ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ?: ಸಚಿವ ಕೆ.ಎನ್.ರಾಜಣ್ಣ ಗರಂ
"ದೇಶದಲ್ಲಿ ದರ್ಶನ್ ವಿಷಯ ಒಂದೇ ಇರೋದಾ? ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಅವನ ಸುದ್ದಿಯನ್ನೇ ತೋರಿಸುತ್ತೀರಿ, ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ? ಒಳ್ಳೆಯದನ್ನು ತೋರಿಸಿ" ಎಂದು ಟಿವಿ ಮಾಧ್ಯಮಗಳ ವಿರುದ್ಧ ಸಚಿವ ಕೆ.ಎನ್.ರಾಜಣ್ಣ ಗರಂ ಆಗಿದ್ದಾರೆ.
ಹಾಸನದಲ್ಲಿ ಸುದ್ದಿಗಾರರು ದರ್ಶನ್ ಪ್ರಕರಣದ ಬಗ್ಗೆ ಕೇಳಿದ್ದಕ್ಕೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದು, ʻʻಯಾವಾಗಲೂ ಅವನದ್ದೇ ತೋರಿಸುತ್ತೀರಿ. ಟಿವಿಯವರಿಗೆ ಬೇರೆ ಕೆಲಸ ಇಲ್ವಾ? ಒಳ್ಳೆಯ ಕಲಾವಿದ ಎಂದು ಎಲ್ಲರೂ ಒಪ್ಪುತ್ತೇವೆ. ಒಳ್ಳೆಯ ಕಲಾವಿದ ಎಂದು ಜನರು ಇಷ್ಟ ಪಡುತ್ತಾರೆ ಎಂದ ಮಾತ್ರಕ್ಕೆ ಮಾಡಬಾರದ್ದನ್ನು ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳತ್ತದೆ. ಅದನ್ನು ಬೆಳಿಗ್ಗೆ, ಸಾಯಂಕಾಲ ಮೂರು ಹೊತ್ತೂ, ಬೇರೇನೂ ಜಗತ್ತಿನಲ್ಲಿ ನಡದೇ ಇಲ್ಲ ಎನ್ನುವಂತೆ ತೋರಿಸುತ್ತಾ ಇದ್ದರೆ ನೋಡಲು ಅಸಹ್ಯ ಆಗುತ್ತೆʼʼ ಎಂದು ಅವರು ಕಿಡಿ ಕಾರಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಅವರು ಜೈಲಿನಲ್ಲಿ ರೌಡಿಗಳ ಜೊತೆ ಕಾಫಿ, ಸಿಗರೇಟು ಸೇದುತ್ತ ಕೂತಿದ್ದ ರಾಜಾತಿಥ್ಯದ ಫೋಟೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ದರ್ಶನ್‌ನನ್ನು ಗುರುವಾರ ಬೆಳಿಗ್ಗೆ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.