Talent Hub Whitefield | ಜಾಗತಿಕ ಪ್ರತಿಭೆಗಳ ಕನಸಿನ ತಾಣ ಬೆಂಗಳೂರಿನ ವೈಟ್‌ಫೀಲ್ಡ್
ದೇಶದ ಅತ್ಯುನ್ನತ ಐಟಿ ಕಂಪೆನಿಗಳು, ಸ್ಟಾರ್ಟ್‌ಅಪ್‌ಗಳು, ಸಂಶೋಧನೆ ಹಾಗೂ ಅಭಿವೃದ್ಧಿ(ಆರ್ ಅಂಡ್ ಡಿ) ಕೇಂದ್ರಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳಿಂದಾಗಿ ವೈಟ್‌ಫೀಲ್ಡ್ ಜಾಗತಿಕ ಮಟ್ಟದಲ್ಲಿ ಯುವ ಪ್ರತಿಭಾವಂತರನ್ನು ಸೆಳೆಯುತ್ತಿದ್ದು, ನವೋದ್ಯಮಗಳ ಕನಸಿನ ತಾಣವಾಗಿಯೂ ಜಾಗತಿಕ ಉದ್ಯಮ-ವ್ಯವಹಾರ ನಕಾಶೆಯಲ್ಲಿ ಸ್ಥಾನ ಪಡೆದಿದೆ.
ಬೆಂಗಳೂರಿಗೆ ʼಸಿಲಿಕಾನ್ ವ್ಯಾಲಿʼ ಹೆಸರು ತಂದುಕೊಟ್ಟ ವೈಟ್‌ಫೀಲ್ಡ್ ಈಗ ಜಾಗತಿಕ ಟ್ಯಾಲೆಂಟ್ ಹಬ್ ಆಗಿ ಹೊರಹೊಮ್ಮಿದೆ.
ದೇಶದ ಅತ್ಯುನ್ನತ ಐಟಿ ಕಂಪೆನಿಗಳು, ಸ್ಟಾರ್ಟ್‌ಅಪ್‌ಗಳು, ಸಂಶೋಧನೆ ಹಾಗೂ ಅಭಿವೃದ್ಧಿ(ಆರ್ ಅಂಡ್ ಡಿ) ಕೇಂದ್ರಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳಿಂದಾಗಿ ವೈಟ್‌ಫೀಲ್ಡ್ ಜಾಗತಿಕ ಮಟ್ಟದಲ್ಲಿ ಯುವ ಪ್ರತಿಭಾವಂತರನ್ನು ಸೆಳೆಯುತ್ತಿದ್ದು, ನವೋದ್ಯಮಗಳ ಕನಸಿನ ತಾಣವಾಗಿಯೂ ಜಾಗತಿಕ ಉದ್ಯಮ-ವ್ಯವಹಾರ ನಕಾಶೆಯಲ್ಲಿ ಸ್ಥಾನ ಪಡೆದಿದೆ.
ಮಾಹಿತಿ ತಂತ್ರಜ್ಞಾನ ಹಾಗೂ ಕೈಗಾರಿಕಾ ವಲಯದಲ್ಲಿ ಅಗ್ರಸ್ಥಾನದಲ್ಲಿರುವ ಉತ್ತರಪ್ರದೇಶದ ನೋಯ್ಡಾ, ಹರಿಯಾಣದ ಗುರುಗ್ರಾಮದಂತೆ ವೈಟ್‌ಫೀಲ್ಡ್ ಕೂಡ ಜಾಗತಿಕ ಮಟ್ಟದಲ್ಲಿ ಐಟಿ ಮತ್ತು ಕೈಗಾರಿಕಾ ವಲಯವನ್ನು ಸೆಳೆಯುತ್ತಿದೆ. ಅತಿ ಹೆಚ್ಚು ಐಟಿ ಕಂಪನಿಗಳನ್ನು ಆಕರ್ಷಿಸುವ ಜೊತೆಗೆ ಪ್ರತಿಭಾವಂತ ಐಟಿ-ಬಿಟಿ ಉದ್ಯೋಗಿಗಳನ್ನು ದೇಶದ ಮೂಲೆ- ಮೂಲೆಯಿಂದ ಸೆಳೆಯುತ್ತಿದೆ.
