Bengaluru Water Crisis | ʻನೀರಿಲ್ಲ, ವರ್ಕ್ ಫ್ರಮ್‌ ಹೋಮ್‌ಗೆ ಅವಕಾಶ ಕೊಡಿʼ
x
ಬೆಂಗಳೂರು ನೀರಿನ ಸಮಸ್ಯೆ | ವರ್ಕ್‌ ಫ್ರಮ್‌ ಹೋಮ್‌ಗೆ ಮನವಿ

Bengaluru Water Crisis | ʻನೀರಿಲ್ಲ, ವರ್ಕ್ ಫ್ರಮ್‌ ಹೋಮ್‌ಗೆ ಅವಕಾಶ ಕೊಡಿʼ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿಯಾನ | ಜೂನ್‌ ಅಂತ್ಯದ ವರೆಗೆ ವರ್ಕ್‌ ಫ್ರಮ್ ಹೋಮ್‌, ಆನ್‌ಲೈನ್‌ ಕ್ಲಾಸ್‌ಗೆ ಮನವಿ


ಬೆಂಗಳೂರಿನಲ್ಲಿ ನೀರಿನ ಸಮಸ್ಯೆ(Bengaluru water crisis) ತೀವ್ರವಾಗಿದ್ದು, ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಮ್‌ ಹೋಮ್ (ಮನೆಯಿಂದ ಕೆಲಸ) ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎನ್ನುವ ಕೂಗು ಎದ್ದಿದೆ.

ಬೆಂಗಳೂರಿನಲ್ಲಿ ಕೋವಿಡ್‌ -19 ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಮ್‌ಗೆ ಅವಕಾಶ ನೀಡಲಾಗಿತ್ತು. ಇದೀಗ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗಿದೆ. ಇದೇ ಸಂದರ್ಭದಲ್ಲಿ ಬಿಸಿಲಿನ ಝಳವೂ ಸಹ ಗರಿಷ್ಠ ಮಟ್ಟಕ್ಕೆ ತಲುಪುತ್ತಿದೆ. ಪರಿಸ್ಥಿತಿಯ ಗಂಭೀರತೆ ಪರಿಗಣಿಸಿ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ನೀಡಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ

ಬೆಂಗಳೂರಿನಲ್ಲಿ ನೀರಿನ (#BengaluruWaterCrisis) ಸಮಸ್ಯೆ ಹೆಚ್ಚಳವಾಗುತ್ತಿರುವುದರಿಂದ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಈ ಸಂಬಂಧ ಕಂಪನಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿಯಾನ ನಡೆಯುತ್ತಿದೆ. ಕೆಲವರು ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಐಟಿ- ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಎಕ್ಸ್‌ನಲ್ಲಿ ಟ್ಯಾಗ್ ಮಾಡುತ್ತಿದ್ದಾರೆ.
@Bnglrweatherman ಎನ್ನುವ ಖಾತೆದಾರರು ಈ ಸಂಬಂಧ ಟ್ವೀಟ್‌ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಐಟಿ- ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಟ್ಯಾಗ್‌ ಮಾಡಿದ್ದಾರೆ. ಇದಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜೂನ್‌ ವರೆಗೂ ಮನೆಯಿಂದ ಅವಕಾಶ ಕೊಡಿ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುತ್ತಿರುವುದರಿಂದ ಮನೆಯಿಂದ ಕಡ್ಡಾಯವಾಗಿ ಕೆಲಸ ಮಾಡಲು ಅವಕಾಶ ನೀಡುವಂತೆ ಖಾಸಗಿ ಕಂಪನಿಗಳಿಗೆ ಸೂಚನೆ ನೀಡಿ ಹಾಗೂ ಬೆಂಗಳೂರಿನಲ್ಲಿ ಜೂನ್ ಅಂತ್ಯದವರೆಗೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ನಡೆಸಬೇಕು ಎಂದೂ @Bnglrweatherman ಖಾತೆದಾರರು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಾರ್ಪೊರೇಟ್ (ಖಾಸಗಿ ಕಂಪನಿ)ಕಂಪನಿಗಳು ಹೆಚ್ಚಾಗಿ ಕೇಂದ್ರೀಕೃತವಾಗಿರುವ ಪ್ರದೇಶದಲ್ಲೇ ನೀರಿನ ಸಮಸ್ಯೆ ಇದೆ. ಉಳಿದ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿಲ್ಲ. ಹೀಗಾಗಿ, ಹೊರೆಯನ್ನು ತಗ್ಗಿಸಲು ಇದು ಸೂಕ್ತವಾದ ಸಮಯವಾಗಿದೆ. ಇನ್ನು ಸದ್ಯಕ್ಕೆ ಮಳೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಾರ್ಚ್‌ನಲ್ಲೂ ಒಣಹವೆ ಮುಂದುವರಿದಿದೆ ಎಂದು ಟ್ವೀಟ್ ಮಾಡಲಾಗಿದೆ. ಮುಂದುವರಿದು, ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ನೀಡುವುದರ ಹಿನ್ನೆಲೆ ನೀರನ್ನು ಉಳಿಸುವುದಲ್ಲ. ನೀರು ಪೂರೈಕೆಯ ಬೇಡಿಕೆಯನ್ನು ಕಡಿಮೆ ಮಾಡುವುದಾಗಿದೆ ಎಂದೂ ಅವರು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಸುಮಾರು 35-40% ವಲಸಿಗರು ಇದ್ದಾರೆ. ಅಂದರೆ 1.4 ಕೋಟಿ ಜನಸಂಖ್ಯೆಯಲ್ಲಿ ಸುಮಾರು 49-56 ಲಕ್ಷ ಜನ. ಕೆಲವರಿಗೆ ಮನೆಯಿಂದಲೇ ಅವಕಾಶ ನೀಡುವುದರಿಂದ ಅವರು ಅವರ ಊರುಗಳಿಗೆ ಜೂನ್‌ ಅಂತ್ಯದ ವರೆಗೂ ಹೋದರೆ, ನಗರದಲ್ಲಿ ನೀರಿನ ಪೂರೈಕೆ ಹಾಗೂ ಬೇಡಿಕೆಯ ಒತ್ತಡ ಕಡಿಮೆ ಆಗಲಿದೆ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್‌ಗೆ ಹಲವರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದರಿಂದ ಸಮಸ್ಯೆ ಪರಿಹಾರವಾಗಲಿದ್ದು, ಉತ್ತಮ ಸಲಹೆ ಎಂದಿದ್ದಾರೆ. ಶಂಕರ್ ಎನ್ನುವವರು ಇದು ನಿಜಕ್ಕೂ ಅವಶ್ಯವಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಪಾದಿಸಿದ್ದಾರೆ.

