Waqf Amendment Bill | ಪ್ರತಿಪಕ್ಷಗಳ ಗದ್ದಲದಲ್ಲಿಯೇ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ; ಆಡಳಿತ ಪಕ್ಷದ ಸದಸ್ಯರಿಗೆ ವಿಪ್‌ ಜಾರಿ
x

Waqf Amendment Bill | ಪ್ರತಿಪಕ್ಷಗಳ ಗದ್ದಲದಲ್ಲಿಯೇ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ; ಆಡಳಿತ ಪಕ್ಷದ ಸದಸ್ಯರಿಗೆ ವಿಪ್‌ ಜಾರಿ

ವಕ್ಫ್‌ ತಿದ್ದುಪಡಿ ಮಸೂದೆ ಪರಿಶೀಲನೆಗೆ ಜಂಟಿ ಸದನ ಸಮಿತಿ 25 ರಾಜ್ಯಗಳ ವಕ್ಫ್‌ ಬೋರ್ಡ್ ಅಭಿಪ್ರಾಯ ಸ್ವೀಕರಿಸಿದೆ. ಮಸೂದೆ ಕುರಿತು 96ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.


ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಬುಧವಾರ ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಮಸೂದೆ ಮಂಡನೆಗೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ತೀವ್ರ ಗದ್ದಲ ಉಂಟಾಯಿತು. ಈ ವೇಳೆ ಮಸೂದೆ ಮಂಡಿಸಿ ಮಾತನಾಡಿದ ಸಚಿವ ಕಿರಣ್ ರಿಜಿಜು, 1995 ರಿಂದಲೂ ಯಾರೂ ಮಸೂದೆ ವಿರೋಧಿಸಿರಲಿಲ್ಲ. ಈ ಹಿಂದೆ ನಡೆದ ಹಲವು ತಿದ್ದುಪಡಿಗಳ ಸಂದರ್ಭದಲ್ಲಿ ಯಾವುದೇ ಆಕ್ಷೇಪಗಳಿರಲಿಲ್ಲ. ಎನ್‌ಡಿಎ ನೇತೃತ್ವದ ಸರ್ಕಾರ ಮಸೂದೆ ತಿದ್ದುಪಡಿ ಮಾಡಿರುವುದು ಅಸಂವಿಧಾನಿಕ ಹೇಗೆ ಆಗುತ್ತದೆ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ವಕ್ಫ್‌ ತಿದ್ದುಪಡಿ ಮಸೂದೆ ಪರಿಶೀಲನೆಗೆ ಜಂಟಿ ಸದನ ಸಮಿತಿ 25 ರಾಜ್ಯಗಳ ವಕ್ಫ್‌ ಬೋರ್ಡ್ ಅಭಿಪ್ರಾಯ ಸ್ವೀಕರಿಸಿದೆ. ಮಸೂದೆ ಕುರಿತು 96ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಿದೆ. ಈ ಮಸೂದೆ ಬಗ್ಗೆ ನಡೆದಷ್ಟು ಚರ್ಚೆ ಬೇರೆ ಯಾವ ಮಸೂದೆಗೂ ನಡೆದಿಲ್ಲ ಎಂದು ಹೇಳಿದ್ದಾರೆ.

ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಪರವಾಗಿ ಇರುವಂತೆ ಬಿಜೆಪಿ ಹಾಗೂ ವಿರೋಧಕ್ಕಾಗಿ ಸಮಾಜವಾದಿ ಪಕ್ಷದ ಸಂಸದರಿಗೆ ಸದನದಲ್ಲಿ ಹಾಜರಿರುವಂತೆ ವಿಪ್ ಜಾರಿ ಮಾಡಲಾಗಿತ್ತು.

ವಕ್ಫ್‌ ತಿದ್ದುಪಡಿ ಮಸೂದೆಗೆ ವಿರೋಧ ಏಕೆ?

ವಕ್ಫ್‌ ತಿದ್ದುಪಡಿ ಮಸೂದೆಯಲ್ಲಿ ಆಸ್ತಿಗಳ ನಿರ್ವಹಣೆಯಲ್ಲಿ ಜಿಲ್ಲಾಧಿಕಾರಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ರಾಜ್ಯವಾರು ವಕ್ಫ್ ಮಂಡಳಿಗಳ ಅಧಿಕಾರ ಕಿತ್ತುಕೊಳ್ಳಲಾಗಿದೆ. ಮಸೂದೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಕಿರಣ್‌ ರಿಜಿಜು, ಈ ಮಸೂದೆಯು ಯಾವುದೇ ಧಾರ್ಮಿಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2025 ಜನವರಿ 27 ರಂದು ಜಗದಾಂಬಿಕಾ ಪಾಲ್‌ ನೇತೃತ್ವದ ಜೆಪಿಸಿ ಕರಡು ಮಸೂದೆಯನ್ನು ಅನುಮೋದಿಸಿತು. ಒಟ್ಟು 14 ತಿದ್ದುಪಡಿಗಳನ್ನು ಅಂಗೀಕರಿಸಿದೆ. 2025 ರಂದು ಫೆ.13 ರಂದು ಜೆಪಿಸಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ವಕ್ಫ್ ತಿದ್ದುಪಡಿ ಮಸೂದೆಗೆ 2025 ಯನ್ನು ಫೆಬ್ರವರಿ 19 ರಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿತ್ತು.

2025ರ ತಿದ್ದುಪಡಿ ಮಸೂದೆ ಏನೆಲ್ಲಾ ತಿದ್ದುಪಡಿ?

ವಿವಾದಿತ ಆಸ್ತಿಗಳನ್ನು ವಕ್ಫ್ ಆಸ್ತಿಗಳೇ, ಅಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.

ವಕ್ಫ್‌ ಮಂಡಳಿಗಳಲ್ಲಿ ಮಹಿಳೆಯರು ಮತ್ತು ಮುಸ್ಲಿಮೇತರ ಸದಸ್ಯರಿಗೂ ಪ್ರಾತಿನಿಧ್ಯ ನೀಡಲಾಗಿದೆ.

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಂದಾಯ ಕಾನೂನುಗಳ ಪ್ರಕಾರ ವಕ್ಫ್ ಆಸ್ತಿಗಳ ಸಮೀಕ್ಷೆಗೆ ಪ್ರಸ್ತಾಪಿಸಲಾಗಿದೆ.

ಕೇಂದ್ರ ಸರ್ಕಾರಕ್ಕೆ ವಕ್ಫ್ ನೋಂದಣಿ, ಆಡಿಟಿಂಗ್, ಮತ್ತು ಆಸ್ತಿಗಳ ನಿರ್ವಹಣೆಯ ಕುರಿತು ನಿಯಮಗಳನ್ನು ಜಾರಿಗೆ ತರಲು ಸ್ಪಷ್ಟ ಅಧಿಕಾರ ನೀಡಲಾಗಿದೆ.

Read More
Next Story