Madhav Gadgil : ಪಶ್ಚಿಮ ಘಟ್ಟದ ಹಸಿರು ದನಿಗಳು ಅಸ್ತಂಗತ;  ಐತಿಹಾಸಿಕ ವರದಿಗಳು ಅನಾಥ?
x

Madhav Gadgil : ಪಶ್ಚಿಮ ಘಟ್ಟದ 'ಹಸಿರು ದನಿಗಳು' ಅಸ್ತಂಗತ; ಐತಿಹಾಸಿಕ ವರದಿಗಳು ಅನಾಥ?

ಮಾಧವ್ ಗಾಡ್ಗೀಳ್ ವರದಿಯು ಪಶ್ಚಿಮ ಘಟ್ಟ ಪ್ರದೇಶವನ್ನು ಶೇ.100 ರಷ್ಟು 'ಪರಿಸರ ಸೂಕ್ಷ್ಮ ಪ್ರದೇಶ' ಎಂದು ಪರಿಗಣಿಸಬೇಕು ಎಂದು ಶಿಫಾರಸು ಮಾಡಿದರೆ, ಕಸ್ತೂರಿ ರಂಗನ್ ವರದಿಯು ಕೇವಲ ಶೇ.37 ರಷ್ಟು ಪ್ರದೇಶ ಮಾತ್ರ 'ಪರಿಸರ ಸೂಕ್ಷ್ಮ ಪ್ರದೇಶ' ಎಂದು ಘೋಷಿಸಲು ಸೂಚಿಸಿದೆ.


Click the Play button to hear this message in audio format

ಪಶ್ಚಿಮ ಘಟ್ಟಗಳೆಂದರೆ ಕೇವಲ ಹಸಿರು ಹೊದಿಕೆಯಲ್ಲ, ಅದು ದಕ್ಷಿಣ ಭಾರತದ ಕೋಟ್ಯಂತರ ಜನರ ಜೀವನಾಡಿ. ಈ ಜೀವವೈವಿಧ್ಯದ ತಾಣವನ್ನು ಉಳಿಸಿಕೊಳ್ಳಲೇಬೇಕೆಂಬ ಹಠ ತೊಟ್ಟು, ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗಿಯೂ ಸತ್ಯವನ್ನೇ ಪ್ರತಿಪಾದಿಸಿದ್ದ ಇಬ್ಬರು ಮಹಾನ್ ಪರಿಸರ ಪ್ರೇಮಿಗಳು ಈಗ ಇತಿಹಾಸದ ಪುಟ ಸೇರಿದ್ದಾರೆ. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೇಮಿಸಿದ್ದ ನಿರ್ಣಾಯಕ ಸಮಿತಿಗಳ ನೇತೃತ್ವ ವಹಿಸಿದ್ದ ಖ್ಯಾತ ಪರಿಸರ ವಿಜ್ಞಾನಿ ಮಾಧವ್ ಗಾಡ್ಗೀಳ್ ಅವರು ಗುರುವಾರ (ಜ.8) ಇಹಲೋಕ ತ್ಯಜಿಸಿದರೆ, ಬಾಹ್ಯಾಕಾಶ ವಿಜ್ಞಾನಿ ಹಾಗೂ ಪರಿಸರ ಚಿಂತಕ ಕೆ. ಕಸ್ತೂರಿ ರಂಗನ್ ಕಳೆದ ವರ್ಷದ ಏಪ್ರಿಲ್ 25ರಂದು (2025) ವಿಧಿವಶರಾಗಿದ್ದರು.

ವಿಪರ್ಯಾಸವೆಂದರೆ, ಈ ಇಬ್ಬರೂ ದಿಗ್ಗಜರು ಪ್ರಕೃತಿಯಲ್ಲಿ ಲೀನವಾಗಿದ್ದರೂ, ಅವರು ನೀಡಿದ ಮಹತ್ವದ ವರದಿಗಳು ಮಾತ್ರ ಕಳೆದೊಂದು ದಶಕದಿಂದ ಅನುಷ್ಠಾನಗೊಳ್ಳದೆ ಸರ್ಕಾರಿ ಕಡತಗಳಲ್ಲಿ ಧೂಳು ತಿನ್ನುತ್ತಿವೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಮೇಲಾಟದಲ್ಲಿ ಈ ವರದಿಗಳು ಮೂಲೆಗುಂಪಾಗಿವೆ. ಇವರಿಬ್ಬರ ಅಗಲಿಕೆಯಿಂದಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ದನಿಯೇ ಇಲ್ಲದಂತಾಗಿದ್ದು, ಹಸಿರು ಸಹ್ಯಾದ್ರಿ ಈಗ ನಿಜಾರ್ಥದಲ್ಲಿ ಅನಾಥವಾಗಿದೆ.

