Om Prakash Murder|ಕರ್ನಾಟಕದ ಮಾಜಿ ಡಿಜಿಪಿ ಓಂ ಪ್ರಕಾಶ್ ಕೊಲೆ: ವಿವಾದ, ಆಸ್ತಿ ಕಲಹ ಮತ್ತು ಸುಧಾರಣೆಯ ಕತೆ ಇಲ್ಲಿದೆ
x

Om Prakash Murder|ಕರ್ನಾಟಕದ ಮಾಜಿ ಡಿಜಿಪಿ ಓಂ ಪ್ರಕಾಶ್ ಕೊಲೆ: ವಿವಾದ, ಆಸ್ತಿ ಕಲಹ ಮತ್ತು ಸುಧಾರಣೆಯ ಕತೆ ಇಲ್ಲಿದೆ

ಪೊಲೀಸ್‌ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದ ಓಂ ಪ್ರಕಾಶ್‌ ಅವರ ಕೊಲೆಗೆ ಕಾರಣಗಳು, ಅವರ ಸುತ್ತ ಆವರಿಸಿದ್ದ ವಿವಾದಗಳು, ಪೊಲೀಸ್‌ ಮಹಾನಿರ್ದೇಶಕರಾಗಿದ್ದ ವೇಳೆ ತಂದ ಸುಧಾರಣೆಗಳ ಕುರಿತು ವರದಿ ಇಲ್ಲಿದೆ.


ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ನಿವೃತ್ತಿ ನಂತರ ನೆಮ್ಮದಿಯ ಬದುಕು ಸಾಗಿಸಬೇಕಾಗಿದ್ದ ಓಂ ಪ್ರಕಾಶ್‌ ಅವರು ಪತ್ನಿಯಿಂದಲೇ ಹತ್ಯೆಗೀಡಾಗಿರುವುದು ವಿಪರ್ಯಾಸ.

ಬಿಹಾರ ಮೂಲದ ಓಂ ಪ್ರಕಾಶ್ ಅವರು 1981ರಲ್ಲಿ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿ ಬಳ್ಳಾರಿಯಿಂದ ಸೇವೆ ಆರಂಭಿಸಿದ್ದರು. ಬಳಿಕ ಹಲವು ಜಿಲ್ಲೆಗಳಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ, ಸಿಐಡಿ ಮತ್ತು ಗುಪ್ತಚರ ವಿಭಾಗ, ಲೋಕಾಯುಕ್ತ ಹಾಗೂ ಅಗ್ನಿಶಾಮಕ ಸೇವೆಗಳ ಡಿಐಜಿಯಾಗಿ 2015ರಂದು ಪೊಲೀಸ್‌ ಮಹಾನಿರ್ದೇಶಕರಾಗಿ ನೇಮಕವಾದರು. 2017ರಲ್ಲಿ ಸೇವೆಯಿಂದ ನಿವೃತ್ತರಾದ ನಂತರ ಎಚ್‌ಎಸ್‌ಆರ್‌ ಬಡಾವಣೆಯ ಐಪಿಎಸ್‌ ಅಧಿಕಾರಿಗಳ ವಸತಿಗೃಹದಲ್ಲಿ ವಾಸವಾಗಿದ್ದರು.

ಪೊಲೀಸ್‌ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದ ಓಂ ಪ್ರಕಾಶ್‌ ಅವರ ಕೊಲೆಗೆ ಕಾರಣಗಳು, ಅವರ ಸುತ್ತ ಆವರಿಸಿದ್ದ ವಿವಾದಗಳು, ಪೊಲೀಸ್‌ ಮಹಾನಿರ್ದೇಶಕರಾಗಿದ್ದ ವೇಳೆ ತಂದ ಸುಧಾರಣೆಗಳ ಕುರಿತು ವರದಿ ಇಲ್ಲಿದೆ.

ಭೂವಿವಾದ ಕೊಲೆಗೆ ಕಾರಣವೇ?

ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಸಮೀಪದ ಜೋಯಿಡಾದಲ್ಲಿ ಓಂ ಪ್ರಕಾಶ್‌ ಅವರು ೨.೨೦ ಎಕರೆ ಭೂಮಿ ಖರೀದಿ, ಶ್ರೀಗಂಧದ ಫಾರಂ ಮಾಡಿದ್ದರು. ಈ ಜಮೀನನ್ನು ತನ್ನ ಸೋದರಿಗೆ ನೀಡುವ ವಿಚಾರದಲ್ಲಿ ಓಂ ಪ್ರಕಾಶ್‌ ಹಾಗೂ ಅವರ ಪತ್ನಿ ಪಲ್ಲವಿ ಮಧ್ಯೆ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು. ಭಾನುವಾರ ಇದೇ ವಿಚಾರ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ತಾಳ್ಮೆ ಕಳೆದುಕೊಂಡ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿ ಅವರು ಓಂ ಪ್ರಕಾಶ್‌ ಅವರನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಓಂ ಪ್ರಕಾಶ್‌ ಅವರ ಸೋದರಿ ಜೋಯಿಡಾದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋದರಿಯ ವಿಚಾರವೇ ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಿತ್ತು ಎಂಬುದನ್ನು ಅವರೊಂದಿಗೆ ಕೆಲಸ ಮಾಡಿದ್ದ ಸಹೋದ್ಯೋಗಿಗಳು ನೆನಪಿಸಿಕೊಂಡಿದ್ದಾರೆ.

