ಸಿಎಂ-ಡಿಸಿಎಂ ವಿವಾದ | ಸನ್ನಿವೇಶ ನೋಡಿಕೊಂಡು ಸಿಎಂ ಸ್ಥಾನಕ್ಕೆ ಕ್ಲೇಮ್ ಮಾಡುತ್ತೇನೆ: ಸತೀಶ್ ಜಾರಕಿಹೊಳಿ
x

ಸಿಎಂ-ಡಿಸಿಎಂ ವಿವಾದ | ಸನ್ನಿವೇಶ ನೋಡಿಕೊಂಡು ಸಿಎಂ ಸ್ಥಾನಕ್ಕೆ ಕ್ಲೇಮ್ ಮಾಡುತ್ತೇನೆ: ಸತೀಶ್ ಜಾರಕಿಹೊಳಿ


ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾವಣೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರ ಮುಗಿದು ಹೋಗಿರುವ ಅಧ್ಯಾಯ. 2028ರ ಚುನಾವಣೆ ಬಳಿಕ ಪರಿಸ್ಥಿತಿ, ಸನ್ನಿವೇಶ ನೋಡಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕ್ಲೇಮ್ ಮಾಡುತ್ತೇನೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻʻಮುಖ್ಯಮಂತ್ರಿ ಬದಲಾವಣೆ ವಿಚಾರ ಈಗಾಗಲೇ ಎಲ್ಲರೂ ಮಾತನಾಡಿದ್ದಾರೆ. ಅದು ಮುಗಿದು ಹೋಗಿದೆ. ಅದನ್ನೇ ಪುನರಾವರ್ತನೆ ಮಾಡುವುದು ಅವಶ್ಯಕತೆ ಇಲ್ಲ. ದೆಹಲಿ, ಬೆಂಗಳೂರಲ್ಲೂ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಆದರೂ, ದಿನವೂ ಅದನ್ನೇ ಮುಂದುವರಿಸುವುದು ಅಗತ್ಯವಿಲ್ಲ. ಚರ್ಚಿಸಲು ಬೇರೆ-ಬೇರೆ ವಿಚಾರಗಳು ಇವೆʼʼ ಎಂದರು.

ʻʻಸಿಎಂ ಬದಲಾವಣೆಯು ಮುಗಿದು ಹೋದ ಅಧ್ಯಾಯ, ಅದನ್ನು ರಸ್ತೆಯಲ್ಲಿ ಚರ್ಚೆ ಮಾಡಲು ಆಗಲ್ಲ. ನಮ್ಮದು ಹೈಕಮಾಂಡ್​ ಇರುವ ಪಕ್ಷ, ಪಕ್ಷದ ವರಿಷ್ಠರು, ಶಾಸಕಾಂಗ ಪಕ್ಷ ಇದೆ, ಅಲ್ಲಿಯೇ ಚರ್ಚೆ ಆಗಬೇಕು. ಅಲ್ಲಿಯೇ ತೀರ್ಮಾನವಾಗಬೇಕು.. ಯಾರೋ ಏನೋ ಹೇಳುತ್ತಾರೆ ಅಂದರೆ ಅದು ಆಗಲ್ಲ, ಹೊರಗಡೆ ಯಾವುದೋ ಸಭೆ, ಸಮಾರಂಭಗಳಲ್ಲಿ, ನಾನು ವೈಯಕ್ತಿಕವಾಗಿ ಹೇಳಿದರೆ, ಅದಕ್ಕೆ ಮಹತ್ವ ಇರುವುದಿಲ್ಲʼʼ ಎಂದು ಹೇಳಿದರು.

ದಲಿತ ಸಿಎಂ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ʻʻನೀವು ಹೀಗೆ ಏನೇನೋ ಕೇಳಿಕೊಳ್ಳುತ್ತಾ ಹೋದರೆ, ಅದಕ್ಕೆಲ್ಲ ಹೇಳಲು ಆಗಲ್ಲ. ಇದು ವರಿಷ್ಠರು, ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಬಳಿ ಕೇಳುವ ಪ್ರಶ್ನೆ, ನನಗಲ್ಲ. ನಮ್ಮದು ಹೊಸ ಅಭಿವೃದ್ಧಿ, ಕೆಲಸ ಮಾಡುವುದು, ಇಂತಹ ವಿಚಾರಕ್ಕೆ ಮಾತ್ರ ನಾವು ಸೀಮಿತʼʼ ಎಂದು ತಿಳಿಸಿದರು.

ಡಿಸಿಎಂ ಹುದ್ದೆ ಹೆಚ್ಚಳದ ಬೇಡಿಕೆ ವಿಚಾರವಾಗಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʻʻಇದು ಕೂಡ ಮುಗಿದು ಹೋದ ಅಧ್ಯಾಯ. ವರಿಷ್ಠರೇ ಇದರ ತೀರ್ಮಾನ ಮಾಡಬೇಕು. ನಾವು ತೀರ್ಮಾನ ಮಾಡಲು ಆಗಲ್ಲ. ನಾವು ಹೇಳಲು ಆಗಲ್ಲ. ಚುನಾವಣೆ ಮುಂಚೆ ಆ ಕೂಗು ಇತ್ತು, ಈಗ ಅದು ಮುಗಿದುಹೋದ ವಿಚಾರʼʼ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Read More
Next Story