Wayanad Landslide | 100 ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ
ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, "ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದ ಈ ಸಂದರ್ಭದಲ್ಲಿ ಕರ್ನಾಟಕವು ಕೇರಳದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ವಯನಾಡಿನಲ್ಲಿ 100 ಮನೆಗಳನ್ನು ನಿರ್ಮಿಸಿ ಕೊಡುವ ಭರವಸೆಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದೇನೆ. ಒಟ್ಟಾಗಿ ನಾವು ಪುನರ್ನಿರ್ಮಾಣ ಮಾಡುತ್ತೇವೆ ಮತ್ತು ಆ ಭರವಸೆಯನ್ನು ಹುಟ್ಟುಹಾಕುತ್ತಿದ್ದೇವೆʼʼ ಎಂದು ತಿಳಿಸಿದ್ದಾರೆ.
In light of the tragic landslide in Wayanad, Karnataka stands in solidarity with Kerala. I have assured CM Shri @pinarayivijayan of our support and announced that Karnataka will construct 100 houses for the victims. Together, we will rebuild and restore hope.
— Siddaramaiah (@siddaramaiah) August 3, 2024
ಭೀಕರ ಭೂಕುಸಿತದಿಂದಾಗಿ ಈವರೆಗೆ 333ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿದ್ದಾರೆ. ಸದ್ಯ ಐದನೇ ದಿನವೂ ಭರದಿಂದ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಶವಗಳಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಸುಮಾರು 6 ಸಾವಿರಕ್ಕೂ ಹೆಚ್ಚಿನ ಸ್ವಯಂ ಸೇವಕರು ಕಾರ್ಯಾಚರಣೆಗೆ ಸಾಥ್ ನೀಡಿದ್ದು, ಸ್ಥಳದಲ್ಲಿ ಸೇನೆ, ಎನನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸ್ಥಳೀಯ ಪೊಲೀಸ್, ಅಗ್ನಿಶಾಮಕ ತಂಡ ಮೊಕ್ಕಾಂ ಹೂಡಿವೆ.
ಕಾಂಗ್ರೆಸ್ ನಿಂದ 100 ಮನೆ ನಿರ್ಮಾಣದ ಭರವಸೆ
ಕಳೆದ ಎರಡು ದಿನಗಳಿಂದ ವಯನಾಡಿನಲ್ಲಿ ಬೀಡು ಬಿಟ್ಟಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಮುಂಡಕ್ಕೈಗೆ ಭೇಟಿ ನೀಡಿ ರಕ್ಷಣಾಪಡೆಗಳ ಕಾರ್ಯವನ್ನ ಶ್ಲಾಘಿಸಿದ್ದರು. ಚೋರಲ್‌ಮಲಾಗೆ ರಾಹುಲ್ ವಾಪಸ್ ಆಗುತ್ತಿದ್ದಾಗ ಅವರ ವಾಹನವನ್ನು ಸ್ಥಳೀಯರು ಅಡ್ಡಗಟ್ಟಿದ್ದರು. ಸ್ಥಳೀಯ ಶಾಸಕರು ನಮ್ಮ ಕಷ್ಟ ಕೇಳುತ್ತಿಲ್ಲ, ನೆರವಿಗೂ ಬಂದಿಲ್ಲ, ಸಮಸ್ಯೆ ಬಗೆಹರಿಸಿ ಎಂದು ಕೂಗಾಡಿದ್ದರು.
ಇನ್ನು, ದುರಂತ ಸ್ಥಳದಿಂದ ಮರಳಿದ ರಾಹುಲ್ ಮತ್ತು ಪ್ರಿಯಾಂಕಾ ಅಧಿಕಾರಿಗಳ ಜೊತೆ ಸಭೆ ಮಾಡಿ ವಿವರಣೆ ಪಡೆದುಕೊಂಡರು. ಅಲ್ಲದೇ ಪಂಚಾಯತ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿ 100ಕ್ಕೂ ಹೆಚ್ಚು ಮನೆಗಳನ್ನು ಪಕ್ಷದ ವತಿಯಿಂದ ಕಟ್ಟಿಸಿಕೊಡುವ ಭರವಸೆ ಕೊಟ್ಟಿದ್ದಾರೆ.