
ಪ್ರಜ್ವಲ್ ರೇವಣ್ಣ ಆಗಮನ; ಎಚ್‌ಡಿಕೆ ಕುಟುಂಬ ವಿಶ್ರಾಂತಿ
ಲೈಂಗಿಕ ಹಗರಣದ ಆರೋಪಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ವಿಮಾನ ಹತ್ತಿ ಬೆಂಗಳೂರಿಗೆ ಬರುವುದು ಬಹುತೇಕ ಖಚಿತವಾಗುತ್ತಿದೆ. ಈ ನಡುವೆ ಪೆನ್‌ಡ್ರೈವ್‌ಗಳನ್ನು ಹಂಚಿರುವ ಹಿಂದೆ ಕಾಂಗ್ರೆಸ್ ಕೈವಾಡ ಇದೆಯೆಂದು ಪ್ರಬಲ ಆರೋಪ ಮಾಡಿ ಜೆಡಿಎಸ್ ಪಕ್ಷದ ಪರ ಬ್ಯಾಟ್ ಬೀಸಿದ್ದ ಪ್ರಜ್ವಲ್ ಚಿಕ್ಕಪ್ಪ ಎಚ್.ಡಿ. ಕುಮಾರಸ್ವಾಮಿ ಸಕುಟುಂಬಿಕರಾಗಿ ತಮ್ಮ ರಾಮನಗರದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಜೂನ್ ನಾಲ್ಕರವರೆಗೆ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ.
ಪ್ರಜ್ವಲ್ ಬಹುತೇಕ ಬೆಂಗಳೂರಿಗೆ ಶುಕ್ರವಾರ ಮುಂಜಾವದ ಹೊತ್ತಿಗೆ ಬಂದು ಎಸ್‌ಐಟಿ ಪೊಲೀಸರಿಗೆ ಶರಣಾಗುವ ಸಾಧ್ಯತೆ ಇದ್ದು, ಆತನ ಪರವಾಗಿ ಅಲ್ಲದಿದ್ದರೂ ಪಕ್ಷದ ಪರವಾಗಿ ದಿನಂಪ್ರತಿ ಟೀಕಾ ಪ್ರಹಾರ ನಡೆಸಿ ಕುಟುಂಬದ ಪರ ನಿಂತಿದ್ದ ಕುಮಾರಸ್ವಾಮಿ ಅವರು ವಿಶ್ರಾಂತಿಗಾಗಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ಮತ್ತು ಮೊಮ್ಮಗುವಿನೊಂದಿಗೆ ವಿಶ್ರಾಂತಿಗೆ ನಿರ್ಧರಿಸಿದ್ದು, ಮೂರ್ನಾಲ್ಕು ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ಬಂದಿದ್ದೇ ಆದಲ್ಲಿ ಆತನ ಬಂಧನ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಬೆಳವಣಿಗೆಗಳಿರುತ್ತವೆ ಹಾಗೂ ಆ ಸಂದರ್ಭದಲ್ಲಿ ತಾವು ಸಾರ್ವಜನಿಕವಾಗಿ ಕಾಣಿಸಿಕೊಂಡು ಹೇಳಿಕೆಗಳನ್ನು ನೀಡುವುದು ಸಮಂಜಸವಾಗುವುದಿಲ್ಲ. ಹಾಗಾಗಿ ಚುನಾವಣೆ ಫಲಿತಾಂಶದ ದಿನದವರೆಗೆ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಜೂ.೧ರಂದು ಚುನಾವಣೆಗಳು ಮುಗಿದು ಚುನಾವಣಾ ಸಮೀಕ್ಷೆಗಳು ಪ್ರಕಟವಾಗುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಜ್ವಲ್ ಬಂಧನದ ಬಳಿಕ ಆ ಬಗ್ಗೆ ತಾವು ಹೇಳಿಕೆಗಳನ್ನು ನೀಡಿ ಮುಜುಗರಕ್ಕೆ ಸಿಲುಕದೆ ಇರುವ ಯೋಚನೆಯೂ ಇದೆ ಎನ್ನಲಾಗಿದೆ.