ಕಾರಣವೇನು?

ಮೇ ತಿಂಗಳಲ್ಲಿ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳಲ್ಲಿ ವಾತಾವರಣದ ಅಸ್ಥಿರತೆಗಳು ಮತ್ತು ವಾಯುಭಾರ ಕುಸಿತಗಳು ಸರ್ವೇಸಾಮಾನ್ಯ. ಅಂತೆಯೇ ಪ್ರಸ್ತುತ, ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತ ಅಥವಾ ಅದಕ್ಕೆ ಸಂಬಂಧಿಸಿದ ಮೇಲ್ಮೈ ಸುಳಿಗಾಳಿಯು ದಕ್ಷಿಣ ಭಾರತದ ಮೇಲೆ ಪ್ರಭಾವ ಬೀರುತ್ತಿದೆ. ಇದರ ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ. ಸಿಡಿಲು ಮತ್ತು ಬಿರುಗಾಳಿ ಕಂಡುಬರುತ್ತಿದೆ. ಇದು ಮುಂಗಾರು ಆಗಮನಕ್ಕೂ ಮುನ್ನ ಕಂಡುಬರುವ ಸಹಜ ವಿದ್ಯಮಾನವಾದರೂ, ಕೆಲವು ಕಡೆ ಅನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಜನರಿಗೆ ಸಮಸ್ಯೆ ಎದುರಾಗಿದೆ.

ಮಳೆಯ ಮುನ್ಸೂಚನೆ ಎಷ್ಟು ದಿನ?

ಹವಾಮಾನ ಇಲಾಖೆಯ ಮುನ್ಸೂಚನೆಗಳ ಪ್ರಕಾರ, ಬೆಂಗಳೂರು ಸೇರಿದಂತೆ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮುಂದಿನ 2-4 ದಿನಗಳ ಕಾಲ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಅಲ್ಲಲ್ಲಿ ಭಾರೀ ಮಳೆಯಾಗುವ ಸಂಭವವೂ ಇರುವುದರಿಂದ, ತಗ್ಗು ಪ್ರದೇಶಗಳ ನಿವಾಸಿಗಳು ಮತ್ತು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ವಾಯುಭಾರ ಕುಸಿತ ಯಾಕಾಗುತ್ತದೆ?

ವಾಯುಭಾರ ಕುಸಿತ ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸುತ್ತಮುತ್ತಲಿನ ವಾತಾವರಣದ ಒತ್ತಡಕ್ಕಿಂತ ಕಡಿಮೆ ಒತ್ತಡ ಸೃಷ್ಟಿಯಾಗುವ ಸ್ಥಿತಿ. ಇದು ಗಾಳಿಯು ಮೇಲಕ್ಕೆ ಚಲಿಸಿ ಮೋಡ ಮತ್ತು ಮಳೆ ರೂಪುಗೊಳ್ಳಲು ಕಾರಣವಾಗುತ್ತದೆ. ಬಂಗಾಳ ಕೊಲ್ಲಿಯು ಸಮುದ್ರದ ಮೇಲ್ಮೈ ಹೆಚ್ಚಿನ ತಾಪಮಾನ. ಭೂಗೋಳಿಕ ಲಕ್ಷಣಗಳು ಮತ್ತು ಗಾಳಿಯ ಪ್ರವಾಹಗಳಿಂದಾಗಿ ವಾಯುಭಾರ ಕುಸಿತಗಳು ಮತ್ತು ಚಂಡಮಾರುತಗಳು ಆಗಾಗ ರೂಪುಗೊಳ್ಳುತ್ತದೆ. ಇದರಿಂದ ಉಂಟಾಗುವ ಹವಾಮಾನಸ ಸ್ಥಿತಿಗಳು ದಕ್ಷಿಣ ಭಾರತದ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತವೆ.

ಬೆಂಗಳೂರಿನಲ್ಲಿ ಸಣ್ಣ ಮಳೆಗೂ ನೆರೆ ಏಕೆ?

ಕೆಲವೇ ಗಂಟೆಗಳ ಸಣ್ಣ ಅಥವಾ ಸಾಧಾರಣ ಮಳೆಗೂ ಬೆಂಗಳೂರಿನಲ್ಲಿ ರಸ್ತೆಗಳು ಜಲಾವೃತಗೊಳ್ಳುವುದು ಮತ್ತು ವಾಹನ ಸಂಚಾರ ಅಸ್ತವ್ಯಸ್ತವಾಗುವುದು ಪದೇ ಪದೇ ಕಂಡುಬರುತ್ತಿದೆ. ಕಳಪೆ ಒಳಚರಂಡಿ ವ್ಯವಸ್ಥೆ ಇದಕ್ಕೆ ಮೊದಲ ಕಾರಣ. ನಗರದ ಹಳೆಯ ಮತ್ತು ಜನಸಂಖ್ಯೆ ಹಾಗೂ ವಿಸ್ತರಣೆಗೆ ಅನುಗುಣವಾಗಿರದ ಒಳಚರಂಡಿ ಜಾಲದಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಮಳೆ ನೀರು ಹರಿದು ಹೋಗುವ ನೈಸರ್ಗಿಕ ಕಾಲುವೆಗಳು (ರಾಜಕಾಲುವೆಗಳು) ಒತ್ತುವರಿಯಾಗಿರುವುದು ಅಥವಾ ಕಿರಿದಾಗಿರುವುದರಿಂದ ನೀರು ಸರಾಗವಾಗಿ ಹರಿಯದೇ ಪ್ರವಾಹಕ್ಕ ಕಾರಣವಾಗುತ್ತದೆ.

