Waqf Asset Dispute | ವಕ್ಫ್ ಆಸ್ತಿ ಯಾರೊಬ್ಬರ ಸ್ವತ್ತಲ್ಲ;  ಕೇಂದ್ರ ಸಚಿವ ಪ್ರಹ್ಲಾದ ಜೋಶಿ
x

Waqf Asset Dispute | ವಕ್ಫ್ ಆಸ್ತಿ ಯಾರೊಬ್ಬರ ಸ್ವತ್ತಲ್ಲ; ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ವಕ್ಫ್ ಆಸ್ತಿ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ವಕ್ಫ್ ಆಸ್ತಿ ಯಾರೊಬ್ಬರ ಸ್ವತ್ತಲ್ಲ. ವಕ್ಫ್ ಆಸ್ತಿ ರಕ್ಷಣೆ ಕುರಿತು ಮುಂದಿನ ಚುನಾವಣೆಗಳ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.


ವಕ್ಫ್ ಆಸ್ತಿ ವಿವಾದ ಪ್ರತಿಪಕ್ಷಗಳಿಗೆ ಚುನಾವಣೆ ಪ್ರಚಾರದ ಅಸ್ತ್ರವಾಗಿ ಬಳಕೆಯಾಗುತ್ತಿದೆ. ವಕ್ಫ್ ಆಸ್ತಿಗಳ ರಕ್ಷಣೆ ಕುರಿತು 2014ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.

ಶಿಗ್ಗಾವಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ವಕ್ಫ್ ಆಸ್ತಿ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ವಕ್ಫ್ ಆಸ್ತಿ ಯಾರೊಬ್ಬರ ಸ್ವತ್ತಲ್ಲ. ವಕ್ಫ್ ಆಸ್ತಿ ರಕ್ಷಣೆ ಕುರಿತು ಮುಂದಿನ ಚುನಾವಣೆಗಳ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದು ಹೇಳಿದರು.

ವಕ್ಫ್ ಆಸ್ತಿ ಕುರಿತಂತೆ ಬಿಜೆಪಿ ದ್ವಂದ್ವ ನಿಲುವು ಹೊಂದಿದೆ ಎಂಬ ಟೀಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ನಾಯಕರು ಮೊದಲು ನಮ್ಮ ಪ್ರಣಾಳಿಕೆಯನ್ನು ಸರಿಯಾಗಿ ಓದಲಿ. ವಕ್ಫ್ ಮಂಡಳಿಯ ಮೂಲಕ ಆಸ್ತಿಯನ್ನು ಸಂರಕ್ಷಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದೆವು. ಆದರೆ, ಅತಿಕ್ರಮಣ ಮಾಡಿ ಎಂದು ಹೇಳಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ವಕ್ಫ್ ಮಂಡಳಿ ಬಳಿ 2 ಲಕ್ಷ 30 ಸಾವಿರ ಕೋಟಿ ಮೌಲ್ಯದ ಆಸ್ತಿ ಇದೆ. ಇದನ್ನು ಕಾಂಗ್ರೆಸ್ಸಿನಲ್ಲಿರುವ ಮುಸ್ಲಿಂ ಮುಖಂಡರು ದೋಚುತ್ತಿದ್ದಾರೆ. ವಕ್ಫ್ ಉದ್ದೇಶ, ವಕ್ಫ್ ನಿಯಮ ಏನಿದೆಯೇ ಅದನ್ನು ಪಾಲಿಸಲು ನಮ್ಮ ತಕರಾರಿಲ್ಲ. ದಾನ ಕೊಟ್ಟಿರುವ ಆಸ್ತಿ ಅನ್ಯರ ಪಾಲಾಗದಂತೆ ರಕ್ಷಿಸಬೇಕು ಎಂದು ಹೇಳಿದರು.

ಬಿಜೆಪಿಯವರು ಎಂದಿಗೂ ಊರೂರು ಸುತ್ತಿ ಅದಾಲತ್ ನಡೆಸಿ ತಹಶೀಲ್ದಾರ್ಗಳಿಗೆ ಧಮ್ಕಿ ಹಾಕಿಲ್ಲ. ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿ ಸಂರಕ್ಷಣೆ ಮಾಡುತ್ತೀವಿ ಎಂದು ಪ್ರಣಾಳಿಕೆಯಲ್ಲಿ ಹೇಳಿಲ್ಲ ಎಂದು ಸಿಎಂಗೆ ತಿರುಗೇಟು ನೀಡಿದರು.

ರಾಜಕೀಯ ಸ್ಟಂಟ್ ಬಿಟ್ಟು ರಾಜೀನಾಮೆ ಕೊಡಲಿ

ಎಲ್ಲದಕ್ಕೂ ಉಡಾಫೆ ಉತ್ತರ ಕೊಡುವುದನ್ನು ಬಿಟ್ಟು ಸಿಎಂ ಸಿದ್ದರಾಮಯ್ಯ ಅವರು ತಕ್ಷಣವೇ ರಾಜೀನಾಮೆ ಕೊಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಸಿಎಂ ಅವರಿಗೆ ಇದು ತಮ್ಮ ಕೊನೆಯ ಅವಧಿಯೆಂದು ಗೊತ್ತಾಗಿದೆ. ಆದ್ದರಿಂದ ನಿರ್ಲಜ್ಜೆಯಿಂದ ನಡೆದುಕೊಳ್ಳುತ್ತಾ ಆಡಳಿತ ನಡೆಸುತ್ತಿದ್ದಾರೆ. ಮೂಡಾ ಹಗರಣದಲ್ಲಿ ನೀವು ರಾಜೀನಾಮೆ ನೀಡಲು ಇನ್ನೆಷ್ಟು ಸಾಕ್ಷಿಗಳು ಬೇಕು. ಸುಮ್ಮನೆ ರಾಜಕೀಯ ಸ್ಟಂಟ್ ಬಿಟ್ಟು ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.

ಸಿಎಂ ಜೋಳಿಗೆಯಲ್ಲಿ ಹೈ ಫೈ ವಾಚ್, ಅರ್ಕಾವತಿ ರಿಡು, ಮೂಡಾ, ವಾಲ್ಮೀಕಿ, ಅಬಕಾರಿ ಹಗರಣಗಳಿವೆ. ಮೂಡಾ ಹಗರಣದಲ್ಲಿ A1 ಆರೋಪಿಯಾಗಿರುವ ತಾವು ಪ್ರಧಾನಿ ಮೋದಿ ವಿರುದ್ಧ ಸವಾಲು ಹಾಕುತ್ತೀರಿ. ಪ್ರಧಾನಿ ರಾಜೀನಾಮೆ ಕೇಳಲು ನಿಮಗೇನು ಅರ್ಹತೆಯಿದೆ? ಎಂದು ಜೋಶಿ ಗುಡುಗಿದರು.

Read More
Next Story