ಜಾತಿ ಸಮೀಕ್ಷೆ ವರದಿ| ಶೀಘ್ರದಲ್ಲೇ ಸಂಪುಟದ ಮುಂದೆ:  ಸಿದ್ದರಾಮಯ್ಯ
x
ಮುಖ್ಯಮಂತ್ರಿ ಸಿದ್ದರಾಮಯ್ಯ

ಜಾತಿ ಸಮೀಕ್ಷೆ ವರದಿ| ಶೀಘ್ರದಲ್ಲೇ ಸಂಪುಟದ ಮುಂದೆ: ಸಿದ್ದರಾಮಯ್ಯ

ಕರ್ನಾಟಕದಲ್ಲಿ ಸುಮಾರು 4.8 ಕೋಟಿ ಜನರು BPL ಕಾರ್ಡ್‌ಗಳನ್ನು ಹೊಂದಿದ್ದಾರೆ, ಅಂದರೆ ನಮ್ಮ ಜನಸಂಖ್ಯೆಯ 80% ಬಡತನದಲ್ಲಿದೆ.


ಜಾತಿ ಸಮೀಕ್ಷೆ ವರದಿ ಎಂದು ಕರೆಯಲ್ಪಡುವ ವಿವಾದಾತ್ಮಕ ಸಾಮಾಜಿಕ-ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆ ವರದಿಯನ್ನು ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚೆಗೆ ಮಂಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.

ಮಂಗಳವಾರ ಡಿಸಿಗಳು ಮತ್ತು ಝೆಡ್‌ಪಿ ಸಿಇಒಗಳೊಂದಿಗಿನ ಸಭೆಯ ಬಳಿಕ ಅವರು ಮಾತನಾಡಿದರು. ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಗುರುತಿಸಲು ಮತ್ತೊಮ್ಮೆ ಸಮೀಕ್ಷೆ ನಡೆಸಬೇಕೆ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ‘ವರದಿಯಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ, ವರದಿ ಬಂದಿದ್ದು, ಅದನ್ನು ಸಚಿವ ಸಂಪುಟದ ಮುಂದೆ ಚರ್ಚೆಗೆ ಇಡಲಾಗುವುದು’ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ಸಂಗ್ರಹಿಸಿದ ವರದಿಯನ್ನು ಮಾರ್ಚ್ 4 ರಂದು ಸಲ್ಲಿಸಲಾಗಿತ್ತು ಆದರೆ ಲೋಕಸಭೆ ಚುನಾವಣೆಯಿಂದಾಗಿ ವಿಳಂಬವಾಗಿತ್ತು.

ಇನ್ನು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಬಡತನದ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ರಾಜ್ಯದಲ್ಲಿ ಸುಮಾರು 4.8 ಕೋಟಿ ಜನರು BPL ಕಾರ್ಡ್‌ಗಳನ್ನು ಹೊಂದಿದ್ದಾರೆ, ಅಂದರೆ ನಮ್ಮ ಜನಸಂಖ್ಯೆಯ 80% ಬಡತನದಲ್ಲಿದೆ. ಇದಕ್ಕೆ ವಿರುದ್ಧವಾಗಿ, ತಮಿಳುನಾಡು 40% ಮತ್ತು ಕೇರಳದಲ್ಲಿ 36% BPL ಕಾರ್ಡ್‌ಗಳನ್ನು ಹೊಂದಿದೆ. ಹಾಗಾಗಿ ಅನರ್ಹ ಬಿಪಿಎಲ್‌ ಕಾರ್ಡ್‌ ಹೊಂದಿರುವವರನ್ನು ಹೊರಹಾಕಲು ಸಮೀಕ್ಷೆಯ ಅಗತ್ಯವಿದೆ ಎಂದು ಅವರು ತಿಳಿಸಿದರು.

ಜಾತಿ ಸಮೀಕ್ಷೆ ವರದಿಗೆ ಪರ- ವಿರೋಧ

ಸಿದ್ದರಾಮಯ್ಯನವರ ಮೊದಲ ಅಧಿಕಾರಾವಧಿಯಲ್ಲಿ 170 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯಾದ್ಯಂತ 13 ಮಿಲಿಯನ್ ಕುಟುಂಬಗಳು ಮತ್ತು 59 ಮಿಲಿಯನ್ ನಿವಾಸಿಗಳ ಸಮೀಕ್ಷೆಯನ್ನು ನಡೆಸಿತ್ತು. ಆದರೆ ಸಮೀಕ್ಷೆ ಪೂರ್ಣಗೊಳ್ಳುವ ಮೊದಲೇ ಈ ಸಮೀಕ್ಷೆ ಬಗ್ಗೆ ಅಪಸ್ವರಗಳು ಕೇಳಿಬಂದಿದ್ದವು. ಸಮೀಕ್ಷೆ ಬಗ್ಗೆಯೇ ಪ್ರಬಲ ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಶೇಷವಾಗಿ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರ ಜನಸಂಖ್ಯೆ ರಾಜ್ಯದಲ್ಲಿ ಕಡಿಮೆ ಇದ್ದು, ಉಳಿದ ಸಮುದಾಯಗಳು ಪ್ರಬಲವಾಗಿವೆ ಎಂದು ಬಿಂಬಿಸುವುದು. ಆ ಮೂಲಕ ಪ್ರಮುಖ ಸಮುದಾಯಗಳ ಪ್ರಾಬಲ್ಯ ಕುಂದಿಸುವ ಪ್ರಯತ್ನಗಳು ಇದರ ಹಿಂದಿವೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ಸಮೀಕ್ಷೆ ಸ್ಥಗಿತಗೊಳಿಸಬೇಕು ಎಂಬ ಒತ್ತಾಯ ಆಗ ತೀವ್ರವಾಗಿತ್ತು.