ಅತಿಯಾದ ಕಾಂಕ್ರೀಟ್ ನಿರ್ಮಾಣದಿಂದಾಗಿ ಮಳೆ ನೀರು ಭೂಮಿಗೆ ಇಂಗುವ ಬದಲು ರಸ್ತೆಯಲ್ಲೇ ನಿಲ್ಲುತ್ತದೆ. ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯಗಳು ಒಳಚರಂಡಿ ಮತ್ತು ಕಾಲುವೆಗಳನ್ನು ಕಟ್ಟಿಕೊಳ್ಳುವುದು ಕೂಡ ಸಮಸ್ಯೆಗೆ ಮೂಲ ಕಾರಣ, ಸ್ಥಳೀಯಾಡಳಿತದ ವೈಫಲ್ಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರ ಮಳೆಗೆ ಮುಂಚಿತವಾಗಿ ಸಾಕಷ್ಟು ಸಿದ್ಧತೆಗಳನ್ನು ನಡೆಸಬೇಕಾಗುತ್ತದೆ. ಆದರೆ, ಆಡಳಿತ ಯಂತ್ರದ ವೈಫಲ್ಯದಿಂದಾಗಿ ಈ ಕೆಲಸಗಳು ಆಗುತ್ತಿಲ್ಲ. ಮಳೆ ನೀರು ಕಾಲುವೆಗಳ ನಿಯಮಿತ ಸ್ವಚ್ಛತೆ ಮತ್ತು ಹೂಳೆತ್ತುವ ಕಾರ್ಯದ ಲೋಪದಿಂದಾಗಿ ನೆರೆ ಸಹಜ ಎನಿಸಿದೆ.

ಮುಂಗಾರು ಮಳೆ ಯಾವಾಗ ಬರುತ್ತದೆ?

ನೈಋತ್ಯ ಮುಂಗಾರು ಮಾರುತಗಳು ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕೇರಳವನ್ನು ಪ್ರವೇಶಿಸುತ್ತವೆ. ಕೇರಳ ಪ್ರವೇಶಿಸಿದ ನಂತರದ ಕೆಲವು ದಿನಗಳಲ್ಲಿ (ಸಾಮಾನ್ಯವಾಗಿ ಒಂದು ವಾರದೊಳಗೆ) ಕರ್ನಾಟಕವನ್ನು ಪ್ರವೇಶಿಸುತ್ತದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವರ್ಷ ಜೂನ್​ 1ರಿಂದ 5ರ ಒಳಗೆ ಮಳೆ ಬರಲಿದೆ.

ಬೆಂಗಳೂರು ಮಳೆ ಜಾಗತಿಕ ಸಮಸ್ಯೆ ಆಗಿದ್ದು ಹೇಗೆ?

ಬೆಂಗಳೂರಲ್ಲಿ ಐಟಿ, ಬಿಟಿ ಕಂಪನಿಗಳಿರುವುದು ಹಾಗೂ ಸೋಶಿಯಲ್ ಮೀಡಿಯಾಗಳನ್ನು ಬಳಸುವ ನೆಟ್ಟಿಗರು ಇರುವುದರಿಂದ ಬೆಂಗಳೂರಿನ ಮಳೆ ಹಾಗೂ ನೆರೆ ಜಾಗತಿಕ ಸಮಸ್ಯೆಯಂತೆ ತಲೆದೋರುತ್ತದೆ. ಒಂದು ಮಳೆ ಬಂದಾಗ ಉಂಟಾಗುವ ಪ್ರವಾಹ ಸ್ಥಿತಿಯನ್ನು ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೊ ಸಮೇತ ಪೋಸ್ಟ್ ಮಾಡುವ ಕಾರಣ ಅದು ಜಗತ್ತಿನ ಸುದ್ದಿಯಾಗುತ್ತದೆ.

ಈ ಬಾರಿಯೂ ಬೆಂಗಳೂರಿನ ಮಳೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಹುತೇಕರು ಟ್ರಾಫಿಕ್ ಜಾಮ್, ಮೊಣಕಾಲಿನ ತನಕದ ನೀರು ಮತ್ತು ವಿದ್ಯುತ್ ವ್ಯತ್ಯಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್‌ಗಳು ಮತ್ತು ಮೀಮ್‌ಗಳನ್ನು ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ ಬಿಸಿಲ ಬೇಗೆಯಿಂದ ತಂಪಾದ ಹವಾಮಾನದ ಸಿಕ್ಕಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದವರೂ ಇದ್ದಾರೆ. ಮಳೆಯ ಸುಂದರ ಕ್ಷಣಗಳ ಫೋಟೋಗಳು ಮತ್ತು ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.

Read More
Next Story