ಬೆಂಗಳೂರಿನ ಕೆರೆ ನೈರ್ಮಲ್ಯ | ರಾಜ್ಯ ಸರ್ಕಾರಕ್ಕೆ NGT ಚಾಟಿ
x
ಬೆಂಗಳೂರು ಕೆರೆ

ಬೆಂಗಳೂರಿನ ಕೆರೆ ನೈರ್ಮಲ್ಯ | ರಾಜ್ಯ ಸರ್ಕಾರಕ್ಕೆ NGT ಚಾಟಿ

ಬೆಂಗಳೂರಿನ ಕೆರೆಗಳ ನೀರಿನ ಗುಣಮಟ್ಟ ಅತಿ ಕಳಪೆಯಾಗಿದೆ ಎಂಬ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಹೇಳಿದೆ. ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ರಾಜ್ಯ ಸರ್ಕಾರದಿಂದ ವಿವರಣೆ ಕೇಳಿದೆ.


ಬೆಂಗಳೂರಿನ ಕೆರೆಗಳ ನೀರಿನ ಗುಣಮಟ್ಟ ಅತಿ ಕಳಪೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಹೇಳಿದೆ. ಈ ಬಗ್ಗೆ ಇದೀಗ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ರಾಜ್ಯ ಸರ್ಕಾರದಿಂದ ವಿವರಣೆ ಕೇಳಿದೆ.

ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ, ಅರುಣ್ ಕುಮಾರ್ ತ್ಯಾಗಿ ಹಾಗೂ ಡಾ.ಎ.ಸೆಂಥಿಲ್‌ವೆಲ್ ಅವರನ್ನು ಒಳಗೊಂಡ ಪೀಠವು ರಾಜ್ಯ ಸರ್ಕಾರದಿಂದ ವಿವರಣೆ ಕೇಳಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ, ಬಿಬಿಎಂಪಿ, ಕರ್ನಾಟಕ ಚೌಗು ಪ್ರದೇಶ ಪ್ರಾಧಿಕಾರ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರಿಗೆ ಪೀಠ ನೋಟಿಸ್ ನೀಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಗರದಲ್ಲಿನ 110 ಕೆರೆಗಳನ್ನು ಮಂಡಳಿ ಅಧ್ಯಯನ ಮಾಡಿದ್ದು, ನೀರಿನ ಗುಣಮಟ್ಟದ ಮಾಪನದಲ್ಲಿ ಎಲ್ಲ ಕೆರೆಗಳೂ ಡಿ ಮತ್ತು ಇ ಕೆಟಗರಿಗಳ ಅಡಿಯಲ್ಲಿ ಬಂದಿದ್ದು, ಯಾವುದೂ ಎ, ಬಿ ಅಥವಾ ಸಿ ಕೆಟಗರಿಯಲ್ಲಿಲ್ಲ ಎಂದು ಹೇಳಿದೆ.

ಬೆಂಗಳೂರಿನ 15 ಕೆರೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಅಳವಡಿಸಿದ ಬಳಿಕವೂ ನೀರಿನ ಗುಣಮಟ್ಟ ಸುಧಾರಣೆ ಆಗಿಲ್ಲ. ಕಳೆದ 31 ತಿಂಗಳಲ್ಲಿ 12 ಕೆರೆಗಳ ನೀರಿನ ಗುಣಮಟ್ಟ ಕಳಪೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

'ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ, 9 ಜಲಕಾಯಗಳ ನೀರಿನ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಉತ್ತರಹಳ್ಳಿ ಕೆರೆಯ ನೀರನ್ನು 16 ಬಾರಿ ಪರಿಶೀಲನೆ ನಡೆಸಲಾಗಿದೆ. ಎಲ್ಲ ವರದಿಯಲ್ಲೂ ನೀರಿನ ಗುಣಮಟ್ಟ ಅತ್ಯಂತ ಕಳಪೆ ಎಂದು ಬಂದಿದೆ. ಅನೇಕ ಜಲಮೂಲಗಳು ಜೈವಿಕ ವ್ಯವಸ್ಥೆಯ ಕುಸಿತದಲ್ಲಿವೆ ಎಂಬುದು ಸ್ಪಷ್ಟವಾಗಿದೆ. ಎಸ್‌ಟಿಪಿಗಳು ಕಾರ್ಯನಿರ್ವಹಿಸದೆ ಇರುವುದಕ್ಕೆ ಈ ವರದಿ ಸಾಕ್ಷಿ. ರಾಜ್ಯ ಸರ್ಕಾರದ ಲೋಪ ಎದ್ದು ಕಾಣುತ್ತಿದೆ' ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ ನೀರಿನ ಸಂರಕ್ಷಣಾ ಕಾಯ್ದೆ 1974, ಚೌಗು ಪ್ರದೇಶ ಸಂರಕ್ಷಣಾ ನಿಯಮ 2017 ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪೀಠ ಹೇಳಿದೆ.

Read More
Next Story