Namma Metro Fare Hike| ಮೆಟ್ರೋ ದರ ಕಡಿತಕ್ಕೆ ಸಿ.ಎಂ ಸೂಚನೆ: ನೆಟ್ಟಿಗರು ಹೇಳುವುದೇನು?
x
ನಮ್ಮ ಮಟ್ರೋ

Namma Metro Fare Hike| ಮೆಟ್ರೋ ದರ ಕಡಿತಕ್ಕೆ ಸಿ.ಎಂ ಸೂಚನೆ: ನೆಟ್ಟಿಗರು ಹೇಳುವುದೇನು?

ಜನರು ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರ ಕೊಟ್ಟಿರುವುದು ಜನರ ಸೇವೆ ಮಾಡೋಕೆ ಬ್ಯುಸಿನೆಸ್ ಮಾಡೋಕೆ ಅಲ್ಲ; ಲಾಸ್ ಆಯ್ತು ಅಂತ ದರ ಏರಿಕೆ ಮಾಡೋಕೆ ಇದು ವ್ಯಾಪಾರ ಅಲ್ಲ ಎಂದು ನೆಟ್ಟಿಗರು ಮೆಟ್ರೋ ದರ ಏರಿಕೆಯ ವಿರುದ್ಧ ಕಿಡಿಕಾರಿದ್ದಾರೆ


ನಮ್ಮ ಮೆಟ್ರೋ ಪ್ರಯಾಣ ದರವನ್ನು ಏಕಾಏಕಿ ಶೇ.40ರಿಂದ ಶೇ.100ರಷ್ಟು ಏರಿಕೆ ಮಾಡಿ, ಬಡ ಮತ್ತು ಮದ್ಯಮ ವರ್ಗಗಳ ಜನರ ಜೇಬಿಗೆ ಕತ್ತರಿ ಹಾಕಿರುವ ಬಿಎಂಆರ್‌ಸಿಎಲ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಬೆಲೆ ಏರಿಕೆಗೆ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಎರಡೂ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಕೂಡ ತಾರಕಕ್ಕೇರಿದೆ.

ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ದರ ಏರಿಕೆಗೆ ನೇರವಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ ವಿನಃ ರಾಜ್ಯ ಸರ್ಕಾರವಲ್ಲ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಿಎಂಆರ್‌ಸಿಎಲ್ ದರ ಹೆಚ್ಚಳ ಮಾಡಿದೆ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ವೊಂದು ನೆಟ್ಟಿಗರ ಆಕ್ರೋಶ, ವ್ಯಂಗ್ಯಕ್ಕೆ ಆಹಾರವಾಗಿದೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಸಿಎಂ, "ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ" ಎಂದಿದ್ದಾರೆ.

"ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ" ಎಂದು ಸಿಎಂ ತಿಳಿಸಿದ್ದಾರೆ.

ಎಲ್ಲ ವಿಷಯದಲ್ಲೂ ರಾಜಕೀಯ ಮಾಡುವುದು ಬಿಡಿ

ಸಿದ್ದರಾಮಯ್ಯ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಮೊದಲು ಮೆಟ್ರೋ ಪ್ರಯಾಣದ ದರ ಹೆಚ್ಚಳಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದ ಸಿಎಂ, ಇದೀಗ ದರ ಕಡಿತಕ್ಕೆ ಸೂಚಿಸಿದ್ದೇನೆ ಎಂದು ಹೇಳಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

"ಮೊನ್ನೆ ಏನೋ ದರ ನಿಯಂತ್ರಣ ನಮ್ಮ ಕೈಲಿ ಇಲ್ಲ. ದರ ಏರಿಕೆ ಕೇಂದ್ರ ಸರ್ಕಾರದ ನಿರ್ಧಾರ ಅಂದಿದ್ರಿ.. ಈಗ ಹೇಗೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಹತ್ತಿರ ಮಾತನಾಡಿ ದರ ಕಡಿಮೆ ಮಾಡೋಕೆ ಹೇಳಿದ್ರಿ.."‌ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ.

