
ಒಪಿಎಸ್ ಜಾರಿ | ಸರ್ಕಾರದ ಆದೇಶ ಸ್ವಾಗತಿಸಿದ ಎನ್ ಪಿಎಸ್ ನೌಕರರ ಸಂಘ
ಆರನೇ ಗ್ಯಾರೆಂಟಿಯಾಗಿ ಎಲ್ಲ ನೌಕರರಿಗೂ ಒಪಿಎಸ್ ಜಾರಿಯಾಗುವ ನಿರೀಕ್ಷೆ ಇದೆ ಎಂದ ಎನ್ ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್
ರಾಜ್ಯ ಸರ್ಕಾರ ದಿನಾಂಕ 01/04/2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾಗಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆ (ಒಪಿಎಸ್)ಗೆ ಒಳಪಡಿಸಿ ಆದೇಶ ಹೊರಡಿಸಿದೆ. ಒಪಿಎಸ್ ಜಾರಿಗಾಗಿ ಹೋರಾಟ ನಡೆಸುತ್ತಿರುವ ಎನ್ ಪಿಎಸ್ ನೌಕರರ ಸಂಘವು ಸರ್ಕಾರದ ಈ ಆದೇಶವನ್ನು ಸ್ವಾಗತಿಸಿದೆ. ಆದರೆ ಸಂಪೂರ್ಣವಾಗಿ ಎನ್ ಪಿಎಸ್ ರದ್ದುಗೊಳಿಸಿ ಎಲ್ಲ ಸರ್ಕಾರಿ ನೌಕರರಿಗೂ ಒಪಿಎಸ್ ಜಾರಿ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.
ಈ ಬಗ್ಗೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ರಾಜ್ಯ ಎನ್ ಪಿಎಸ್ ನೌಕರರ ಸಂಘದ ಅಧ್ಯಕ್ಷರಾದ ಶಾಂತರಾಮ್, ಸರ್ಕಾರದ ಆದೇಶವನ್ನು ಸ್ವಾಗತ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಎನ್ ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಮಾತುಕತೆ ನಡೆಸಿದ್ದೆವು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಒಪಿಎಸ್ ಜಾರಿ ಮಾಡುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಅದರಂತೆ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಯನ್ನು ಮಾನ್ಯ ಮಾಡಿ ಈ ಆದೇಶ ಹೊರಡಿಸಿದ್ದಾರೆ. ಇದರಿಂದ 11ಸಾವಿರಕ್ಕೂ ಅಧಿಕ ನೌಕರರಿಗೆ ಅನುಕೂಲ ಆಗಿದೆ. ಸರ್ಕಾರದ ಈ ನಿರ್ಧಾರವನ್ನು ನಮ್ಮ ಸಂಘವು ಸ್ವಾಗತ ಮಾಡುತ್ತದೆ. ಆದರೆ ನಮ್ಮ ಅಂತಿಮ ಗುರಿ ಸಂಪೂರ್ಣ ಎನ್ ಪಿಎಸ್ ಅನ್ನು ರದ್ದು ಮಾಡಿ ಎಲ್ಲ ಸರ್ಕಾರಿ ನೌಕರರಿಗೂ ಒಪಿಎಸ್ ಜಾರಿಯಾಗಬೇಕು ಎನ್ನುವುದಾಗಿದೆ ಎಂದು ಅವರು ಪುನರುಚ್ಛರಿಸಿದರು.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಾವು ಹೋರಾಟ ಮಾಡುವಾಗ ಕಾಂಗ್ರೆಸ್ ನಾಯಕರು ನಮಗೆ ಭರವಸೆ ನೀಡಿದ್ದರು. ಅಷ್ಟೇ ಅಲ್ಲದೇ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಒಪಿಎಸ್ ಜಾರಿ ಮಾಡುವ ಕುರಿತು ಘೋಷಿಸಿಕೊಂಡಿದ್ದರು. ಈಗಾಗಲೇ ರಾಜ್ಯ ಸರ್ಕಾರ ತಮ್ಮ ಪ್ರಣಾಳಿಕೆಯ ಪ್ರಕಾರ ಐದು ಗ್ಯಾರೆಂಟಿ ಜಾರಿಗೊಳಿಸಿದೆ. ಅದರಂತೆ ಆರನೇ ಗ್ಯಾರಂಟಿಯಾಗಿ ಎಲ್ಲ ನೌಕರರಿಗೂ ಒಪಿಎಸ್ ಜಾರಿ ಮಾಡುವಂತಾಗುತ್ತದೆ. ಅದರ ಭಾಗವಾಗಿ ಮುಖ್ಯಮಂತ್ರಿಗಳು ಮುಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ನಾವು ಕೂಡ ಸರ್ಕಾರದ ಮೇಲೆ ಒತ್ತಡ ಹಾಕುವ ದೃಷ್ಟಿಯಿಂದ ಸುರ್ಜೇವಾಲ್ ಅವರನ್ನು ಭೇಟಿ ಮಾಡುತ್ತಿದ್ದೇವೆ ಎಂದು ಶಾಂತರಾಮ್ ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 5 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ಇದ್ದಾರೆ. ಕರ್ನಾಟಕ ಸರ್ಕಾರ ದಿನಾಂಕ 01/04/2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು ಆದೇಶ ಹೊರಡಿಸಿದೆ. ಆದರೆ ಇದು ಎಲ್ಲಾ ನೌಕರರಿಗೂ ಅನ್ವಯವಾಗುವುದಿಲ್ಲ. ಈ ಆದೇಶದ ಲಾಭವನ್ನು ಸುಮಾರು 13,000 ಸರ್ಕಾರಿ ನೌಕರರು ಮಾತ್ರ ಪಡೆಯಲಿದ್ದಾರೆ.
ಸರ್ಕಾರದ ಹೊಸ ಆದೇಶದಲ್ಲೇನಿದೆ?
01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಸರ್ಕಾರಿ ನೌಕರರು ಹಿಂದಿನ ಡಿಫೆನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಇಚ್ಛಿಸಿದಲ್ಲಿ ತಮ್ಮ ಅಭಿಮತವನ್ನು ನಿಗಧಿತ ನಮೂನೆಯಲ್ಲಿ 30.06.2024ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಸಲ್ಲಿಸತಕ್ಕದ್ದು. ಈ ಆಯ್ಕೆಯನ್ನು ಒಂದು ಬಾರಿಗೆ ಮಾತ್ರ ಚಲಾಯಿಸಲು ಅವಕಾಶವಿರುತ್ತದೆ. ಒಂದು ಬಾರಿ ಮಾಡಿಕೊಂಡ ಆಯ್ಕೆಯನ್ನು ಬದಲಾಯಿಸಲು ಅವಕಾಶವಿಲ್ಲ.
ಮೇಲಿನ 1 ರಂತೆ ಆಯ್ಕೆಯನ್ನು ಚಲಾಯಿಸಲು ಅರ್ಹ ಸರ್ಕಾರಿ ನೌಕರರು ನಿಗಧಿತ ದಿನಾಂಕದೊಳಗೆ ತಮ್ಮ ಆಯ್ಕೆಯನ್ನು ಚಲಾಯಿಸದೇ ಇದ್ದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರೆಯುತ್ತಾರೆ. ನೌಕರರ ಆಯ್ಕೆಗನುಸಾರ ಅವರು ಹಿಂದಿನ ಡಿಫೈನ್ ಯೋಜನೆಗೊಳಪಡಲು ನಿಗಧಿತ ಅರ್ಹತೆಯನ್ನು ಹೊಂದಿರುವುದನ್ನು ಸಕ್ಷಮ ನೇಮಕಾತಿ ಪ್ರಾಧಿಕಾರವು ಖಚಿತಪಡಿಸಿಕೊಂಡು ದಿನಾಂಕ: 31.07.2024 ರೊಳಗಾಗಿ ಅಂತಹ ನೌಕರರನ್ನು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೊಳಪಡಿಸಲು ಶಿಫಾರಸ್ಸಿನೊಂದಿಗೆ ಇಲಾಖಾ ಮುಖ್ಯಸ್ಥರಿಗೆ ಕ್ರೋಢೀಕೃತ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು.
