ವಕ್ಫ್‌ ಬೋರ್ಡ್‌ ನೋಟಿಸ್‌ | ಬಿಜೆಪಿ ತಂಡಕ್ಕೆ ಕೊನೆಗೂ ಯತ್ನಾಳ್‌ ಸೇರ್ಪಡೆ
x

ವಕ್ಫ್‌ ಬೋರ್ಡ್‌ ನೋಟಿಸ್‌ | ಬಿಜೆಪಿ ತಂಡಕ್ಕೆ ಕೊನೆಗೂ ಯತ್ನಾಳ್‌ ಸೇರ್ಪಡೆ


ವಕ್ಫ್‌ ಬೋರ್ಡ್‌ ರೈತರಿಗೆ ಜಮೀನು ತೆರವು ವಿಷಯದಲ್ಲಿ ನೋಟಿಸ್‌ ನೀಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಆ ಕುರಿತ ಪರಿಶೀಲನೆಗಾಗಿ ರಾಜ್ಯ ಬಿಜೆಪಿ ರಚಿಸಿರುವ ವಿಶೇಷ ತಂಡದ ವಿಷಯದಲ್ಲಿ ಎದ್ದಿದ್ದ ವಿವಾದ ಇದೀಗ ತಹಬದಿಗೆ ಬಂದಿದೆ. ವಕ್ಫ್‌ ನೋಟಿಸ್‌ ವಿಷಯದಲ್ಲಿ ದನಿ ಎತ್ತಿದ್ದ ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನೇ ಹೊರಗಿಟ್ಟು ತಂಡ ರಚನೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಯತ್ನಾಳ್‌ ಕಿಡಿ ಕಾರಿದ್ದರು. ಆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಹಿರಿಯ ನಾಯಕರ ನಡುವೆ ವಾಗ್ವಾದವೇ ನಡೆದಿತ್ತು.

ವಕ್ಫ್‌ ಬೋರ್ಡ್‌ನಿಂದ ವಿಜಯಪುರ, ಗದಗ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ರೈತರ ಸಾಗುವಳಿ ಭೂಮಿಯ ಮಾಲೀಕತ್ವದ ವಿಷಯದಲ್ಲಿ ರೈತರಿಗೆ ನೋಟಿಸ್‌ ನೀಡಲಾಗುತ್ತಿದೆ ಎಂಬ ವಿಷಯದ ಕುರಿತು ರಾಜ್ಯದಲ್ಲಿ ದೊಡ್ಡ ರಾಜಕೀಯ ವಾಗ್ವಾದ ಕಾವೇರಿದೆ. ಈ ನಡುವೆ, ಅಂತಹ ಕ್ರಮಗಳ ಕುರಿತು ಅಧ್ಯಯನ ನಡೆಸಲು ಪ್ರತಿಪಕ್ಷ ಬಿಜೆಪಿ ರಚಿಸಿದ್ದ ಪಟ್ಟಿಯ ವಿಷಯದಲ್ಲಿ ಆ ಪಕ್ಷದಲ್ಲೇ ದೊಡ್ಡ ಮಟ್ಟದ ವಾಗ್ವಾದ ಆರಂಭವಾಗಿತ್ತು.

ಇದೀಗ ಪಟ್ಟಿಯನ್ನು ಪರಿಷ್ಕರಿಸಿ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೆಸರು ಸೇರಿಸಿ ಪುನರ್‌ ಬಿಡುಗಡೆ ಮಾಡಲಾಗಿದ್ದು, ಯತ್ನಾಳ್‌ ಅವರ ವಾಗ್ದಾಳಿಯಿಂದಾಗಿ ಅವರನ್ನು ಹೊರಗಿಟ್ಟು ತಂಡ ರಚಿಸುವ ತಮ್ಮ ನಿರ್ಧಾರದಿಂದ ಬಿಜೆಪಿ ರಾಜ್ಯಾಧ್ಯಕ್ಷರು ಹಿಂದೇಟು ಹಾಕಿದ್ದಾರೆ.

ವಿಜಯಪುರದಲ್ಲಿ ವಕ್ಫ್ ವಿರುದ್ಧ ಧ್ವನಿ ಎತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ತಂಡದಿಂದ ದೂರ ಇಡಲಾಗಿತ್ತು. ಬಳಿಕ ಯತ್ನಾಳ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತಂಡವನ್ನು ಪುನಾರಚನೆ ಮಾಡಿದ್ದು, ಈ ತಂಡದಲ್ಲಿ ಯತ್ನಾಳ್ ಅವರನ್ನು ಸೇರಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಬಿಜೆಪಿ ಪರಿಶೀಲನಾ ತಂಡವನ್ನು ರಚನೆ ಮಾಡಿದ್ದರು. ಆದ್ರೆ, ಯತ್ನಾಳ್ ತಂಡದಲ್ಲಿರಲಿಲ್ಲ. ಬಳಿಕ ಯತ್ನಾಳ್, ಬಿಜೆಪಿ ತಂಡ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಮಣಿದ ವಿಜಯೇಂದ್ರ , ವಿಜಯಪುರ ಪ್ರವಾಸಕ್ಕೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ ಪರಿಶೀಲನಾ ತಂಡವನ್ನು ಪುನಾರಚನೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಗೆ ತೆರಳುವ ಕಾರಜೋಳ ನೇತೃತ್ವದ ತಂಡಕ್ಕೆ ಹೊಸದಾಗಿ ರಮೇಶ್ ಜಿಗಜಿಣಗಿ, ಶಾಸಕ ಯತ್ನಾಳ್ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ.ಜಿರಲಿ ಅವರನ್ನು ಸೇರ್ಪಡೆ ಮಾಡಿದ್ದಾರೆ.

ಈ ಮೊದಲ ಪಟ್ಟಿಯಲ್ಲಿ ಸಂಸದ ಕಾರಜೋಳ ನೇತೃತ್ವದಲ್ಲಿ ಶಾಸಕರಾದ ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ್ ಶಹಾಪುರ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಇಂದು ಬಿಜೆಪಿ ತಂಡ ಭೇಟಿ

ವಿಜಯಪುರ ಜಿಲ್ಲೆಯ ರೈತರ ಅಹವಾಲು ಆಲಿಸಿ ಸಮಸ್ಯೆಯ ಕುರಿತ ಸಮಗ್ರ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಂಡಕ್ಕೆ ಸೂಚಿಸಿದ್ದಾರೆ. ಅದರಂತೆ ಈ ಮುಖಂಡರ ತಂಡ ಮಂಗಳವಾರ(ಅ.29) ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದೆ.

Read More
Next Story