"ಮೊಸರು ತಿಂದು ಮೇಕೆ ಬಾಯಿಗೆ ಒರೆಸುವ ಕೆಲಸ ಮೊದಲು ಬಿಡಿ. ಜನಸಾಮಾನ್ಯರು ಪ್ರಶ್ನಿಸಿದಾಗ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡಿ ನುಣುಚಿಕೊಳ್ಳವುದು ಬಿಟ್ಟು ಸರಿಯಾಗಿ ಸ್ಪಂದಿಸಿ. ಎಲ್ಲ ವಿಷಯದಲ್ಲೂ ರಾಜಕೀಯ ಮಾಡುವುದು ಬಿಡಿ. ಈಗ ಜನರಾರು ಮೂರ್ಖರಲ್ಲ" ಎಂದು ಮತ್ತೊಬ್ಬರು ಸಿ.ಎಂ ಪೋಸ್ಟ್‌ಗೆ ಕಮೆಂಟ್‌ ಮಾಡಿದ್ದಾರೆ.

ಅಧಿಕಾರ ಕೊಟ್ಟಿರುವುದು ವ್ಯವಹಾರ ಮಾಡಲು ಅಲ್ಲ

ಜನರು ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರ ಕೊಟ್ಟಿರುವುದು ಜನರ ಸೇವೆ ಮಾಡೋಕೆ ಬ್ಯುಸಿನೆಸ್ ಮಾಡೋಕೆ ಅಲ್ಲ. ಲಾಸ್ ಆಯ್ತು ಅಂತ ದರ ಏರಿಕೆ ಮಾಡೋಕೆ ಇದು ವ್ಯಾಪಾರ ಅಲ್ಲ ಎಂದು ಇನ್ನೊಬ್ಬ ಮೆಟ್ರೋ ಪ್ರಯಾಣಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೆಟ್ರೋ ದರ ಏರಿಕೆಯ ವಿಷಯದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿವಾಲಗಳು ಬೇಳೆ ಬೇಯಿಸಿಕೊಳ್ಳಲು ಬಿಡಬೇಡಿ

"ಸಿಎಂ ಸಾಹೇಬ್ರೇ 35ರೂ. ಇದ್ದದ್ದನ್ನು ಈಗ 40 ಮಾಡಿ, ಮುಂದಿನ ವರ್ಷ ಮತ್ತೇ 5 ರು ಹೆಚ್ಚಿಸಿ 45ರೂ ಮಾಡಿದರೆ ಯಾರಿಗೂ ಅಷ್ಟೊಂದು ಹೊರೆ ಆಗಲ್ಲ. ಅದನ್ನು ಬಿಟ್ಟು 35 ಅನ್ನು 60 ರೂ ಮಾಡಿದರೆ ಅದು ಹೇಗೆ ಜನಸಾಮಾನ್ಯರು ಜೀವಿಸಬಹುದು. ದಯವಿಟ್ಟು ಪರಸ್ಪರ ಗೂಬೆ ಕೂರಿಸುವುದನ್ನು ಬಿಟ್ಟು ತಕ್ಷಣವೇ 10- 15% ಅಷ್ಟು ಮಾತ್ರ ಜಾಸ್ತಿ ಮಾಡಿ ಆದೇಶಿಸಿ, ಕೇಂದ್ರಕ್ಕೆ ನಾವು ಕಟ್ಟೋ ತೆರಿಗೆ ಹಣದ ಪಾಲನ್ನು ಜಾಡಿಸಿ ಹೊದ್ದು ತಗೊಂಡು ಬನ್ನಿ, ನಮ್ಮ ತೆರಿಗೆ ಹಣದಲ್ಲಿ ಹಿಂದಿವಾಲಗಳು ಬೇಳೆ ಬೇಯಿಸಿಕೊಳ್ಳೋಕೆ ಬಿಡಬೇಡಿ" ಎಂದು ಶಿವು ಬೂಪೂರು ಎಂಬವರು ಸಿಎಂ ಪೋಸ್ಟಿಗೆ ಪ್ರತಿಕ್ರಿಯಿಸಿದ್ದಾರೆ.

