
ಜೆಡಿಎಸ್ ಎಲ್ಲಿದೆ? ಜೆಡಿಎಸ್‌ಗೆ ಕುಮಾರಸ್ವಾಮಿಯವರೇ ಮುಕ್ತಿ ಕೊಟ್ಟಿದ್ದಾರೆ: ಡಿಕೆಶಿ
ಸರ್ಕಾರವನ್ನು ಒಂದು ಜಾತಿಗೆ ಸೀಮಿತವಾಗಿಸುತ್ತಿರುವುದೇಕೆ ಎಂದು ಕೇಳಿದಾಗ, "ನೀವು ನಾವು ಬೇಡ ಎಂದರೂ ಜಾತಿ ನಮ್ಮನ್ನು ಬಿಡುವುದಿಲ್ಲ. ನಾವು ಅರ್ಜಿ ಹಾಕಿ ಹುಟ್ಟದಿದ್ದರೂ ನಾವು ಸಾಯುವಾಗ ಧರ್ಮ, ಜಾತಿ ಬಂದೇ ಬರುತ್ತದೆ. ಧರ್ಮ ಬೇಡ ಎಂದರೂ ನಾಮಕರಣ ಹಾಗೂ ವಿವಿಧ ಕಾರ್ಯಗಳಲ್ಲಿ ಧರ್ಮ ಅಡಗಿದೆ" ಎಂದರು.
ʻʻರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ? ಜೆಡಿಎಸ್‌ಗೆ ಕುಮಾರಸ್ವಾಮಿ ಅವರೇ ಮುಕ್ತಿ ಕೊಟ್ಟಿದ್ದಾರೆ. ಜೆಡಿಎಸ್ ಇರಬೇಕು ಎಂಬ ಆಸೆ ನನಗಿದೆ. ಆದರೆ ಅಳಿಯನನ್ನೇ ಬಿಜೆಪಿಗೆ ಕಳುಹಿಸಿ ಜೆಡಿಎಸ್ ವಿಸರ್ಜನೆ ಮಾಡುವ ಸ್ಥಿತಿಗೆ ಹೋಗಿದ್ದಾರೆʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಸದಾಶಿವನಗರ ನಿವಾಸದಲ್ಲಿ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಮತಗಳು ಕೇವಲ ಶೇ.5ರಷ್ಟು ಮಾತ್ರ ಕಾಂಗ್ರೆಸ್ ಕಡೆ ವಾಲಿದ್ದವು. ಆದರೆ, ಈ ಬಾರಿ ಒಕ್ಕಲಿಗರು ಯಾರನ್ನು ಬೆಂಬಲಿಸಲಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻಒಕ್ಕಲಿಗರಾಗಲಿ, ಬೇರೆ ಸಮುದಾಯದವರಾಗಲಿ ಯಾರೂ ದಡ್ಡರಲ್ಲ. ತಮಗೆ ಯಾರು ಅನುಕೂಲ ಮಾಡಿಕೊಡಲಿದ್ದಾರೆ ಹಾಗೂ ದೇಶಕ್ಕೆ ಯಾರು ಸೂಕ್ತ ಎಂದು ನೋಡುತ್ತಾರೆ. ತಮಗೆ, ರಾಜ್ಯಕ್ಕೆ, ದೇಶಕ್ಕೆ ಯಾರು ಉತ್ತಮರು ಎಂದು ಜನ ಆಲೋಚನೆ ಮಾಡುತ್ತಾರೆ. ಜನ ಅವರ ಬದುಕು ನೋಡುತ್ತಾರೆ ಹೊರತು, ಭಾವನೆ ನೋಡುವುದಿಲ್ಲʼʼ ಎಂದು ಉತ್ತರಿಸಿದರು.