ಸೂಫಾ ತಾಲೂಕಿನ ಕಾಳಿ ನದಿ ಪಕ್ಕದ ಬಾಡಗುಂದ ಗ್ರಾಮದಲ್ಲೂ ಓಂ ಪ್ರಕಾಶ್ ಅವರು ಐದು ಎಕರೆ ಭೂಮಿ ಹೊಂದಿದ್ದರು. ಇದರಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ನಿರ್ಧರಿಸಿ, ಈಗಾಗಲೇ ರಾಫ್ಟಿಂಗ್‌ ಆರಂಭಿಸಿದ್ದರು. ಪ್ರಸ್ತುತ ಈ ಆಸ್ತಿ ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್ ಹೆಸರಿನಲ್ಲಿದೆ.

ಪತಿ ವಿರುದ್ಧವೇ ಧರಣಿ ನಡೆಸಿದ್ದ ಪತ್ನಿ

ಓಂ ಪ್ರಕಾಶ್‌ ಹಾಗೂ ಪಲ್ಲವಿ ನಡುವಿನ ಮನಸ್ತಾಪ ಅತಿರೇಕಕ್ಕೆ ಹೋಗಿತ್ತು. ಕೆಲ ತಿಂಗಳ ಹಿಂದೆ ಪಲ್ಲವಿ ಅವರು ಪತಿಯ ವಿರುದ್ಧವೇ ಮನೆಯ ಮುಂದೆ ಧರಣಿ ನಡೆಸಿದ್ದರು. ಈ ಸಂಬಂಧ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕೌಟುಂಬಿಕ ಕಲಹದ ಸಂಗತಿಯನ್ನು ಓಂಪ್ರಕಾಶ್ ಅವರೇ ಖುದ್ದು ತಮ್ಮ ಆಪ್ತ ಪೊಲೀಸ್ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದರು ಎಂಬುದು ತಿಳಿದು ಬಂದಿದೆ. ಇನ್ನು ಇದಕ್ಕೆ ತದ್ವಿರುದ್ದವಾಗಿ ಪಲ್ಲವಿ ಅವರು ಪತಿಯ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ತನಗೆ ಹಾಗೂ ಮಗಳು ಕೃತಿ ಅವರಿಗೆ ನಿತ್ಯ ಚಿತ್ರಹಿಂಸೆ ಕೊಡುತ್ತಾರೆ. ಗನ್ ನಿಂದ ಶೂಟ್ ಮಾಡಿ ಕೊಲೆ ಮಾಡುವುದಾಗಿ ಬೆದರಿಸುತ್ತಾರೆ. ಆದ್ದರಿಂದ ತಮ್ಮ ಪತಿಯ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿಕೊಂಡು ಬಂಧಿಸುವಂತೆ ಮೂರು ದಿನಗಳ ಹಿಂದಷ್ಟೇ ಪಲ್ಲವಿ ಅವರು ಐಪಿಎಸ್ ಅಧಿಕಾರಿಗಳ ಫ್ಯಾಮಿಲಿ ವಾಟ್ಸ್‌ ಆಪ್‌ ಗ್ರೂಪ್‌ನಲ್ಲಿ ಸಂದೇಶ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.

ಜೀವ ಉಳಿಸಿಕೊಳ್ಳಲು ಹತ್ಯೆ

ಓಂ ಪ್ರಕಾಶ್‌ ಹಾಗೂ ತಮ್ಮ ಮಧ್ಯೆ ಒಂದು ವಾರದಿಂದ ಜಗಳ ನಡೆಯುತ್ತಿತ್ತು. ಪ್ರತಿ ಬಾರಿ ಗನ್ ತಂದು ನನಗೆ, ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದರು. ಭಾನುವಾರ ಬೇರೆ ಬೇರೆ ವಿಚಾರಕ್ಕೆ ಜಗಳ ಆಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋಗಿ ನಮ್ಮಿಬ್ಬರನ್ನು ಕೊಲೆ ಮಾಡಲು ಯತ್ನಿಸಿದ್ದರು. ಆಗ ಜೀವ ಉಳಿಸಿಕೊಳ್ಳಲು ಎಣ್ಣೆ, ಕಾರದಪುಡಿ ಎರಚಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಬೇಕಾಯಿತು ಎಂದು ಆರೋಪಿ ಪಲ್ಲವಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಆ ಬಳಿಕ ಪೊಲೀಸರು ಪಲ್ಲವಿಯನ್ನು ಬಂಧಿಸಿದ್ದು, ಕೃತಿ ಅವರನ್ನು ವಶದಲ್ಲೇ ಇಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಪಲ್ಲವಿ ಮಾನಸಿಕ ಅಸ್ವಸ್ಥರಾಗಿದ್ದರೆ?

