ಮೊದಲು 7 ಕೆಜಿ ಅಕ್ಕಿ ಕೊಟ್ಟವರು ನಾವು, ಅದನ್ನು 5 ಕೆಜಿಗೆ ಇಳಿಸಿದ್ದು ಯಡಿಯೂರಪ್ಪ: ಸಿದ್ದರಾಮಯ್ಯ
x
ಮೈಸೂರಿನಲ್ಲಿ ಸಿ.ಎಂ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೊದಲು 7 ಕೆಜಿ ಅಕ್ಕಿ ಕೊಟ್ಟವರು ನಾವು, ಅದನ್ನು 5 ಕೆಜಿಗೆ ಇಳಿಸಿದ್ದು ಯಡಿಯೂರಪ್ಪ: ಸಿದ್ದರಾಮಯ್ಯ

ರಾಜ್ಯದ ಜನತೆಗೆ ಕಾಂಗ್ರೆಸ್‌ ಸರ್ಕಾರ ಈ ಹಿಂದೆ ಏಳು ಕೆ.ಜಿ ಅಕ್ಕಿ ನೀಡುತ್ತಿತ್ತು. ಅದನ್ನು ಯಡಿಯೂರಪ್ಪ ಸರ್ಕಾರ ಐದು ಕೆ.ಜಿ ಗೆ ಇಳಿಸಿತ್ತು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು


Click the Play button to hear this message in audio format

ರಾಜ್ಯದ ಜನತೆಗೆ ಕಾಂಗ್ರೆಸ್‌ ಸರ್ಕಾರ ಈ ಹಿಂದೆ ಏಳು ಕೆ.ಜಿ ಅಕ್ಕಿ ನೀಡುತ್ತಿತ್ತು. ಅದನ್ನು ಯಡಿಯೂರಪ್ಪ ಸರ್ಕಾರ ಐದು ಕೆ.ಜಿ ಗೆ ಇಳಿಸಿತ್ತು. ಅಂತಹ ಬಡವರ ವಿರೋಧಿ ಧೋರಣೆಯ ಬಿಜೆಪಿ ಮತ್ತು ವಿಜಯೇಂದ್ರಗೆ ಬಡವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರದ ಸಮಯದಲ್ಲಿ ಐದು ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಅದನ್ನು ಹತ್ತು ಕೆಜಿಗೆ ನಮ್ಮ ಸರ್ಕಾರ ಏರಿಸಿದ್ದು, ಈ ಸತ್ಯ ರಾಜ್ಯದ ಜನರಿಗೆ ಗೊತ್ತಿದೆ. ಈಗ ಯಡಿಯೂರಪ್ಪ ಅವರ ಮಗ ವಿಜಯೇಂದ್ರನಿಗೆ ಈ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್‌ ಕಾರ್ಡ್‌ ಕೊಡಬಾರದು ಎಂಬ ನಿಯಮಾವಳಿ ಇದೆ. ಈ ಬಗ್ಗೆ ಬಿಜೆಪಿಯೇ ಗೈಡ್‌ಲೈನ್‌ ರಚಿಸಿದೆ. ಆದರೆ ಈಗ ಬಿಜೆಪಿ ಅದರ ವಿರುದ್ದವೇ ಪ್ರತಿಭಟನೆ ನಡೆಸುತ್ತಿದೆ. ಸರ್ಕಾರಿ ನೌಕರರಿಗೆ, ಆದಾಯ ತೆರಿಗೆ ಪಾವತಿಸುವವರಿಗೂ ಬಿಪಿಎಲ್ ಕಾರ್ಡ್ ಕೊಡಬೇಕೆ ಎಂದು ಸಿ.ಎಂ ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಪ್ರತಿಭಟನೆ ಎಂದು ಫೋಟೋ ತೆಗೆಸಿಕೊಳ್ಳುತ್ತಾ ಇದ್ದಾರೆ. ಅಶೋಕ್ ಅವರ ಪ್ರತಿಭಟನೆ ಫೋಟೊ ಶೂಟ್ ನಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ನಬಾರ್ಡ್‌ ಸಾಲದ ಬಗ್ಗೆ ಮಾತನಾಡಿದ ಸಿಎಂ, ರೈತರಿಗೆ ಶೇ.4.5 ಬಡ್ಡಿ ದರದಲ್ಲಿ ನಬಾರ್ಡ್ ರಾಜ್ಯದ ರೈತರಿಗೆ ಸಾಲ ಕೊಡುತ್ತದೆ. ಈ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸಿ ರೈತರಿಗೆ ಶೂನ್ಯ ಬಡ್ಡಿ ದರಕ್ಕೆ ಸಾಲ ನೀಡುತ್ತದೆ. ಆದರೆ ಈಗ ನಬಾರ್ಡ್ ಸಾಲದ ಪ್ರಮಾಣ ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕ್ ಗಳ ಬಳಿ ಸಾಲಕ್ಕೆ ಹೋಗಿ ಶೇ10 ರಷ್ಟು ಬಡ್ಡಿ ಕಟ್ಟಬೇಕು. ಇದು ರಾಜ್ಯಕ್ಕೆ ಆಗುವ ನಷ್ಟ. ಇಷ್ಟು ದೊಡ್ಡ ಪ್ರಮಾಣದ ಅನ್ಯಾಯವನ್ನು ಬಿಜೆಪಿ ನಾಯಕ ಜೋಶಿ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಿಂದಲೇ ಆಯ್ಕೆ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಅನ್ಯಾಯ ಸರಿಪಡಿಸಿ ಎಂದು ಮನವಿ ಕೊಟ್ಟಿದ್ದೇನೆ. ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅನ್ಯಾಯ ಸರಿಪಡಿಸಲಿ ಎಂದು ಅವರು ತಿಳಿಸಿದರು.

Read More
Next Story