ಅಧ್ಯಯನಗಳ ಪ್ರಕಾರ ಸಾಫ್ಟ್‌ವೇರ್ ಉದ್ಯಮದಲ್ಲಿ ಬೆಂಗಳೂರು 2035 ರ ವೇಳೆಗೆ ಶೇ.8.5 ರಷ್ಟು ಜಿಡಿಪಿ ಬೆಳವಣಿಗೆ ದರ ದಾಖಲಿಸಲಿದೆ. ಪ್ರಸ್ತುತ ವೈಟ್‌ಫೀಲ್ಡ್‌ನಲ್ಲಿ 1439 ಕ್ಕೂ ಅಧಿಕ ಐಟಿ ಕಂಪೆನಿಗಳು ಸೇರಿ 10 ಸಾವಿರ ಉದ್ಯಮಗಳಿವೆ. 4 ಲಕ್ಷಕ್ಕೂ ಅಧಿಕ ಕೌಶಲ್ಯಾಧಾರಿತ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಜಿಡಿಪಿಯಲ್ಲಿ(ಎಸ್‌ಜಿಡಿಪಿ) ಬೆಂಗಳೂರಿನ ಪಾಲು ಶೇ.43.65 ಕ್ಕಿಂತ ಹೆಚ್ಚಿದೆ. ಬೆಂಗಳೂರಿನ ಈ ಪಾಲಿನಲ್ಲಿ ಶೇ.98ರಷ್ಟು ಸಾಫ್ಟ್‌ವೇರ್ ಉತ್ಪನ್ನಗಳ ರಫ್ತಿನಿಂದಲೇ ಬರುತ್ತಿದೆ.
ಅತ್ಯುತ್ತಮ ಮೂಲ ಸೌಕರ್ಯ, ತೆರಿಗೆ ಸರಳೀಕರಣ ಹಾಗೂ ಸರ್ಕಾರದ ಉತ್ತೇಜನಕಾರಿ ನೀತಿಗಳಿಂದಾಗಿ ವಿಶ್ವದ ಹೂಡಿಕೆದಾರರು ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪಾಲಿಗೆ ವೈಟ್‌ಫೀಲ್ಡ್ ಸ್ವರ್ಗವಾಗಿದೆ. ಮೂರು ದಶಕಗಳ ಹಿಂದೆ ಏನೂ ಅಲ್ಲದ ವೈಟ್‌ಫೀಲ್ಡ್ ಈಗ ಭಾರತದ ʼಸಿಲಿಕಾನ್ ವ್ಯಾಲಿʼಯಾಗಿ ಬೆಳೆದಿದೆ.
ವೈಟ್‌ಫೀಲ್ಡ್ ಅಭಿವೃದ್ಧಿಯೇ ರೋಚಕ ಕಥನದಂತಿದೆ. ಆ ಕುರಿತ ವಿಸ್ತೃತ ವರದಿ ಇಲ್ಲಿದೆ.
ದಿಗ್ಗಜ ಐಟಿ ಕಂಪನಿಗಳು
ವಿಶ್ವದ ಶೇ.80 ರಷ್ಟು ಐಟಿ ದಿಗ್ಗಜ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯೂರಿವೆ. ಈ ಪೈಕಿ ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲೇ ಅತಿ ಹೆಚ್ಚು ಐಟಿ ಕಂಪನಿಗಳು ಶಾಖೆಗಳನ್ನು ತೆರೆದಿವೆ. ದೇಶದ ಒಟ್ಟು ಮಾಹಿತಿ ತಂತ್ರಜ್ಞಾನ ಉತ್ಪನ್ನಗಳ ರಫ್ತಿಗೆ ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಬರೋಬ್ಬರಿ ಶೇ.40 ರಷ್ಟು ಕೊಡುಗೆ ನೀಡುತ್ತಿವೆ.