ಓಂ ಪ್ರಕಾಶ್‌ ಅವರ ಹತ್ಯೆಯ ಬಳಿಕ ಆರೋಪಿ ಪತ್ನಿ ಪಲ್ಲವಿ ಮಾನಸಿಕ ಅಸ್ವಸ್ಥರಾಗಿದ್ದರು ಎಂಬ ಮಾತುಗಳು ಹರಿದಾಡುತ್ತಿವೆ. ಪಲ್ಲವಿ ಅವರು 12 ವರ್ಷಗಳಿಂದ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಸ್ಕಿಜೋಫ್ರಿನಿಯಾ (ಭ್ರಮಾಸ್ಥಿತಿ) ಎಂಬ ಕಾಯಿಲೆ ಇತ್ತು. ಯಾವುದೋ ವಿಚಾರ ಕಲ್ಪಿಸಿಕೊಂಡು ಆತಂಕಕ್ಕೆ ಒಳಗಾಗುತ್ತಿದ್ದರು. ಪತಿ ಓಂಪ್ರಕಾಶ್ ಮೇಲೆ ಇಲ್ಲಸಲ್ಲದ ಊಹೆ ಮಾಡಿಕೊಂಡು ಜಗಳವಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಆದರೆ, ಆಸ್ತಿ ವಿಚಾರವಾಗಿ ಜಗಳ ಮಾಡುತ್ತಿದ್ದ ಪಲ್ಲವಿ ಅವರಿಗೆ ನಿಜಕ್ಕೂ ಸ್ಕಿಜೋಫ್ರಿನಿಯಾ ಕಾಯಿಲೆ ಇತ್ತೆ ಎಂಬ ಅನುಮಾನಗಳು ಕಾಡುತ್ತಿವೆ.

ವಿವಾದದ ಕೇಂದ್ರಬಿಂದುವಾಗಿದ್ದ ಓಂ ಪ್ರಕಾಶ್‌

2016ರಲ್ಲಿ ಓಂ ಪ್ರಕಾಶ್‌ ಅವರು ಪೊಲೀಸ್‌ ಮಹಾನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಅವರ ಪುತ್ರ ಕಾರ್ತಿಕೇಶ್‌ ಭೂ ವಿವಾದಕ್ಕೆ ಸಂಬಂಧಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಮನಗರ ಜಿಲ್ಲೆಯ ರೈತ ಶಿವಣ್ಣ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಈ ದೂರಿಗೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಬೆಂಗಳೂರಿನ ಸಾಧನಾ ರಾಜಲಕ್ಷ್ಮಿ ಎಂಬುವರು ಆಸ್ತಿ ವಿವಾದಕ್ಕೆ ಸಂಬಂಧಿಸಿ ಕಾರ್ತಿಕೇಶ್ ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಆಗ ಓಂ ಪ್ರಕಾಶ್‌ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ ಮಹಿಳೆಯನ್ನೇ ಪೊಲೀಸರು ಬಂಧಿಸಿದ್ದರು.

ಕಲ್ಲು ಗಣಿಗಾರಿಕೆ ವ್ಯವಹಾರದಲ್ಲಿ ಕಾರ್ತಿಕೇಶ್ ತಮ್ಮ ತಂದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಆಂಧ್ರದಲ್ಲಿ ಕಾರ್ತಕೇಶ್‌ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲೂ ಅಲ್ಲಿನ ರಾಜಕಾರಣಿಗಳೊಂದಿಗೆ ನಂಟು ಹೊಂದಿದ್ದರು. ಪುತ್ರನ ಈ ಎಲ್ಲಾ ವ್ಯವಹಾರಗಳಿಂದ ಓಂ ಪ್ರಕಾಶ್‌ ಅವರು ವಿವಾದದ ಕೇಂದ್ರ ಬಿಂದುವಾಗಿದ್ದರು.

ಈ ಮಧ್ಯೆ, ಡಿಜಿ ಮತ್ತು ಐಜಿಪಿಯಾಗಿ ಓಂ ಪ್ರಕಾಶ್ ಅವರಿಗೆ ನೀಡಿದ್ದ ಬಡ್ತಿಯನ್ನು ಐಪಿಎಸ್ ಅಧಿಕಾರಿ ಸುಶಾಂತ್ ಮಹಾಪಾತ್ರ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸೇವಾ ಹಿರಿತನ ಆಧಾರದ ಮೇಲೆ ನೇಮಕಾತಿ ನಡೆದಿಲ್ಲ ಎಂದು ಆರೋಪಿಸಿದ್ದರು.