ಮುಂದಿನ ವಾರ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ

ಮನೆಯಿಂದಲೇ ಕೆಲಸ ಮಾಡುವುದಕ್ಕೆ ಕಂಪನಿಗಳು ಅವಕಾಶ ನೀಡಲಿವೆಯೇ ಎನ್ನುವುದಕ್ಕೆ ಮುಂದಿನ ವಾರ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ ಎಂದು ಖಾಸಗಿ ಕಂಪನಿಯ ಉದ್ಯೋಗಿ ಚೈತ್ರಿಕಾ ಹರ್ಗಿ ಹೇಳಿದರು.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ನೀಡುವ ಬಗ್ಗೆ ಮುಂದಿನ ವಾರ ಚರ್ಚೆ ಮಾಡುವುದಾಗಿ ಸಂಸ್ಥೆಗಳ ಆಡಳಿತ ಮಂಡಳಿ ಹೇಳುತ್ತಿವೆ. ಈಗ ಸದ್ಯ ಅಂತಹ ಯಾವುದೇ ರೀತಿಯ ನಿರ್ಧಾರ ಆಗಿಲ್ಲ. ವರ್ಕ್‌ ಫ್ರಮ್‌ ಹೋಮ್‌ ನೀಡುವ ಬಗ್ಗೆ ಅನೌಪಚಾರಿಕ ಚರ್ಚೆ ನಡೆದಿದೆ. ಈಗಾಗಲೇ ನಮ್ಮ ಮುಂದೆ ಕೊರೊನಾದ ಹಿನ್ನೆಲೆ ಇರುವುದರಿಂದ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಿವೆ ಎಂದರು.

ವರ್ಕ್‌ ಫ್ರಮ್‌ ಹೋಮ್‌ ಕಷ್ಟವಾಗಲಿದೆ: ವಿನಯ್. ಆರ್
ಈಗ ಇರುವ ಪರಿಸ್ಥಿತಿಯಲ್ಲಿ ಮನೆಯಿಂದ ಕೆಲಸ ಮಾಡುವುದಕ್ಕಿಂತ ಕಂಪನಿಗಳಿಗೆ ಹೋಗುವುದೇ ಉತ್ತಮ ಎಂದು ಐಟಿ ಉದ್ಯೋಗಿ ವಿನಯ್.ಆರ್‌ ಅವರು ಹೇಳಿದರು. ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಅವರು, ವರ್ಕ್‌ ಫ್ರಮ್‌ ಹೋಮ್‌ಗಿಂತ ಕಂಪನಿಗಳಿಗೆ ಬಂದರೆ, ಕಂಪನಿಯವರೇ ನೀರಿನ ವ್ಯವಸ್ಥೆ ಮಾಡುತ್ತಾರೆ.

ಪ್ರತ್ಯೇಕವಾಗಿ ಮನೆಗಳಲ್ಲಿ ಕೆಲಸ ಮಾಡಿ ನೀರು ಬಳಸುವುದಕ್ಕಿಂತಲೂ ಕಂಪನಿಗಳಲ್ಲಿ ಕೆಲಸ ಮಾಡಿದರೆ ನೀರು ಉಳಿತಾಯವಾಗಲಿದೆ. ಮನೆಯಿಂದ ಕೆಲಸ ಮಾಡುವುದಾದರೆ ನೀರಿನ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯಪಟ್ಟರು.

Read More
Next Story