Federal Exclusive | ಕಾನೂನು ಹೋರಾಟದಿಂದ ಮಾತ್ರ ಮೀಸಲಾತಿ ಸಾಧ್ಯ: ವಚನಾನಂದ ಸ್ವಾಮೀಜಿ
x

Federal Exclusive | ಕಾನೂನು ಹೋರಾಟದಿಂದ ಮಾತ್ರ ಮೀಸಲಾತಿ ಸಾಧ್ಯ: ವಚನಾನಂದ ಸ್ವಾಮೀಜಿ

ಲಿಂಗಾಯತ ಪಂಚಮಸಾಲಿ ಸಮುದಾಯ ಮೀಸಲಾತಿಗಾಗಿ ಕಳೆದ 3 ದಶಕಗಳಿಂದ ಹೋರಾಟ ಮಾಡುತ್ತಿದೆ. ಆದರೆ ಸಮುದಾಯದ ಜನಸಂಖ್ಯೆ ಹಾಗೂ ಆರ್ಥಿಕ ಹಿಂದುಳಿದಿರುವಿಕೆಗೆ ತಕ್ಕಂತೆ ಮೀಸಲಾತಿ ಸಿಕ್ಕಿಲ್ಲ ಎಂಬ ಅಳಲು ಆ ಸಮುದಾಯದ ಜನರು ವ್ಯಕ್ತಪಡಿಸುತ್ತಿದ್ದಾರೆ. 2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಹೋರಾಟ ತೀವ್ರಗೊಂಡಿರುವ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ 'ಫೆಡರಲ್ ಕರ್ನಾಟಕ'ಕ್ಕೆ ವಿಶೇಷ ಸಂದರ್ಶನ ಕೊಟ್ಟಿದ್ದಾರೆ.


‘ಕಾನೂನಾತ್ಮಕ ಹೋರಾಟದಿಂದ ಮಾತ್ರ ನಾವು ಮೀಸಲಾತಿಯನ್ನು ಪಡೆಯುವುದು ಸಾಧ್ಯ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಮೀಸಲಾತಿ ಪಡೆಯಲು ಲಿಂಗಾಯತ ಪಂಚಮಸಾಲಿ ಸಮುದಾಯ ಕಳೆದ 3 ದಶಕಗಳಿಂದ ಹೋರಾಟ ಮಾಡುತ್ತಿದೆ. 1994ರಲ್ಲೇ ಮೀಸಲಾತಿಗಾಗಿ ನಮ್ಮ ಸಮುದಾಯದ ನಾಯಕರು ಹೋರಾಟ ಆರಂಭಿಸಿದ್ದರು’ ಎಂದು ಪಂಚಮಸಾಲಿ ಸಮುದಾಯ ಮೀಸಲಾತಿಗಾಗಿ ನಡೆಸಿರುವ ಸುದೀರ್ಘ ಹೋರಾಟದ ಇತಿಹಾಸವನ್ನು ಹಂಚಿಕೊಂಡರು.

ಹಿಂದಿನ ಸರ್ಕಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಅದನ್ನು ಜಾರಿ ಮಾಡುವುದು ಸರ್ಕಾರದಿಂದ ಸಾಧ್ಯವಾಗಿಲ್ಲ. ಆದರೂ ಕೂಡ ನಾವು ಸರ್ಕಾರಗಳ ಮೇಲೆ ಒತ್ತಡವನ್ನು ಹಾಕಲೇಬೇಕಾಗುತ್ತದೆ. ಆದರೆ ಕೊನೆಗೆ ನಮಗೆ ಮೀಸಲಾತಿ ಸಿಗುವುದು ಕಾನೂನಿಂದ ಮಾತ್ರ ಎಂದು ತಮ್ಮ ಅಭಿಪ್ರಾಯವನ್ನು ವಚನಾನಂದ ಸ್ವಾಮೀಜಿ ಹಂಚಿಕೊಂಡರು.

‘ದ ಫೆಡರಲ್ ಕರ್ನಾಟಕ’ಕ್ಕೆ ಕೊಟ್ಟಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮೀಸಲಾತಿ ಪಡೆಯಲು ಲಿಂಗಾಯತ ಪಂಚಮಸಾಲಿ ಸಮುದಾಯ ಕಳೆದ 3 ದಶಕಗಳಿಂದ ಹೋರಾಟ ಮಾಡುತ್ತಿದೆ. 1994ರಲ್ಲಿಯೇ ಮೀಸಲಾತಿಗಾಗಿ ನಮ್ಮ ಸಮುದಾಯದ ನಾಯಕರು ಹೋರಾಟ ಆರಂಭಿಸಿದ್ದರು’ ಎಂದು ಪಂಚಮಸಾಲಿ ಸಮುದಾಯ ಮೀಸಲಾತಿಗಾಗಿ ನಡೆಸಿರುವ ಸುದೀರ್ಘ ಹೋರಾಟದ ಇತಿಹಾಸವನ್ನು ಹಂಚಿಕೊಂಡರು.

