Wayanad Landslide | ವಯನಾಡ್‌ನತ್ತ ಪ್ರಯಾಣ ಬೆಳೆಸಿದ ಸಚಿವ ಸಂತೋಷ್ ಲಾಡ್
x

Wayanad Landslide | ವಯನಾಡ್‌ನತ್ತ ಪ್ರಯಾಣ ಬೆಳೆಸಿದ ಸಚಿವ ಸಂತೋಷ್ ಲಾಡ್


ಕೇರಳದ ವಯನಾಡಿನ ಪ್ರವಾಹಪೀಡಿತ ಪ್ರದೇಶದಲ್ಲಿ ಸಿಲುಕಿರಬಹುದಾದ ಕನ್ನಡಿಗರ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ರಾಜ್ಯ ಸರ್ಕಾರದ ನೆರವು ನೀಡಲು ಕೇರಳ ಸರ್ಕಾರದ ಜೊತೆ ಕೈ ಜೋಡಿಸಲು ಸಚಿವ ಸಂತೋಷ್ ಲಾಡ್ ಅವರು ವಯನಾಡ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಬುಧವಾರ ವಯನಾಡಿಗೆ ತೆರಳಿದ್ದಾರೆ. ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ, ವಿಶೇಷವಾಗಿ ಕನ್ನಡಿಗರ ಸುರಕ್ಷತೆಯೊಂದಿಗೆ ಅಲ್ಲಿನ ಸ್ಥಳೀಯ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. ದೂರವಾಣಿ ಕರೆ ಸ್ವೀಕರಿಸುತ್ತಿದ್ದಂತೆ ವಯನಾಡಿಗೆ ಹೊರಟ ಸಚಿವ ಸಂತೋಷ್ ಲಾಡ್, ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಲಾಡ್ ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ʻʻಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತೆರಳುತ್ತಿದ್ದೇನೆ. ಈಗಾಗಲೇ ನಾಲ್ವರು ಕನ್ನಡಿಗರು ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಇನ್ನೂ ಹಲವರು ಸಿಲುಕಿರುವ, ನಾಪತ್ತೆಯಾಗಿರುವ ಮಾಹಿತಿ ಇದೆ. ಅವರೆಲ್ಲರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗಿದೆʼʼ ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಕೇರಳ ಸಿಎಂಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ಭೂ ಕುಸಿತದಿಂತ ತತ್ತರಿಸಿರುವ ಕೇರಳಕ್ಕೆ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದ್ದಾರೆ. ಪರಿಹಾರ ಕಾರ್ಯದಲ್ಲಿ ನಮ್ಮ ಸರ್ಕಾರ ನಿಮ್ಮೊಂದಿಗೆ ಕೈ ಜೋಡಿಸಲಿದೆ. ಅಗತ್ಯ ನೆರವು ಒದಗಿಸಲು ಸಿದ್ಧವಾಗಿದೆ. ರಕ್ಷಣಾ ತಂಡಗಳು ಮತ್ತು ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

Read More
Next Story