ಇಲಾಖಾ ಮುಖ್ಯಸ್ಥರು ತಮ್ಮ ಅಧೀನದ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕೃತವಾದ ಪುಸ್ತಾವನೆಗಳನ್ನು ಪರಿಶೀಲಿಸಿ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಅರ್ಹ ನೌಕರರ ಪಟ್ಟಿಯನ್ನು ದಿನಾಂಕ: 31.08.2024ರೊಳಗೆ ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಸಲ್ಲಿಸತಕ್ಕದ್ದು. 01.04.2006ರ ಪೂರ್ವದಲ್ಲಿನ ರಾಜ್ಯ ಸಿವಿಲ್ ಸೇವೆಯಲ್ಲಿನ ಖಾಲಿ ಹುದ್ದೆಗಳಿಗೆ ಹೊರಡಿಸಲಾದ ಅಧಿಸೂಚನೆಯನ್ವಯ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ತದನಂತರ ಸಮುಚಿತ ಮಾರ್ಗದಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ನೇಮಕಾತಿ ಹೊಂದಿದ ಅರ್ಹ ಸರ್ಕಾರಿ ನೌಕರರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆ ಸೌಲಭ್ಯ ಪಡೆದುಕೊಳ್ಳಲು ಇಚ್ಚಿಸಿದಲ್ಲಿ ಮನವಿಯನ್ನು ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ದಿನಾಂಕ: 30.06.2024ರೊಳಗಾಗಿ ಸಲ್ಲಿಸತಕ್ಕದ್ದು. ನೇಮಕಾತಿ ಪ್ರಾಧಿಕಾರವು ಅಂತಹ ಸರ್ಕಾರಿ ನೌಕರನು ಸಮುಚಿತ ಮಾರ್ಗದಲ್ಲಿ ಅರ್ಜಿ ಸಲ್ಲಿಸಿ ಅನ್ಯ ಇಲಾಖೆಗೆ ಆಯ್ಕೆಯಾದ ಹುದ್ದೆಗೆ ವರದಿಮಾಡಿಕೊಳ್ಳುವ ಸಲುವಾಗಿ ಬಿಡುಗಡೆ ಹೊಂದಿರುವುದನ್ನು ಖಚಿತಪಡಿಸಿಕೊಂಡು ಮೇಲಿನ ಕ್ರಮ ಸಂಖ್ಯೆ (4) ರಂತೆ ಪರಿಶೀಲಿಸಿ ಮೇಲಿನ ಕ್ರಮ ಸಂಖ್ಯೆ (5) ರಂತೆ ಮುಂದಿನ ಕ್ರಮಕ್ಕಾಗಿ ಕಳುಹಿಸತಕ್ಕದ್ದು ಎಂಬುದಾಗಿ ತಿಳಿಸಿದ್ದಾರೆ.
ಎನ್ ಪಿಎಸ್ ಅಥವಾ ಹೊಸ ಪಿಂಚಣಿ ಯೋಜನೆಯಿಂದ ಹಳೆ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಒಂದು ಬಾರಿಗೆ ಮಾತ್ರ ಹಳೆ ಪಿಂಚಣಿ ಯೋಜನೆಗೆ ಒಳಪಡಲು ಅವಕಾಶವಿದೆ. ಇದಕ್ಕಾಗಿ ಷರತ್ತುಗಳನ್ನು ಸಹ ವಿಧಿಸಲಾಗಿದೆ. ಆದ್ದರಿಂದ ಸರ್ಕಾರಿ ನೌಕರರು ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಎಲ್ಲರನ್ನೂ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.