ಹಿಂದಿನ ಸರ್ಕಾರದಲ್ಲಿ (ಬಸವರಾಜ ಬೊಮ್ಮಾಯಿ ಸರ್ಕಾರ) ಅವರ ಬಿಜೆಪಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿಯನ್ನು ಘೋಷಣೆ ಮಾಡಿದ್ದರು. ಆದರೆ ಅದನ್ನು ಜಾರಿ ಮಾಡುವುದು ಸರ್ಕಾರದಿಂದ ಸಾಧ್ಯವಾಗಿಲ್ಲ. ಹೀಗಾಗಿ ನಾವು ಕಾನೂನಿನ ಹೋರಾಟದಿಂದಲೇ ಮೀಸಲಾತಿ ಪಡೆಯಬೇಕು. ನಮಗೆ ಮೀಸಲಾತಿ ಸಿಗುವುದು ಕಾನೂನಿಂದ ಮಾತ್ರ ಎಂದು ವಚನಾನಂದ ಸ್ವಾಮೀಜಿ ವಿವರಿಸಿದರು.

ಹಿಂದಿನ ಸರ್ಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ಕೊಟ್ಟಿದ್ದ ಶೇ. 4 ಮೀಸಲಾತಿಯನ್ನು ರದ್ದುಪಡಿಸಿ ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯಕ್ಕೆ ತಲಾ ಶೇ. 2 ರಷ್ಟು ಹಂಚಿಕೆ ಮಾಡಿ 2 ಸಿ ಮತ್ತು 2 ಡಿ ವರ್ಗದಲ್ಲಿ (ಮುಂಚೆ 3 ಎ ಮತ್ತು 3 ಬಿ) ಮರುಹಂಚಿಕೆ ಮಾಡಿದ್ದರು. ಆ ಮೂಲಕ ಒಕ್ಕಲಿಗರ ಶೇ. 4 ಮೀಸಲಾತಿ ಶೇ. 6ಕ್ಕೂ, ಲಿಂಗಾಯತರ ಶೇ. 5 ಮೀಸಲಾತಿ ಶೇ. 7ಕ್ಕೂ ಹೆಚ್ಚಾಗಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ನಮಗೆ 2 ‘ಡಿ’ ಅಥವಾ 2 ‘ಸಿ’ ಮೀಸಲಾತಿ ಪಂಚಮಸಾಲಿ ಸಮುದಾಯಕ್ಕೆ ಸಿಕ್ಕಿರಲಿಲ್ಲ.

ಮೀಸಲಾತಿ ಕಡಿತವಾದವರು ಕೋರ್ಟ್ ಮೊರೆ ಹೋಗಿದ್ದರಿಂದ ನಮಗೆ ಮೀಸಲಾತಿ ಸಿಗಲಿಲ್ಲ. ಹಿಂದಿನ ಸರ್ಕಾರ ಆದರೆ ಅದೇ ಸಂದರ್ಭದಲ್ಲಿ ಎಸ್​ಸಿ ಸಮುದಾಯದ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ, ಎಸ್​ಟಿ ಸಮುದಾಯದ ಮೀಸಲಾತಿಯನ್ನು ಶೇ. 3 ರಿಂದ 7ಕ್ಕೆ ಏರಿಕೆ ಮಾಡಿತ್ತು. ಹೀಗಾಗಿ ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ 56ಕ್ಕೆ ಏರಿಕೆ ಮಾಡಿದರೂ ಕೂಡ ಎಸ್​ಸಿ ಹಾಗೂ ಎಸ್​ಟಿ ಸಮುದಾಯಕ್ಕೆ ಕೊಟ್ಟಿರುವ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಯಾಕೆಂದರೆ ಅದನ್ನು ಪ್ರಶ್ನಿಸಿ ಯಾರೂ ಕೋರ್ಟ್ ಮೊರೆ ಹೋಗಲಿಲ್ಲ. ಹೀಗಾಗಿ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕಾದರೆ ಅದು ಕಾನೂನು ಹೋರಾಟ ಮಾತ್ರದಿಂದ ಎಂದು ವಚನಾನಂದ ಸ್ವಾಮೀಜಿ ವಿವರಿಸಿದರು. ಜೊತೆಗೆ ಪಂಚಮಸಾಲಿ ಸಮುದಾಯದ ಮೀಸಲಾತಿ ಪಡೆಯಲು ಏನು ಮಾಡಬೇಕು ಎಂಬುದನ್ನೂ ಅವರು ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ ಮಾತ್ರ ಮೀಸಲಾತಿ ಸಿಗುವುದಿಲ್ಲ