ಎಲ್ಲ ಕಡೆ ಅಸಹಜ ದರ

"ಎಲ್ಲ ಕಡೆ ಅಸಹಜ ದರವೇ ಆಗಿರೋದು , ಹಾ... ಮತ್ತೆ ಅವೈಜ್ಞಾನಿಕ / ಅನುಚಿತ / ಅಸಹಜ ಉಚಿತ ಬಸ್ ಸೇವೆ ಮೊದಲು ನಿಲ್ಲಿಸಿ , ಅದರಲ್ಲೂ ಸಹ ಕಡಿಮೆ ಮಾಡಿ... ಎಲ್ಲರಿಗೂ ಒಂದೇ ದರ ನಿಗದಿ ಮಾಡೋ ಕಡೆ ಗಮನ ಕೊಡೋದು ಕೂಡ ಒಳ್ಳೆಯದು .. ಈಗ ಮಾಡ್ತಿರೋ ಡ್ರಾಮಾ ಕೂಡ ನಿಲ್ಲಿಸಿ ಸ್ವಾಮಿ...

#nammametro ಸರಿಯಾಗಿ ಇಟ್ರೋ" ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಇನ್ನೊಬ್ಬ ನೆಟ್ಟಿಗ.

ರಾಜಕಾರಣಿಯ ಆಸ್ತಿಯಲ್ಲ

"ಮೆಟ್ರೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಇಂಡಿಯನ್ ರೇಲ್ವೆಗಳು ಸಾರ್ವಜನಿಕರ ಆಸ್ತಿ. ಯಾವ ರಾಜಕಾರಣಿಯ ಆಸ್ತಿಯಲ್ಲ. ನಿಮ್ಮನ್ನು ಆರಿಸಿ ಕಳಿಸಿರೋದು ಅವುಗಳ ನಿರ್ವಹಣೆ ಮಾಡ್ಲಿ ಅಂತ ಅಷ್ಟೆ... ಕೇಂದ್ರ ರಾಜ್ಯ ಅನ್ನೋ ಡೌ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ದರ ನಿಗದಿ ಮಾಡಿ.. ಇಲ್ಲ ಅಂದ್ರೆ ಶ್ರೀಲಂಕಾ, ಬಾಂಗ್ಲಾ ರಾಜಕಾರಣಿಗಳ ಪರಿಸ್ಥಿತಿ ನಿಮಗೂ ಬರುತ್ತೆ!" ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ದೇಶದ 17 ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಿನ ಮೆಟ್ರೋ ತುಂಬಾ ದುಬಾರಿ ಎನಿಸಿದೆ. ಹೀಗಾಗಿ ಮೆಟ್ರೋ ತೊರೆದು ಸ್ವಂತ ವಾಹನ ಹಾಗೂ ಬಿಎಂಟಿಸಿ ಬಸ್‌ ಬಳಸುವತ್ತ ಸಾಕಷ್ಟು ಪ್ರಯಾಣಿಕರು ಒಲವು ತೋರಿದ್ದಾರೆ. ಆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ ಎಂದು ವರದಿಗಳು ಹೇಳಿವೆ. ಅಲ್ಲದೆ, ಬೆಳಿಗ್ಗೆ ಮತ್ತು ಸಂಜೆಯ ಜನದಟ್ಟಣೆಯ ʼಪೀಕ್‌ ಅವರ್‌ʼ ಸಮಯದಲ್ಲಿ ಕೂಡ ಮೆಟ್ರೋಗಳು ಬಹುತೇಕ ಹಿಂದಿಗಿಂತ ಅರ್ಧದಷ್ಟು ಜನರನ್ನು ಹೊತ್ತೊಯ್ಯುತ್ತಿದ್ದು, ನಿಲ್ದಾಣಗಳಲ್ಲಿ ಕೂಡ ದರ ಏರಿಕೆಯ ಬಳಿಕ ಜನಜಂಗುಳಿ ತೀರಾ ಕಡಿಮೆಯಾಗಿದೆ.

Read More
Next Story