ವೈಟ್‌ಫೀಲ್ ಪ್ರದೇಶ ವಾಣಿಜ್ಯ ಮತ್ತುಕೈಗಾರಿಕಾ ಒಕ್ಕೂಟದ ಅಂಕಿ- ಅಂಶಗಳ ಪ್ರಕಾರ ವೈಟ್‌ಫೀಲ್ಡ್ ಒಂದರಲ್ಲೇ 10 ಸಾವಿರ ಉದ್ಯಮಗಳಿವೆ. ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೋ, ಇಂಟೆಲ್, ಮೈಕ್ರೋಸಾಫ್ಟ್, ಒರಾಕಲ್, ಅಕ್ಸೆಂಚರ್, ಮೈಂಡ್‌ಟ್ರೀ ಸೇರಿದಂತೆ ಉತ್ಪಾದನಾ ವಲಯದ ಏರ್‌ಬಸ್, ಬಾಷ್ ಸೇರಿ ಹಲವು ಕಂಪೆನಿಗಳು ಇಲ್ಲಿ ನೆಲೆಯೂರಿವೆ.
ಅತಿ ಹೆಚ್ಚು ಬೇಡಿಕೆಯ ಪ್ರದೇಶ
ತಡೆರಹಿತ ಸಂಪರ್ಕ ವ್ಯವಸ್ಥೆ, ಮೂಲಸೌಕರ್ಯಗಳಿಂದಾಗಿ ವೈಟ್‌ಫೀಲ್ಡ್, ಗುಂಜೂರು, ಚಂದಾಪುರ ಮತ್ತು ಕೋರಮಂಗಲ ಪ್ರದೇಶಗಳು ರಿಯಲ್ ಎಸ್ಟೇಟ್ ಹಾಟ್‌ಸ್ಪಾಟ್‌ಗಳಾಗಿ ಹೊರಹೊಮ್ಮಿವೆ.
ಈ ಕುರಿತು ವೈಟ್‌ಫೀಲ್ ಪ್ರದೇಶ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟದ (WACIA) ಅಧ್ಯಕ್ಷ ಸಿಲ್ವಿಯನ್ ನರೋನ್ಹಾ ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿ, ಬೆಂಗಳೂರಿನ ಪೀಣ್ಯದಲ್ಲಿ ಉತ್ಪಾದನಾ ವಲಯದ ಕೈಗಾರಿಕೆಗಳು ನೆಲೆಯೂರಿವೆ. ಜಯನಗರ, ಮಲ್ಲೇಶ್ವರಂ ಸುತ್ತಮುತ್ತ ಕಂಪನಿ, ಕೈಗಾರಿಕೆಗಳಿಗೆ ಸ್ಥಳಾವಕಾಶದ ಕೊರತೆ ಇದೆ. ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿ ಹೇರಳವಾದ ಭೂಮಿ ಲಭ್ಯವಿದೆ. ಮೂಲ ಸೌಕರ್ಯ ಅಭಿವೃದ್ಧಿಯಿಂದ ಹೆಚ್ಚು ಕಂಪೆನಿಗಳು ವೈಟ್‌ಫೀಲ್ಡನ್ನೇ ಆಯ್ಕೆ ಮಾಡಿಕೊಳ್ಳುತ್ತಿವೆ. ವೈಟ್‌ಫೀಲ್ಡ್‌ನಲ್ಲಿ ಐಟಿಪಿಎಲ್ ಸ್ಥಾಪನೆಯಾದ ಬಳಿಕ ಸಾವಿರಾರು ಐಟಿ ಕಂಪೆನಿಗಳು ಶಾಖೆಗಳನ್ನು ಆರಂಭಿಸಿದವು ಎಂದು ತಿಳಿಸಿದರು.