ಮೀಸಲಾತಿಗಾಗಿ ನಾವು ಹೋರಾಟವನ್ನು ಮಾಡುತ್ತಿದ್ದೇವೆ. ಆದರೆ ಲಿಂಗಾಯತ ಅಥವಾ ವೀರಶೈವ ಪಂಚಮಸಾಲಿ ಸಮುದಾಯಕ್ಕೆ ಮಾತ್ರ ಮೀಸಲಾತಿ ಸಿಗುವುದು ಕಷ್ಟ. ನಾವೆಲ್ಲರೂ ಸೇರಿಕೊಂಡು ಹೋರಾಟ ಮಾಡಬೇಕು. ಹೀಗೆ ಮಾಡಿದಾಗ ನಮ್ಮ ಸಮುದಾಯಕ್ಕೆ 3 ಬಿ ಅಡಿ ಕೊಟ್ಟಿರುವ ಮೀಸಲಾತಿ ಪ್ರಮಾಣವು ಹೆಚ್ಚಾಗಬೇಕು. ಹಾಗಾದಲ್ಲಿ ಮಾತ್ರ ನಮಗೆ ಅಂದುಕೊಂಡಷ್ಟು ಮೀಸಲಾತಿ ಸಿಗುತ್ತದೆ.

ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಿದರೆ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳಿಗೆ ಮೀಸಲಾತಿ ಸಿಗುತ್ತದೆ. ಆದರೆ ಪಂಚಮಸಾಲಿ ಸಮುದಾಯದ ನಾವು ಹೋರಾಟ ಮಾಡುವುದರಿಂದ ಉಳಿದವರೆಲ್ಲರಿಗೂ ಮೀಸಲಾತಿ ಸಿಗುವಂತಾಗುವುದು. ಹೀಗೆ ಆಗಬಾರದು. ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳು ಒಟ್ಟಿಗೆ ಹೋರಾಟ ಮಾಡಿ, 3 ಬಿ ಅಡಿ ಹೆಚ್ಚಿನ ಮೀಸಲಾತಿ ಹೆಚ್ಚಿಸಿಕೊಳ್ಳುವ ಮೂಲಕ ನಮ್ಮ ಬೇಡಿಕೆ ಈಡೇರಿಸಿಕೊಳ್ಳಬಹುದು. ನಾವು ಒಗ್ಗಟ್ಟಾದಾಗ ಸರ್ಕಾರಗಳೂ ಮಣಿಯಬೇಕಾಗುತ್ತದೆ. ಆಗ ನಮ್ಮ ಬೇಡಿಕೆ ಈಡೇರುತ್ತದೆ ಎಂದು ವಚನಾಂದ ಸ್ವಾಮೀಜಿ ವಿವರಿಸಿದರು.


ಮೀಸಲಾತಿ ಹೋರಾಟ ಆರಂಭವಾಗಿದ್ದು ಎಲ್ಲಿ? ಯಾವಾಗ?

ಪಂಚಮಸಾಲಿ ಮೀಸಲಾತಿ ಹೋರಾಟ ಆರಂಭದ ಕುರಿತು ಫೆಡರಲ್ ಕರ್ನಾಟಕದ ಪ್ರಶ್ನೆಗೆ ಉತ್ತರಿಸಿದ ವಚನಾನಂದ ಸ್ವಾಮೀಜಿ, ‘ಪಂಚಮಸಾಲಿ ಸಮುದಾಯಕ್ಕೆ ಹೋರಾಟ ಆರಂಭವಾಗಿದ್ದು ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ 1994ರಲ್ಲಿ’ ಎಂದು ವಿವರಿಸಿದರು. 1994ರಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದ, ಡಾ. ಬಿ. ಎಂ. ಹನುಮನಾಳ ಪಂಚಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರದ ಬಗ್ಗೆ ಮೊದಲು ಧ್ವನಿ ಎತ್ತಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೋಯಿಲಿ ಗಮನ ಸೆಳೆದಿದ್ದರು. ಪಂಚಮಸಾಲಿಗಳನ್ನು '3ಬಿ' ವರ್ಗದಲ್ಲಿ ಗುರುತಿಸುವುದು ಸಮುದಾಯ ಅನುಭವಿಸುತ್ತಿರುವ ಪರಿಶ್ರಮಕ್ಕೆ ಸಾಮಾಜಿಕವಾಗಿ ಯಾವುದೇ ನ್ಯಾಯ ಒದಗಿಸಿದಂತಾಗುವುದಿಲ್ಲ. ಹೀಗಾಗಿ ಪ್ರತ್ಯೇಕ ಮೀಸಲಾತಿ ಬೇಕು ಎಂದು ಆಗ್ರಹಿಸಿದ್ದರು.

