ಬೆಂಗಳೂರು| ಸೂಪರ್ ಮಾರ್ಕೆಟ್‌ಗಳಲ್ಲಿ ಮಾಸ್ಕ್ ನಿಷೇಧವೇಕೆ?
ಬೆಂಗಳೂರಿನ ಅನೇಕ ಸೂಪರ್ ಮಾರ್ಕೆಟ್‌ಗಳು ಗ್ರಾಹಕರು ಮಾಸ್ಕ್ ಧರಿಸುವುದನ್ನು ನಿಷೇಧಿಸಿವೆ. ಮಾಸ್ಕ್ ಧರಿಸಿ ಕಳವು ಮಾಡಿದರೆ, ಗುರುತಿಸುವುದು ಕಷ್ಟವಾಗುವುದು ಈ ಬದಲಾವಣೆಗೆ ಕಾರಣ.
ಕೆಂಗೇರಿಯ ಸೂಪರ್ ಮಾರ್ಕೆಟ್ ಉದ್ಯೋಗಿಯೊಬ್ಬರು ಮುಸುಕುಧಾರಿ ಕಳ್ಳರಿಂದ ಅಪಾರ ನಷ್ಟವಾಗಿದೆ ಎಂದು ದೂರಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಈ ಪ್ರದೇಶದ ಎರಡು ಸೂಪರ್‌ಮಾರ್ಕೆಟ್‌ಗಳಿಂದ ಸುಮಾರು 3 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದು, ಒಂದು ಕಡೆ 1.2 ಲಕ್ಷ ರೂ. ನಷ್ಟವಾಗಿದೆ.
ಗುರುತು ಮರೆಮಾಡಲು ಸಹಾಯ: ಕಳ್ಳರು ತಮ್ಮ ಗುರುತನ್ನು ಮರೆಮಾಚಲು ಮಾಸ್ಕ್ ಬಳಸುತ್ತಿದ್ದರು ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ಬಹಿರಂಗವಾದ ನಂತರ ಅವುಗಳನ್ನು ನಿಷೇಧಿಸಲು ನಿರ್ಧರಿಸಲಾಯಿತು. ಕಳ್ಳರು ಕದ್ದ ವಸ್ತುಗಳನ್ನು ಚೀಲ ಅಥವಾ ಬಟ್ಟೆಯಡಿ ಮರೆಮಾಡುತ್ತಾರೆ. ಅನುಮಾನ ಪಡದೆ ಇರಲಿ ಎಂದು ಕೆಲವು ಅಗ್ಗದ ಉತ್ಪನ್ನಗಳಿಗೆ ಪಾವತಿಸುತ್ತಾರೆ ಎಂದು ಉದ್ಯೋಗಿ ವಿವರಿಸಿ ದರು. ಕೆಲವು ಅಂಗಡಿಗಳಲ್ಲಿ ಚೀಲಗಳಿಗೆ ಪ್ರವೇಶವಿಲ್ಲ. ಆದರೆ, ಸಣ್ಣ ಮಳಿಗೆಗಳು ಇಂಥ ಮುನ್ನೆಚ್ಚರಿಕೆ ವಹಿಸುವುದಿಲ್ಲ.
ಕಳವಿನ ವರದಿ ನಿಷ್ಪ್ರಯೋಜಕ: ಈ ಕಳ್ಳತನಗಳನ್ನು ಪೊಲೀಸರಿಗೆ ವರದಿ ಮಾಡುವುದು ನಿಷ್ಪ್ರಯೋಜಕ. ಏಕೆಂದರೆ ಕದ್ದ ಮಾಲಿನ ಬೆಲೆ ಕಡಿಮೆ ಎಂದರೆ, 1,000 ರೂ.ನಿಂದ 2,000 ರೂ. ನಡುವೆ ಇರುತ್ತದೆ. ಕಳ್ಳರು ಸಾಮಾನ್ಯವಾಗಿ ಗುಂಪುಗಳಲ್ಲಿರುತ್ತಾರೆ ಮತ್ತು ಒಮ್ಮೆ ಕಳವು ಮಾಡಿದ ಅಂಗಡಿಗೆ ಮತ್ತೊಮ್ಮೆ ಬರುವುದಿಲ್ಲ.
ಇಂಥವರೊಂದಿಗೆ ವ್ಯವಹರಿಸುವುದು ಕಷ್ಟ.ಮುಖವಾಡ ಧರಿಸಿ ಮಾಡಿದ ದರೋಡೆ ಮತ್ತು ಸರಗಳವು ಪ್ರಕರಣಗಳನ್ನು ಪತ್ತೆ ಹಚ್ಚುವುದು ಕಷ್ಟ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ತಪ್ಪಿಸಿಕೊಳ್ಳುವಾಗ ತೆಗೆದು ಹಾಕುವ ಹೆಲ್ಮೆಟ್‌ಗಳಿಗೆ ಹೋಲಿಸಿದರೆ, ಮಾಸ್ಕ್‌ಗಳು ನಿರಂತರವಾಗಿ ಮರೆಮಾಚುತ್ತವೆ. ಆದ್ದರಿಂದ, ಶಂಕಿತರನ್ನು ಗುರುತಿಸುವುದು ಮತ್ತು ಹಿಡಿಯುವುದು ಕಠಿಣ ಎಂದು ಅಭಿಪ್ರಾಯಪಟ್ಟರು.