ಒಕ್ಕಲಿಗ ಸರ್ಕಾರ ಬೀಳಿಸಿದ ವಿಚಾರವಾಗಿ ಸ್ವಾಮೀಜಿ ಉತ್ತರ ಕೊಡಬೇಕು ಎಂಬ ಹೇಳಿಕೆ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ʻʻಈ ವಿಚಾರವಾಗಿ ಸ್ವಾಮೀಜಿಗಳು ಉತ್ತರ ನೀಡಬೇಕು ಎಂದು ನಾನು ಕೇಳಿಲ್ಲ. ಕುಮಾರಸ್ವಾಮಿ ಹಾಗೂ ಕೆಲವು ಮಂತ್ರಿಗಳು ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರು ವಾಪಸ್ ಬರುವ ವೇಳೆಗೆ ಆಪರೇಷನ್ ಕಮಲ ನಡೆದಿತ್ತು. ಸ್ವಾಮೀಜಿಗಳಿಗೂ ಒಕ್ಕಲಿಗ ವ್ಯಕ್ತಿ ಸಿಎಂ ಆಗಿರುವ ಬಗ್ಗೆ ಅಭಿಮಾನ ಇರುತ್ತದೆ. ಆದರೆ ಈಗ ಒಕ್ಕಲಿಗ ಸಿಎಂಅನ್ನು ತೆಗೆದವರನ್ನೇ ಜತೆಗೆ ಕರೆದುಕೊಂಡು ಹೋದರೆ ಹೇಗೆ?ʼʼ ಎಂದು ಪ್ರಶ್ನಿಸಿದರು.
ಸ್ವಾಮೀಜಿಗಳು ಕೃಷ್ಣನಂತೆ ಅವರು ಪಾಂಡವರಂತೆ ಇರುವ ಜೆಡಿಎಸ್ ಪರವಾಗಿ ನಿಲ್ಲಲಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ʻʻಜೆಡಿಎಸ್ ಎಲ್ಲಿದೆ? ಜೆಡಿಎಸ್ ಗೆ ಅವರೇ ಮುಕ್ತಿ ಕೊಟ್ಟಿದ್ದಾರೆ. ಜೆಡಿಎಸ್ ಇರಬೇಕು ಎಂಬ ಆಸೆ ನನಗಿದೆ. ಆದರೆ ಅಳಿಯನನ್ನೇ ಬಿಜೆಪಿಗೆ ಕಳುಹಿಸಿ ಜೆಡಿಎಸ್ ವಿಸರ್ಜನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ನಾವು ಹಿಂದೆ ಒಂದು ತಪ್ಪು ಮಾಡಿದ್ದೆವು. ಆದರೆ ಈಗ ಅದಕ್ಕಿಂತ ದೊಡ್ಡ ತಪ್ಪು ಜೆಡಿಎಸ್ ನವರು ಮಾಡಿದ್ದಾರೆ” ಎಂದು ಲೇವಡಿ ಮಾಡಿದರು.
ಸ್ವಾಮೀಜಿಗಳ ಆಶೀರ್ವಾದ ಎಲ್ಲರಿಗೂ ಬೇಕು. ಹೀಗಾಗಿ ಚೆಲುವರಾಯಸ್ವಾಮಿ ಅವರು ನಮ್ಮ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿದ್ದರು. ಅದೇ ರೀತಿ ಇವರು ಕೂಡ ಆಶೀರ್ವಾದ ಪಡೆಯಲು ಹೋಗಿದ್ದಾರೆ. ಕುಮಾರಸ್ವಾಮಿ, ಮಂಜುನಾಥ್ ಅವರು ಸ್ವಾಮೀಜಿಗಳ ಆಶೀರ್ವಾದ ಕೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ ಸರ್ಕಾರ ತೆಗೆದವರನ್ನೇ ಜತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಅವರು ಸಮಾಜಕ್ಕೆ ಏನು ಉತ್ತರ ನೀಡುತ್ತಾರೆ ಎಂದಷ್ಟೇ ನಾನು ಕೇಳಿದೆ ಎಂದು ತಿಳಿಸಿದರು.