ನಂತರ 2003ರಲ್ಲಿ ಪಂಚಮಸಾಲಿ ಸಮುದಾಯದ 80 ಮುಖಂಡರ ನಿಯೋಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭೇಟಿ ಮಾಡಿ ವಿವರಿಸಿತ್ತು. ಆದರೆ ಆಗ ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪಂಚಮಸಾಲಿ ಸಮುದಾಯದ ಹೆಸರೇ ಇರಲಿಲ್ಲ. ಹೀಗಾಗಿ ಮೊದಲು ರಾಜ್ಯ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಿರಿ ಎಂದು ಕೇಂದ್ರ ಹಿಂದುಳಿದ ವರ್ಗಗಳ ಆಯೋಗ ತಿಳಿಸಿತ್ತು. ಅದರಂತೆ ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ರಾಜ್ಯದಲ್ಲಿ ಲಿಂಗಾಯಗ ಪಂಚಮಸಾಲಿ ಸಮುದಾಯವನ್ನು 2009ರಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಯಿತು. ಆಗ ವೀರಶೈವ ಪಂಚಮಸಾಲಿ, ಲಿಂಗಾಯತ ಪಂಚಮಸಾಲಿ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಎಂದು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ನಮ್ಮ ಸಮುದಾಯವನ್ನು ಸೇರಿಸಲಾಯಿತು ಎಂದು ವಿವರಿಸಿದರು.





ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಹೋರಾಟ ನಡೆದಿರಲ್ಲ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 2013 ರಿಂದ 2018ರ ಕಾಲದಲ್ಲಿ ಪಂಚಮಸಾಲಿ ಮೀಸಲಾತಿಗಾಗಿ ಯಾವುದೇ ಹೋರಾಟ ನಡೆದಿರಲಿಲ್ಲ. 2018ರಲ್ಲಿ ಹರಿಹರ ಪೀಠಕ್ಕೆ ನಾವು ಬಂದ ನಂತರ ಕೋರ್ಟ್​ಗೆ ಹೋಗುವ ಮೂಲಕ ಮತ್ತೆ ನಾವು ಹೋರಾಟ ಮುಂದುವರೆಸಿದ್ದೇವೆ.

ದೇಶದಲ್ಲಿ ಒಟ್ಟು ಒಂದೂವರೆ ಕೋಟಿಯಷ್ಟು ಪಂಚಮಸಾಲಿ ಸಮುದಾಯದ ಜನಸಂಖ್ಯೆಯಿದೆ. ರಾಜ್ಯದಲ್ಲಿ 80 ಲಕ್ಷ, ಮಹಾರಾಷ್ಟ್ರದಲ್ಲಿ 40 ಲಕ್ಷ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಮೂರೂ ರಾಜ್ಯಗಳಲ್ಲಿ ಸುಮಾರು 25 ಲಕ್ಷ ಪಂಚಮಸಾಲಿಗಳು ವಾಸಿಸುತ್ತಿದ್ದಾರೆ ಎಂದು ವಚನಾನಂದ ಸ್ವಾಮೀಜಿ ವಿವರಿಸಿದ್ದಾರೆ.

ಹೀಗಾಗಿ ಹಿಂಸಾತ್ಮಕ ಹೋರಾಟಕ್ಕಿಂತಲೂ ಕಾನೂನಾತ್ಮಕ ಹೋರಾಟದ ಮೂಲಕ ಮಾತ್ರ ಪಂಚಮಸಾಲಿ ಸಮುದಾಯ ಮೀಸಲಾತಿ ಹೋರಾಟದಲ್ಲಿ ಯಶಸ್ಸು ಪಡೆಯುವುದು ಎಂದು ಅವರು ಪ್ರತಿಪಾದಿಸಿದ್ದಾರೆ.

Read More
Next Story