ಪ್ರಸ್ತುತ ವೈಟ್‌ಫೀಲ್ಡ್ ಪ್ರದೇಶದಲ್ಲಿ ಸಂಚಾರ ದಟ್ಟಣೆ ಇದೆ. ಸರ್ಕಾರ ಈ ಭಾಗಗಳಿಗೆ ಸಂಪರ್ಕ ಕಲ್ಪಿಸುವ ನೇರಳೆ ಹಾಗೂ ನೀಲಿ ಮಾರ್ಗಗಳ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ ಮಾಡುತ್ತಿದ್ದು, ಅಭಿವೃದ್ಧಿಗೆ ಮತ್ತಷ್ಟು ಇಂಬು ನೀಡುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಕಾಡುಗೋಡಿ, ಸರ್ಜಾಪುರ, ವೈಟ್‌ಫೀಲ್ಡ್, ಕೋರಮಂಗಲ ಹಾಗೂ ಎಲೆಕ್ಟ್ರಾನಿಕ್ ಸಿಟಿ ಅತ್ಯುತ್ತಮ ಸಂಪರ್ಕ ಜಾಲ ಹೊಂದಲಿವೆ. ಆಗ ವೈಟ್‌ಫೀಲ್ಡ್‌ನ ಅಭಿವೃದ್ಧಿ ನೋಯ್ಡಾ ಹಾಗೂ ಗುರುಗ್ರಾಮವನ್ನೂ ಮೀರಿಸಲಿದೆ ಎಂದು ನರೋನ್ಹಾ ಅಭಿಪ್ರಾಯಪಟ್ಟರು.
ವೈಟ್‌ಫೀಲ್ಡ್ ವಿವಿಧ ಸಮುದಾಯ, ಸಂಸ್ಕೃತಿಗಳ ತಾಣವಾಗಿರುವ ಹಿನ್ನೆಲೆಯಲ್ಲಿ ಐಷಾರಾಮಿ ಹಾಗೂ ಗಗನಚುಂಬಿ ಕಟ್ಟಡಗಳು ತಲೆ ಎತ್ತುತ್ತಿವೆ. ಉತ್ತಮ ಜೀವನಶೈಲಿ, ಆಕರ್ಷಕ ವೇತನದಿಂದಾಗಿ ಕೌಶಲ್ಯಾಧಾರಿತ ಉದ್ಯೋಗಿಗಳು ದೇಶ-ವಿದೇಶಗಳಿಂದ ಇಲ್ಲಿಗೆ ಬರುತ್ತಿದ್ದಾರೆ ಎಂದರು.
ಸುಧಾರಿತ ಸಂಪರ್ಕ ವ್ಯವಸ್ಥೆ
ರಾಜ್ಯದ ವಿವಿಧ ನಗರಗಳು, ಬೆಂಗಳೂರಿನ ವಿವಿಧ ಭಾಗಗಳು ಹಾಗೂ ನೆರೆಯ ತಮಿಳುನಾಡಿಗೆ ವೈಟ್‌ಫೀಲ್ಡ್ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ಇತ್ತೀಚೆಗೆ ವೈಟ್‌ಫೀಲ್ಡ್‌ವರೆಗೂ ಮೆಟ್ರೋ ರೈಲು ಜಾಲ ವಿಸ್ತರಣೆ ಆಗಿರುವುದು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದೆ. ಇದಲ್ಲದೇ ಬೆಂಗಳೂರು ಉಪನಗರ ರೈಲು ಯೋಜನೆ, ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗಳ ಘೋಷಣೆ ಕೂಡ ವೈಟ್‌ಫೀಲ್ಡ್ ಅಭಿವೃದ್ಧಿಗೆ ಪೂರಕವಾಗಿದೆ.
ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆ
ವೈಟ್‌ಫೀಲ್ಡ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮವೂ ಅಭಿವೃದ್ಧಿಗೆ ಕೊಡುಗೆ ನೀಡಿದೆ. 2024 ರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಶೇ 8-10 ರಷ್ಟು ಬೆಳವಣಿಗೆ ದರ ದಾಖಲಿಸಿದೆ. 2019ಕ್ಕೆ ಹೋಲಿಸಿದರೆ ಗೃಹ ನಿರ್ಮಾಣದ ಪ್ರಗತಿ, ಬೇಡಿಕೆ ಶೇ.80 ರಷ್ಟು ಏರಿಕೆಯಾಗಿದೆ. ಐಟಿ, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಉದ್ಯಮಶೀಲ ಪರಿಸರದಿಂದಾಗಿ ವಸತಿ ಮತ್ತು ವಾಣಿಜ್ಯ ಸ್ಥಳಗಳಿಗೆ ಹೆಚ್ಚು ಬೇಡಿಕೆ ಬಂದಿದೆ.
ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯಿಂದಾಗಿ ಡೆವಲಪರ್‌ಗಳು ಹೊಸ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ವರದಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ವೈಟ್‌ಫೀಲ್ಡ್ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ಸೇರಿ 28,500 ಹೊಸ ಕಟ್ಟಡಗಳು ತಲೆ ಎತ್ತಿವೆ. ಎರಡು ವರ್ಷಗಳಲ್ಲಿ ಬಾಡಿಗೆ ದರ ಶೇ.8-10 ರಷ್ಟು ಏರಿಕೆಯಾಗಿದೆ. ಆಸ್ತಿಗಳ ಮೌಲ್ಯ ಒಂದೇ ವರ್ಷದಲ್ಲಿ ಶೇ.12.7 ರಷ್ಟು ಏರಿಕೆಯಾಗಿದೆ. ಕಾಸ್ಮೋಪಾಲಿಟನ್ ಸಂಸ್ಕೃತಿಯಿಂದ ಹೆಚ್ಚು ಕೌಶಲ್ಯಾಧರಿತ ಪ್ರತಿಭೆಗಳು ವೈಟ್‌ಫೀಲ್ಡ್ ನಲ್ಲಿ ನೆಲೆಸಿದ್ದಾರೆ.
ಅತಿ ಹೆಚ್ಚು ಸ್ಟಾರ್ಟ್‌ಅಪ್‌ಗಳು
ಬೆಂಗಳೂರು ಸ್ಟಾರ್ಟ್ಅಪ್ ಗಳ ತಾಣವಾಗಿ ಬದಲಾಗಿದೆ. 15 ಸಾವಿರ ಸ್ಟಾರ್ಟ್ ಅಪ್‌ಗಳ ಮೂಲಕ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸ್ಟಾರ್ಟ್ ಅಪ್‌ಗಳನ್ನು ಹೊಂದಿರುವ ಎರಡನೇ ನಗರವಾಗಿದೆ. ಬೆಂಗಳೂರಿನ ಬಹುಪಾಲು ಸ್ಟಾರ್ಟ್‌ಅಪ್‌ಗಳು ಎಚ್‌ಎಸ್‌ಆರ್ ಲೇಔಟ್, ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿವೆ. ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅತಿ ಹೆಚ್ಚು ಐಟಿ ಕಂಪೆನಿಗಳ ಟೆಕ್ಕಿಗಳು ಕೆಲಸದ ಸ್ಥಳದಲ್ಲಿಯೇ ತಮ್ಮೆಲ್ಲಾ ಅಗತ್ಯಗಳನ್ನು ಪೂರೈಸಿಕೊಳ್ಳಲು ಇಚ್ಛಿಸುತ್ತಾರೆ. ಹಾಗಾಗಿ ಆಹಾರ, ವ್ಯಾಪಾರ, ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗಳು ಈ ಎರಡು ಪ್ರದೇಶಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತವೆ.
ಬಹುತೇಕ ಸ್ಟಾರ್ಟ್‌ಅಪ್‌ಗಳು ಮೊದಲು ಮಾರುಕಟ್ಟೆ ವಿಸ್ತರಣೆಯತ್ತ ದೃಷ್ಟಿ ನೆಡುತ್ತವೆ. ಒಂದು ಬಾರಿ ಮಾರುಕಟ್ಟೆ ವಿಸ್ತರಣೆಯಾದರೆ ತನ್ನಿಂತಾನೇ ಲಾಭವೂ ಸಿಗಲಿದೆ. ಮಿಶ್ರ ಸಂಸ್ಕೃತಿ, ಸಮುದಾಯಗಳಿರುವ ವೈಟ್‌ಫೀಲ್ಡ್‌ನಲ್ಲಿ ಸಣ್ಣ ಪುಟ್ಟ ಅಗತ್ಯಗಳನ್ನು ಸ್ಟಾರ್ಟ್ ಅಪ್‌ಗಳು ಪೂರೈಸುತ್ತಿವೆ ಎಂದು ಮೆಡ್‌ಫಿನ್ ಬಿ2ಬಿ ಸ್ಟಾರ್ಟ್ ಅಪ್ ಮುಖ್ಯಸ್ಥ ಪ್ರಶಾಂತ್ ಲೋಬೊ ʼದ ಫೆಡರಲ್ ಕರ್ನಾಟಕʼಕ್ಕೆ ವಿವರಿಸಿದರು.
