ಬಿಎಸ್‌ವೈ ಪೋಕ್ಸೋ ಪ್ರಕರಣ | ನಮ್ಮ ಮೇಲೆ ಕೇಸ್ ಹಾಕಿರುವುದನ್ನು ಏನೆಂದು ಕರೆಯಬೇಕು?: ಸಿದ್ದರಾಮಯ್ಯ ಪ್ರಶ್ನೆ
x

ಬಿಎಸ್‌ವೈ ಪೋಕ್ಸೋ ಪ್ರಕರಣ | ನಮ್ಮ ಮೇಲೆ ಕೇಸ್ ಹಾಕಿರುವುದನ್ನು ಏನೆಂದು ಕರೆಯಬೇಕು?: ಸಿದ್ದರಾಮಯ್ಯ ಪ್ರಶ್ನೆ


ʻʻನಮ್ಮ ಮೇಲೆ, ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಅವರ ಮೇಲೆ ಕೇಸ್‌ ಹಾಕಿರುವುದನ್ನು ಏನೆಂದು ಕರೆಯಬೇಕು? ರಾಹುಲ್ ಗಾಂಧಿ(Rahul Gandhi) ಅವರ ಸಂಸದ ಸ್ಥಾನವನ್ನೇ ರದ್ದುಗೊಳಿಸಿದ್ದನ್ನು ಏನೆಂದು ಕರೆಯುವುದು?ʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

ʻದೇವೇಗೌಡರ ಕುಟುಂಬದ ನಂತರ ಯಡಿಯೂರಪ್ಪ ಅವರ ಕುಟುಂಬವನ್ನು ಗುರಿಮಾಡಲಾಗಿದೆʼ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರನ್ನು ಉದೇಶಿಸಿ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ʻʻನಮ್ಮ ಮೇಲೆ, ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಅವರ ಮೇಲೆ ಕೇಸು ಹಾಕಿರುವುದನ್ನು ಏನೆಂದು ಕರೆಯಬೇಕು? ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನೇ ರದ್ದುಗೊಳಿಸಿದ್ದನ್ನು ಏನೆಂದು ಕರೆಯುವುದು? ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಲಿಸಿದ್ದನ್ನು ಏನೆಂದು ಕರೆಯಬೇಕು? ದ್ವೇಷದ ರಾಜಕಾರಣವೋ, ಇಲ್ಲ ಪ್ರೀತಿಯ ರಾಜಕಾರಣವೋ?" ಎಂದು ಪ್ರಶ್ನೆ ಮಾಡಿದ್ದಾರೆ.

"ಸೇಡಿನ ರಾಜಕಾರಣ ಮಾಡುವುದು ಅವರು. ನಾವು ಯಾವತ್ತೂ ಸೇಡಿನ ರಾಜಕಾರಣ ಮಾಡುವುದಿಲ್ಲʼʼ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ʻʻದ್ವೇಷದ ರಾಜಕಾರಣವನ್ನು ನಾನು ಇಂದಿನವರೆಗೆ ಯಾರ ಮೇಲೂ ಮಾಡಿಲ್ಲ. ನಾನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದಿಲ್ಲ. ದ್ವೇಷದ ರಾಜಕಾರಣವೇನಿದ್ದರೂ ಬಿಜೆಪಿಯವರ ಕೆಲಸʼʼ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ವಿರುದ್ಧ ಹದಿನೇಳು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ದಾಖಲಾಗಿರುವ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ವಾರೆಂಟ್‌ ಜಾರಿ ಮಾಡಲಾಗಿತ್ತು. ಈ ವಿಚಾರವಾಗಿ ಮಾತನಾಡಿದ್ದ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ(H D Kumaraswamy), ʻʻದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಬೇಕು ಎನ್ನುವ ಷಡ್ಯಂತ್ರ ಆಯಿತು. ಈಗ ಯಡಿಯೂರಪ್ಪ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ ಆರಂಭವಾಗಿದೆʼʼ ಎಂದು ಕಿಡಿಕಾರಿದ್ದರು.

ʻʻ82 ವರ್ಷದ ಯಡಿಯೂರಪ್ಪ ಅವರ ಮೇಲೆ ಕಾಂಗ್ರೆಸ್‌ ಸೇಡಿನ ರಾಜಕಾರಣ ಮಾಡುತ್ತಿದೆ. ರಾಜ್ಯದ ರೈತ ನಾಯಕ ಯಡಿಯೂರಪ್ಪ ಅವರ ಮೇಲೆ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಅವರನ್ನು ಜೈಲಿಗೆ ಕಳಿಸಲೇಬೇಕು ಎಂಬಂತೆ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ಅವರ ಪ್ರಯತ್ನ ಫಲಪ್ರದ ಆಗುವುದಿಲ್ಲʼʼ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದರು.

Read More
Next Story