ಬಾಯಿ ಮುಚ್ಚಿಕೊಂಡು ಇರಲು ಆಗಲ್ಲ: ಡಿಕೆಶಿ ವಾರ್ನಿಂಗ್‌ಗೆ ರಾಜಣ್ಣ ತಿರುಗೇಟು
x

ಬಾಯಿ ಮುಚ್ಚಿಕೊಂಡು ಇರಲು ಆಗಲ್ಲ: ಡಿಕೆಶಿ ವಾರ್ನಿಂಗ್‌ಗೆ ರಾಜಣ್ಣ ತಿರುಗೇಟು


ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರವಾಗಿ ಹೇಳಿಕೆ ನೀಡುತ್ತಿರುವ ಪಕ್ಷದ ನಾಯಕರಿಗೆ ಬಾಯಿ ಮುಚ್ಚಿಕೊಂಡಿರುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಗೆ ಸಚಿವ ಕೆ.ಎನ್​ ರಾಜಣ್ಣ ತಿರುಗೇಟು ನೀಡಿದ್ದಾರೆ.

ʻಹೆಚ್ಚುವರಿ ಡಿಸಿಎಂ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಒಂದು ವೇಳೆ ಮಾತನಾಡಿದರೆ ಅಂಥವರಿಗೆ ನೋಟಿಸ್ ನೀಡಲಾಗುವುದು. ಬಾಯಿಗೆ ಬೀಗ ಹಾಕೊಂಡು ತೆಪ್ಪಗೆ ಇರಿʼʼ ಎಂದು ಡಿಕೆ ಶಿವಕುಮಾರ್ ಅವರು ಖಡಕ್ ವಾರ್ನಿಂಗ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಜಣ್ಣ ಅವರು, ʻʻನೋಟಿಸ್​ ಕೊಡಲಿ ಬಿಡಿ, ಕೊಟ್ಮೇಲೆ ನಾನು ಹೇಳುತ್ತೇನೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಡಿಕೆ ಶಿವಕುಮಾರ್‌ ಹೇಳಿಕೆಗೆ ಪ್ರತಿತಿಕ್ರಿಯಿಸಿದ ಅವರು, ʻʻಹೇಳಿದರೆ ಏನು ತಪ್ಪಾಗುತ್ತೆ. ವಾರ್ನಿಂಗ್‌ಗೆಲ್ಲಾ ನಾನು ಕೇಳುತ್ತೇನಾ? ಬಾಯಿಗೆ ಎಲ್ಲರೂ ಬೀಗ ಹಾಕಿಕೊಳ್ಳಬೇಕು. ಅವರು ಹೇಳಿದ್ದಕ್ಕೆ ಬಾಯಿ ಮುಚ್ಚಿಕೊಂಡು ಇರಲು ಆಗಲ್ಲʼʼ ಎಂದು ವಾಗ್ದಾಳಿ ಮಾಡಿದ್ದಾರೆ.

ʻʻಸ್ವಾಮಿಗಳು ಹೇಳಿದಂತೆ ಸಿಎಂ ಮಾಡುವುದಕ್ಕೆ ಆಗುತ್ತಾ? ಎಲ್ಲರೂ ಸುಮ್ಮನೆ ಇದ್ದರೆ ನಾನೂ ಸುಮ್ಮನೆ ಇರುತ್ತೇನೆ. ಸಿದ್ದರಾಮಯ್ಯ ರಾಜೀನಾಮೆ ಕೇಳಿದರೆ ಸುಮ್ಮನಿರಬೇಕಾ? ಸ್ವಾಮೀಜಿಗಳು ಹೇಳೋದನ್ನು ಕೇಳೋದಕ್ಕೆ ಆಗುತ್ತಾ?" ಎಂದು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.

ʻʻಶಾಮನೂರು ಶಿವಶಂಕರಪ್ಪ ಅವರನ್ನು ಸಿಎಂ ಮಾಡಿ ಎಂದು ಲಿಂಗಾಯತ ಶ್ರೀಗಳು ಕೇಳುತ್ತಾರೆ. ಸತೀಶ್ ಜಾರಕಿಹೊಳಿ ಮಾಡಿ ಎಂದು ಅವರ ಸಮುದಾಯದ ಸ್ವಾಮೀಜಿ ಹೇಳುತ್ತಾರೆ. ಸ್ವಾಮೀಜಿ ಹೇಳಿರೋದು ಪ್ರಜಾಪ್ರಭುತ್ವಕ್ಕೆ ಅವಮಾನ. ನಾನು ಸಿಎಂ ಪರ ಅಂತಲ್ಲ, ನಾನು ಪ್ರಜಾಪ್ರಭುತ್ವ ಪರʼʼ ಎಂದು ಹೇಳಿದ್ದಾರೆ.

ʻʻಸಿಎಂ ಸಿದ್ದರಾಮಯ್ಯ ಅವರು ಬಡವರ ಪರ ಕೆಲಸ ಮಾಡುತ್ತಾರೆ. ಹಾಗಾಗಿ ನಾವು ಅವರ ಜೊತೆ ಇದೇವೆ. ಡಿ.ಕೆ.ಸುರೇಶ್ ಅವರು ಸಂಸದರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಪರಿಣಾಮಕಾರಿಯಾಗಿ ಕೆಲಸ ಮಾಡಿರುವವರಲ್ಲಿ ಪ್ರಮುಖರು. ಆದರೆ ಅವರನ್ನು ಯಾರು ಸೋಲಿಸಿದ್ದು?, ಸ್ವಾಮೀಜಿಗಳು ಒಂದಾಗಿ ಅವರನ್ನು ಸೋಲಿಸಿದ್ದಾರೆ. ದೇವೇಗೌಡರು ಹುಟ್ಟು ಹಾಕಿದ ಸ್ವಾಮೀಜಿಗಳು ಇವರು. ಯಾರನ್ನು ಸಿಎಂ ಮಾಡಬೇಕೆಂದು ವರಿಷ್ಠರು, ಶಾಸಕರು ನಿರ್ಧರಿಸುತ್ತಾರೆ. ಸ್ವಾಮೀಜಿಗಳು ಹೇಳಿದಂತೆ ಸಿಎಂ ಮಾಡುವುದಕ್ಕೆ ಆಗಲ್ಲʼʼ ಎಂದಿದ್ದಾರೆ.

Read More
Next Story