ದೇಶದ ಮೊದಲ ಐಟಿ ಪಾರ್ಕ್
ವೈಟ್‌ಫೀಲ್ಡ್‌ನಲ್ಲಿ 1994 ರಲ್ಲಿಯೇ ದೇಶದ ಮೊದಲ ಅಂತಾರಾಷ್ಟ್ರೀಯ ಟೆಕ್ ಪಾರ್ಕ್ (ITPB) ಆರಂಭವಾಯಿತು. ಇದರಿಂದ ವಿದೇಶಿ ಹೂಡಿಕೆಗೆ ಹೆಚ್ಚು ಉತ್ತೇಜನ ದೊರಕಿತು. ಭಾರತ ಮತ್ತು ಸಿಂಗಾಪುರ ಜಂಟಿ ಸಹಭಾಗಿತ್ವದ ಐಟಿಪಿಬಿ ಸ್ಥಾಪನೆಯಿಂದಾಗಿ ಇಂದು ಬೆಂಗಳೂರಿನಲ್ಲಿ 30 ಕ್ಕೂ ಹೆಚ್ಚು ಐಟಿ ಪಾರ್ಕ್‌ಗಳು ನೆಲೆಯೂರಿವೆ.
ಅದೇ ರೀತಿ 2000 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ವ್ಯಾಪಾರ ಉತ್ತೇಜನ ಸಂಸ್ಥೆ(KTPO)ಯಿಂದಾಗಿ ಕೈಗಾರಿಕೆಗಳ ಸ್ಥಾಪನೆ, ವ್ಯಾಪಾರ ಹಾಗೂ ಸಾಗರೋತ್ತರ ವ್ಯವಹಾರಗಳಿಗೆ ಪ್ರೋತ್ಸಾಹ ಸಿಕ್ಕಿದೆ.
ಎಸ್ಎಂ ಕೃಷ್ಣ, ಮೊಯಿಲಿ ಕೊಡುಗೆ ಅಪಾರ
ಬೆಂಗಳೂರನ್ನು ಸಿಂಗಪೂರ ಮಾಡುವುದಾಗಿ ಘೋಷಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ದೂರದೃಷ್ಟಿಯ ಯೋಜನೆಗಳಿಂದಾಗಿ ವೈಟ್‌ಫೀಲ್ಡ್ ಇಂದು ಬೃಹದಾಕಾರವಾಗಿ ಬೆಳೆದಿದೆ.
