Modi 3.0 Budget | ಕೇಂದ್ರ ಬಜೆಟ್‌ನಿಂದ ಕರ್ನಾಟಕದ ನಿರೀಕ್ಷೆಗಳೇನು?
x
ಕೇಂದ್ರ ಬಜೆಟ್‌ ಮಂಡನೆ

Modi 3.0 Budget | ಕೇಂದ್ರ ಬಜೆಟ್‌ನಿಂದ ಕರ್ನಾಟಕದ ನಿರೀಕ್ಷೆಗಳೇನು?

ಕೇಂದ್ರ ಬಜೆಟ್‌ ಮಂಡನೆಗೆ ಮುನ್ನ ಕರ್ನಾಟಕ ಸರ್ಕಾರ ರಾಜ್ಯ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಬೇಡಿಕೆಗಳನ್ನು ಮುಂದಿಟ್ಟಿದೆ.


ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2024 ಅನ್ನು ಮಂಡಿಸುತ್ತಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಬೆಳಗ್ಗೆ 11 ಗಂಟೆಗೆ ಮಂಡಿಸುತ್ತಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಮೊದಲ ಬಜೆಟ್ ಆಗಿದೆ. ವಿತ್ತ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರ ಸತತ ಏಳನೇ ಬಜೆಟ್ ಇದಾಗಿದೆ.

ಭಾರೀ ಕೊಡುಗೆಗಳನ್ನು ಒಳಗೊಂಡಿರಲಿದೆ ಎಂಬ ಚರ್ಚೆಗಳು ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಕೇಂದ್ರ ಬಜೆಟ್‌ಗೂ ಮುನ್ನ ಕರ್ನಾಟಕ ಸರ್ಕಾರ ತನ್ನ ಪ್ರಮುಖ ಅಭಿವೃದ್ಧಿ ಯೋಜನೆಗಳು, ಕೇಂದ್ರದಿಂದ ಬರಬೇಕಾದ ಬಾಕಿ ಪಾವತಿ ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟಿದೆ.

ರಾಜ್ಯ ಕಂದಾಯ ಸಚಿವ ಹಾಗೂ ಜಿಎಸ್‌ಟಿ ಕೌನ್ಸಿಲ್‌ ಮಾಜಿ ಸದಸ್ಯ ಕೃಷ್ಣ ಬೈರೇಗೌಡ ಅವರು ಈ ಬೇಡಿಕೆಗಳನ್ನು ಒಳಗೊಂಡ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಿಂದ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವರು ರಾಜ್ಯದ ಈ ಬೇಡಿಕೆಗಳಿಗೆ ಸ್ಪಂದಿಸುತ್ತಾರೆಯೇ? ಅಥವಾ ಇಲ್ಲವೇ? ಎಂಬುದು ಇನ್ನೇನು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

ಸಚಿವ ಕೃಷ್ಣಬೈರೇಗೌಡ ಮುಂದಿಟ್ಟಿರುವ ಬೇಡಿಕೆಗಳು;

ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಈಗಾಗಲೇ ಘೋಷಿಸಲಾಗಿರುವ 5300 ರೂ ಕೋಟಿ ನೆರವನ್ನು ಬಿಡುಗಡೆ ಮಾಡಿ ಮತ್ತು ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ

ಕರ್ನಾಟಕಕ್ಕೆ ಹಣಕಾಸು ಆಯೋಗ ಶಿಫಾರಸು ಮಾಡಿರುವ 11495 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿ.

ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳನ್ನು ವಿಭಾಗಿಸಬಹುದಾದ ಪೂಲ್‌ಗೆ ಸೇರಿಸಿ. ಇದರಿಂದ ರಾಜ್ಯಗಳು ಕೇಂದ್ರ ತೆರಿಗೆಗಳಲ್ಲಿ ತಮ್ಮ ಸರಿಯಾದ ಪಾಲು ಪಡೆಯಬಹುದು.

ಬೆಂಗಳೂರು ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿ.

