
ಯಾರೇ ವಿರೋಧ ಮಾಡಿದರೂ ನೀರಿನ ದರ ಏರಿಕೆ ಅನಿವಾರ್ಯ: ಡಿಸಿಎಂ ಡಿ.ಕೆ.ಶಿವಕುಮಾರ್
ʻʻಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಜನ ಬೈದರೂ ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆʼʼ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ ʻಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ, 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕʼ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ʻʻರಾಜಧಾನಿಯ 1.40 ಕೋಟಿ ಜನಸಂಖ್ಯೆಗೆ ನೀರನ್ನು ಒದಗಿಸಲೇ ಬೇಕು. ಕಳೆದ 8-9 ವರ್ಷದಿಂದ ನೀರಿನ ದರ ಏರಿಕೆ ಮಾಡಿಲ್ಲ. ಇದಕ್ಕಾಗಿ ಸಾಲ ಮಾಡಿ, ಸಂಪರ್ಕ ಜಾಲವನ್ನು ಹೆಚ್ಚಿಸದ ಹೊರತು ನೀರು ಕೊಡಲು ಕಷ್ಟವಾಗುತ್ತದೆ. ದರ ಹೆಚ್ಚಳ ಮಾಡದಿದ್ದರೆ ನೀರು ಸರಬರಾಜು ಕಂಪನಿ ಉಳಿಯುವುದಿಲ್ಲ, ನೌಕರರು ಬದುಕಲು ಆಗುವುದಿಲ್ಲ. ಸಂಸ್ಥೆಗೆ ವಿದ್ಯುತ್ ಬಿಲ್ ಕಟ್ಟಲೂ ಆಗುತ್ತಿಲ್ಲ. ಎಲ್ಲರಿಗೂ ನೀರಿನ ದರ ಹೆಚ್ಚಳ ಮಾಡುವುದಿಲ್ಲ. ಎಷ್ಟು ಏರಿಕೆ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಈ ನಿರ್ಧಾರವನ್ನು ವಿರೋಧಿಸುವವರು ಚರ್ಚೆ ಮಾಡಲಿ, ಧರಣಿ ಮಾಡಲಿ ನಾನು ಇದಕ್ಕೆ ಬದ್ಧವಾಗಿದ್ದೇನೆʼʼ ಎಂದು ಹೇಳಿದರು.
ʻನಾಗರಿಕರಿಗೆ ಉಪಕಾರ ಸ್ಮರಣೆ ಇಲ್ಲʼ
ನಾಗರಿಕರಿಗೆ ಎಷ್ಟೇ ಒಳ್ಳೆಯದು ಮಾಡಿದರೂ ಉಪಕಾರ ಸ್ಮರಣೆ ಇಲ್ಲ. ಎಷ್ಟೇ ಒಳ್ಳೆಯದು ಮಾಡಿದರೂ ಬೈತಾರೆ, ಕಮೆಂಟ್ ಮಾಡುತ್ತಾರೆ. ಬಿಲ್ ಪಾವತಿಸುವರು ಪಾವತಿ ಮಾಡುತ್ತಾರೆ. ಕೆಲವರು ಪಾವತಿ ಮಾಡಲ್ಲ ಎಂದು ಅವರು ಹೇಳಿದರು.
ʻನೀರು ಸರಬರಾಜು ಖಾಸಗೀಕರಣ ಇಲ್ಲ’
ಜಲ ಮತ್ತು ಇಂಧನ ಎರಡು ಪ್ರಮುಖವಾದ ಇಲಾಖೆಗಳು. ಈ ಎರಡು ಇಲಾಖೆಗಳ ಉಸ್ತುವಾರಿಯನ್ನು ನಾನೇ ವಹಿಸಿದ್ದೇನೆ. ಹಿಂದೆ ಎಸ್ಎಂ ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೀರು ಸರಬರಾಜು ಖಾಸಗೀಕರಣ ಚರ್ಚೆ ನಡೆದಿತ್ತು. ಅದರ ಬಗ್ಗೆ ಫ್ರಾನ್ಸ್ಗೆ ಹೋಗಿ ಎಲ್ಲ ನೋಡಿಕೊಂಡು ಬಂದಿದ್ದೆ. ಆ ರೀತಿ ಅಳವಡಿಕೆ ನಮ್ಮ ರಾಜ್ಯದಲ್ಲಿ ಕಷ್ಟವಾಗುತ್ತದೆ ಎಂದು ಮಾಹಿತಿ ನೀಡಿದ್ದೆ. ಅದಕ್ಕೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆನಂತರ ಕೈ ಬಿಟ್ಟೆವು ಎಂದರು.
ಈಗಲೂ ನಾನು ಸಚಿವನಾದ ಮೇಲೆ ಖಾಸಗೀಕರಣದ ಬಗ್ಗೆ ಚರ್ಚಿಸಲು ಮತ್ತೆ ಕೆಲವರು ಬಂದರು. ಆಗಲ್ಲ, ನಾನಿರುವವರೆಗೆ ಆಗಲ್ಲ ಎಂದು ಹೇಳಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.