Water crisis: ನೀರು ಪೋಲು‌ ನಿಷೇಧ; ತಪ್ಪಿದರೆ ದಂಡಾಸ್ತ್ರ ಗ್ಯಾರಂಟಿ
x

Water crisis: ನೀರು ಪೋಲು‌ ನಿಷೇಧ; ತಪ್ಪಿದರೆ ದಂಡಾಸ್ತ್ರ ಗ್ಯಾರಂಟಿ


ಬೆಂಗಳೂರು: ನಗರದಲ್ಲಿ‌ ತಲೆದೋರಿರುವ ಜಲಕ್ಷಾಮದ ಹಿನ್ನೆಲೆಯಲ್ಲಿ‌ ಎಚ್ಚತ್ತುಕೊಂಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕುಡಿಯುವ ನೀರನ್ನು ಇತರ‌ ಉದ್ದೇಶಗಳಿಗೆ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶಿಸಿದೆ.

ವಾಹನಗಳನ್ನು ತೊಳೆಯುವುದು, ಕೈತೋಟಕ್ಕೆ , ಕಟ್ಟಡ ನಿರ್ಮಾಣ ಮತ್ತು ನೀರಿನ ಕಾರಂಜಿಗಳಂತಹ ಮನರಂಜನಾ ಉದ್ದೇಶಗಳಿಗಾಗಿ ಜನರು ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಮಾಲ್‌ಗಳು ಮತ್ತು ಥಿಯೇಟರ್‌ಗಳಲ್ಲಿ ಕುಡಿಯುವ ನೀರಿನ ಹೊರತಾಗಿ ಇನ್ನಿತರ‌ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿ ಸೂಚನೆ ನೀಡಲಾಗಿದೆ.

ಬೆಂಗಳೂರು‌ ನಗರದಲ್ಲಿ ಖಾಯಂ ಮತ್ತು ವಲಸೆ ಸೇರಿದಂತೆ ಸುಮಾರು 1.40 ಕೋಟಿ ಜನಸಂಖ್ಯೆಯನ್ನು ಗುರುತಿಸಲಾಗಿದ್ದು, ಎಲ್ಲರಿಗೂ ಕುಡಿಯುವ ನೀರನ್ನು ಒದಗಿಸುವುದು ಅಗತ್ಯವಾಗಿದೆ. ನಗರದಲ್ಲಿ ಪ್ರತಿದಿನ ಉಷ್ಣಾಂಶ ಹೆಚ್ಚುತ್ತಿದೆ ಮತ್ತು ಅಂತರ್ಜಲ ಕುಸಿಯುತ್ತಿದೆ. ಮಳೆಯ ಕೊರತೆಯೂ ಕಾಡುತ್ತಿದೆ. ಇವೆಲ್ಲವನ್ನು‌ ಗಮನದಲ್ಲಿಟ್ಟುಕೊಂಡು ಜಲಮಂಡಳಿ‌ ಈ ಕಠಿಣ‌ಕ್ರಮಕ್ಕೆ‌ ಮುಂದಾಗಿದೆ.

ಕಳೆದ ಒಂದು ವಾರದಿಂದ ಬೆಂಗಳೂರು ನಗರದಲ್ಲಿರುವ ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

"BWSSB ಕಾಯಿದೆ 1964, ವಿಧಿ 33 ಮತ್ತು 34 ರ ಪ್ರಕಾರ, ನಾವು ಅನಿವಾರ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರಿನ ಬಳಕೆಯನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಒತ್ತಿಹೇಳಲಾಗಿದೆ.

ಆದೇಶವನ್ನು ಉಲ್ಲಂಘಿಸುವವರಿಗೆ 5,000 ರೂ. ದಂಡ ವಿಧಿಸಲಾಗುತ್ತದೆ. ಮತ್ತೆ ಉಲ್ಲಂಘಿಸಿದರೆಗ 5,000 ರೂ.ಗಳ ಜತೆಗೆ ದಿನಕ್ಕೆ 500 ರೂ.ಗಳನ್ನು ಹೆಚ್ಚುವರಿಯಾಗಿ ದಂಡ‌ ವಿಧಿಸಲಾಲಾಗುತ್ತದೆ" ಎಂದು ಆದೇಶ ಸ್ಪಷ್ಟಪಡಿಸಿದೆ.

ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾಲ್ ಸೆಂಟರ್ 1916 ಗೆ ಕರೆ ಮಾಡಲು ತಿಳಿಸಲಾಗಿದೆ.

BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಧ್ಯಮಗಳ ಜತೆ ಮಾತ‌ನಾಡಿ ಕಾವೇರಿ ನೀರು ಸರಬರಾಜು ಮಾಡುವ ಪ್ರದೇಶಗಳಲ್ಲಿ ನೀರಿನ ಕೊರತೆ ಇಲ್ಲ, ಕಾವೇರಿ ನೀರು ಸರಬರಾಜು ಇನ್ನೂ ಪ್ರಾರಂಭವಾಗದ ನಗರದ ಉಳಿದ ಭಾಗಗಳಲ್ಲಿ ಸಮಸ್ಯೆ ಇದೆ. ಬೆಂಗಳೂರು ನಗರದಲ್ಲಿ ಪ್ರತಿ ದಿನ 1,450 ಎಂಎಲ್‌ಡಿ ನೀರಿನ ಬೇಡಿಕೆ ಇದ್ದು, ಪ್ರಸ್ತುತ ನಾವು 1,470 ಎಂಎಲ್‌ಡಿ ಪೂರೈಸುತ್ತಿದ್ದೇವೆ ಎಂದು ಹೇಳಿದರು.

ದರ‌ ನಿಗದಿ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯ ಮನವಿಯ ನಂತರ, ಜಿಲ್ಲಾಧಿಕಾರಿ ಕೆಎ ದಯಾನಂದ ಅವರು ಖಾಸಗಿ ನೀರು ಟ್ಯಾಂಕರ್ ಆಪರೇಟರ್‌ಗಳಿಗೆ ಹೊಸ ಬೆಲೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದರಿಂದ, ಖಾಸಗಿ ನೀರಿನ ಟ್ಯಾಂಕರ್ ಸೇವೆಗಳು ಈಗ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಒಳಪಡುತ್ತವೆ. ನಗರದಲ್ಲಿ ನೀರಿನ ಕೊರತೆಯ ನಡುವೆ ಟ್ಯಾಂಕರ್ ಆಪರೇಟರ್‌ಗಳ ಶೋಷಣೆಯ ಆರೋಪಗಳು ಮತ್ತು ಹೆಚ್ಚುತ್ತಿರುವ ನೀರಿನ ಬೆಲೆ ನಿಯಂತ್ರಿಸಲು ಕ್ರಮ‌ಕೈಗೊಳ್ಳಲಾಗಿದೆ.

ಈ ಹಿಂದೆ 6,000 ಲೀಟರ್ ನೀರಿನ ಟ್ಯಾಂಕರ್‌ಗೆ 450 ರಿಂದ 600 ರೂ.ವರೆಗೆ ಶುಲ್ಕ ವಿಧಿಸಲಾಗುತ್ತಿತ್ತು, ಆದರೆ, ನೀರಿನ ಸಮಸ್ಯೆ ಪ್ರಾರಂಭವಾದ ನಂತರ, 6,000 ಲೀಟರ್ ಟ್ಯಾಂಕರ್‌ 2,000 ರೂ.ದಿಂದ 3,000 ರೂ ವರೆಗೆ ಏರ್ಪಟ್ಟಿತು.. ಈ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಮಧ್ಯ ಪ್ರವೇಶಿಸಿ ಬೆಲೆ ನಿಗದಿ ಮಾಡಿದೆ.

ಹೊಸ ನಿಯಮಗಳ ಪ್ರಕಾರ, 5 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ನೀರಿನ ಟ್ಯಾಂಕರ್‌ಗಳ ದರವನ್ನು ರೂ. 6000 ಲೀಟರ್ ಟ್ಯಾಂಕರ್‌ಗೆ 600 ರೂ; 8000 ಲೀಟರ್ ಟ್ಯಾಂಕರ್‌ಗೆ 700 ರೂ; 12000 ಲೀಟರ್ ಟ್ಯಾಂಕರ್‌ಗೆ 1000 ರೂ. ನಿಗದಿಪಡಿಸಲಾಗಿದೆ. . 5 ಕಿಲೋಮೀಟರ್‌ಗಿಂತ ಹೆಚ್ಚಿನ ಮತ್ತು 10 ಕಿಲೋಮೀಟರ್‌ಗಳ ಒಳಗಿನ ವ್ಯಾಪ್ತಿಗೆ ದರಗಳನ್ನು ರೂ. 750 (6000 ಲೀ) ರೂ. 850 (8000 ಲೀ), 1200 ರೂ. (12000 ಲೀ) ನಿಗದಿಪಡಿಸಲಾಗಿದೆ.

ಜಿಎಸ್‌ಟಿ

ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲು ಈಗಾಗಲೇ ಒಪ್ಪಂದ ಮಾಡಿಕೊಂಡಿರುವ 200 ಖಾಸಗಿ ಟ್ಯಾಂಕರ್‌ಗಳಿಗೆ ಜಿಎಸ್‌ಟಿಯೊಂದಿಗೆ ಈ ನಿಗದಿತ ದರಗಳು ಅನ್ವಯಿಸುತ್ತವೆ. ಬರಗಾಲದ ಈ ಸವಾಲಿನ ಅವಧಿಯಲ್ಲಿ ನ್ಯಾಯಯುತ ಮತ್ತು ಕೈಗೆಟುಕುವ ನೀರಿನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವು ಗುರಿಯನ್ನು ಹೊಂದಿದೆ.

Read More
Next Story