⁠ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿ.

⁠ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುವ ಭಾರತ ಸರ್ಕಾರದ ಪಾಲನ್ನು ನಗರ ಪ್ರದೇಶದಲ್ಲಿ 1.5 ರಿಂದ 5 ರೂ ಲಕ್ಷಕ್ಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1.2 ರಿಂದ 3 ಲಕ್ಷ ರೂ.ಗೆ ಹೆಚ್ಚಿಸಿ.

⁠ರಾಯಚೂರಿಗೆ AIIMS ಘೋಷಿಸಿ. ಹೆಚ್ಚಿನ ಸಲಹೆಗಳೊಂದಿಗೆ ನಮ್ಮ ಗೌರವಾನ್ವಿತ ಮುಖ್ಯಮಂತ್ರಿಯವರ ವಿವರವಾದ ಟಿಪ್ಪಣಿಯನ್ನು ಸಹ ದಾಖಲೆಯಲ್ಲಿ ಇರಿಸಲಾಗಿದೆ.

ಇನ್ನು ಏಳನೇ ಬಾರಿಗೆ ವಿತ್ತ ಸಚಿವೆಯಾಗಿ ನಿರ್ಮಲಾ ಸೀತರಾಮನ್‌ ಬಜೆಟ್‌ ಮಂಡಿಸುತ್ತಿದ್ದು, ಇದು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಐದು ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಅನ್ನು ಹಣಕಾಸು ಸಚಿವರಾಗಿ ಮಂಡಿಸಿದ ದಾಖಲೆಯನ್ನು ಮೀರಿಸಲಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸತತ ಐದು ಬಜೆಟ್ ಮಂಡಿಸಿದ್ದು, ಪ್ರಣಬ್ ಮುಖರ್ಜಿ ಕೂಡ ಸತತ ಐದು ಬಜೆಟ್ ಮಂಡಿಸಿದ್ದಾರೆ.

ಹೆಚ್ಚುತ್ತಿರುವ ಹಣದುಬ್ಬರ ಮತ್ತು ಉದ್ಯೋಗದ ಅನಿಶ್ಚಿತತೆಯ ನಡುವೆ ಮಧ್ಯಮ ವರ್ಗ ಮತ್ತು ವೇತನದಾರರು ಈ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ನಿರೀಕ್ಷಿಸುತ್ತಿದ್ದಾರೆ.

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್ ಆಗಿ ಈ ವರ್ಷ ಮುಂಗಾರು ಅಧಿವೇಶನದಲ್ಲಿ ಬಜೆಟ್ ಅನ್ನು ಮಂಡಿಸಲಾಗುತ್ತಿದೆ. ಮುಂಗಾರು ಅಧಿವೇಶನವು ಜುಲೈ 23 ರಂದು ಆರಂಭವಾಗಿ ಆಗಸ್ಟ್ 12 ರವರೆಗೆ 19 ದಿನಗಳ ಕಲಾಪವನ್ನು ಹೊಂದಿರುತ್ತದೆ. ಪ್ರಧಾನಿ ಮೋದಿ ಈ ಬಜೆಟ್ ಅನ್ನು ʼಅಮೃತ ಘಳಿಗೆಯ ಪ್ರಮುಖ ಬಜೆಟ್ʼ ಎಂದು ಹೇಳಿದ್ದಾರೆ. ಮುಂದಿನ 5 ವರ್ಷಗಳ ನಮ್ಮ ಅವಧಿಯ ದಿಕ್ಕನ್ನು ಈ ಬಜೆಟ್ ನಿರ್ಧರಿಸುತ್ತದೆ. ಈ ಬಜೆಟ್ ನಮ್ಮ ಕನಸಿನ 'ವಿಕ್ಷಿತ್ ಭಾರತ್'ಗೆ ಬಲವಾದ ಅಡಿಪಾಯವಾಗಲಿದೆ ಎಂದೂ ಮೋದಿ ಹೇಳಿದ್ದಾರೆ.

Read More
Next Story