2004ರಲ್ಲಿ ವೈಟ್‌ಫೀಲ್ಡ್‌ನಲ್ಲಿ ಸಾಫ್ಟ್‌ವೇರ್ ಉತ್ಪನ್ನಗಳಿಗೆ ಸಾಗರೋತ್ತರ ಬೇಡಿಕೆ ಹೆಚ್ಚಿಸುವ ಸಲುವಾಗಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಆಹ್ವಾನಿಸಿದ್ದರು. ಆದರೆ, ಕೆಲ ರಾಜಕೀಯ ಒತ್ತಡಗಳಿಂದ ಕ್ಲಿಂಟನ್ ಅವರನ್ನು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹೈದರಾಬಾದಿಗೆ ಕರೆಸಿಕೊಂಡರು. ಕ್ಲಿಂಟನ್ ಬದಲಿಗೆ ಅಂದಿನ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಅವರನ್ನು ವೈಟ್‌ಫೀಲ್ಡ್‌ಗೆ ಕರೆಸಿದ್ದರು. ಜೊತೆಗೆ ವಿದೇಶಿ ಕಂಪನಿಗಳ ನಿಯೋಗ ಕೂಡ ಭೇಟಿ ನೀಡಿತ್ತು. ಇಲ್ಲಿನ ಮಾದರಿಯನ್ನು ಹಲವು ರಾಷ್ಟ್ರಗಳು ಅನುಸರಿಸಿವೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ ಜನಾರ್ಧನ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ವಿದೇಶಿ ವಿನಿಮಯ ಹೆಗ್ಗಳಿಕೆ
ಸಾಪ್ಟ್‌ವೇರ್ ಉದ್ಯಮದಲ್ಲಿ ಮೊದಲ ಬಾರಿಗೆ ವಿದೇಶಿ ವಿನಿಮಯ ದಾಖಲಿಸಿದ ಖ್ಯಾತಿ ವೈಟ್‌ಫೀಲ್ಡ್ ಗೆ ಸಲ್ಲುತ್ತದೆ. ಬೆಂಗಳೂರಿನ ಐಟಿ ಕಂಪನಿಗಳು ವಿದೇಶಿ ಕಂಪನಿಗಳಿಗೆ ನೀಡಿದ ಸೇವೆಯ ಮೂಲಕ ದೇಶದ ವಿದೇಶಿ ವಿನಿಮಯ ಗಳಿಕೆಗೆ ದೊಡ್ಡ ಕೊಡುಗೆ ನೀಡಿದವು. ದೇಶದಲ್ಲಿ ಸಾಫ್ಟ್‌ವೇರ್ ಉತ್ಪನ್ನಗಳಿಂದ ವಿದೇಶಿ ವಿನಿಮಯ ಸ್ವೀಕರಿಸಿದ ಮೊದಲ ಪ್ರದೇಶ ಎಂಬ ಐತಿಹಾಸಿಕ ಹೆಗ್ಗಳಿಕೆ ವೈಟ್‌ಫೀಲ್ಡ್‌ಗೆ ಇದೆ. ವೈಟ್‌ಫೀಲ್ಡ್ ನಂತರದಲ್ಲಿ ನೋಯ್ಡಾ, ಗುರುಗ್ರಾಮ, ಹೈದರಾಬಾದ್ ನಲ್ಲಿ ಸಾಫ್ಟ್‌ವೇರ್ ಉದ್ಯಮ ವಿದೇಶಿ ವಿನಿಮಯ ಗಳಿಕೆಯಲ್ಲಿ ಸ್ಥಾನ ಪಡೆದಿವೆ.
ವೈಟ್‌ಫೀಲ್ಡ್ ರೂಪುಗೊಂಡಿದ್ದು ಹೇಗೆ?
1782 ರಲ್ಲಿ ಅಂದಿನ ಮೈಸೂರು ಮಹಾರಾಜ ಚಾಮರಾಜ ಒಡೆಯರ್ ಅವರು ಯುರೇಷಿಯನ್ ಮತ್ತು ಆಂಗ್ಲೋ-ಇಂಡಿಯನ್ ಅಸೋಸಿಯೇಷನ್‌ಗಾಗಿ 3,900 ಎಕರೆ ಭೂಮಿ ನೀಡಿದ್ದರು. ಕೃಷಿ ಹಾಗೂ ಕೈಗಾರಿಕಾ ವಸಾಹತು ಸ್ಥಾಪನೆಗಾಗಿ ರಾಜರು ಭೂಮಿ ನೀಡಿದ್ದರು. 1882 ರಲ್ಲಿ ಯುರೇಷಿಯನ್ನರು ಹಾಗೂ ಆಂಗ್ಲೋ ಇಂಡಿಯನ್ನರ ಅಧಿಕೃತವಾಗಿ ಈ ಪ್ರದೇಶದಲ್ಲಿ ನೆಲೆ ನಿಂತರು. ಅಸೋಸಿಯೇಷನ್ ಒಕ್ಕೂಟದ ಅಧ್ಯಕ್ಷರಾಗಿದ್ದ ಡೇವಿಡ್ ಇಮ್ಯಾನುಯೆಲ್ ಸ್ಟಾರ್ಕೆನ್ಬರ್ಗ್ ವೈಟ್ ಅವರ ಹೆಸರನ್ನೇ ಆ ಪ್ರದೇಶಕ್ಕೆ ನಾಮಕರಣ ಮಾಡಲಾಗಿತ್ತು. ಕಾಲಾನಂತರ ವೈಟ್‌ಫೀಲ್ಡ್ ಆಗಿ ಬದಲಾಯಿತು.