ಸರ್ಕಾರವನ್ನು ಒಂದು ಜಾತಿಗೆ ಸೀಮಿತವಾಗಿಸುತ್ತಿರುವುದೇಕೆ ಎಂದು ಕೇಳಿದಾಗ, "ನೀವು ನಾವು ಬೇಡ ಎಂದರೂ ಜಾತಿ ನಮ್ಮನ್ನು ಬಿಡುವುದಿಲ್ಲ. ನಾವು ಅರ್ಜಿ ಹಾಕಿ ಹುಟ್ಟದಿದ್ದರೂ ನಾವು ಸಾಯುವಾಗ ಧರ್ಮ, ಜಾತಿ ಬಂದೇ ಬರುತ್ತದೆ. ಧರ್ಮ ಬೇಡ ಎಂದರೂ ನಾಮಕರಣ ಹಾಗೂ ವಿವಿಧ ಕಾರ್ಯಗಳಲ್ಲಿ ಧರ್ಮ ಅಡಗಿದೆ" ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ನಂಬಿಕಸ್ಥ ನಾಯಕರಿಲ್ಲ ಹೀಗಾಗಿ ರಾಹುಲ್ ಗಾಂಧಿ ಹೆಸರಲ್ಲಿ ಮತ ಕೇಳುತ್ತಿಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಮೋದಿ ಅವರು ತಮ್ಮ ಹೆಸರೇಳಿ ಮತ ಕೇಳಲಿಲ್ಲ. ಶಿವಮೊಗ್ಗಕ್ಕೆ ಬಂದಿದ್ದ ಅವರು ಅಭ್ಯರ್ಥಿ ರಾಘವೇಂದ್ರ ಅವರಿಗೆ ಮತ ಕೊಡಿ ಎಂದು ಕೇಳಿದರೇ ಹೊರತು ತಮಗೆ ಕೊಡಿ ಎಂದು ಕೇಳಲೇ ಇಲ್ಲ. ಮೋದಿ ಅವರಿಗೆ ತಮ್ಮ ಮೇಲೆ ವಿಶ್ವಾಸವಿಲ್ಲ. ನಿಮಗೇನಾದರೂ ಅವರ ಪರವಾದ ಅಲೆ ಕಾಣುತ್ತಿದೆಯೇ?" ಎಂದು ಕೇಳಿದರು.
ಹೆಚ್ಎಎಲ್ ಮುಚ್ಚಲಾಗುತ್ತದೆ ಎಂದಿದ್ದ ರಾಹುಲ್ ಗಾಂಧಿ ಅವರಿಂದ ಡಿ.ಕೆ. ಶಿವಕುಮಾರ್ ಅವರು ಕ್ಷಮೆ ಕೇಳಿಸುತ್ತಾರಾ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಯಡಿಯೂರಪ್ಪ ಅವರು ವಿಷಯಾಂತರ ಮಾಡುವುದು ಬೇಡ. ಯಡಿಯೂರಪ್ಪ ಅವರು ಬರ ಪರಿಹಾರ ವಿಚಾರವಾಗಿ ನಿರ್ಮಲಾ ಸೀತರಾಮನ್ ಅವರ ಹೇಳಿಕೆ, ನಮ್ಮ ಬೇಡಿಕೆ, ನರೇಗಾ ಯೋಜನೆಯಲ್ಲಿ ಕೂಲಿ ದಿನಗಳ ಸಂಖ್ಯೆ ಹೆಚ್ಚಳ ಹಾಗೂ ನಮ್ಮ ತೆರಿಗೆ ಪಾಲಿನ ಬಗ್ಗೆ ಮಾತನಾಡಲಿ. ಹಾಗೂ ಯಡಿಯೂರಪ್ಪ ಅವರು ಯಾಕೆ ಕಣ್ಣೀರು ಹಾಕಿದರು” ಎಂದು ಹೇಳಿದರು.
ಕಾಂಗ್ರೆಸ್ ಗೆ ಹಾಕುವ ಮತ ಭಯೋತ್ಪಾದನೆಗೆ ಹಾಕುವ ಮತ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಚುನಾವಣಾ ಆಯೋಗ ಅದಕ್ಕೆ ಉತ್ತರ ನೀಡಲಿದೆ” ಎಂದು ತಿಳಿಸಿದರು.