ದಶಕಗಳ ನಿರ್ಲಕ್ಷ್ಯ ಮತ್ತು ಮಾಫಿಯಾಗಳ ಪ್ರಭಾವ

ಕೇಂದ್ರ ಸರ್ಕಾರವು 2010 ಮತ್ತು 2011ರ ಅವಧಿಯಲ್ಲಿ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಈ ಸಮಿತಿಗಳನ್ನು ರಚಿಸಿತ್ತು. ಆದರೆ, ವರದಿ ಸಲ್ಲಿಕೆಯಾಗಿ 14 ವರ್ಷ ಕಳೆದರೂ ಅವು ಜಾರಿಯಾಗಿಲ್ಲ. ಇದಕ್ಕೆ ಕೇವಲ ಆಡಳಿತಾತ್ಮಕ ಕಾರಣಗಳಿಲ್ಲ, ಬದಲಿಗೆ ಗಣಿಗಾರಿಕೆ ಮತ್ತು ಭೂ ಮಾಫಿಯಾಗಳ ಬಲವಾದ ಹಿಡಿತವಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ವರದಿ ಜಾರಿಯಾದರೆ ರೈತರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬ ತಪ್ಪು ಮಾಹಿತಿಯನ್ನು ಜನರಲ್ಲಿ ಹರಡಲಾಗಿದೆ. ರಸ್ತೆ, ರೆಸಾರ್ಟ್ ಮತ್ತು ಅಣೆಕಟ್ಟುಗಳಂತಹ ಮೂಲಸೌಕರ್ಯ ಯೋಜನೆಗಳಿಗೆ ಅಡ್ಡಿಯಾಗುತ್ತದೆ ಎಂಬುದು ಸರ್ಕಾರಗಳ ವಾದವಾಗಿದೆ. ಸರ್ಕಾರಗಳು ವರದಿಗಳನ್ನು ಗಾಳಿಗೆ ತೂರಿದ ಪರಿಣಾಮವಾಗಿ ಇಂದು ನಾವು ಕೇರಳದ ವಯನಾಡು ಭೂಕುಸಿತ, ರಾಜ್ಯದ ಕೊಡಗು ಮತ್ತು ಶಿರೂರು ದುರಂತಗಳನ್ನು ನೋಡುವಂತಾಗಿದೆ. ಅತಿಯಾದ ಅರಣ್ಯ ನಾಶ ಮತ್ತು ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಪಶ್ಚಿಮ ಘಟ್ಟದ ಮಣ್ಣು ಸಡಿಲಗೊಳ್ಳುತ್ತಿದೆ. ಅಕಾಲಿಕ ಮಳೆ ಮತ್ತು ಪ್ರವಾಹಗಳು ಮನುಷ್ಯನ ಹಸ್ತಕ್ಷೇಪಕ್ಕೆ ಪ್ರಕೃತಿ ನೀಡುತ್ತಿರುವ ಎಚ್ಚರಿಕೆಯ ಗಂಟೆಗಳಾಗಿವೆ.