ವರದಿ ಸೋರಿಕೆ ಆರೋಪ

ಈ ನಡುವೆ ವರದಿ ಬಗ್ಗೆ ಮತ್ತೊಂದು ಅಪಸ್ವರದ ಅಲೆ ಎದ್ದಿತು. ವರದಿಯ ಹಲವು ಅಂಶಗಳು "ಸೋರಿಕೆ" ಆಗಿವೆ ಎಂಬುದು. ಅದರಂತೆ ರಾಜ್ಯದಲ್ಲಿ 1.08 ಕೋಟಿ ಪರಿಶಿಷ್ಟ ಜಾತಿ, 42 ಲಕ್ಷ ಪರಿಶಿಷ್ಟ ಪಂಗಡ, 75 ಲಕ್ಷ ಮುಸ್ಲಿಂ, 73 ಲಕ್ಷ ವೀರಶೈವ-ಲಿಂಗಾಯತ, 70 ಲಕ್ಷ ಒಕ್ಕಲಿಗರು, ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಇದ್ದಾರೆ. ಸಮೀಕ್ಷೆಯಲ್ಲಿ ಕುರುಬ ಸಮುದಾಯವನ್ನು ಅತ್ಯಂತ ಹಿಂದುಳಿದ ಸಮುದಾಯ ಎಂದು ಘೋಷಿಸಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿತ್ತು. ಇದು ಸಮೀಕ್ಷೆಯನ್ನೇ ವಿರೋಧಿಸಿದ್ದ ಕೆಲವು ರಾಜಕೀಯ ಶಕ್ತಿಗಳಿಗೆ ಪುಷ್ಟಿ ನೀಡಿತು.

ಆದರೆ ಯಾವುದೇ ಅಂಕಿ-ಅಂಶಗಳು ಸೋರಿಕೆ ಆಗಿಲ್ಲವೆಂದು ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟಪಡಿಸಿತು. ಆದರೆ ಅದನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಫಲ ಸಿಗಲಿಲ್ಲ. ಇದರ ಬೆನ್ನಲ್ಲೇ ಬಹಿರಂಗವಾಗಿ ಮತ್ತು ಪತ್ರಿಕಾ ಹೇಳಿಕೆಗಳ ಮೂಲಕ ಸಮೀಕ್ಷೆ ಬಗ್ಗೆಯೇ ಅನುಮಾನಗಳನ್ನು ಅನೇಕರು ವ್ಯಕ್ತಪಡಿಸಿದರು.

ಭಿನ್ನಾಭಿಪ್ರಾಯ

ಇನ್ನು ಸಮೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಬಗ್ಗೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಗಳು ಇವೆ. ಸಿ.ಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ವರದಿ ಬೇಕು ಎಂದು ಸಿದ್ದರಾಮಯ್ಯ ಹೇಳಿದರೆ, ಶಿವಕುಮಾರ್ ಮತ್ತೆ ಸಮೀಕ್ಷೆ ನಡೆಸುವಂತೆ ಪ್ರತಿಪಾದಿಸಿದ್ದಾರೆ.

ಎಚ್.ಕಾಂತರಾಜು ನೇತೃತ್ವದಲ್ಲಿ ಸಮೀಕ್ಷೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮಾಜಿ ಅಧ್ಯಕ್ಷ ಎಚ್.ಕಾಂತರಾಜು ನೇತೃತ್ವದಲ್ಲಿ ಸಮೀಕ್ಷೆ ನಡೆಸಿದ್ದು, ರಾಜ್ಯಾದ್ಯಂತ ಧರ್ಮ, ಜಾತಿ, ಉದ್ಯೋಗ, ಆದಾಯ, ಮತ್ತು ಶಿಕ್ಷಣ ಸೇರಿದಂತೆ 54 ವಿವಿಧ ಅಂಶಗಳ ಮಾಹಿತಿಯನ್ನು ಸಂಗ್ರಹಿಸಿದೆ. ವರದಿಯು 292 ಪುಟಗಳನ್ನು ಹೊಂದಿದೆ ಮತ್ತು ಇದು ರಾಜ್ಯದ ಹೆಚ್ಚಿನ ಜನಸಂಖ್ಯೆಯ ನಿಜವಾದ ಸಮೀಕ್ಷೆಯನ್ನು ಆಧರಿಸಿದೆಯೇ ಹೊರತು ಮಾದರಿ ಸಮೀಕ್ಷೆಯಲ್ಲ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದರು.

Read More
Next Story