2015 ರಲ್ಲಿ ಓಂ ಪ್ರಕಾಶ್ ಅವರು ಸೈಬರ್‌ ಅಪರಾಧಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ವೇಳೆ ಅವರೇ ಸೈಬರ್‌ ವಂಚಕರ ಬಲೆಗೆ ಬಿದ್ದು, 10 ಸಾವಿರ ರೂ. ಕಳೆದುಕೊಂಡಿದ್ದರು. ಓಂ ಪ್ರಕಾಶ್ ಅವರು ಪ್ರಾಮಾಣಿಕ ಅಧಿಕಾರಿಗಳನ್ನು ಬೆಂಬಲಿಸುತ್ತಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಡಿಎಸ್‌ಪಿ ಅನುಪಮಾ ಶೆಣೈ ಗಂಭೀರ ಆರೋಪ ಮಾಡಿದ್ದರು. ಆದರೆ, ಈ ಆರೋಪ ಮಾಡಿದ ಅನುಪಮಾ ಅವರೇ ಕೊನೆಗೆ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

ಪೊಲೀಸ್‌ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡಿದ್ದರು

2015 ರಿಂದ 2017ರ ವರೆಗೆ ಪೊಲೀಸ್‌ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಓಂ ಪ್ರಕಾಶ್‌ ಅವರು ವಿವಾದಗಳ ನಡುವೆಯೂ ಇಲಾಖೆಯಲ್ಲಿ ಹಲವು ಸುಧಾರಣೆಗಳಿಗೆ ಕಾರಣೀಭೂತರಾಗಿದ್ದರು. ಇವರ ಅವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿ, ಆಂತರಿಕ ಆಡಳಿತವನ್ನು ಸುಗಮಗೊಳಿಸಲಾಗಿತ್ತು.

1993ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ಕೋಮು ಗಲಭೆಯನ್ನು ಓಂ ಪ್ರಕಾಶ್‌ ಅವರು ಯಾವುದೇ ಅಶಾಂತಿಗೆ ಆಸ್ಪದ ನೀಡದಂತೆ ನಿಭಾಯಿಸಿದ್ದರು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿಯಾಗಿ ನೇಮಕವಾದ ಸಮಯದಲ್ಲಿ ಇಲಾಖೆಗೆ ಆಧುನಿಕ ಸ್ಪರ್ಶ ನೀಡಿ, ಅಗ್ನಿಶಾಮಕ ಸಿಬ್ಬಂದಿಯ ಕಾರ್ಯ ಕ್ಷಮತೆ ಹೆಚ್ಚಿಸಿದ್ದರು.

ಸಿಐಡಿ ಮತ್ತು ಗುಪ್ತಚರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದಾಗಲೂ ಅಪರಾಧ ಪ್ರಕರಣಗಳ ತನಿಖೆ ಮತ್ತು ಗುಪ್ತಚರ ಮಾಹಿತಿ ಸಂಗ್ರಹಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಮತ್ತು ಪೊಲೀಸ್ ಆಧುನೀಕರಣ, ಪೊಲೀಸ್ ದಾಖಲೆಗಳ ಡಿಜಿಟಲೀಕರಣ ಮತ್ತು ಉತ್ತಮ ಕಣ್ಗಾವಲು ವ್ಯವಸ್ಥೆ ಸೇರಿದಂತೆ ತಂತ್ರಜ್ಞಾನ ಬಳಕೆಗೆ ಓಂ ಪ್ರಕಾಶ್‌ ಅವರು ಉತ್ತೇಜನ ನೀಡಿದ್ದರು ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.

ಸೈಬರ್ ಅಪರಾಧ, ಸಾಫ್ಟ್ ಸ್ಕಿಲ್‌ಗಳು ಮತ್ತು ಸಮುದಾಯ ಪೊಲೀಸ್‌ ವ್ಯವಸ್ಥೆಗೆ ಅಗತ್ಯ ತರಬೇತಿ, ವಿವಿಧ ಕಾನೂನು ಜಾರಿ ಮತ್ತು ಸಾರ್ವಜನಿಕ ಸಂಸ್ಥೆಗಳ ನಡುವೆ ಸಮನ್ವತೆಗೆ ಆದ್ಯತೆ ನೀಡಿದ್ದರು. ಇದರಿಂದ ಇಲಾಖೆಯ ಸಾಂಸ್ಥಿಕ ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಾಯಿತು ಎಂದು ಹೇಳಿವೆ.

Read More
Next Story