CAFE BLAST | ಈ ಹಿಂದೆ ತುಷ್ಟೀಕರಣದಿಂದಾಗಿ ಕುಕ್ಕರ್ ಬಾಂಬ್ ಸ್ಪೋಟವಾಗಿತ್ತೇ?; ಬಿಜೆಪಿ ನಾಯಕರಿಗೆ ಸಿಎಂ ಪ್ರಶ್ನೆ
x

CAFE BLAST | ಈ ಹಿಂದೆ ತುಷ್ಟೀಕರಣದಿಂದಾಗಿ ಕುಕ್ಕರ್ ಬಾಂಬ್ ಸ್ಪೋಟವಾಗಿತ್ತೇ?; ಬಿಜೆಪಿ ನಾಯಕರಿಗೆ ಸಿಎಂ ಪ್ರಶ್ನೆ


ಮೈಸೂರು: ಬೆಂಗಳೂರಿನ ರಾಮೇಶ್ವರ ಕೆಫೆ ಪ್ರಕರಣದಲ್ಲಿ ಸ್ಫೋಟಕ ಇಟ್ಟು ಹೋಗಿದ್ದ ಆರೋಪಿಯ ಪತ್ತೆ ಹಚ್ಚುವ ಕಾರ್ಯ ಚುರುಕಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼʼ ಆರೋಪಿ ಮಾಸ್ಕ್ ಮತ್ತು ಟೋಪಿ ಧರಿಸಿ ಬಸ್ಸಿನಲ್ಲಿ ಬಂದು ತಿಂಡಿ ತಿಂದು ನಂತರ ಸ್ಫೋಟಕವುಳ್ಳ ಬ್ಯಾಗ್ ಇಟ್ಟು ತೆರಳಿದ್ದಾನೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪಮುಖ್ಯಮಂತ್ರಿ , ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂದು ನಾನೂ ಕೂಡ ಸ್ಥಳಕ್ಕೆ ತೆರಳಲಿದ್ದೇನೆ ಎಂದರು.

ಮಂಗಳೂರು ಕುಕ್ಕರ್ ಬಾಂಬ್ ಹಾಗೂ ಈ ಸ್ಫೋಟಕ್ಕೂ ಸಾಮ್ಯತೆ ಇರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ತನಿಖೆ ನಡೆಯುತ್ತಿದೆ ಎಂದರು.

ಅಲ್ಪಸಂಖ್ಯಾತರ ತುಷ್ಟೀಕರಣದಿಂದಾಗಿ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಬಿಜೆಪಿ ನಾಯಕರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ರಾಜಕೀಯವಾಗಿ ಹೇಳಿಕೆ ನೀಡಿದ್ದಾರೆ. ಅವರ ಕಾಲದಲ್ಲಿಯೂ ಬಾಂಬ್ ಸ್ಪೋಟವಾಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟವಾದಾಗ ಏನು ಮಾಡಿದ್ದರು? ಆಗಲೂ ತುಷ್ಟೀಕರಣದಿಂದಾಗಿ ಆಗಿತ್ತೇ? ಎಂದು ಪ್ರಶ್ನಿಸಿದರು.

ʼʼಸ್ಪೋಟದ ಘಟನೆಯನ್ನು ನಾನು ಖಂಡಿಸುತ್ತೇನೆ. ಇದರಲ್ಲಿ ರಾಜಕಾರಣ ಮಾಡಬಾರದುʼʼ ಎಂದರು.

ಇದು ಭಯೋತ್ಪಾದಕ ಕೃತ್ಯವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ತನಿಖೆ ಇನ್ನೂ ನಡೆಯುತ್ತಿದೆ ಎಂದು ಹೇಳಿದರು.

Read More
Next Story