ನೋಯ್ಡಾ ನಗರ ಹೇಗಿದೆ?
ಉತ್ತರಪ್ರದೇಶ ಹಾಗೂ ದೆಹಲಿಗೆ ಹೊಂದಿಕೊಂಡಿರುವ ನೋಯ್ಡಾ ಆಧುನಿಕ ಕೈಗಾರಿಕಾ ನಗರವಾಗಿ ಹೊರಹೊಮ್ಮಿದೆ. ಆಧುನಿಕ ನಗರ ವಿನ್ಯಾಸ, ಉತ್ತಮ ಹೆದ್ದಾರಿಗಳು, ಫ್ಲೈಓವರ್ ಹಾಗೂ ಉದ್ಯಮಶೀಲ ಪರಿಸರದಿಂದಾಗಿ ಅತಿ ಹೆಚ್ಚು ಕೈಗಾರಿಕೆಗಳು, ಮಾಹಿತಿ ತಂತ್ರಜ್ಞಾನದ ಉದ್ಯಮಗಳು ತಲೆ ಎತ್ತಿವೆ. ನೋಯ್ಡಾದಲ್ಲಿ ಅಂದಾಜು 28 ಸಾವಿರ ಕಂಪನಿಗಳಿವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಸಂಪರ್ಕ ವ್ಯವಸ್ಥೆಯಿಂದ ಆ ಪ್ರದೇಶ ಹೆಚ್ಚು ಪ್ರಗತಿ ಸಾಧಿಸಿದೆ. ಉತ್ತರಪ್ರದೇಶದ ಜಿಡಿಪಿಗೆ ನೋಯ್ಡಾ ಶೇ.10ರಷ್ಟು ಕೊಡುಗೆ ನೀಡುತ್ತಿದೆ ಎಂದರೆ ಆ ನಗರದ ವಹಿವಾಟನ್ನು ಊಹಿಸಬಹುದು.
ಗುರುಗ್ರಾಮದ ಅಭಿವೃದ್ಧಿ ಹೇಗಿದೆ?
ಭಾರತದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಹರಿಯಾಣದ ಗುರುಗ್ರಾಮ ಒಂದು. ಕೈಗಾರಿಕೆ, ರಿಯಲ್ ಎಸ್ಟೇಟ್, ಐಟಿ ಹಾಗೂ ಲಾಜಿಸ್ಟಿಕ್ಸ್ ಉದ್ಯಮಗಳು ಹೆಚ್ಚಿನ ಪ್ರಮಾಣದಲ್ಲಿವೆ.
2024 ರಲ್ಲಿ ಗುರುಗ್ರಾಮ ಶೇ.10 ರಷ್ಟು ಬೆಳವಣಿಗೆ ದರ ದಾಖಲಿಸಿದೆ. ಮುಂದಿನ ಐದು ವರ್ಷಗಳಲ್ಲಿ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆ ಸಾಧಿಸಿದ ನಗರವಾಗಿ ಹೊರಹೊಮ್ಮಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಸಿಬಿಆರ್‌ಇ ಇಂಡಿಯಾ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಔಟ್ಲುಕ್ ಅಂಕಿ- ಅಂಶಗಳ ಪ್ರಕಾರ ಗುರುಗ್ರಾಮದಲ್ಲಿ ವಸತಿ ನಿರ್ಮಾಣ ಕ್ಷೇತ್ರ ಶೇ.15-20 ರಷ್ಟು ಪ್ರಗತಿ ಸಾಧಿಸಿದೆ.