ಗಾಡ್ಗೀಳ್ ವರದಿ: ಪರಿಸರ ಪರವಾದ ಕ್ರಾಂತಿಕಾರಿ ಹೆಜ್ಜೆ

ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು 2011ರಲ್ಲಿ ಸಲ್ಲಿಸಿದ ವರದಿಯು ಅತ್ಯಂತ ಕ್ರಾಂತಿಕಾರಿ ಮತ್ತು ಪರಿಸರ ಪರವಾಗಿತ್ತು. ಪಶ್ಚಿಮ ಘಟ್ಟದ ಶೇ.100 ರಷ್ಟು ಭಾಗವನ್ನೂ 'ಪರಿಸರ ಸೂಕ್ಷ್ಮ ಪ್ರದೇಶ' ಎಂದು ಪರಿಗಣಿಸಬೇಕು ಎಂದು ಅದು ಶಿಫಾರಸು ಮಾಡಿತ್ತು. ಇಡೀ ಘಟ್ಟವನ್ನು ಪರಿಸರದ ಮಹತ್ವದ ಆಧಾರದ ಮೇಲೆ ಮೂರು ವಲಯಗಳಾಗಿ ವಿಂಗಡಿಸಿದ್ದ ಗಾಡ್ಗೀಳ್, ವಲಯ-1ರಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶವಿರಬಾರದು ಎಂದು ಸ್ಪಷ್ಟಪಡಿಸಿದ್ದರು. ಈ ವರದಿಯ ಮತ್ತೊಂದು ಪ್ರಮುಖ ಅಂಶವೆಂದರೆ, ಅಭಿವೃದ್ಧಿ ಯೋಜನೆಗಳಿಗೆ ಕೇವಲ ಅಧಿಕಾರಿಗಳಲ್ಲ, ಸ್ಥಳೀಯ 'ಗ್ರಾಮಸಭೆ'ಗಳ ಅನುಮತಿ ಕಡ್ಡಾಯವಿರಬೇಕು ಎಂಬುದು. ಅಂದರೆ ಆಡಳಿತವನ್ನು ಕೆಳಗಿನಿಂದ ಮೇಲಕ್ಕೆ ಕೊಂಡೊಯ್ಯುವ ಆಶಯ ಅವರದ್ದಾಗಿತ್ತು. ಗಣಿಗಾರಿಕೆ, ದೊಡ್ಡ ಅಣೆಕಟ್ಟುಗಳು ಮತ್ತು ಮಾಲಿನ್ಯಕಾರಕ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಶಿಫಾರಸು ಮಾಡಿದ್ದಲ್ಲದೆ, ರಾಸಾಯನಿಕ ಕೃಷಿಯನ್ನು ಹಂತ ಹಂತವಾಗಿ ನಿಲ್ಲಿಸಿ ಸಾವಯವ ಕೃಷಿಗೆ ಒತ್ತು ನೀಡುವಂತೆ ಅವರು ಸೂಚಿಸಿದ್ದರು. ಆದರೆ, ಇದು ಅವಾಸ್ತವಿಕ ಎಂಬ ಹಣೆಪಟ್ಟಿ ಕಟ್ಟಿ ಅದನ್ನು ತಿರಸ್ಕರಿಸಲಾಯಿತು.

ಕಸ್ತೂರಿ ರಂಗನ್ ವರದಿ: ಅಭಿವೃದ್ಧಿ ಮತ್ತು ಪರಿಸರದ ಮಧ್ಯಮ ಮಾರ್ಗ

ಗಾಡ್ಗೀಳ್ ವರದಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಚನೆಯಾದ ಕಸ್ತೂರಿ ರಂಗನ್ ಸಮಿತಿಯು 2013ರಲ್ಲಿ ತನ್ನ ವರದಿ ಸಲ್ಲಿಸಿತು. ಇದು ಗಾಡ್ಗೀಳ್ ವರದಿಗಿಂತ ಭಿನ್ನವಾಗಿ, ಪಶ್ಚಿಮ ಘಟ್ಟದ ಒಟ್ಟು ವಿಸ್ತೀರ್ಣದಲ್ಲಿ ಕೇವಲ ಶೇ.37 ರಷ್ಟು ಪ್ರದೇಶವನ್ನು ಮಾತ್ರ 'ಪರಿಸರ ಸೂಕ್ಷ್ಮ ಪ್ರದೇಶ' ಎಂದು ಘೋಷಿಸಲು ಸೂಚಿಸಿತು. ಉಳಿದ ಶೇ.63 ಪ್ರದೇಶವನ್ನು 'ಸಾಂಸ್ಕೃತಿಕ ಭೂದೃಶ್ಯ' ಎಂದು ಕರೆದು ಅಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ನೀಡಿತು. ವಲಯ ವಿಂಗಡಣೆಯನ್ನು ಕೈಬಿಟ್ಟ ಈ ವರದಿ, ಕೇವಲ ಅತ್ಯಂತ ಹಾನಿಕಾರಕ ಎನಿಸುವ 'ಕೆಂಪು ವರ್ಗ'ದ ಕೈಗಾರಿಕೆಗಳು ಮತ್ತು ಗಣಿಗಾರಿಕೆಯನ್ನು ಮಾತ್ರ ನಿಷೇಧಿಸಿತು. ಗ್ರಾಮಸಭೆಗಳ ಬದಲು ಉಪಗ್ರಹ ಚಿತ್ರಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಈ ವರದಿಯ ವೈಶಿಷ್ಟ್ಯವಾಗಿತ್ತು.

