Wardens negligence, 15 quintals of wheat meant for students food, falls to the ground
x

ಜೆಸಿಬಿ ಮೂಲಕ ಗುಂಡಿ ತೋಡಿಸಿ ಗೋಧಿ ಮುಚ್ಚಿರುವುದು. 

ಗುಂಡಿ ತೆಗೆದು 15 ಕ್ವಿಂಟಲ್‌ ಗೋಧಿ ಮುಚ್ಚಿಹಾಕಿದ ವಾರ್ಡನ್‌

ಬಿಸಿಎಂ ಹಾಸ್ಟೆಲ್‌ನಲ್ಲಿ ರಾಜ್ಯದ ವಿವಿಧ ಭಾಗಗಳ 125 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಊಟಕ್ಕಾಗಿ ಸರ್ಕಾರ 30 ಕ್ವಿಂಟಲ್‌ ಗೋಧಿ ಸರಬರಾಜು ಮಾಡಿತ್ತು.


Click the Play button to hear this message in audio format

ವಿದ್ಯಾರ್ಥಿಗಳಿಗೆ ಆಹಾರ ಒದಗಿಸಲು ಬಳಕೆಯಾಗಬೇಕಿದ್ದ 15 ಕ್ವಿಂಟಲ್‌ ಗೋಧಿಯು ವಾರ್ಡನ್‌ ನಿರ್ಲಕ್ಷ್ಯದಿಂದ ಮಣ್ಣುಪಾಲಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಹೊರವಲಯದಲ್ಲಿ ನಡೆದಿದೆ.

ಇಲ್ಲಿನ ಹೆಲ್ತ್‌ ಸಿಟಿ ಸಮೀಪದ ಡಿ. ದೇವರಾಜ್‌ ಅರಸ್‌ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ಹಾಸ್ಟೆಲ್‌ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 30 ಕ್ವಿಂಟಲ್‌ ಗೋಧಿ ಸರಬರಾಜು ಮಾಡಿತ್ತು. ಹಾಸ್ಟೆಲ್‌ನಲ್ಲಿ ವಿವಿಧ ಭಾಗಗಳಿಂದ ಬಂದಿರುವ ಒಟ್ಟು 125 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಚಪಾತಿ ಊಟಕ್ಕಾಗಿ ಗೋಧಿ ಪೂರೈಸಲಾಗಿತ್ತು.

ನಿಲಯಪಾಲಕ ಯೋಗೇಶ್‌ ನಿರ್ಲಕ್ಷ್ಯದಿಂದ 15 ಕ್ವಿಂಟಲ್‌ ಗೋಧಿಗೆ ಹುಳು ಬಿದ್ದಿತ್ತು. ಈ ವಿಷಯ ಇಲಾಖೆಗೆ ಗೊತ್ತಾದರೆ ನೋಟಿಸ್‌ ನೀಡಬಹುದು ಎಂದು ಭಾವಿಸಿದ ನಿಲಯಪಾಲಕ ಯೋಗೇಶ್‌, ಜೆಸಿಬಿಯಿಂದ ಗುಂಡಿ ತೆಗೆಸಿ ಗೋಧಿಯನ್ನು ಮಣ್ಣಿನಲ್ಲಿ ಮುಚ್ಚಿ ಹಾಕಿದ್ದರು. ಕೊನೆಗೆ ನಿಲಯಪಾಲಕರು ಗೋಧಿ ಮಣ್ಣುಪಾಲು ಮಾಡಿರುವ ಕೃತ್ಯ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ.

ವಾರ್ಡನ್‌ ಯೋಗೇಶ್ ಕಳೆದ ವರ್ಷವೂ 15 ಕ್ವಿಂಟಲ್‌ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡಿದ್ದರು.


ಅಧಿಕಾರಿಗಳ ವರ್ತನೆ ಸಹಿಸಲ್ಲ ಎಂದ ಸಚಿವ

ಹಾಸ್ಟೆಲ್‌ನಲ್ಲಿನ ಬಡ ವಿದ್ಯಾರ್ಥಿಗಳಿಗೆ ಸರ್ಕಾರ ಪೂರೈಸಿರುವ ಆಹಾರ ಪದಾರ್ಥಗಳನ್ನು ನ್ಯಾಯಯುತವಾಗಿ ಬಳಸಬೇಕು. ವಾರ್ಡನ್‌ ಬೇಜವಾಬ್ದಾರಿತನದಿಂದ 15 ಕ್ವಿಂಟಲ್‌ ಗೋಧಿ ಮಣ್ಣುಪಾಲಾಗಿರುವುದನ್ನು ಸಹಿಸಲು ಸಾಧ್ಯವಿಲ್ಲ. ಹೆಲ್ತ್‌ಸಿಟಿಯಲ್ಲಿರುವ ಹಾಸ್ಟೆಲ್‌ಗೆ ತೆರಳಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ತಿಳಿಸಿದ್ದಾರೆ.

ಆಹಾರ ಪದಾರ್ಥ ಬೇರೆ ಹಾಸ್ಟೆಲ್‌ಗೆ ನೀಡಬೇಕು

ಹಾಸ್ಟೆಲ್‌ನಲ್ಲಿ ಆಹಾರ ಪದಾರ್ಥಗಳಾದ ರಾಗಿ, ಅಕ್ಕಿ, ಬೇಳೆ, ಗೋಧಿ ಸೇರಿದಂತೆ ಯಾವುದೇ ಪದಾರ್ಥಗಳು ಹೆಚ್ಚಾದರೆ ಮೇಲಧಿಕಾರಿಗಳ ಗಮನಕ್ಕೆ ತಂದು ವಾರ್ಡನ್‌ಗಳು ಬೇರೊಂದು ಹಾಸ್ಟೆಲ್‌ಗೆ ನೀಡಬಹುದು. ಆದರೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪೂರೈಸಿದ್ದ ಆಹಾರವನ್ನು ವಾರ್ಡನ್‌ಗಳು ಈ ರೀತಿ ಹಾಳು ಮಾಡುವುದು ಸರಿಯಲ್ಲ ಎಂದು ತಾಲೂಕು ಬಿಸಿಎಂ ಅಧಿಕಾರಿ ಮಧುಮಾಲ ತಿಳಿಸಿದ್ದಾರೆ.

Read More
Next Story