ವಕ್ಫ್‌ ಆಸ್ತಿ ವಿವಾದ | ರಾಜ್ಯಕ್ಕೆ ಕೇಂದ್ರ ಜೆಪಿಸಿ ಅಧ್ಯಕ್ಷರ ಭೇಟಿಗೆ ಸಚಿವ ಜಮೀರ್‌ ವಿರೋಧ
x
jameer ahamad khan

ವಕ್ಫ್‌ ಆಸ್ತಿ ವಿವಾದ | ರಾಜ್ಯಕ್ಕೆ ಕೇಂದ್ರ ಜೆಪಿಸಿ ಅಧ್ಯಕ್ಷರ ಭೇಟಿಗೆ ಸಚಿವ ಜಮೀರ್‌ ವಿರೋಧ

ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸದನ ಸಮಿತಿ(ಜೆಪಿಸಿ) ಅಧ್ಯಕ್ಷರ ಈ ಭೇಟಿಗೆ ಕಟುವಾಗಿ ಪ್ರತಿಕ್ರಿಯಿಸಿರುವ ರಾಜ್ಯ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್, ಅವರ ಭೇಟಿಯೇ ಅನಧಿಕೃತ ಎಂದು ಹೇಳಿದ್ದಾರೆ.


ವಕ್ಫ್ ಆಸ್ತಿ ಇಂಡೀಕರಣ ವಿಷಯ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ನಡುವೆ ರಾಜ್ಯ ಬಿಜೆಪಿ ನಾಯಕರ ಕೋರಿಕೆಯ ಮೇರೆಗೆ ಕೇಂದ್ರ ಜಂಟಿ ಸದನ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಗುರುವಾರ(ನ.7) ರಾಜ್ಯದ ರೈತರ ಅಹವಾಲು ಆಲಿಸಲಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ವಿಜಯಪುರಗಳಲ್ಲಿ ಅವರು ರೈತರ ಅಹವಾಲು ಆಲಿಸಲಿದ್ದಾರೆ.

ಆದರೆ, ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸದನ ಸಮಿತಿ(ಜೆಪಿಸಿ) ಅಧ್ಯಕ್ಷರ ಈ ಭೇಟಿಗೆ ಕಟುವಾಗಿ ಪ್ರತಿಕ್ರಿಯಿಸಿರುವ ರಾಜ್ಯ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್, ಅವರ ಭೇಟಿಯೇ ಅನಧಿಕೃತ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಜೆಪಿಸಿ ಅಧ್ಯಕ್ಷರ ಭೇಟಿಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಮೀರ್ ಅಹಮದ್, ಅವರು ಬರುತ್ತಿರುವುದೇ ಅನಧಿಕೃತ. ಡೋಂಟ್ ಟಚ್ ವಕ್ಫ್ ಎಂದು ಗುಡುಗಿದ್ದಾರೆ.

ಜಂಟಿ ಸದನ ಸಮಿತಿ ರಚಿಸಿರುವುದು ಸಂಸತ್ತಿನಲ್ಲಿ ಮಸೂದೆ ತರಲು ಮಾತ್ರ. ಹಾಗಾಗಿ ಕರ್ನಾಟಕದ ವಕ್ಫ್ ಆಸ್ತಿಯ ವಿಷಯದಲ್ಲಿ ಅವರು ತಲೆ ಹಾಕುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಅವರು ಬರುತ್ತಿರುವುದೇ ಅನಧಿಕೃತ. ಜೆಪಿಸಿ ಮಾಡಿರೋದ್ಯಾಕೆ? ವಕ್ಫ್ ಬಿಲ್ಗೆ ಎಂದು ಮಾಡಿರುವುದು ಎಂದರು.

ಸಂಸತ್ತಿನಲ್ಲಿ ವಕ್ಫ್ ಮಸೂದೆ ತರುತ್ತಿದ್ದಾರೆ. ಆ ಉದ್ದೇಶಕ್ಕಾಗಿ ಜಂಟಿ ಸದನ ಸಮಿತಿ ರಚಿಸಿದ್ದಾರೆ. ಆ ಸಮಿತಿಗೂ ಕರ್ನಾಟಕದ ವಕ್ಫ್ ಆಸ್ತಿಗೂ ಸಂಬಂಧವಿಲ್ಲ. ಹಾಗಿರುವಾಗ ಈ ವಿಷಯದಲ್ಲಿ ಅವರು ಹೇಗೆ ಬರೋಕೆ ಆಗುತ್ತೆ? ಕೇಂದ್ರಕ್ಕೆ ಅಧಿಕಾರ ಇದ್ದರೆ, ಅದಕ್ಕೆ ಪ್ರತ್ಯೇಕ ಕಮಿಟಿ ಮಾಡಬೇಕು ಅಲ್ವಾ? ಕರ್ನಾಟಕದಲ್ಲಿ ಈ ವಿಷಯದಲ್ಲಿ ಏನಾದರೂ ಗೊಂದಲ ಆಗಿದೆ ಎನಿಸಿದರೆ ಅವರು ಅದಕ್ಕಾಗಿ ಪ್ರತ್ಯೇಕ ಕಮಿಟಿ ಮಾಡಲಿ. ಆಗ ನಮ್ಮ ಆಕ್ಷೇಪವೇನೂ ಇರುವುದಿಲ್ಲ. ಅದು ಬಿಟ್ಟು ಮಸೂದೆ ಉದ್ದೇಶಕ್ಕೆ ಮಾಡಿರುವ ಜೆಪಿಸಿ, ಇಲ್ಲಿ ಬಂದು ಪರಿಶೀಲಿಸುವುದು ಸರಿಯಲ್ಲ. ಅವರಿಗೆ ಅಧಿಕೃತ ಅಧಿಕಾರವೂ ಇಲ್ಲ ಎಂದು ಹೇಳಿದರು.

ಪ್ರಮೋದ್ ಮುತಾಲಿಕ್ ಹೇಳಿಕೆಗೆ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ಯಾವುದೇ ಇಶ್ಯೂ ಇಲ್ಲ. ಮುತಾಲಿಕ್, ಬಿಜೆಪಿ ಎರಡು ಒಂದೇ . ಏಕ್ ದಿಲ್ ದೋ ಜಾನ್ ತರಹ, ಅವರೆಲ್ಲಾ ಒಂದೇನೆ. ನಾವ್ಯಾರಿಗೂ ತೊಂದರೆ ಕೊಡೋಕೆ ಮಾಡಿಲ್ಲ. ವಕ್ಫ್ ಆಸ್ತಿ ಇರೋದು 1 ಲಕ್ಷ 12 ಸಾವಿರ ಎಕರೆ. ಈಗ ನಮ್ಮ ಬಳಿ ಕೇವಲ 23 ಸಾವಿರ ಇದೆ . ಆಸ್ತಿ ಒಂದು ಇಂಚು ಬಿಡಬೇಡಿ ಎಂದು ಬೊಮ್ಮಾಯಿ ಹೇಳಿದ್ರು . ಈಗ ಉಲ್ಟಾ ಹೊಡೆಯುತ್ತಿದ್ದಾರೆ . ರೈತರು ನಮ್ಮ ಅನ್ನದಾತರು, ಅವರಿಗೆ ತೊಂದರೆ ಕೊಡಲ್ಲ. ರೈತರಿಗೆ ನೋಟಿಸ್ ಕೊಟ್ಟಿದ್ದಾರೆ ಅಂತ ಗೊಂದಲ ಸೃಷ್ಟಿ ಮಾಡಿದ್ರು, ಆದರೆ, ನಾವು ನೋಟಿಸ್ ವಾಪಸ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

Read More
Next Story