ಕರ್ನಾಟಕದ ಆತಂಕ ಮತ್ತು ಅನಿವಾರ್ಯತೆ

ಪಶ್ಚಿಮ ಘಟ್ಟದ ಸುಮಾರು ಶೇ.60 ರಷ್ಟು ಭಾಗ ಕರ್ನಾಟಕದಲ್ಲಿಯೇ ಇರುವುದರಿಂದ, ಈ ವರದಿಗಳ ಜಾರಿ ರಾಜ್ಯದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಮಾಧವ್ ಗಾಡ್ಗೀಳ್ ವರದಿಯ ಪರವಾಗಿ ನೋಡುವುದಾದರೆ, ಕರ್ನಾಟಕದ ಜೀವನದಿಗಳಾದ ಕಾವೇರಿ, ತುಂಗಾ, ಭದ್ರಾ, ಶರಾವತಿ ಮತ್ತು ಹೇಮಾವತಿಗಳ ಮೂಲಗಳು ಸಂರಕ್ಷಿಸಲ್ಪಡುತ್ತವೆ. ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಸಂಭವಿಸುತ್ತಿರುವ ಭೂಕುಸಿತಗಳಿಗೆ ಕಡಿವಾಣ ಬೀಳುತ್ತದೆ. ಆದರೆ, ಇಡೀ ಘಟ್ಟ ಪ್ರದೇಶವನ್ನು ಸೂಕ್ಷ್ಮ ವಲಯವೆಂದು ಘೋಷಿಸಿದರೆ ರಸ್ತೆ, ರೈಲ್ವೆ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಮತ್ತು ಮಲೆನಾಡಿನ ಅಡಿಕೆ, ಕಾಫಿ ಬೆಳೆಗಾರರಿಗೆ ಆರ್ಥಿಕ ಹೊರೆಯಾಗುತ್ತದೆ ಎಂಬ ಆತಂಕವೂ ಇದೆ.

ಮತ್ತೊಂದೆಡೆ, ಕಸ್ತೂರಿ ರಂಗನ್ ವರದಿಯು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದರ ಜೊತೆಗೆ, ರೈತರ ದೈನಂದಿನ ಕೃಷಿ ಚಟುವಟಿಕೆಗಳ ಮೇಲೆ ಹೆಚ್ಚಿನ ನಿರ್ಬಂಧ ಹೇರುವುದಿಲ್ಲ. ಆದರೆ, ಉಪಗ್ರಹ ಆಧಾರಿತ ಸಮೀಕ್ಷೆಯಾದ್ದರಿಂದ ರಾಜ್ಯದ 1,500ಕ್ಕೂ ಹೆಚ್ಚು ಹಳ್ಳಿಗಳು ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತವೆ ಎಂಬುದು ರಾಜ್ಯ ಸರ್ಕಾರದ ಆಕ್ಷೇಪವಾಗಿದೆ. ಅಲ್ಲದೆ, ಶೇ.63 ರಷ್ಟು ಪ್ರದೇಶವನ್ನು ಅಭಿವೃದ್ಧಿಗೆ ಮುಕ್ತವಾಗಿಟ್ಟರೆ ಅಂತಿಮವಾಗಿ ಇಡೀ ಘಟ್ಟವೇ ನಾಶವಾಗುತ್ತದೆ ಎಂಬುದು ಪರಿಸರವಾದಿಗಳ ವಾದ.

ರಾಜ್ಯ ಸರ್ಕಾರವು ಈ ಎರಡೂ ವರದಿಗಳ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಮಲೆನಾಡಿನ ಜನರ ಭೂಮಿಯ ಹಕ್ಕು, ಅಭಿವೃದ್ಧಿ ಯೋಜನೆಗಳು ಮತ್ತು ಚುನಾವಣೆಗಳ ಮೇಲಾಗುವ ಪರಿಣಾಮಗಳೇ ಇದಕ್ಕೆ ಕಾರಣ. ಆದರೆ, ಈಗ ಇಬ್ಬರೂ ಪ್ರಮುಖರ ಅಗಲಿಕೆಯಿಂದ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ದನಿಯಿಲ್ಲದಂತಾಗಿದೆ.

Read More
Next Story